Government Employee: ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸ್ಥಾನದ ಚುನಾವಣೆ, ಅಭ್ಯರ್ಥಿ ಅಂತಿಮ
ಬೆಂಗಳೂರು, ಡಿಸೆಂಬರ್ 09: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಮುಂದಿನ ರಾಜ್ಯಾಧ್ಯಕ್ಷರು ಹಾಗೂ ರಾಜ್ಯ ಖಜಾಂಚಿ ಆಯ್ಕೆಗೆ ಡಿಸೆಂಬರ್ 27ರಂದು ಚುನಾವಣೆ ನಡೆಯಲಿದೆ. ಈ ಚುನಾವಣೆ ಕುತೂಹಲಕ್ಕೆ ಕಾರಣವಾಗಿದೆ. ಸಂಘದ ತಾಲೂಕು, ಜಿಲ್ಲಾ ಮಟ್ಟದ ಪದಾಧಿಕಾರಿಗಳ ಆಯ್ಕೆ ಈಗಾಗಲೇ ನಡೆದಿದ್ದು, ರಾಜ್ಯಾಧ್ಯಕ್ಷರು ಹಾಗೂ ರಾಜ್ಯ ಖಜಾಂಚಿಗಳ ಆಯ್ಕೆಗೆ ನಡೆಯುವ ಮತದಾನಕ್ಕೆ ನಾಮಪತ್ರ ಸಲ್ಲಿಕೆ ಡಿಸೆಂಬರ್ 9ರ ಸೋಮವಾರದಿಂದ ಪ್ರಾರಂಭವಾಗಲಿದೆ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಮತ್ತು ಖಜಾಂಚಿ ಸ್ಥಾನದ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಭಾನುವಾರ ಮಹತ್ವದ ಸಭೆ ನಡೆಯಿತು. ಸಭೆಯಲ್ಲಿ ಅಧ್ಯಕ್ಷರು, ರಾಜ್ಯ ಖಜಾಂಚಿ ಸ್ಥಾನದ ಅಭ್ಯರ್ಥಿಗಳನ್ನು ಸರ್ವನುಮತದಿಂದ ಆಯ್ಕೆ ಮಾಡಲಾಗಿದೆ. ಸೋಮವಾರ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ.

ಯಾರಾಗಲಿದ್ದಾರೆ ಅಧ್ಯಕ್ಷರು?; ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ 2024-29 ಅವಧಿಯ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಹಾಗೂ ರಾಜ್ಯ ಖಜಾಂಚಿ ಸ್ಥಾನಕ್ಕೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದೆ. ಅಧ್ಯಕ್ಷ ಸ್ಥಾನಕ್ಕೆ ಹಾಲಿ ಅಧ್ಯಕ್ಷರಾಗಿರುವ ಸಿ. ಎಸ್. ಷಡಾಕ್ಷರಿ ಮತ್ತು ರಾಜ್ಯ ಖಜಾಂಚಿ ಸ್ಥಾನಕ್ಕೆ ಕೊಪ್ಪಳ ಜಿಲ್ಲಾಧ್ಯಕ್ಷರಾದ ನಾಗರಾಜ್ ಜುಮ್ಮಣ್ಣನವರ ಅವರನ್ನು ಆಯ್ಕೆ ಮಾಡಲಾಗಿದೆ.
ರಾಜ್ಯ ಸರ್ಕಾರಿ ನೌಕರರ ಸಂಘದ ಎಲ್ಲಾ ಜಿಲ್ಲೆ, ತಾಲ್ಲೂಕುಗಳ ಅಧ್ಯಕ್ಷರು, ಕಾರ್ಯದರ್ಶಿ, ಖಜಾಂಚಿ, ರಾಜ್ಯ ಪರಿಷತ್ ಸದಸ್ಯರು, ಯೋಜನಾ ಶಾಖೆಗಳ ಅಧ್ಯಕ್ಷರು ಹಾಗೂ ಬೆಂಗಳೂರು ನಗರ ರಾಜ್ಯ ಪರಿಷತ್‌ಗೆ ಆಯ್ಕೆಯಾದ ನೂತನ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರ ಸಮ್ಮುಖದಲ್ಲಿ ಅಧ್ಯಕ್ಷ ಮತ್ತು ರಾಜ್ಯ ಖಜಾಂಚಿ ಹುದ್ದೆಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದೆ.
ಸೋಮವಾರವೇ ನಾಮಪತ್ರ ಸಲ್ಲಿಕೆ: ಈ ಕುರಿತು ಸಿ. ಎಸ್. ಷಡಾಕ್ಷರಿ ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದಾರೆ. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಅಧ್ಯಕ್ಷರು, ರಾಜ್ಯ ಖಜಾಂಚಿ ಸ್ಥಾನದ ಅಭ್ಯರ್ಥಿಗಳನ್ನು ಸರ್ವನುಮತದಿಂದ ಆಯ್ಕೆ ಮಾಡಲಾಗಿದೆ. ದಿನಾಂಕ 8/12/2024ರಂದು ಬೆಂಗಳೂರಿನ ಕ್ಯಾಪಿಟಲ್ ಹೋಟೆಲ್‌ನಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ 2024-29 ಅವಧಿಯ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಹಾಗೂ ರಾಜ್ಯ ಖಜಾಂಚಿ ಸ್ಥಾನಕ್ಕೆ ಅಭ್ಯರ್ಥಿ ಆಯ್ಕೆ ಮಾಡಲು ರಾಜ್ಯದ ಜಿಲ್ಲಾಧ್ಯಕ್ಷರು ತಾಲೂಕು ಅಧ್ಯಕ್ಷರು ಹಾಗೂ ಬೆಂಗಳೂರು ನಗರ ರಾಜ್ಯಪರಿಷತ್ ಸದಸ್ಯರು ಪದಾಧಿಕಾರಿಗಳೊಂದಿಗೆ ಸಭೆ ನಡೆಸಲಾಯಿತು.
ಈ ಸಭೆಯಲ್ಲಿ ಸಿ. ಎಸ್. ಷಡಾಕ್ಷರಿ ಹಾಲಿ ಅಧ್ಯಕ್ಷರು ಇವರನ್ನು ರಾಜ್ಯಾಧ್ಯಕ್ಷ ಸ್ಥಾನದ ಅಭ್ಯರ್ಥಿಯನ್ನಾಗಿ ಸರ್ವಾನುಮತದಿಂದ ತೀರ್ಮಾನಿಸಿ ಘೋಷಿಸಲಾಗಿದೆ. ಕೊಪ್ಪಳ ಜಿಲ್ಲಾಧ್ಯಕ್ಷರಾದ ನಾಗರಾಜ್ ಜುಮ್ಮಣ್ಣನವರ ಅವರನ್ನು ರಾಜ್ಯ ಖಜಾಂಚಿ ಸ್ಥಾನದ ಅಭ್ಯರ್ಥಿಯಾಗಿ ಸರ್ವಾನುಮತದಿಂದ ಘೋಷಿಸಲಾಯಿತು.
ಸಭೆಯ ನಿರ್ಣಯದಂತೆ ಸೋಮವಾರ ಬೆಳಗ್ಗೆ 11:30ಕ್ಕೆ ಸರ್ಕಾರಿ ನೌಕರ ಸಂಘದಲ್ಲಿ ನಾಮಪತ್ರವನ್ನು ಸಲ್ಲಿಸಲು ತೀರ್ಮಾನಿಸಲಾಯಿತು. ಸಭೆಯಲ್ಲಿ ರಾಜ್ಯದಿಂದ 1000 ಚುನಾಯಿತ ಪದಾಧಿಕಾರಿಗಳು ಭಾಗವಹಿಸಿದ್ದರು. ಇದರ ಜೊತೆ ರಾಜ್ಯ ನಿವೃತ್ತ ನೌಕರ ಸಂಘದ ಅಧ್ಯಕ್ಷರಾದ ಭೈರಪ್ಪ, ಮಾಜಿ ಅಧ್ಯಕ್ಷ ಶೇಷ ಗೌಡ್ರು ಭಾಗವಹಿಸಿದ್ದರು. 26 ಜನ ಜಿಲ್ಲಾಧ್ಯಕ್ಷರು, 92 ಜನ ಬೆಂಗಳೂರು ನಗರ ರಾಜ್ಯಪರಿಷತ್ ಸದಸ್ಯರು, 190 ತಾಲೂಕು ಅಧ್ಯಕ್ಷರುಗಳು ಪದಾಧಿಕಾರಿಗಳು ಭಾಗವಹಿಸಿದ್ದರು.
ರಾಜ್ಯಾಧ್ಯಕ್ಷ ಮತ್ತು ಖಜಾಂಚಿ ಸ್ಥಾನದ ಚುನಾವಣೆ ವೇಳಾಪಟ್ಟಿ ಈಗಾಗಲೇ ಘೋಷಣೆಯಾಗಿದೆ. ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಡಿಸೆಂಬರ್ 18 ಕೊನೆಯ ದಿನ. ಡಿಸೆಂಬರ್ 19ರ ಬೆಳಗ್ಗೆ 11 ಗಂಟೆಯಿಂದ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರ ವಾಪಸ್ ಪಡೆಯಲು ಡಿಸೆಂಬರ್ 21, ಸಂಜೆ 3 ಗಂಟೆ ಕೊನೆಯ ದಿನ. ಅಂದು ಅಂತಿಮ ಅಭ್ಯರ್ಥಿಗಳ ಪಟ್ಟಿಯೂ ಪ್ರಕಟವಾಗಲಿದೆ.
ಚುನಾವಣೆ ಅಗತ್ಯವಿದ್ದರೆ ಡಿಸೆಂಬರ್ 27ರ ಶುಕ್ರವಾರ ಬೆಳಗ್ಗೆ 9 ರಿಂದ ಸಂಜೆ 4 ಗಂಟೆಯ ತನಕ ನಡೆಸಲಾಗುತ್ತದೆ. ಮತದಾನ ಮುಕ್ತಾಯವಾದ ಬಳಿಕ ಮತ ಎಣಿಕೆ ಪ್ರಾರಂಭವಾಗಲಿದ್ದು, ಡಿಸೆಂಬರ್ 27ರಂದು ಮತ ಎಣಿಕೆಯ ಫಲಿತಾಂಶ ಪ್ರಕಟವಾಗಲಿದೆ.
ಸಂಘದ ತಾಲೂಕು, ಜಿಲ್ಲಾ ಸಂಘಗಳು, ಬೆಂಗಳೂರು ಪರಿಷತ್ ಚುನಾವಣೆಗಳಲ್ಲಿ ಈಗಾಗಲೇ ಹಾಲಿ ಅಧ್ಯಕ್ಷ ಸಿ. ಎಸ್. ಷಡಾಕ್ಷರಿ ಬಣ ಮೇಲುಗೈ ಸಾಧಿಸಿದೆ. ರಾಜ್ಯ ಖಜಾಂಚಿ ಮತ್ತು ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ತಾಲೂಕು ಸಂಘ, ಜಿಲ್ಲಾ ಸಂಘಗಳು, ಬೆಂಗಳೂರು ಪರಿಷತ್ ಸ್ಥಾನ ಹಾಗೂ ಯೋಜನಾ ಶಾಖೆಗಳಿಂದ ಆಯ್ಕೆಯಾಗಿರುವ 1006 ಮತದಾರರು ಮತದಾನ ಮಾಡಲಿದ್ದಾರೆ.












Click it and Unblock the Notifications