BS yediyurappa: ಈಗ ಚುನಾವಣೆ ನಡೆದರೆ ಬಿಜೆಪಿ ಮತ್ತೆ ಅಧಿಕಾರಕ್ಕೆ ಏರುವುದು ಖಚಿತ : ಯಡಿಯೂರಪ್ಪ
ಬೆಂಗಳೂರು, ಜುಲೈ 04: ನರೇಂದ್ರ ಮೋದಿಜೀ ಅವರು ಸತತ 3ನೇ ಬಾರಿ ಪ್ರಧಾನಿಯಾಗಿದ್ದು, ಎನ್‍ಡಿಎ ಅಧಿಕಾರಕ್ಕೆ ಬಂದಿದೆ. ರಾಜ್ಯದಲ್ಲೂ ಬಿಜೆಪಿ- ಜೆಡಿಎಸ್ ಕೂಟ 19 ಸ್ಥಾನಗಳನ್ನು ಗೆದ್ದಿದೆ ಎಂದು ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಮತ್ತು ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಸಂತಸ ವ್ಯಕ್ತಪಡಿಸಿದರು.
ಈ ಕುರಿತು ಬಿಜೆಪಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 142 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಬಹುಮತ ಪಡೆದಿದೆ. ಈಗ ಚುನಾವಣೆ ನಡೆದರೆ ಬಿಜೆಪಿ ಸರಕಾರ ಮತ್ತೆ ಅಧಿಕಾರಕ್ಕೆ ಏರುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು. ರಾಜ್ಯ ಸರಕಾರ ದಿವಾಳಿಯತ್ತ ನಡೆದಿದೆ. ಅನುಪಯುಕ್ತ ಗ್ಯಾರಂಟಿಗಳ ಕಾರಣಕ್ಕೆ ಬೆಲೆ ಏರಿಕೆ ನಿರಂತರವಾಗಿ ಮುಂದುವರೆದಿದೆ.

ಅಭಿವೃದ್ಧಿ ಕಾರ್ಯಗಳು ಸಂಪೂರ್ಣ ಸ್ಥಗಿತವಾಗಿದೆ ಎಂದ ಅವರು, ಕಾಂಗ್ರೆಸ್ ಪಕ್ಷವು 17 ಸಚಿವರ ಸ್ವಕ್ಷೇತ್ರದಲ್ಲಿ ಹಿನ್ನಡೆ ಅನುಭವಿಸಿದೆ. ಅದು ಜನಪ್ರಿಯತೆ ಕಳೆದುಕೊಂಡಿದ್ದು, ಅವನತಿಯತ್ತ ಸಾಗುತ್ತಿದೆ; ಜನಹಿತ ಮರೆತಿದ್ದು, ಅಧಿಕಾರದಲ್ಲಿ ಮುಂದುವರೆಯುವ ನೈತಿಕತೆ ಅದಕ್ಕಿಲ್ಲ ಎಂದು ತಿಳಿಸಿದರು. ಮೂಡಾ ಹಗರಣ, ವಾಲ್ಮೀಕಿ ನಿಗಮದ ಹಗರಣದ ವಿರುದ್ಧ ಹೋರಾಟ ಮಾಡಲು ಕರೆ ನೀಡಿದರು. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ರಾಜೀನಾಮೆಗೆ ಆಗ್ರಹಿಸಿದರು.
ಕರ್ನಾಟಕ ರಾಜ್ಯ ಚುನಾವಣಾ ಉಸ್ತುವಾರಿ ರಾಧಾಮೋಹನ್‍ದಾಸ್ ಅಗರ್‍ವಾಲ್ ಅವರು ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ ಐತಿಹಾಸಿಕ ಗೆಲುವಿಗಾಗಿ ಧನ್ಯವಾದ ಸಮರ್ಪಿಸಿದರು. ಕಾರ್ಯಕರ್ತರ ಪ್ರಯತ್ನ, ಸಮರ್ಪಣಾ ಮನೋಭಾವದ ಕಾರಣ ಇದು ಸಾಧ್ಯವಾಗಿದೆ ಎಂದು ಮೆಚ್ಚುಗೆ ಸೂಚಿಸಿದರು. 2023ರಲ್ಲಿ ಆದ ಅಪಮಾನಕ್ಕೆ ಬದಲಿಯಾಗಿ ಈ ಗೆಲುವನ್ನು ನೀಡಿದ್ದೀರಿ ಎಂದು ಅಭಿನಂದಿಸಿದರು.
ಕಾಂಗ್ರೆಸ್ 136 ಶಾಸಕರನ್ನು ಹೊಂದಿದ್ದರೂ ದಯನೀಯ ಸೋಲು ಅನುಭವಿಸಿದೆ. ರಾಜ್ಯ ಸರಕಾರದ ವಿರುದ್ಧ ಜನರು ಮತ ನೀಡಿದ್ದಾರೆ. ಕಾಂಗ್ರೆಸ್‍ಗೆ ಐತಿಹಾಸಿಕ ಪರಾಜಯಕ್ಕಾಗಿ ಮುಖ್ಯಮಂತ್ರಿ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು. ಎಲ್ಲ ಕ್ಷೇತ್ರಗಳಲ್ಲೂ ಕರ್ನಾಟಕ ಸರಕಾರ ಸೋತಿದೆ. ಮತ್ತೆ ಚುನಾವಣೆ ನಡೆಸಿಕೊಡಲು ಸಿದ್ದರಾಮಯ್ಯನವರು ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದರು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಶಾಸಕರು ಸಂಪೂರ್ಣ ಸೋಲು ಒಪ್ಪಿಕೊಳ್ಳಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಭ್ರಷ್ಟಾಚಾರದ ಕಾರಣಕ್ಕೆ ಕಾಂಗ್ರೆಸ್ ಸಚಿವ ನಾಗೇಂದ್ರ ಅವರು ರಾಜೀನಾಮೆ ಕೊಟ್ಟಿದ್ದಾರೆ. ಈ ಸಂಬಂಧ ಪ್ರತಿಭಟನೆ ಸಂಘಟಿಸಿದ ವಿಜಯೇಂದ್ರರ ತಂಡಕ್ಕೆ ಅಭಿನಂದನೆಗಳು ಎಂದು ರಾಧಾಮೋಹನ್‍ದಾಸ್ ಅಗರ್‍ವಾಲ್ ಅವರು ತಿಳಿಸಿದರು. ಮೈಸೂರು ಮೂಡಾದ 4 ಸಾವಿರ ಕೋಟಿಯ ಹಗರಣವನ್ನೂ ಅವರು ಪ್ರಸ್ತಾಪಿಸಿದರು. ಇದರ ವಿರುದ್ಧ ತೀವ್ರ ಹೋರಾಟ ನಡೆಸಲು ಸೂಚಿಸಿದರು. 3ನೇ ಬಾರಿ ಬಿಜೆಪಿ ತನ್ನ ಮತಪ್ರಮಾಣವನ್ನು ಹೆಚ್ಚಿಸಿಕೊಂಡು ನರೇಂದ್ರ ಮೋದಿಜೀ ಅವರ ನೇತೃತ್ವದಲ್ಲಿ ಅಧಿಕಾರ ಪಡೆದಿದೆ ಎಂದು ಮೆಚ್ಚುಗೆ ಸೂಚಿಸಿದರು. 14 ರಾಜ್ಯಗಳಲ್ಲಿ ಕಾಂಗ್ರೆಸ್ ಸಂಸದರೇ ಇಲ್ಲ ಎಂದು ವಿವರ ನೀಡಿದರು.
ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ, ವಿ.ಸೋಮಣ್ಣ, ನಿಕಟಪೂರ್ವ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್, ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಡಿ.ವಿ.ಸದಾನಂದಗೌಡ, ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿ, ಮಾಜಿ ಡಿಸಿಎಂ ಮತ್ತು ಸಂಸದ ಗೋವಿಂದ ಕಾರಜೋಳ, ಮಾಜಿ ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ್, ಮಾಜಿ ಸಚಿವ ಬಿ.ಶ್ರೀರಾಮುಲು, ಹಿರಿಯರಾದ ನಿರ್ಮಲ್‍ಕುಮಾರ್ ಸುರಾಣ, ಸಿ.ಟಿ.ರವಿ ಮೊದಲಾದ ಪ್ರಮುಖರು ವೇದಿಕೆಯಲ್ಲಿದ್ದರು.
ಕೋರ್ ಕಮಿಟಿ ಸದಸ್ಯರು, ಪಕ್ಷದ ಪದಾಧಿಕಾರಿಗಳು ಮತ್ತು ಅಪೇಕ್ಷಿತರು ಉಪಸ್ಥಿತರಿದ್ದರು. ರಾಜ್ಯ ಪ್ರಧಾನ ಕಾರ್ಯದರ್ಶಿ ನಂದೀಶ್ ರೆಡ್ಡಿ ಅವರು ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಅಶ್ವಿನಿ ಶಂಕರ್ ಅವರು ವಂದೇಮಾತರಂ ಗೀತೆ ಹಾಡಿದರು. ಡಾ.ಶೈಲೇಂದ್ರ ಬೆಲ್ದಾಳೆ ಸ್ವಾಗತಿಸಿದರು. ತುಳಸಿ ಸಸಿಗೆ ನೀರೆರೆದು ಉದ್ಘಾಟನೆ ನೆರವೇರಿಸಲಾಯಿತು. ಸ್ವಾಮಿ ವಿವೇಕಾನಂದರ ಪುಣ್ಯಸ್ಮøತಿ ಹಿನ್ನೆಲೆಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ್ದಲ್ಲದೆ, ಭಾರತಮಾತೆ, ಬಿಜೆಪಿ ಸ್ಥಾಪಕರಿಗೆ ಗೌರವ ಸಲ್ಲಿಸಲಾಯಿತು.












Click it and Unblock the Notifications