Caste Census: ನವೆಂಬರ್‌ನಲ್ಲಿ ಸಿಎಂ ಸಿದ್ದರಾಮಯ್ಯ ಅವರ ಕೈಸೇರಲಿದೆ ಜಾತಿ ಗಣತಿ ವರದಿ
ಬೆಂಗಳೂರು ಅಕ್ಟೋಬರ್ 4: ಬಿಹಾರದಲ್ಲಿ ಜಾತಿ ಗಣತಿ ವರದಿ ಬಿಡುಗಡೆಯಾದ ಬೆನ್ನಲ್ಲೇ ಕರ್ನಾಟಕ ರಾಜ್ಯದಲ್ಲೂ ಜಾತಿ ಗಣತಿ ವರದಿ ಬಿಡುಗಡೆಗೆ ಒತ್ತಡಗಳು ಹೆಚ್ಚಿದ್ದು, ಮುಂದಿನ ತಿಂಗಳು ಜಾತಿ ಗಣತಿ ವರದಿ ಸಿಎಂ ಸಿದ್ದರಾಮಯ್ಯ ಅವರ ಕೈ ಸೇರಲಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಡೆಸಲಾಗದ ಸಾಮಾಜಿಕ-ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವರದಿಯನ್ನು ಬಿಡುಗಡೆ ಮಾಡಬೇಕು ಎಂಬ ಕೂಗು ಕೇಳಿಬಂದಿದೆ. ಹೀಗಾಗಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಅವರು ನವೆಂಬರ್‌ನಲ್ಲಿ ಸರ್ಕಾರಕ್ಕೆ ಆ ವರದಿ ಸಲ್ಲಿಸುವುದಾಗಿ ಮಂಗಳವಾರ ತಿಳಿಸಿದ್ದಾರೆ. ನಾವು ವರದಿಯನ್ನು ಅಧ್ಯಯನ ಮಾಡುತ್ತಿದ್ದು, ಅದರ ಸಿದ್ಧತೆ ಅಂತಿಮ ಹಂತದಲ್ಲಿದೆ ಎಂದು ಹೆಗ್ಡೆ ಹೇಳಿದ್ದಾರೆ. ಜಯಪ್ರಕಾಶ್ ಹೆಗ್ಡೆ ಅವರು ಹೇಳಿದಂತೆ ವರದಿ ನವೆಂಬರ್ ತಿಂಗಳಲ್ಲಿ ಸರ್ಕಾರಕ್ಕೆ ಸಲ್ಲಿಕೆಯಾದಲ್ಲಿ ಅದೇ ತಿಂಗಳು ವರದಿ ಸಾರ್ವಜನಿಕಗೊಳ್ಳುವ ಸಾಧ್ಯತೆ ಇದೆ.

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಹಿರಿಯ ಕಾಂಗ್ರೆಸ್ ಮುಖಂಡರಾದ ಬಿ.ಕೆ.ಹರಿಪ್ರಸಾದ್, ವೀರಪ್ಪ ಮೊಯ್ಲಿ ವರದಿ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದ್ದಾರೆ. 'ಎಚ್ ಕಾಂತರಾಜ್ ಆಯೋಗದ ನೇತೃತ್ವ ವಹಿಸಿದ್ದಾಗಲೇ ಜನಗಣತಿ ನಡೆಸಲಾಗಿತ್ತು. ಅವರ ಅವಧಿ ಮುಗಿದು, ಬಿಜೆಪಿ ಅಧಿಕಾರಕ್ಕೆ ಬಂದು ಹೆಗ್ಡೆಯವರನ್ನು ನೇಮಿಸಲಾಯಿತು, ಅವರು ಇನ್ನೂ ನನಗೆ ವರದಿಯನ್ನು ಸಲ್ಲಿಸಿಲ್ಲ' ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಅವರು ವರದಿ ಸಲ್ಲಿಸದ ಕೂಡಲೇ ಮತ್ತೆ ಸಭೆ ಕರೆಯಲಾಗುತ್ತದೆ ಎಂದು ಸಿಎಂ ಹೇಳಿದರು.
ಅಂಕಿಅಂಶಗಳು ಹೇಗಿರಬಹುದೆಂಬುದನ್ನು ತಿಳಿದಿರುವ ಮೂಲಗಳ ಪ್ರಕಾರ, 'ಜಾತಿ ಗಣತಿ'ಯು ದಲಿತರನ್ನು ಅಗ್ರಸ್ಥಾನದಲ್ಲಿರಿಸಬಹುದು, ನಂತರದ ಸ್ಥಾನದಲ್ಲಿ ಮುಸ್ಲಿಮರು, ಲಿಂಗಾಯತರು, ಒಕ್ಕಲಿಗರು ಮತ್ತು ಕುರುಬರು ಇರಬಹುದು ಎನ್ನಲಾಗುತ್ತಿದೆ. ಅತ್ಯಂತ ಹಿಂದುಳಿದ ವರ್ಗಗಳಾದ ಈಡಿಗರು, ಕುಂಬಾರರು ಮತ್ತು ಇತರರು ಒಟ್ಟಾಗಿ ಜನಸಂಖ್ಯೆಯ 20% ರಷ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಒಕ್ಕಲಿಗ ಮತ್ತು ಲಿಂಗಾಯತ ಗುಂಪುಗಳು ಗಣತಿಯನ್ನು ಅವೈಜ್ಞಾನಿಕವಾಗಿ ಮಾಡಲಾಗಿದೆ ಎಂದು ಹೇಳುವ ಮೂಲಕ ವರದಿಯನ್ನು ತಡೆಯಲು ಪ್ರಯತ್ನಿಸುತ್ತಿವೆ. ಆದರೆ ಮೊದಲು ವರದಿ ಬರಲಿ ಚರ್ಚೆಯಾಗಲಿ, ಭಾರತ ಮೈತ್ರಿಕೂಟದ ಪಾಲುದಾರ ಬಿಹಾರವನ್ನು ಅನುಸರಿಸುವುದು ಕರ್ನಾಟಕಕ್ಕೆ ಅಗತ್ಯ ಎಂದು ಕಾಂಗ್ರೆಸ್ ನಾಯಕರು ಅಭಿಪ್ರಾಯಪಟ್ಟಿದ್ದಾರೆ.
2015ರಲ್ಲಿ ಆಗಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ 170 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಚಾಲನೆ ನೀಡಿತ್ತು. ಅದರ ವರದಿ ಇನ್ನೂ ಬಹಿರಂಗವಾಗಿಲ್ಲ. ಆಗಿನ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷರಾಗಿದ್ದ ಹೆಚ್. ಕಾಂತರಾಜ್ ಅವರ ನೇತೃತ್ವದಲ್ಲಿ ಜಾತಿಗಣತಿ ನಡೆಸಲಾಗಿತ್ತು.

ಸಮೀಕ್ಷೆಯಲ್ಲಿ ರಾಜ್ಯದಲ್ಲಿ ಪ್ರಬಲವಾಗಿರುವ ಲಿಂಗಾಯತ ಹಾಗೂ ಒಕ್ಕಲಿಗರ ಸಂಖ್ಯೆ ಅಂದುಕೋಂಡಷ್ಟು ಹೆಚ್ಚಾಗಿರದ ಹಿನ್ನೆಲೆಯಲ್ಲಿ ಈವರೆಗೂ ಆಡಳಿತ ನಡೆಸಿದ ಮುಖ್ಯಮಂತ್ರಿಗಳು ವರದಿ ಬಿಡುಗಡೆಗೆ ಆಸಕ್ತಿ ತೋರುತ್ತಿಲ್ಲ ಎಂದು ಕೆಲವು ರಾಜಕೀಯ ವಿಶ್ಲೇಷಕರು ಹೇಳಿದ್ದಾರೆ. ಇದರಿಂದ ಜಾರಿ ಗಣತಿ ಒಪ್ಪಿಕೊಳ್ಳದೆ ಅಥವಾ ಬಹಿರಂಗಪಡಿಸದೆ ರಾಜಕೀಯ ಪಕ್ಷಗಳು ಹಲವು ವರ್ಷಗಳಿಂದ ರಾಜಕೀಯ ಆಟದಲ್ಲಿ ತೊಡಗಿದೆ. ಹೀಗಾಗಿ ಬಿಹಾರನಂತೆ ಕರ್ನಾಟಕದಲ್ಲೂ ಜಾತಿ ಗಣತಿ ವರದಿ ಬಿಡುಗಡೆಯಾಗಬೇಕು ಎಂದು ಪಕ್ಷದ ಹಿರಿಯ ನಾಯಕ ಬಿಕೆ ಹರಿಪ್ರಸಾದ್ ಸೇರಿದಂತೆ ಇನ್ನಿತರರು ಒತ್ತಾಯಿಸಿದರು.
ನವದೆಹಲಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ರಾಜ್ಯ ಹಾಗೂ ದೇಶ ಎರಡಲ್ಲೂ ಜಾತಿ ಗಣತಿ ನಡೆಯಬೇಕು. ಅದರ ಆಧಾರದ ಮೆಲೆ ಜನಸಂಖ್ಯಾ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂಬುದು ರಾಹುಲ್ ಗಾಂಧಿಯವರ ಬಹುದಿನಗಳ ಬಯಕೆಯಾಗಿದೆ. ಅದು ಫಲಪ್ರದವಾಗಬೇಕಾದರೆ ಕಾಂತರಾಜ್ ಆಯೋಗದ ವರದಿಯನ್ನು ಸಾರ್ವಜನಿಕಗೊಳಿಸಬೇಕು. ಒಂದು ವೇಳೆ ಆ ವರದಿಯಲ್ಲಿ ಲೋಪದೋಷಗಳಿದ್ದರೆ ಅದನ್ನು ಸರಿಪಡಿಸಿ ಅನುಷ್ಠಾನಗೊಳಿಸಬೇಕಿದೆ ಎಂದು ಹೇಳಿದರು.












Click it and Unblock the Notifications