'ವರಿಷ್ಠರ ಮುಂದೆ ವಿಜಯೇಂದ್ರ ಕರ್ಮಕಾಂಡ ಬಯಲು ಮಾಡ್ತಿವಿ'
ವಿಜಯಪುರ, ಫೆಬ್ರವರಿ 04: ಡಿ ಕೆ ಶಿವಕುಮಾರ್ ಜೊತೆಗೆ ಬಿ ವೈ ವಿಜಯೇಂದ್ರ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಯಡಿಯೂರಪ್ಪ ಮಗನ ಕರ್ಮಕಾಂಡ ವಿವರಿಸಲು ದೆಹಲಿಗೆ ಹೊರಟಿದ್ದೇವೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ವಾಗ್ದಾಳಿ ನಡೆಸಿದರು.
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ರಾಜ್ಯಾಧ್ಯಕ್ಷ ಸ್ಥಾನದ ಬಗ್ಗೆ ಹೈಕಮಾಂಡ್ ಗಮನಕ್ಕೆ ತರಲು ಹೊರಟಿದ್ದೇವೆ. ಇಷ್ಟು ದಿನ ತಟಸ್ಥರಿದ್ದವರು ಇದೀಗ ನಮ್ಮ ನಿಷ್ಠಾವಂತರ ಗುಂಪು ಸೇರಿದ್ದಾರೆ. ವಂಶಪಾರಂಪರಿಕ, ಕುಟುಂಬಶಾಹಿ ವಿರುದ್ಧ ನಮ್ಮ ಹೋರಾಟ ಇದೆ. ಯಡ್ಡಿಯೂರಪ್ಪ ಅವರ ಮಗನ ಕರ್ಮಕಾಂಡದ ಬಗ್ಗೆ ವಿವರಿಸಲು ಹೊರಟಿದ್ದೇವೆ ಎಂದು ಯತ್ನಾಳ್ ಅವರು ಕಿಡಿಕಾರಿದರು.

ವಿಜಯೇಂದ್ರನನ್ನು ರಾಜ್ಯಾಧ್ಯಕ್ಷನಾಗಿ ಮುಂದುವರೆಸಿದ್ರೆ ಕರ್ನಾಟಕದಲ್ಲಿ ಹೀನಾಯ ಸ್ಥಿತಿ ಬರುತ್ತದೆ. ಮೊನ್ನೆ ವಿಜಯೇಂದ್ರನಿಗೆ ಬಗ್ಗೆ ಹೀನಾಯವಾಗಿ ಬೈದರೂ ಉತ್ತರ ಕೊಡಲಿಲ್ಲ. ಯಡ್ಡಿಯೂರಪ್ಪನಿಗೆ ಮತ್ತು ಮಗ ವಿಜಯೇಂದ್ರಗೆ ಡಿಕೆ ಶಿವಕುಮಾರ್ ಭಯಪಡಿಸಿಬಿಟ್ಟಿದ್ದಾರೆ.
ನೀವೇನಾದರೂ ನಮ್ಮ ಹಗರಣ ಹೊರತೆಗೆದರೆ ನಿಮ್ಮ ಪೋಕ್ಸೋ ಕೇಸ್ ಇದೆ. ನಕಲಿ ಸಹಿ ಮಾಡಿದಿಯಾ, ಅವನೆಲ್ಲ ಹೊರತೆಗೆಯುತ್ತೇವೆ ಅಂತಾ ಹೆದರಿಸಿದ್ದಾರೆ. ಇಂತಹವರು ಬೇಕಾ ಅಂತಾ ನಾವು ಹೈಕಮಾಂಡ್‌ಗೆ ಕೇಳುತ್ತಿದ್ದೇವೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ವಾಗ್ದಾಳಿ ನಡೆಸಿದರು.
ಹಿಂದೂಗಳ ಕೊಲೆಯಾದರೂ ಯಾರು ಕೇಳಲಿಲ್ಲ. ರಾಜ್ಯದಲ್ಲಿ ಕುಟುಂಬಶಾಹಿ ರಾಜಕಾರಣ ಬಿಜೆಪಿಯಲ್ಲಿ ಕೊನೆಗೊಳ್ಳಬೇಕು. ಭ್ರಷ್ಟಾಚಾರ ಕುಟುಂಬ ಈ ರಾಜ್ಯದಿಂದ ತೊಲಗಬೇಕು. ಹಿಂದುತ್ವದ ಪರ ಇರುವ ನಾಯಕತ್ವ ಬರಬೇಕು ಎನ್ನುವುದು ನಮ್ಮ ಉದ್ದೇಶವಾಗಿದೆ.
ಯಾರು ಕೂಡ ಹಿಂದೂತ್ವದ ರಕ್ಷಣೆ ಮಾಡಲಿಲ್ಲ. ಕೇವಲ ಕಠಿಣ ಕ್ರಮ ಅನ್ನೋದನ್ನು ಬಿಟ್ಟರೆ ಏನು ಮಾಡಲಿಲ್ಲ. ಅದಕ್ಕಾಗಿಯೇ ರಾಜ್ಯದಲ್ಲಿ ಬಿಜೆಪಿ ಹೀನಾಯ ಪರಿಸ್ಥಿತಿ ತಲುಪಿದೆ. ಅದಕ್ಕೆ ಕಾರಣ ಹಿಂದುತ್ವ ಕೈಬಿಟ್ಟು ರಾಜಕಾರಣ ಮಾಡಿದ್ದು. ನಮ್ಮ ಟೀಂ ಈಗ ಬಹಳ ದೊಡ್ಡದಾಗಿದೆ. ತಟಸ್ಥ ಎಂದು ಎರಡು ಕಡೆ ಆಟ ಆಡುತ್ತಿದ್ದರು. ಈಗ ಅವರಿಗೂ ಗೊತ್ತಾಗಿದೆ. ಅವರೆಲ್ಲ ನಿಷ್ಠಾವಂತರಾಗಿದ್ದಾರೆ ಎಂದು ಯತ್ನಾಳ್ ಹೇಳಿದರು.
ಡಿ ಕೆ ಶಿವಕುಮಾರ್ ಅವರು ವಿಜಯೇಂದ್ರ ಅವರನ್ನ ಹೀನಾಯವಾಗಿ ಬೈದಿದ್ದಾರೆ. ಅದಕ್ಕೆ ಅವರು ಉತ್ತರ ಕೊಡಲಿಲ್ಲ. ಇಂತಹ ವ್ಯಕ್ತಿಗಳು ನಮಗೆ ಬೇಕಾ? ಒಬ್ಬ ಮಹಾ ಭ್ರಷ್ಟ ಕುಟುಂಬ ಬೇಕೇ? ಎಂದು ನಾವು ಹೈಕಮಾಂಡ್ ನಾಯಕರ ಮುಂದೆ ಕೇಳಿಕೊಳ್ಳುತ್ತೇವೆ ಎಂದು ಬಿಜೆಪಿ ಹಿರಿಯ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರು ವಿಜಯೇಂದ್ರ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ವಿಜಯೇಂದ್ರ, ಯಡಿಯೂರಪ್ಪ ಕುಟುಂಬ ರಾಜಕೀಯದಿಂದ ಬೇಸತ್ತಿದ್ದಾರೆ, ರಾಜ್ಯದ ಬಿಜೆಪಿ ಸಂಸದರು ಅದರಲ್ಲೂ ಚಿಕ್ಕಬಳ್ಳಾಪುರ ಸಂಸದ ಡಾ.ಕೆ.ಸುಧಾಕರ್, ದಾವಣಗೆರೆಯ ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ, ಚಿತ್ರದುರ್ಗ ಸಂಸದ ಗೋವಿಂದ್ ಕಾರಜೋಳ ಅವರಂತಹ ನಾಯಕರು ಒಲ್ಲದ ಮನಸ್ಸಿನಿಂದ ಪಕ್ಷದಲ್ಲಿ ತಟಸ್ಥರಾಗಿದ್ದಾರೆ. ತಮ್ಮನ್ನು ಸಂಪರ್ಕಿಸದೆ ಜಿಲ್ಲಾಧ್ಯಕ್ಷರ ನೇಮಕ ಮಾಡಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೀಗಾಗಿ ತಟಸ್ಥ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಯತ್ನಾಳ್ ಬಣ ಕಸರತ್ತು ನಡೆಸಿದೆ ಎಂದು ಹೇಳಲಾಗಿದೆ.












Click it and Unblock the Notifications