CAA Implementation: ರಾಜ್ಯದಲ್ಲಿ ಸಿಎಎ ಜಾರಿಯಾಗುತ್ತಾ: ಗೃಹ ಸಚಿವ ಜಿ ಪರಮೇಶ್ವರ್ ಹೇಳಿದ್ದೇನು?
ಬೆಂಗಳೂರು, ಮಾರ್ಚ್ 13: ಸಾರ್ವತ್ರಿಕ ಚುನಾವಣೆಯ ಘೋಷಣೆಯ ಕೆಲವೇ ದಿನಗಳ ಮೊದಲು, ಗೃಹ ವ್ಯವಹಾರಗಳ ಸಚಿವಾಲಯವು ಮಾರ್ಚ್ 11 ರಂದು ಪೌರತ್ವ ತಿದ್ದುಪಡಿ ನಿಯಮಗಳು, 2024 ಅನ್ನು ಅಧಿಸೂಚನೆ ಹೊರಡಿಸಿದೆ. ಇದು 2019 ರಲ್ಲಿ ಸಂಸತ್ತು ಅಂಗೀಕರಿಸಿದ ಪೌರತ್ವ ತಿದ್ದುಪಡಿ ಕಾಯ್ದೆ (CAA) ಅನುಷ್ಠಾನಕ್ಕೆ ಅನುವು ಮಾಡಿಕೊಡುತ್ತದೆ.
ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ಬಂದ ಮುಸ್ಲಿಮೇತರ ವಲಸಿಗರಿಗೆ ಅಂದರೆ, ಹಿಂದೂ, ಸಿಖ್, ಬೌದ್ಧ, ಪಾರ್ಸಿ, ಕ್ರಿಶ್ಚಿಯನ್ ಮತ್ತು ಜೈನ ಸಮುದಾಯಕ್ಕೆ ಸೇರಿದ ದಾಖಲೆ ರಹಿತ ಜನರಿಗೆ ಪೌರತ್ವವನ್ನು ನೀಡುತ್ತದೆ. ಆದರೆ, ಅರ್ಜಿದಾರರು ಆರು ರೀತಿಯ ದಾಖಲೆಗಳನ್ನು ಒದಗಿಸಬೇಕು ಮತ್ತು ಭಾರತದಲ್ಲಿ 'ಪ್ರವೇಶ ದಿನಾಂಕ' ಸೂಚಿಸಬೇಕು ಎಂದು ನಿಯಮಗಳು ಹೇಳುತ್ತವೆ.

ಈ ಕಾಯಿದೆಯನ್ನು ಕರ್ನಾಟಕದಲ್ಲಿ ಜಾರಿ ಮಾಡುವ ಬಗ್ಗೆ ಗೃಹ ಸಚಿವ ಜಿ ಪರಮೇಶ್ವರ್ ಮಾತನಾಡಿದ್ದಾರೆ. ರಾಜ್ಯದಲ್ಲಿ ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ಅನುಷ್ಠಾನದ ವಿಷಯವನ್ನು ಕರ್ನಾಟಕ ಸರ್ಕಾರವು ಇನ್ನೂ ಚರ್ಚಿಸಿಲ್ಲ ಮತ್ತು ಈ ಬಗ್ಗೆ ಸಚಿವ ಸಂಪುಟ ಸಭೆ ನಡೆಸಲಿದೆ ಎಂದು ಗೃಹ ಸಚಿವ ಜಿ ಪರಮೇಶ್ವರ ಬುಧವಾರ ಮಾಹಿತಿ ನೀಡಿದ್ದಾರೆ.
ಈ ಕಾಯಿದೆಯನ್ನು ಡಿಸೆಂಬರ್ 11, 2019 ರಂದು ಅಂಗೀಕರಿಸಲಾಗಿತ್ತು. ಅದೇ ವರ್ಷ ಡಿಸೆಂಬರ್ 12 ರಂದು ರಾಷ್ಟ್ರಪತಿಗಳಿಂದ ಒಪ್ಪಿಗೆಯನ್ನು ಪಡೆಯಲಾಯಿತು. ಈ ಕಾಯಿದೆಯು ಜನವರಿ 10, 2020 ರಿಂದ ಜಾರಿಗೆ ಬರಲಿದೆ ಎಂದು ಗೃಹ ಸಚಿವಾಲಯ ಈ ಹಿಂದೆ ಸೂಚಿಸಿತ್ತು. ಇನ್ನೂ ನಿಯಮಗಳನ್ನು ರೂಪಿಸದ ಕಾರಣ, ಕಾಯಿದೆಯನ್ನು ಕಾರ್ಯಗತಗೊಳಿಸಲು ಸಾಧ್ಯವಾಗಲಿಲ್ಲ.

ಗೃಹ ಸಚಿವಾಲಯ ಈ ಬಗ್ಗೆ ಅಧಿಸೂಚನೆ ಹೊರಡಿಸಿದ್ದರೂ ಕೂಡ, ರಾಜ್ಯದಲ್ಲಿ ಸಿಎಎ ಜಾರಿ ಬಗ್ಗೆ ಇನ್ನೂ ಚರ್ಚೆ ಮಾಡಿಲ್ಲ ಎಂದು ಸಚಿವ ಜಿ ಪರಮೇಶ್ವರ್ ಹೇಳಿದ್ದಾರೆ. "ನಾವು ಇನ್ನೂ ಈ ಬಗ್ಗೆ ಚರ್ಚೆ ಮಾಡಿಲ್ಲ, ಸಚಿವ ಸಂಪುಟದಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಹೇಳಿದರೆ ಅದನ್ನು ಒಪ್ಪಿಕೊಳ್ಳುತ್ತೇವೆ ಅಥವಾ ತಿರಸ್ಕರಿಸುತ್ತೇವೆ ಎಂಬುದನ್ನು ಸಂಪುಟ ಸಭೆ ನಿರ್ಧರಿಸಬೇಕು" ಎಂದು ಪರಮೇಶ್ವರ ಸುದ್ದಿಗಾರರಿಗೆ ತಿಳಿಸಿದ್ದಾರೆ.
ರಾಜಕೀಯ ಉದ್ದೇಶದಿಂದ ಸಿಎಎ ಜಾರಿ
ಸಿಎಎ ಜಾರಿ ಅಧಿಸೂಚನೆ ಹೊರಬಿದ್ದ ಸಮದರ್ಭದಲ್ಲಿ ಮಾತನಾಡಿದ್ದ ಗೃಹ ಸಚಿವ ಜಿ ಪರಮೇಶ್ವರ್ "ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದು, ರಾಜಕೀಯ ಉದ್ದೇಶದಿಂದ ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ಸಂಬಂಧಿಸಿ ಅಧಿಸೂಚನೆ ಹೊರಡಿಸಿದೆ" ಎಂದು ಕಿಡಿಕಾರಿದ್ದರು.
'ಪೌರತ್ವ ತಿದ್ದುಪಡಿ ಕಾಯ್ದೆಗೆ ಜನರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದರ ನಡುವೆಯೂ ಕೇಂದ್ರ ಸರ್ಕಾರ ಅದನ್ನು ಜಾರಿ ಮಾಡುವ ನಿರ್ಧಾರಕ್ಕೆ ಬಂದಿದೆ. ಬಿಜೆಪಿಯವರಿಗೆ ಒಂದು ಕಡೇ ಸೋಲಿನ ಆತಂಕ ಕಾಡುತ್ತಿದೆ. ಹೀಗಾಗಿ ಇದನ್ನು ಜಾರಿ ಮಾಡಲು ಅಧಿಸೂಚನೆ ಹೊರಡಿಸಿದ್ದಾರೆ. ಇದರಲ್ಲಿ ರಾಜಕೀಯ ಉದ್ದೇಶವಿದೆ ಎಂಬುದು ಎಲ್ಲರಿಗೂ ಗೊತ್ತಿದೆ' ಎಂದು ತಿಳಿಸಿದ್ದರು.












Click it and Unblock the Notifications