ಕಾಂಗ್ರೆಸ್ ಮುಖಂಡ ಬಿಕೆ ಹರಿಪ್ರಸಾದ್ ಬಂಧನಕ್ಕೆ ಆಗ್ರಹ: ಕಾರಣವೇನು?
ಮಂಗಳೂರು, ಜನವರಿ 05: ಅಯೋಧ್ಯೆಗೆ ಹೋಗುವವರಿಗೆ ಸರ್ಕಾರವೇ ರಕ್ಷಣೆ ನೀಡಬೇಕು. ಏಕೆಂದರೆ, ಗೋಧ್ರಾ ದುರಂತದ ರೀತಿ ಮತ್ತೊಮ್ಮೆ ಏನಾದರು ಅಹಿತಕರ ಘಟನೆ ಕರ್ನಾಟಕದಲ್ಲಿ ಆಗಬಹುದು ಎಂದು ಬಿ ಕೆ ಹರಿಪ್ರಸಾದ್ ಹೇಳಿಕೆ ವಿರುದ್ದ ಸಂಸದ ನಳಿನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೇ ಬಿಕೆ ಹರಿಪ್ರಸಾದ್ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಒಂದು ಕಡೆ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರು ನಮಗೆ ಯಾವುದೇ ಮಾಹಿತಿ ಇಲ್ಲ ಅಂತ ಹೇಳ್ತಾರೆ. ಉಪಮುಖ್ಯಮಂತ್ರಿಗಳು ಪರಿಶೀಲನೆ ಮಾಡುತ್ತಾರೆ ಅಂತ ಹೇಳುತ್ತಾರೆ. ಕೂಡಲೇ ಹರಿಪ್ರಸಾದ್ ಅವರು ತಮಗೆ ಇದ್ದ ಮಾಹಿತಿಯನ್ನು ಗೃಹ ಇಲಾಖೆಗೆ ನೀಡಬೇಕು ಅಥವಾ ಇವರನ್ನು ಬಂಧಿಸಬೇಕೆಂದು ಆಗ್ರಹಿಸಿದರು. ಗೋದ್ರಾ ಘಟನೆ ಹಿಂದೆ ಕಾಂಗ್ರೆಸ್ ಕೂಡ ಇತ್ತು. ಅಂದು ಮೋದಿ ಸರ್ಕಾರವನ್ನ ಬೀಳಿಸಲು ಕಾಂಗ್ರೆಸ್ ಕೂಡ ಷಡ್ಯಂತ್ರ ಮಾಡಿತ್ತು ಎಂದು ಕಿಡಿಕಾರಿದರು.

ಇನ್ನೂ ಮಾಜಿ ಸಚಿವ ಆಂಜನೇಯ ಅವರ ಹೇಳಿಕೆಗೆ ಮಾಧ್ಯಮಗಳ ಜೊತೆಗೆ ಮಾತನಾಡಿ, ರಾಮ ಎಂಬುದು ಭಾವನಾತ್ಮಕ ನಂಬಿಕೆಗಳ ಸಂಕೇತ. ಮರ್ಯಾದಪುರುಷ ರಾಮನನ್ನು ಆದರ್ಶಪುರುಷನಾಗಿ ಸ್ವೀಕರಿಸಲಾಗಿದೆ. ರಾಮನಿಗೆ ಇನ್ನೊಂದು ಹೋಲಿಕೆಯಿಲ್ಲ. ರಾಮನಿಗೆ ರಾಮನೇ ಹೋಲಿಕೆ. ಹೆಸರಿಟ್ಟ ತಕ್ಷಣ ಎಲ್ಲರೂ ರಾಮನಾಗಲು ಸಾಧ್ಯವಿಲ್ಲ. ಸಿದ್ದರಾಮಯ್ಯರಲ್ಲಿ ರಾಮನ ಹೆಸರಿದೆ ರಾವಣನ ಗುಣವಿದೆ ಎಂದು ಹೇಳಿದರು.
ರಾಜ್ಯದಲ್ಲಿ ಗೋದ್ರಾ ಮಾದರಿಯ ಹತ್ಯಾಕಾಂಡಕ್ಕೆ ಸಂಚು, ಅಯೋಧ್ಯೆಗೆ ಹೋಗುವವರಿಗೆ ಭದ್ರತೆ ಕೊಡಬೇಕೆಂದು ಹೇಳಿಕೆ ನೀಡಿರುವ ಬಿ.ಕೆ.ಹರಿಪ್ರಸಾದ್ ಅವರ ಮೇಲೆ ಕಿಡಿಕಾರಿದ ಸಂಸದ ನಳಿನ್ ಕುಮಾರ್ ಕಟೀಲು ಅವರು, ತಕ್ಷಣ ಹರಿಪ್ರಸಾದ್ ಬಂಧನವಾಗಲಿ ಎಂದು ಸರಕಾರವನ್ನು ಆಗ್ರಹಿಸಿದ್ದಾರೆ.

ಈ ಬಗ್ಗೆ ಸಿಎಂ, ಗೃಹಸಚಿವರು, ಉಪ ಮುಖ್ಯಮಂತ್ರಿಗಳು ತಮಗೇನು ಗೊತ್ತಿಲ್ಲ ಎನ್ನುತ್ತಿದ್ದಾರೆ. ಬಿ ಕೆ.ಹರಿಪ್ರಸಾದ್ ತಮ್ಮಲ್ಲಿರುವ ಮಾಹಿತಿಯನ್ನು ಗೃಹ ಇಲಾಖೆಗೆ ನೀಡಲಿ. ಇಲ್ಲದಿದ್ದಲ್ಲಿ ತಕ್ಷಣ ಅವರ ಬಂಧನವಾಗಲಿ. ಏಕೆಂದರೆ ಗೋದ್ರಾ ಘಟನೆಯ ಹಿಂದೆ ಕಾಂಗ್ರೆಸ್ ಇತ್ತು. ಮೋದಿ ಸರಕಾರವನ್ನು ಬೀಳಿಸಬೇಕೆಂಬ ಕುತಂತ್ರವನ್ನು ಆಗ ಕಾಂಗ್ರೆಸ್ ಮಾಡಿತ್ತು. ಇಂದು ಮತ್ತೆ ಈ ಹೇಳಿಕೆಯನ್ನು ಹರಿಪ್ರಸಾದ್ ಹೇಳಿದ್ದಾರೆಂದರೆ ಈ ಷಡ್ಯಂತರವನ್ನು ಕಾಂಗ್ರೆಸ್ ಮಾಡಿತ್ತು ಎಂದು ಆರೋಪಿಸುತ್ತೇನೆ ಎಂದರು.
ಭಾರತ ಹಿಂದೂರಾಷ್ಟ್ರ ಆದಲ್ಲಿ ಅಪಾಯಕಾರಿ ಎಂಬ ಯತೀಂದ್ರ ಹೇಳಿಕೆ ಕುರಿತು ಮಾತನಾಡಿ, ಭಾರತ ಹಿಂದೂರಾಷ್ಟ್ರವೇ. ಹಿಂದೂ ಎನ್ನುವ ಶಬ್ದ ಜಾತ್ಯಾತೀತವಾದ್ದದು. ಮಹಾತ್ಮಾಗಾಂಧೀಜಿಯವರು ಈ ದೇಶದಲ್ಲಿ ರಾಮರಾಜ್ಯದ ಪರಿಕಲ್ಪನೆ ಕಂಡಿದ್ದರು. ಅವರು ಭಾರತವನ್ನು ಜಾತ್ಯಾತೀತ ಮಾಡಲು ಹೇಳಿಲ್ಲ. ರಾಮರಾಜ್ಯ ಮಾಡಲು ಹೇಳಿದ್ದರು. ರಾಮರಾಜ್ಯದ ಪರಿಕಲ್ಪನೆಯೇ ಹಿಂದೂ ರಾಷ್ಟ್ರದ ಪರಿಕಲ್ಪನೆ. ಗಾಂಧಿ ಒಪ್ಪಿರುವ ವಿಚಾರ ಯತೀಂದ್ರ ಒಪ್ಪೋಲ್ಲ ಅಂದರೆ ಗಾಂಧಿಯನ್ನು ಯತೀಂದ್ರ ಒಪ್ತಾರೋ ಇಲ್ಲವೋ ಎಂದು ಸ್ಪಷ್ಟಪಡಿಸಬೇಕು.
ಹಿಂದೂ ರಾಷ್ಟ್ರ ಆದ ಕಾರಣಕ್ಕೆ ಈ ದೇಶದಲ್ಲಿ ಜಾತ್ಯಾತೀತತೆ ಉಳಿದಿದೆ. ಹಿಂದೂರಾಷ್ಟ್ರದ ಪರಿಣಾಮ ಈ ದೇಶ ಉಳಿದಿದೆ. ಕಾಂಗ್ರೆಸ್ ಕಾಲದಲ್ಲಿ ಈ ದೇಶದಲ್ಲಿ ಪಾಕಿಸ್ತಾನದ ತರಹದ ಆಡಳಿತವಿತ್ತು. ಆಗ ಭಯೋತ್ಪಾದನೆ, ನಕ್ಸಲ್ ಚಟುವಟಿಕೆ ತಾಂಡವವಾಡುತ್ತಿತ್ತು. ಈಗ ಹಿಂದೂರಾಷ್ಟ್ರದ ಪರಿಕಲ್ಪನೆಯಡಿ ಎಲ್ಲವೂ ನಿಂತಿದೆ. ನಾನೂ ಕರಸೇವಕ, ರಾಮಭಕ್ತ. ಯಾವ ಕರಸೇವಕರನ್ನು ಬಂಧಿಸುತ್ತಿರುವ ಸರಕಾರ ಶಕ್ತಿಯಿದ್ದರೆ ನನ್ನನ್ನು ಬಂಧಿಸಲಿ. ಎಲ್ಲಾ ಕರಸೇವಕರನ್ನು ಬಂಧಿಸಲಿ. ಇಲ್ಲದಿದ್ದರೆ ನಮ್ಮ ಹೋರಾಟ ಮುಂದುವರಿಯುತ್ತದೆ ಎಂದರು.












Click it and Unblock the Notifications