ವಿಜಯೇಂದ್ರ ರಾಜ್ಯಾಧ್ಯಕ್ಷ ಪಟ್ಟ ಏರಿದ ಬೆನ್ನಲ್ಲೇ ಬಿಜೆಪಿಯಲ್ಲಿ ಕಿತ್ತಾಟ; ಲೋಕಸಭಾ ಚುನಾವಣೆಯ ಮೇಲಾಗುತ್ತಾ ಎಫೆಕ್ಟ್?
ಬೆಂಗಳೂರು, ನವೆಂಬರ್30: ರಾಜ್ಯ ವಿಧಾನಸಭಾ ಚುನಾವಣಾ ಫಲಿತಾಂಶ ಬಂದು ಬರೋಬ್ಬರಿ ಆರು ತಿಂಗಳ ನಂತರ ಬಿಜೆಪಿ ಹೈಕಮಾಂಡ್ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ವಿರೋಧ ಪಕ್ಷದ ನಾಯಕರನ್ನ ನೇಮಕ ಮಾಡಿದೆ. ಆದರೆ, ಬಿ ವೈ ವಿಜಯೇಂದ್ರ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿದಕ್ಕೆ ಬಿಜೆಪಿ ಪಾಳಯದಲ್ಲಿ ಬಣ ರಾಜಕೀಯ ಜೋರಾಗಿ ಸದ್ದು ಮಾಡುತ್ತಿದ್ದು, ಅಸಮಾಧಾನ ಸ್ಪೋಟಗೊಂಡಿದೆ.
ಹೌದು, ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಬಿಜೆಪಿ ಸೋಲನ್ನ ಅನುಭವಿಸಿದ್ದು, ಸೋಲಿನ ಬೆನ್ನಲ್ಲೇ ಕಮಲ ಪಾಳಯದಲ್ಲಿ ಅಸಮಾಧಾನ ಭುಗಿಲೆದಿತ್ತು. ಇದೀಗ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿರುವುದು ಬಿಜೆಪಿ ಹಿರಿಯ ನಾಯಕರ ಬೇಸರಕ್ಕೆ ಕಾರಣವಾಗಿದ್ದು, ಬಹಿರಂಗವಾಗಿ ಮಾಜಿ ಸಚಿವ ವಿ ಸೋಮಣ್ಣ, ಬಸವನಗೌಡ ಪಾಟೀಲ್ ಯತ್ನಾಳ್ ಹಾಗೂ ಅರವಿಂದ್ ಬೆಲ್ಲದ್ ಅಸಮಾಧಾನವನ್ನ ಹೊರ ಹಾಕಿದ್ದಾರೆ.

ಈ ಹಿಂದೆ ಮೂರು ವರ್ಷಗಳ ಕಾಲ ಅಧಿಕಾರವನ್ನ ನಡೆಸಿದ್ದ ಬಿಜೆಪಿ ವಿಧಾನಸಭಾ ಚುನಾವಣೆಯಲ್ಲಿ ಸುಲಭವಾಗಿ ಗೆಲುವು ಸಾಧಿಸುವುದಾಗಿ ಹೆಚ್ಚು ಆತ್ಮವಿಶ್ವಾಸವನ್ನ ಇಟ್ಟುಕೊಂಡಿತ್ತು, ಆದರೆ ಕಾಂಗ್ರೆಸ್ ನ ತಂತ್ರಗಾರಿಕೆ ಹಾಗೂ ಗ್ಯಾರಂಟಿಯಿಂದಾಗಿ 135 ಸ್ಥಾನಗಳನ್ನ ಕಾಂಗ್ರೆಸ್ ಗೆದ್ದು ಅಧಿಕಾರಕ್ಕೆ ಬಂದಿದೆ. ಇನ್ನೂ 2024 ರ ಲೋಕಸಭಾ ಚುನಾವಣೆಯಲ್ಲಿಯೂ ಹೆಚ್ಚು ಸ್ಥಾನಗಳನ್ನ ಗೆಲ್ಲುವ ನಿಟ್ಟಿನಲ್ಲಿ ಕಾಂಗ್ರೆಸ್ ತಂತ್ರಗಾರಿಕೆಯನ್ನ ನಡೆಸುತ್ತಿದೆ. ಇತ್ತ ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋತ ಬಿಜೆಪಿ ಹಾಗೂ ಜೆಡಿಎಸ್ ಲೋಕಸಮರಕ್ಕಾಗಿ ಮೈತ್ರಿಯಾಗಿದ್ದು, ಕಾಂಗ್ರೆಸ್ ಗೆ ಠಕ್ಕರ್ ಕೊಡಲು ತಯಾರಿ ನಡೆಸಿದ್ದು, ಇತ್ತ ಬಿಜೆಪಿಗೆ ಸ್ವಪಕ್ಷದ ನಾಯಕ ಮುನಿಸೆ ದೊಡ್ಡ ಸವಾಲಗಿ ಪರಿಣಾಮಿಸಿದೆ.
ಈಗಾಗಲೇ 28 ಕ್ಷೇತ್ರಗಳ ಪೈಕಿ 20 ಕ್ಷೇತ್ರಗಳನ್ನ ಗೆಲ್ಲಲೇ ಬೇಕು ಎಂದು ಕಾಂಗ್ರೆಸ್ ಟಾರ್ಗೆಟ್ ಹಾಕಿಕೊಂಡಿದೆ. ಇತ್ತ ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾದ ಬೆನ್ನಲ್ಲೇ ರಾಜ್ಯ ಪ್ರವಾಸಕ್ಕೆ ಸಿದ್ದತೆ ನಡೆಸಿದ್ದು, ಅಸಮಾಧಾನಗೊಂಡ ನಾಯಕರನ್ನ ಭೇಟಿಯಾಗುವ ಮೂಲಕ ಅಸಮಾಧಾನ ಶಮನಕ್ಕೆ ಮುಂದಾಗಿದ್ದಾರೆ. ಈಗಾಗಲೇ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಸೋಲು ಕಂಡ ವಿ ಸೋಮಣ್ಣ ಬಹಿರಂಗಾಗಿ ನನ್ನ ಸೋಲಿಗೆ ರಾಜ್ಯ ಬಿಜೆಪಿ ನಾಯಕರು ಹಾಗೂ ಹೈಕಮಾಂಡ್ ನಾಯಕರು ಎಂದು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದು, ಕಾಂಗ್ರೆಸ್ ನತ್ತ ಮುಖ ಮಾಡಿದ್ದಾರೆ ಎನ್ನಲಾಗಿದ್ದು, ಡಿಸೆಂಬರ್ 6 ರಂದು ತುಮಕೂರಿನಲ್ಲಿ ವಿ ಸೋಮಣ್ಣ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ವಿ ಸೋಮಣ್ಣ ಕಾಂಗ್ರೆಸ್ ಸೇರ್ಪಡೆಯಾದರೇ ಲೋಕಸಭಾ ಚುನಾವಣೆಯ ಮೇಲೆ ಬಹಳಷ್ಟು ಪರಿಣಾಮ ಬೀರಲಿದೆ ಎಂದು ಹೇಳಲಾಗಿದೆ.
ಇನ್ನೂ ಸೋಲಿನ ಬಳಿಕ ಲೋಕಸಭಾ ಚುನಾವಣೆ ತಯಾರಿ ನಡೆಸುತ್ತಿರುವ ಕಮಲ ಪಾಳಯದಲ್ಲಿ ಸೃಷ್ಟಿಯಾದ ಈ ಭಿನ್ನಮತದ ಎಫೆಕ್ಟ್ ಮುಂಬರುವ ಲೋಕಸಭಾ ಚುನಾವಣೆಯ ಮೇಲು ಸಾಕಷ್ಟು ಪರಿಣಾಮ ಬೀರಲಿದೆ ಎಂಬ ಚರ್ಚೆಗಳು ನಡೆಯುತ್ತಿವೆ. ಇತ್ತ ಬಿಜೆಪಿಯಲ್ಲಿನ ಹಲವು ಭಿನ್ನಮತಗಳ ವಿರುದ್ದ ರಾಜ್ಯ ಕಾಂಗ್ರೆಸ್ ಸರ್ಕಾರದ ಸಚಿವರು ಟೀಕೆಯನ್ನ ನಡೆಸುತ್ತಿದ್ದಾರೆ. ಅಲ್ಲದೇ ವಿಜಯೇಂದ್ರ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿರುವ ಕುರಿತು ಆರಂಭದಲ್ಲಿ ಮೌನಕ್ಕೆ ಜಾರಿದ್ದ ಬಸವನಗೌಡ ಪಾಟೀಲ್ ಯತ್ನಾಳ್, ನಂತರ ನನ್ನ ಭೇಟಿಗೆ ಯಾರು ಬರಬೇಡಿ ಎಂದು ಬಹಿರಂಗವಾಗಿ ಯಡಿಯೂರಪ್ಪ ಅವರ ಕುಟುಂಬದ ವಿರುದ್ಧ ಕುಟುಕಿದ್ದಾರೆ.

ಈ ಹಿಂದೆ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಟಿಕೆಟ್ ಹಂಚಿಕೆ ಕುರಿತು ಸಾಕಷ್ಟು ಅಸಮಾಧಾನಕ್ಕೆ ಕಾರಣವಾಗಿತ್ತು. ಬಿಜೆಪಿಯಲ್ಲಿ ಎರಡು ಬಣಗಳು ಸ್ಪಷ್ಟವಾಗಿ ಸೃಷ್ಟಿಯಾಗಿದೆ ಎಂಬ ಮಾತುಗಳು ಕೇಳಿ ಬಂದಿದ್ದು, ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಲಿಂಗಾಯತ ನಾಯಕ ಬಿಎಸ್ ಯಡಿಯೂರಪ್ಪ ಬಣ ಒಂದು ಕಡೆಯಾದರೆ ಇನ್ನೊಂದು ಬಣವಾಗಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ( ಸಂಘಟನೆ) ಬಿಎಲ್ ಸಂತೋಷ್ ಕಂಡು ಬಂದಿದೆ.
ಒಟ್ನಲಿ, ವಿಜಯೇಂದ್ರ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿದ ಬೆನ್ನಲ್ಲೇ ಬಿಜೆಪಿಯ ಒಳಬೇಗುದಿ ಬೀದಿಗೆ ಬಂದಿದ್ದು, ರಾಜ್ಯ ಬಿಜೆಪಿಯಲ್ಲಿನ ಕಚ್ಚಾಟಗಳು ನಡೆದರೂ ಬಿಜೆಪಿ ಹೈಕಮಾಂಡ್ ಸೈಲೆಂಟಾಗಿದೆ. ಲೋಕಸಭಾ ಚುನಾವಣೆಯ ದೃಷ್ಟಿಯಲ್ಲಿ ಕರ್ನಾಟಕ ಮಹತ್ವದ ರಾಜ್ಯಗಳ ಪೈಕಿ ಒಂದಾಗಿದ್ದು ಬಿಜೆಪಿಯಲ್ಲಿನ ಭಿನ್ನಮತ ಲೋಕಸಭಾ ಚುನಾವಣೆಗೆ ಏಫೆಕ್ಟ್ ಆಗಲಿದ್ದು, ಈ ಅಸಮಾಧಾನವನ್ನ ಹೈಕಮಾಂಡ್ ಹಾಗೂ ವಿಜಯೇಂದ್ರ ಅವರು ಹೇಗೆ ಶಮನಗೊಳಿಸುತ್ತಾರೆ ಎಂಬುದನ್ನ ಕಾದುನೋಡಬೇಕಾಗಿದೆ.












Click it and Unblock the Notifications