CAA: ಬಿಜೆಪಿ ಸೋಲುವ ಭಯದಿಂದ ಸಿಎಎ ಜಾರಿ
ನವದೆಹಲಿ, ಮಾರ್ಚ್ 11: 2024ರ ಲೋಕಸಭೆ ಚುನಾವಣೆ ಘೋಷಣೆಗೆ ದಿನಗಣಗೆ ಆರಂಭವಾಗಿರುವಾಗ ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿಗೊಳಿಸುವ ಅಧಿಸೂಚನೆ ಪ್ರಕಟಿಸಿದೆ.
ಈ ವಿಚಾರ ಈಗ ರಾಜಕೀಯ ಸ್ವರೂಪ ಪಡೆದಿದೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿದಂತೆ ಹಲವಾರು ನಾಯಕರು ಕೇಂದ್ರ ಸರ್ಕಾರದ ವಿರುದ್ಧ ಟೀಕೆಗಳನ್ನು ಮಾಡುತ್ತಿದ್ದಾರೆ.

ಕರ್ನಾಟಕದ ಗೃಹ ಸಚಿವ ಡಾ. ಜಿ. ಪರಮೇಶ್ವರ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, "ಸಿಎಎ ಜಾರಿ ಕುರಿತು ಇವತ್ತು ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಅದನ್ನು ಸಂಪೂರ್ಣವಾಗಿ ನೋಡಿದ ನಂತರ ಪ್ರತಿಕ್ರಿಯೆ ನೀಡುತ್ತೇನೆ" ಎಂದು ಹೇಳಿದರು.
"ಈ ಸಿಎಎ ಜಾರಿಗೆ ಹಿಂದೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಪ್ರತಿಭಟನೆ ನಡೆದಿತ್ತು. ಆದರೂ ಸಹ ಕೇಂದ್ರ ಸರ್ಕಾರ ಸಿಎಎ ಜಾರಿಯ ನಿರ್ಧಾರಕ್ಕೆ ಬಂದಿದೆ. ಇದರಲ್ಲಿ ಯಾವ ಯಾವ ವಿಚಾರ ಪ್ರಸ್ತಾಪ ಮಾಡಿದ್ದಾರೆ ಗೊತ್ತಿಲ್ಲ. ಅದನ್ನು ನೋಡಿ, ಪರಿಶೀಲನೆ ಮಾಡಿ ಹೇಳುತ್ತೇನೆ" ಎಂದರು.
"ಚುನಾವಣೆಗೋಸ್ಕರ ಇದನ್ನು ಮಾಡುತ್ತಿದ್ದಾರೆ. ಇದು ಎಲ್ಲರಿಗೂ ಗೊತ್ತಾಗುತ್ತಿದೆ. ಬಿಜೆಪಿಗೆ ಸೋಲುವ ಭಯ ಇದೆ. ಅವರಿಗೆ ಗೆಲ್ಲುವ ವಿಶ್ವಾಸ ಕಡಿಮೆ ಆಗಿದೆ. ಅದಕ್ಕಾಗಿ ಈ ರೀತಿ ತೀರ್ಮಾನ ತಗೆದುಕೊಳ್ಳುತ್ತಿದ್ದಾರೆ" ಎಂದು ಪರಮೇಶ್ವರ ಆರೋಪಿಸಿದರು.
ಮುಸ್ಲಿಮರ ಪರಿಗಣನೆ ಏಕಿಲ್ಲ: ಸಿಎಎ ಅಡಿ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಧರ್ಮದ ಆಧಾರದ ಮೇಲೆ ಕಿರುಕುಳವನ್ನು ಎದುರಿಸಿದ ನಂತರ ಭಾರತಕ್ಕೆ ವಲಸೆ ಬಂದವರಿಗೆ ಪೌರತ್ವ ನೀಡಲಾಗುತ್ತದೆ. ಇದರಲ್ಲಿ ಮುಸ್ಲಿಮರ ಪರಿಗಣನೆ ಮಾಡಿಲ್ಲ. ಇದಕ್ಕಾಗಿಯೇ ಹಲವಾರು ವಿರೋಧ ಮಾಡುತ್ತಿದ್ದಾರೆ.
ಪೌರತ್ವ (ತಿದ್ದುಪಡಿ) ಕಾಯ್ದೆ 2019ರ ಪ್ರಕಾರ ಹಿಂದೂ, ಸಿಖ್, ಬೌದ್ಧ, ಜೈನ್, ಪಾರ್ಸಿ ಮತ್ತು ಕ್ರಿಶ್ಚಿಯನ್ ಸಮುದಾಯಗಳಿಗೆ ಪೌರತ್ವ ನೀಡಲಾಗುತ್ತದೆ. ಮೂರು ದೇಶಗಳನ್ನು ಮಾತ್ರ ಏಕೆ ಪರಿಗಣಿಸಲಾಗಿದೆ ಮತ್ತು ಈ ಮಸೂದೆಯಲ್ಲಿ ಮುಸ್ಲಿಮರನ್ನು ಏಕೆ ಸೇರಿಸಲಾಗಿಲ್ಲ? ಎಂಬುದು ಹಲವಾರು ಜನರ ಪ್ರಶ್ನೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ, ಇದಕ್ಕೆ ಪ್ರತಿಕ್ರಿಯೆ ನೀಡಿದ್ದು, "ಈ ಹಿಂದೆ ವಿವಿಧ ಸಮಯಗಳಲ್ಲಿ ಉಗಾಂಡಾ, ಶ್ರೀಲಂಕಾದಂತಹ ದೇಶಗಳಿಂದ ಬರುವ ನಿರಾಶ್ರಿತರಿಗೆ ಪೌರತ್ವವನ್ನು ನೀಡಲಾಗಿತ್ತು. ನಂತರ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ಬರುವ ನಿರಾಶ್ರಿತರನ್ನು ಪರಿಗಣಿಸಲಿಲ್ಲ" ಎಂದು ಹೇಳಿದ್ದಾರೆ.
"ನಿರಾಶ್ರಿತರಿಗೆ ಪೌರತ್ವ ನೀಡುವ ಪ್ರಕ್ರಿಯೆಯನ್ನು ಈ ಹಿಂದೆ ವಿವಿಧ ಸರ್ಕಾರಗಳು ಕಾಲಕಾಲಕ್ಕೆ ಪ್ರಕರಣದ ಆಧಾರದ ಮೇಲೆ, ಆರ್ಟಿಕಲ್ 14ಗೆ ಸಮಂಜಸವಾದ ಅರ್ಹತೆಗಳ ಮೇಲೆ ಕೈಗೊಂಡಿವೆ. ಮೂರು ದೇಶಗಳಿಂದ ಧಾರ್ಮಿಕ ಕಿರುಕುಳದಿಂದ ಪಲಾಯನ ಮಾಡುವ ನಿರಾಶ್ರಿತರನ್ನು ಈ ಮಸೂದೆಯ ಮೂಲಕ ಪರಿಗಣಿಸಲಾಗಿದೆ, ಇದು ಅಸಂವಿಧಾನಿಕವಲ್ಲ" ಎಂದು ತಿಳಿಸಿದ್ದಾರೆ.
"ಕಳೆದ 5 ವರ್ಷಗಳಲ್ಲಿ ಈ ಮೂರು ದೇಶಗಳ 560ಕ್ಕೂ ಹೆಚ್ಚು ಮುಸ್ಲಿಮರಿಗೆ ಪೌರತ್ವ ನೀಡಲಾಗಿದೆ. ಹಿಂದಿನ ಯುಪಿಎ ಸರ್ಕಾರವು 13000 ಹಿಂದೂಗಳು ಮತ್ತು ಸಿಖ್ಖರಿಗೆ ಮಾತ್ರ ಪೌರತ್ವವನ್ನು ನೀಡಿತ್ತು. ಆದರೆ ಮೋದಿ ಸರ್ಕಾರವು ಹಿಂದೂಗಳು ಮತ್ತು ಸಿಖ್ಖರು ಸೇರಿದಂತೆ ಕಿರುಕುಳಕ್ಕೊಳಗಾದ 6 ಅಲ್ಪಸಂಖ್ಯಾತರಿಗೆ ಪೌರತ್ವ ಹಕ್ಕುಗಳನ್ನು ನೀಡುತ್ತಿದೆ" ಎಂದು ಅವರು ಸ್ಪಷ್ಟಪಡಿಸಿದ್ದಾರೆ.
"ಈ ಕಾಯ್ದೆ ಮೂರು ದೇಶಗಳಲ್ಲಿ ಧಾರ್ಮಿಕ ಕಿರುಕುಳವನ್ನು ಎದುರಿಸುತ್ತಿರುವ ನಿರಾಶ್ರಿತರಿಗೆ ಸಮಂಜಸವಾದ ಆಧಾರದ ಮೇಲೆ ಪೌರತ್ವವನ್ನು ನೀಡುವ ನಿಬಂಧನೆಗಳನ್ನು ಒಳಗೊಂಡಿದೆ. ಇದು ಯಾವುದೇ ರೀತಿಯಲ್ಲಿ ಭಾರತದ ಸಂವಿಧಾನದ ಅಡಿಯಲ್ಲಿ ಯಾವುದೇ ನಿಬಂಧನೆಗೆ ವಿರುದ್ಧವಾಗಿಲ್ಲ ಮತ್ತು 14ನೇ ವಿಧಿಯನ್ನು ಉಲ್ಲಂಘಿಸುವುದಿಲ್ಲ. 371ನೇ ವಿಧಿಯ ಯಾವುದೇ ನಿಬಂಧನೆಯನ್ನು ಉಲ್ಲಂಘಿಸಲಾಗುವುದಿಲ್ಲ" ಎಂದು ಸ್ಪಷ್ಟನೆ ನೀಡಲಾಗಿದೆ.












Click it and Unblock the Notifications