BS Yeddyurappa : ರಾಜಕೀಯ ಎದುರಾಳಿಗಳನ್ನು ಹೊಗಳಿ ವಿಧಾನಸಭೆಯ ವಿದಾಯದ ಭಾವುಕ ಭಾಷಣ ಮುಗಿಸಿದ ಯಡಿಯೂರಪ್ಪ
ನಾನು ಇಂದು ಇಷ್ಟು ಎತ್ತರಕ್ಕೆ ಬೆಳೆಯಲು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಕಾರಣ ಎಂದು ಬಿ ಎಸ್ ಯಡಿಯೂರಪ್ಪ ನವರು ಭಾವುಕರಾದರು.
ಬೆಂಗಳೂರು,ಫೆಬ್ರವರಿ24: ಚುನಾವಣಾ ರಾಜಕೀಯದಿಂದ ನಿವೃದ್ದಿ ಘೋಷಿಸಿಕೊಂಡಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನವರಿಗೆ ಬಜೆಟ್ ಅಧಿವೇಶನವೇ ಕೊನೆಯ ಅಧಿವೇಶನವಾಗಿದ್ದು, ವಿಧಾನಸಭೆಯಲ್ಲಿ ವಿದಾಯದ ಭಾಷಣದ ವೇಳೆ ಬಿ ಎಸ್ ಯಡಿಯೂರಪ್ಪ ನವರು ಭಾವುಕರಾಗಿದ್ದಾರೆ.
ಹೌದು, ಇಂದು ನಡೆದ ಕೊನೆಯ ದಿನದ ಅಧಿವೇಶನದಲ್ಲಿ ಸದನವನ್ನ ಉದ್ದೇಶಿಸಿ ಹಾಗೂ ಬೆಳೆದುಬಂದ ರಾಜಕೀಯ ಕ್ಷೇತ್ರವನ್ನ ಉದ್ದೇಶಿಸಿ ಬಿ ಎಸ್ ಯಡಿಯೂರಪ್ಪ ನವರು ಭಾಷಣ ಆರಂಭಿಸುತ್ತಿದ್ದಂತೆ ಭಾವುಕರಾದರು, ನನಗೆ ಈ ಸಂದರ್ಭದಲ್ಲಿ ಏನು ಮಾತನಾಡ್ಬೇಕು, ಏನು ಮಾತನಾಡಬಾರದು ಅಂತ ಗೊತ್ತಾಗುತ್ತಿಲ್ಲ. ನನ್ನನ್ನು ಈ ಹಂತದವರೆಗೂ ಬೆಳೆಸಿದ ಶಿಕಾರಿಪುರ ಜನತೆಗೆ ನಾನು ಚಿರಋಣಿಯಾಗಿರುತ್ತೇನೆ ಎಂದು ಭಾವುಕರಾದರು.

ಶಿಕಾರಿಪುರ ಜನತೆಯ ಸೇವೆಯನ್ನ ನಾನು ಬದುಕಿನ ಕೊನೆಯುಸಿರು ಇರೋವರೆಗೂ ಅವರ ಸೇವೆಯನ್ನ ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದು ಮಾತನಾಡುವಾಗ ಅವರ ದನಿಯಲ್ಲಿ ನಡುಕವಿತ್ತು, ಭಾವುಕತೆ ಇತ್ತು. ಈ ವೇಳೆ ಯಡಿಯೂರಪ್ಪನವರ ಮಾತು ಕೇಳಿ ಇಡೀ ಸದನವೇ ಅವರ ಮಾತುಗಳನ್ನ ನಿಶಬ್ದವಾಗಿ ಕೇಳುತ್ತಾ, ಸದನವೇ ಮೌನವಾಗಿತ್ತು.
ಇದು ನನ್ನ ಕೊನೆಯ ಅಧಿವೇಶನ ಎಂದು ಭಾಷಣ ಆರಂಭಿಸಿದ್ದ ಬಿ.ಎಸ್ ಯಡಿಯೂರಪ್ಪ ನವರು ರಾಜಕೀಯವಾಗಿ ತಾವು ಬೆಳೆದು ಬಂದ ಹಾದಿ, ಸರ್ಕಾರದ ಸಾಧನೆ, ಹೊಸ ಹೊಸ ಕಾರ್ಯಕ್ರಮಗಳ ಬಗ್ಗೆ ಮಾತನಾಡಿದ್ದು, ರಾಜಕೀಯ ಎದುರಾಳಿಯಾಗಿರುವ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಹಾಗೂ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರನ್ನ ಹಾಡಿಹೊಗಳಿದ್ದಾರೆ.

ನಮಗೆ ಎಲ್ಲರಿಗೂ ದೇವೇಗೌಡರು ಆದರ್ ಬೇಕು. . ಈ ವಯಸ್ಸಲ್ಲೂ ಕೂಡ ಅವರು ನಮ್ಮ ರಾಜ್ಯದ ನೆಲ, ಜಲ, ಭಾಷೆ ಬಗ್ಗೆ ಚಿಂತನೆ ಮಾಡುತ್ತಾರೆ. ಈ ವಯಸ್ಸಿನಲ್ಲಿ ಕೂಡಾ ಸಮಸ್ಯೆಗಳ ಬಗ್ಗೆ ಅಧ್ಯಯನ ಮಾಡುತ್ತಾರೆ, ಅವರನ್ನು ನೋಡಿ ನಾವೆಲ್ಲರು ಕೂಡಾ ಕಲಿಯಬೇಕಿದೆ ಎಂದು ಹೇಳಿದ ಯಡಿಯೂರಪ್ಪ ನವರು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಕೂಡಾ ಯಶಸ್ವಿಯಾಗಿ ಕೆಲಸ ನಿರ್ವಹಿಸಿದ್ದಾರೆ. ಎ.ಟಿ. ರಾಮಸ್ವಾಮಿ ಸೇರಿದಂತೆ ಹಲವರು ಉತ್ತಮ ಕೆಲಸ ಮಾಡಿದ್ದಾರೆ ಎಂದು ಹೇಳಿದರು.
ನಾನು ಇಂದು ಇಷ್ಟು ಎತ್ತರಕ್ಕೆ ಬೆಳೆಯಲು ರಾಷ್ಟ್ರೀಯ ಸ್ವಯಂಸೇವಕ ಸಂಘ ಕಾರಣ. ಆರ್ ಎಸ್ ಎಸ್ ನಲ್ಲಿ ಸಿಕ್ಕಿದ ತರಬೇತಿಯಿಂದ ನನಗೆ ಇಷ್ಟೆಲ್ಲಾ ಸ್ಥಾನಮಾನಗಳು ಸಿಕ್ಕಿವೆ. ಈ ತಿಂಗಳು 27ಕ್ಕೆ ನನಗೆ 80 ವರ್ಷ ತುಂಬುತ್ತಿದೆ. ಈ ವಿಶೇಷ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೇ ಶಿವಮೊಗ್ಗಕ್ಕೆ ಬರುತ್ತಿರುವುದು ನನಗೆ ಇನ್ನಷ್ಟು ತೃಪ್ತಿ ತಂದಿದೆ. ನನ್ನ ಜೀವನದಲ್ಲಿ ಅನೇಕ ಒಳ್ಳೆಯ ಅವಕಾಶಗಳು ಸಿಕ್ಕಿವೆ. ಸಾಮಾನ್ಯ ಪುರಸಭೆಯ ಸದಸ್ಯನಿಂದ ಹಿಡಿದು ಮುಖ್ಯಮಂತ್ರಿ ಆಗುವವರೆಗೂ ಬೆಳೆದಿದ್ದೇನೆ ಎಂದು ಭಾವುಕ ನುಡಿಗಳನ್ನ ಆಡಿದರು.
ನಾನು ಚುನಾವಣೆಗೆ ನಿಲ್ಲಲ್ಲ ಅಂತಾ ತೀರ್ಮಾನ ಮಾಡಿದ್ದೇನೆ. ಮತ್ತೆ ರಾಜ್ಯದಲ್ಲಿ ಓಡಾಡಿ ಬಿಜೆಪಿಯನ್ನು ಅಧಿಕಾರಕ್ಕೆ ತರುವುದು ನನ್ನ ಗುರಿಯಾಗಿದೆ. ಈ ದಿಕ್ಕಿನಲ್ಲಿ ನಾನು ರಾಜ್ಯದಲ್ಲಿ ಪ್ರವಾಸವನ್ನ ಮಾಡಿ, ಮತ್ತೆ ಪಕ್ಷವನ್ನ ರಾಜ್ಯದಲ್ಲಿ ಅಧಿಕಾರಕ್ಕೆ ತರುವುದೇ ನನ್ನ ಗುರಿ. ನಿವೆಲ್ಲರೂ ಮತ್ತೆ ಆಯ್ಕೆ ಯಾಗಿ ಬರಬೇಕು, ಆಡಳಿತ ಪಕ್ಷದ ಯಾರೂ ವಿಚಲಿತರಾಗಬೇಕಿಲ್ಲ. ನನ್ನ ಜೀವನದ ಕೊನೆಯುಸಿರು ಇರುವವರೆಗೂ ನಾನು ಪಕ್ಷಕ್ಕಾಗಿ ದುಡಿಯುತ್ತೇನೆ ಎಂದು ಹೇಳಿದರು.












Click it and Unblock the Notifications