ವಿಜಯೇಂದ್ರಗೆ ಸವಾಲ್ ಆಗಲಿರುವ ಬೆಲೆ ಏರಿಕೆ ವಿರುದ್ಧದ ಹೋರಾಟ!

ಬೆಂಗಳೂರು, ಏಪ್ರಿಲ್‌ 01: ರಾಜ್ಯ ಬಿಜೆಪಿ ಪಕ್ಷದ ನಾಯಕರ ಒಗ್ಗಟ್ಟು, ನಾಯಕರ ಸಾಮರ್ಥ್ಯ ಪ್ರದರ್ಶಿಸುವ ಸಮಯ ಇದೀಗ ಒದಗಿ ಬಂದಿದೆ. ಈಗಾಗಲೇ ಪ್ರಮುಖ ನಾಯಕರಲ್ಲೊಬ್ಬರಾದ ಬಸನಗೌಡ ಪಾಟೀಲ ಯತ್ನಾಳ್ ಅವರನ್ನು ಉಚ್ಛಾಟನೆ ಮಾಡಲಾಗಿದೆ, ಮತ್ತೆ ಕೆಲವರಿಗೆ ನೋಟೀಸ್ ನೀಡಲಾಗಿದೆ. ಅದರಾಚೆಗೆ ಮತ್ತೊಂದಷ್ಟು ಅಸಮಾಧಾನಿತ ನಾಯಕರು ತೆರೆಮರೆಯಲ್ಲಿದ್ದಾರೆ. ಕಳೆದ ಕೆಲವು ಸಮಯದಿಂದ ಪಕ್ಷದ ಗೊಂದಲಗಳನ್ನು ನೋಡಿ ಸುಸ್ತಾದ ಕಾರ್ಯಕರ್ತರು ಮೌನಕ್ಕೆ ಶರಣಾಗಿದ್ದಾರೆ. ಹೀಗಿರುವಾಗ ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ ವಿರುದ್ಧ ಬಿಜೆಪಿ ಪ್ರತಿಭಟನೆಗಿಳಿದಿದ್ದು ಯಶಸ್ಸು ಕಾಣುತ್ತಾ ಎಂಬ ಕುತೂಹಲ ಶುರುವಾಗಿದೆ.

ಬಣಜಗಳದಲ್ಲಿ ಕಳೆದು ಹೋಗಿರುವ ರಾಜ್ಯ ಬಿಜೆಪಿಯ ಕಥೆ ಸದ್ಯಕ್ಕೆ ಊರು ಬಾಗಿಲಾಗಿದೆ. ಹೀಗಿರುವಾಗ ಎಲ್ಲರನ್ನು ಒಟ್ಟಿಗೆ ಕರೆದೊಯ್ದು ಪ್ರತಿಭಟನೆ, ಆಹೋರಾತ್ರಿ ಧರಣಿ, ಯಾತ್ರೆಗಳನ್ನು ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಗೆ ನಡೆಸುತ್ತಾರೆ ಎಂಬುದು ಈಗ ಎಲ್ಲರ ಮುಂದಿರುವ ಪ್ರಶ್ನೆಯಾಗಿದೆ. 2023ರ ವಿಧಾನಸಭಾ ಚುನಾವಣೆ ಬಳಿಕ ರಾಜ್ಯದಲ್ಲಿ ಬಿಜೆಪಿ ಪ್ರಬಲ ವಿರೋಧಪಕ್ಷವಾಗಿ ಕಾಣಿಸಿಕೊಳ್ಳಲೇ ಇಲ್ಲ. ಪತ್ರಿಕಾಗೋಷ್ಟಿ, ಸೋಷಿಯಲ್ ಮೀಡಿಯಾಗಳಲ್ಲಿ ಹೇಳಿಕೆಗಳನ್ನು ನೀಡುವುದನ್ನು ಬಿಟ್ಟರೆ ಪ್ರಬಲ ಹೋರಾಟ ನಡೆಯಲೇ ಇಲ್ಲ ಹೀಗಾಗಿ ಜನ ಕೂಡ ಬಿಜೆಪಿ ವಿರುದ್ಧ ವಿಶ್ವಾಸ ಕಳೆದುಕೊಂಡಿದ್ದಾರೆ.

BJP Leaders Face Unity Challenge Amid Price Hike Protests in Karnataka

ಮುಡಾ ನಿವೇಶನ ಹಗರಣದ ವಿರುದ್ಧ ಬೆಂಗಳೂರಿನಿಂದ ನಡೆದ ಪಾದಯಾತ್ರೆ ಹೇಳಿಕೊಳ್ಳುವಂತಹ ಯಶಸ್ಸನ್ನು ತರಲಿಲ್ಲ. ಬಹುತೇಕ ನಾಯಕರು ಇದರಲ್ಲಿ ಪಾಲ್ಗೊಳ್ಳಲೇ ಇಲ್ಲ. ಆದಾದ ನಂತರ ಕೇವಲ ಹೋರಾಟದ ಮಾತುಗಳನ್ನಾಡುತ್ತಾ ಬಂದರೂ ಅದ್ಯಾವುದೂ ಆಗಲೇ ಇಲ್ಲ. ಬಿಜೆಪಿಯಲ್ಲಿನ ಗುಂಪುಗಾರಿಕೆ, ಬಣಜಗಳಗಳು ಪ್ರಬಲ ವಿರೋಧಪಕ್ಷವಾಗಿ ಕೆಲಸ ಮಾಡಬೇಕಾಗಿದ್ದ ಬಿಜೆಪಿಯನ್ನು ಕುಗ್ಗಿಸಿತ್ತು ಎನ್ನವುದನ್ನು ಒಪ್ಪಿಕೊಳ್ಳಬೇಕಾಗುತ್ತದೆ. ರಾಜ್ಯ ನಾಯಕರ ನಡುವಿನ ಜಗಳಗಳು ಬಿಜೆಪಿ ಕಾರ್ಯಕರ್ತರಿಗೂ ಬೇಸರ ತರಿಸಿತ್ತು.

Take a Poll

ಬಿಜೆಪಿಗೆ ಲಾಭಕ್ಕಿಂತ ನಷ್ಟವಾಗಿದ್ದೇ ಹೆಚ್ಚು

ನಳೀನ್ ಕುಮಾರ್ ಕಟೀಲ್ ಅವರು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಬಳಿಕ ಬಿಜೆಪಿ ಹೈಕಮಾಂಡ್ ಬಿ.ವೈ.ವಿಜಯೇಂದ್ರ ಅವರಿಗೆ ರಾಜ್ಯಾಧ್ಯಕ್ಷ ಪಟ್ಟವನ್ನು ನೀಡಿತ್ತು. ಇದು ಬಿಜೆಪಿ ಪಕ್ಷದೊಳಗೆ ಅಸಮಾಧಾನವನ್ನುಂಟು ಮಾಡಿತ್ತು. ಹೈಕಮಾಂಡ್ ಹಿರಿಯ ನಾಯಕರನ್ನು ಬದಿಗೆ ಸರಿಸಿ ಕಿರಿಯ ನಾಯಕನಿಗೆ ಪಕ್ಷದ ಸಾರಥ್ಯವನ್ನು ನೀಡಿದ್ದು ರಾಜ್ಯಾಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಹಿರಿಯ ನಾಯಕರ ಆಕ್ರೋಶಕ್ಕೆ ಕಾರಣವಾಗಿತ್ತು. ಇದಾದ ಬಳಿಕ ಮೊದಲಿದ್ದ ಅಸಮಾಧಾನ ಇನ್ನಷ್ಟು ಬಿಗಡಾಯಿಸಿತು. ಜತೆಗೆ ಬಣಜಗಳ ಇನ್ನಷ್ಟು ಹೆಚ್ಚಾಯಿತು. ಬಿ.ವೈ. ವಿಜಯೇಂದ್ರ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ಬಣದ ಜಗಳಗಳು ಬೀದಿಗೆ ಬಂದವು.

ತಮ್ಮ ನಾಯಕನ ಪರವಾಗಿ ಬೆಂಬಲಿಗರು ಬಾಯಿಗೆ ಬಂದಂತೆ ಬೈದಾಡಿಕೊಂಡರು. ಆರೋಪ ಪತ್ಯಾರೋಪಗಳ ನಡುವೆ ನಾನಾ ನೀನಾ ಎಂಬ ಮಟ್ಟಿಗೆ ಹೋರಾಟಕ್ಕಿಳಿದು ಬಿಟ್ಟರು. ಯತ್ನಾಳ್ ಬಹಿರಂಗವಾಗಿಯೇ ಬಿ.ಎಸ್.ಯಡಿಯೂರಪ್ಪ ಮತ್ತು ಬಿ.ವೈ.ವಿಜಯೇಂದ್ರ ಅವರ ವಿರುದ್ಧವೇ ಮಾತನಾಡಿದರು. ಕೇವಲ ಪಕ್ಷದೊಳಗಿನ ಜಗಳದಲ್ಲಿಯೇ ದಿನ ಕಳೆದು ಬಿಟ್ಟರು. ಅದರ ಪರಿಣಾಮಗಳು ಲೋಕಸಭಾ ಚುನಾವಣೆಯಲ್ಲಿ ನಿರೀಕ್ಷಿಸಿದ ಸ್ಥಾನ ಪಡೆಯಲಾಗಲಿಲ್ಲ. ಅಷ್ಟೇ ಅಲ್ಲದೆ ವಿಧಾನಸಭಾ ಉಪಚುನಾವಣೆಯಲ್ಲಿ ಇದ್ದ ಸ್ಥಾನವನ್ನು ಕಳೆದುಕೊಳ್ಳುವಂತಾಯಿತು. ಇನ್ನು ರಾಜ್ಯದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಎನ್ ಡಿಎನಲ್ಲಿದ್ದು, ಎರಡು ಪಕ್ಷಗಳ ನಾಯಕರು ಒಂದೆಡೆ ಸೇರಿ ಹೋರಾಟಗಳನ್ನು ರೂಪಿಸುವ ಮತ್ತು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ನೂರಾರು ಅಸ್ತ್ರಗಳಿದ್ದವು. ಆದರೆ ಕೆಲವು ನಾಯಕರ ಪ್ರತಿಷ್ಠೆಗಳು ಒಂದು ಒಗ್ಗಟ್ಟಿನ ಹೋರಾಟಕ್ಕೆ ಅಡ್ಡಿಯಾಗುತ್ತಿದೆ.

BJP Leaders Face Unity Challenge Amid Price Hike Protests in Karnataka

ಹೋರಾಟಗಳು ರಾಜಕೀಯಕ್ಕಾಗಿ ಮಾತ್ರನಾ?

ಈಗ ಬೀದಿಗಿಳಿದು ಹೋರಾಟ ಮಾಡುವವರಿಗಿಂತ ಕೇವಲ ಸೋಷಿಯಲ್ ಮೀಡಿಯಾಗಳಲ್ಲಿ ಹೇಳಿಕೆ ನೀಡುವವರು ಜಾಸ್ತಿಯಾಗಿದ್ದಾರೆ. ಇದರಿಂದ ಯಾವುದೇ ಪ್ರಯೋಜನವಾಗುತ್ತಿಲ್ಲ. ರಾಜ್ಯದಲ್ಲಿ ಬೆಲೆ ಏರಿಕೆ ವಿರುದ್ಧದ ಹೋರಾಟಕ್ಕೆ ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕರೆಕೊಟ್ಟಿದ್ದಾರೆ. ಮುನಿಸುಗಳ ನಡುವೆ ಹೋರಾಟ ಆರಂಭವಾಗಿದೆ. ಇಲ್ಲಿ ಜೆಡಿಎಸ್ ನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ನಡೆದಿಲ್ಲ. ಹೀಗಾಗಿ ಜೆಡಿಎಸ್ ಪ್ರತ್ಯೇಕ ಹೋರಾಟಕ್ಕೆ ಕರೆ ನೀಡಿದೆ. ಇದನ್ನು ಗಮನಿಸಿದರೆ ರಾಜ್ಯದ ನಾಯಕರಿಗೆ ಸಮಾಜದ ಕಾಳಜಿಗಿಂತ ಪ್ರತಿಷ್ಠೆಯೇ ಮುಖ್ಯವಾಗಿದೆ.

ಇಲ್ಲಿ ಹೋರಾಟಗಳು ಕೇವಲ ರಾಜಕೀಯಕ್ಕಾಗಿ ಮಾತ್ರ ಎಂಬುದು ಗೊತ್ತಾಗುತ್ತಿದೆ. ಪ್ರಜಾಪ್ರಭುತ್ವದಲ್ಲಿ ಸರ್ಕಾರಗಳು ದಾರಿ ತಪ್ಪಿದಾಗ ಪ್ರಜೆಗಳ ಪರವಾಗಿ ನಿಂತು ಹೋರಾಡಬೇಕಾಗಿರುವ ವಿಪಕ್ಷಗಳು ತಮ್ಮ ಕಾರ್ಯವನ್ನು ಮರೆತರೆ ಏನಾಗಬಹುದು ಎಂಬುದಕ್ಕೆ ರಾಜ್ಯದ ಸ್ಥಿತಿಗತಿಯೇ ಸಾಕ್ಷಿಯಾಗಿದೆ. ಒಂದೆಡೆ ತಮ್ಮದೇ ಪಕ್ಷದ ನಾಯಕನನ್ನು ಉಚ್ಛಾಟನೆ ಮಾಡಲಾಗಿದೆ. ಮತ್ತೊಂದೆಡೆ ಕೆಲವರಿಗೆ ನೋಟೀಸ್ ನೀಡಲಾಗಿದೆ. ಇನ್ನುಳಿದ ಕೆಲವು ನಾಯಕರು ತಟಸ್ಥರಾಗಿದ್ದಾರೆ.

ಹೋರಾಟ ಯಶಸ್ವಿ ಮಾಡುವುದೇ ಸವಾಲ್

ತಳಮಟ್ಟದ ಕಾರ್ಯಕರ್ತರು ನಾಯಕರ ವರ್ತನೆಯಿಂದ ಬೇಸತ್ತು ತಮ್ಮ ದಾರಿ ತಮಗೆ ಎಂಬಂತೆ ಸುಮ್ಮನಾಗಿದ್ದಾರೆ. ಜತೆಗೆ ತಾವೇ ಕಟ್ಟಿ ಬೆಳೆಸಿದ ಪಕ್ಷದಲ್ಲಾಗುತ್ತಿರುವ ಬೆಳವಣಿಗೆಯಿಂದ ಬೇಸತ್ತು ಹೋಗಿದ್ದಾರೆ. ಸದಾ ಪಕ್ಷದೊಂದಿಗೆ ಇದ್ದ ಹಿಂದೂ ಸಂಘಟನೆಗಳು ಕೂಡ ಆಕ್ರೋಶಗೊಂಡಿವೆ. ಪರಿಸ್ಥಿತಿ ಹೀಗಿರುವಾಗ ರಾಜ್ಯ ಸರ್ಕಾರದ ವಿರುದ್ಧ ಹೋರಾಟಕ್ಕೆ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕರೆ ನೀಡಿದ್ದು ಯಾವ ರೀತಿಯ ಸ್ಪಂದನೆ ದೊರೆಯುತ್ತದೆ ಎಂಬುದು ಕುತೂಹಲಕಾರಿಯಾಗಿದೆ.

BJP Leaders Face Unity Challenge Amid Price Hike Protests in Karnataka

ಈಗ ಬಿ.ವೈ.ವಿಜಯೇಂದ್ರಗೆ ಸವಾಲ್ ಎದುರಾಗಿದೆ. ಹೋರಾಟ ಯಶಸ್ವಿ ಮಾಡಲೇ ಬೇಕಾಗಿದೆ. ತಳಮಟ್ಟದ ನಾಯಕರು, ಕಾರ್ಯಕರ್ತರ ಯಾವ ರೀತಿಯಲ್ಲಿ ಸ್ಪಂದನೆ ನೀಡುತ್ತಾರೆ ಎಂಬುದು ಬಹುಮುಖ್ಯವಾಗಿದೆ. ಈ ಹೋರಾಟದಿಂದ ಹತ್ತು ಹಲವು ವಿಚಾರಗಳು ಹೊರ ಬರಲಿವೆ. ಒಗ್ಗಟ್ಟು ಪ್ರದರ್ಶನವಾಗುತ್ತಾ? ಮುನಿಸಿಕೊಂಡ ನಾಯಕರು ಕೈಜೋಡಿಸುತ್ತಾರಾ? ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಾರಾ? ಹೀಗೆ ಪ್ರಶ್ನೆಗಳು ಒಂದರ ಮೇಲೊಂದರಂತೆ ಹುಟ್ಟಿಕೊಳ್ಳುತ್ತಿವೆ. ಎಲ್ಲದಕ್ಕೂ ಉತ್ತರ ಸಿಗಬೇಕಾದರೆ ಕಾದು ನೋಡಬೇಕಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+