ರಾಜ್ಯದಲ್ಲಿ ಎಸ್ಸಿ, ಎಸ್ಟಿಯ ಇಂತಹವರಿಗೆ ಸರ್ಕಾರಿ ಉದ್ಯೋಗ ನೀಡಲು ಒಪ್ಪಿಗೆ
ಬೆಂಗಳೂರು, ಸೆಪ್ಟೆಂಬರ್, 18: ರಾಜ್ಯದಲ್ಲಿ ದಲಿತರ ಮೇಲೆ ದೌರ್ಜನ್ಯ ನಡೆಯುತ್ತಿವೆ ಎನ್ನುವ ಆರೋಪಗಳು ಕೇಳಿಬರುತ್ತಿದ್ದವು. ಈ ಬಗ್ಗೆ ಪ್ರಕರಣಗಳು ದಾಖಲಾಗಿರುವ ಉದಾಹರಣೆಗಳಿವೆ. ಇನ್ನೂ ಇದೀಗ ಇಂದು (ಸೆಪ್ಟೆಂಬರ್ 18) ನಡೆದ ಸಚಿವ ಸಂಪುಟದಲ್ಲಿ ಇಂತಹ ಎಸ್ಸಿ, ಎಸ್ಟಿ ಅವರಿಗೆ ಸರ್ಕಾರಿ ಉದ್ಯೋಗ ನೀಡುವ ಕುರಿತು ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಹಾಗಾದ್ರೆ, ಯಾರಿಗೆ ಹಾಗೂ ಹುದ್ದೇ ಯಾವುದು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಬೆಂಗಳೂರಿನ ವಿಧಾನಸೌಧದಲ್ಲಿ ಇಂದು (ಸೆಪ್ಟೆಂಬರ್ 18) ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಂಪುಟ ಸಭೆ ನಡೆಯಿತು. ಈ ವೇಳೆ ದೌರ್ಜನಕ್ಕೆ ಒಳಗಾಗಿ ಮೃತಪಟ್ಟಿರುವ ಎಸ್ಸಿ ಎಸ್ಟಿ ಅವಲಂಬಿತರಿಗೆ ಅನುಕಂಪದ ಆಧಾರದ ಮೇಲೆ ಸರ್ಕಾರಿ ನೌಕರಿ ನೀಡಲು ಸಂಪುಟ ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು. ದೌರ್ಜನ್ಯಕ್ಕೊಳಗಾಗಿ ಮೃತಪಟ್ಟ ಎಸ್ಸಿ ಎಸ್ಟಿ ವ್ಯಕ್ತಿಯ ಅವಲಂಬಿತರಿಗೆ ಸರ್ಕಾರಿ ನೌಕರಿಗೆ ಸಂಪುಟ ಸಭೆ ಇದೀಗ ಒಪ್ಪಿಗೆ ಸೂಚಿಸಿದೆ. ಗ್ರೂಪ್ ಸಿ, ಗ್ರೂಪ್ ಡಿ ವೃಂದದ ಹುದ್ದೆಗಳಿಗೆ ಅನುಕಂಪದ ಆಧಾರದಲ್ಲಿ ಸರ್ಕಾರಿ ಕೆಲಸ ನೀಡಲು ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ಡಿಪಿಎಆರ್ ನಿಯಮಾವಳಿಗೆ ತಿದ್ದುಪಡಿ ಮಾಡಲು ಸಂಪುಟ ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಗಿದೆ.
ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರದ ಗದ್ದುಗೆ ಹಿಡಿದ ಬಳಿಕ ಜನರಿಗೆ ಅನುಕೂಲ ಆಗುವಂತೆ ಹಲವು ಯೋಜನೆಗಳನ್ನು ಜಾರಿ ಮಾಡುತ್ತಾ ಬಂದಿದೆ. ಮೊದಲು ಪಂಚ ಗ್ಯಾರಂಟಿ ಗಳನ್ನು ಜಾರಿಗೆ ತರಲಾಯಿತು. ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ, ಯುವನಿಧಿ, ಶಕ್ತಿ ಯೋಜನೆಗಂತಹ ಐದು ಗ್ಯಾರಂಟಿಗಳನ್ನು ಜಾರಿ ಮಾಡಿತು. ಜೊತೆಗೆ ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲೂ ಬದಲಾವಣೆಗಳನ್ನು ತಂದಿದೆ.
ಬಿಜೆಪಿ ವಿರುದ್ಧ ಆಕ್ರೊಶ: ರಾಹುಲ್ ಗಾಂಧಿ ಅವರು ಬಿಜೆಪಿ ವಿರುದ್ಧ ಮಾಡಿದ ಮತಗಳ್ಳತನದ ಆರೋಪವನ್ನು ಸಿಎಂ ಸಿದ್ದರಾಮಯ್ಯ ಅವರು ಸಮರ್ಥಿಸಿಕೊಂಡಿದ್ದಾರೆ. ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೇಗೆ ಮತಗಳ್ಳತನದ ಮೂಲಕ ವ್ಯವಸ್ಥಿತವಾಗಿ ಬುಡಮೇಲುಗೊಳಿಸಲಾಗುತ್ತಿದೆ ಎಂಬ ಕರಾಳ ಸತ್ಯವನ್ನು ಮತ್ತೊಮ್ಮೆ ರಾಹುಲ್ ಗಾಂಧಿ ದೇಶದ ಜನರೆದುರು ತೆರೆದಿಟ್ಟಿದ್ದಾರೆ ಎಂದು ತಮ್ಮ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.
ನಮ್ಮ ನಾಯಕರಾದ ರಾಹುಲ್ ಗಾಂಧಿ ಇಂದು ಬಯಲು ಮಾಡಿರುವ ಚುನಾವಣಾ ಅಕ್ರಮಗಳಿಗೆ ಸಂಬಂಧಿಸಿದ ಸತ್ಯಾಂಶಗಳು ಅತ್ಯಂತ ಆಘಾತಕಾರಿ ಆಗಿವೆ. ಕಲಬುರಗಿ ಜಿಲ್ಲೆಯ ಆಳಂದ ಮತಕ್ಷೇತ್ರದ ಪ್ರಕರಣವು ಕೇವಲ ಈ ಒಂದು ಕ್ಷೇತ್ರಕ್ಕೆ ಸೀಮಿತ ಆದುದ್ದಲ್ಲ, ಇದು ದೇಶಾದ್ಯಂತ ವ್ಯಾಪಿಸಿರುವ ಬೃಹತ್ ಚುನಾವಣಾ ಅಕ್ರಮ ಜಾಲದ ಒಂದು ಕೊಂಡಿಯಷ್ಟೇ. ಇದೇ ಮಾದರಿಯಲ್ಲಿ ಇಡೀ ದೇಶದಲ್ಲಿ ಚುನಾವಣಾ ಪ್ರಕ್ರಿಯೆಯ ದುರುಪಯೋಗದ ಮೂಲಕ ಭಾರತೀಯರನ್ನು ಅವರ ಮತದಾನದ ಹಕ್ಕಿನಿಂದ ವಂಚಿಸಲಾಗುತ್ತಿದೆ ಎಂದು ಎಂದಿದ್ದಾರೆ.
2022ರ ಫೆಬ್ರವರಿಯಿಂದ 2023ರ ಫೆಬ್ರವರಿವರೆಗೆ ಆಳಂದ ಮತಕ್ಷೇತ್ರಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗದ ಅಪ್ಲಿಕೇಷನ್ ಮೂಲಕ ಫಾರ್ಮ್ 7ರ ಅಡಿ ಮತದಾರರ ಹೆಸರುಗಳನ್ನು ಅಳಿಸಿಹಾಕುವಂತೆ ಒಟ್ಟು 6,018 ಅರ್ಜಿಗಳು ಸಲ್ಲಿಕೆ ಆಗಿದ್ದವು. ಈ ಪೈಕಿ ಕೇವಲ 24 ಅರ್ಜಿಗಳು ಅಸಲಿಯಾಗಿದ್ದು, ಉಳಿದ 5,994 ಅರ್ಜಿಗಳು ನಕಲಿ ಎಂಬುದು ತನಿಖೆಯ ಮೂಲಕ ತಿಳಿದುಬಂದಿದೆ. ಮತದಾರರ ಮಾಹಿತಿ ಕಳವು, ನಕಲಿ ಲಾಗಿನ್ ಗಳು ಹಾಗೂ ಹೊರರಾಜ್ಯದ ಮೊಬೈಲ್ ಸಂಖ್ಯೆಗಳ ಮೂಲಕ ಬೇನಾಮಿ ಅರ್ಜಿಗಳ ಸಲ್ಲಿಕೆ ಮಾಡಲಾಗಿದೆ. ಕುಟುಂಬವೊಂದರ ಅರಿವಿಗೆ ಬಾರದೆಯೇ ಇಡೀ ಕುಟುಂಬದ ಮತದಾರರ ಹೆಸರನ್ನು ಪಟ್ಟಿಯಿಂದ ಕೈಬಿಡುವಂತೆ ಅರ್ಜಿ ಸಲ್ಲಿಕೆಯಾಗಿತ್ತು. ಈ ಬಗ್ಗೆ ದೂರು ದಾಖಲಾಗಿದ್ದು, ಸಿಐಡಿ ತನಿಖೆ ನಡೆಸುತ್ತಿದೆ ಎಂದು ಹೇಳಿದ್ದಾರೆ.












Click it and Unblock the Notifications