Bharat Row : ಲೋಕಸಭೆ ಚುನಾವಣೆ ಹಿನ್ನೆಲೆ ಭಾವನಾತ್ಮಕ ವಿಚಾರ ಮುಂದಿಟ್ಟು ಬಿಜೆಪಿ ರಾಜಕೀಯ: ದಿನೇಶ್ ಗುಂಡೂರಾವ್
ಬೆಂಗಳೂರು, ಸೆಪ್ಟೆಂಬರ್ 06: ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಇಂಥಹ ಭಾವನಾತ್ಮಕ ವಿಚಾರಗಳನ್ನ ಮುಂದಿಟ್ಟುಕೊಂಡು ರಾಜಕಾರಣ ಮಾಡುತ್ತೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ದೇಶವನ್ನ ಭಾರತ ಎಂದು ಕರೆಯುವುದು ಹೊಸತೇನಲ್ಲ. ದೇಶದ ಹೆಸರಿನಲ್ಲೂ ಬಿಜೆಪಿಯ ರಾಜಕಾರಣವನ್ನ ಜನರು ಅರಿತಿದ್ದಾರೆ ಹೀಗಿರುವಾಗ ಬಿಜೆಪಿ ಈಗ ಏಕೆ ಈ ವಿಚಾರವನ್ನ ಚರ್ಚಿಸುತ್ತಿದೆ. ಇಂಡಿಯಾ ಈಸ್ ಭಾರತ್ ಅಂತಾ ದೇಶದ ಸಂವಿಧಾನದಲ್ಲೇ ಹೇಳಲಾಗಿದೆ.

ದೇಶವನ್ನ ಭಾರತ ಎಂದು ಕರೆಯಲು ಕಾಂಗ್ರೆಸ್ ವಿರೋಧವಿಲ್ಲ. ಇದು ಹೊಸ ವಿಚಾರವೂ ಅಲ್ಲ. ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಇಂಥಹ ಭಾವನಾತ್ಮಕ ವಿಚಾರಗಳನ್ನ ಮುಂದಿಟ್ಟುಕೊಂಡು ರಾಜಕಾರಣ ಮಾಡುತ್ತೆ ಎಂದು ಕಿಡಿಕಾರಿದರು.
ದೇಶದ ಹೆಸರಿನ ವಿಚಾರಗಳನ್ನ ಬಿಜೆಪಿ ತನ್ನ ಸ್ವಾರ್ಥ ರಾಜಕಾರಣಕ್ಕೆ ಬಳಸುವುದು ಸರಿಯಲ್ಲ. ದೇಶದ ಮುಂದೆ ಸಾವಿರಾರು ಸಮಸ್ಯೆಗಳಿವೆ. ಆ ಸಮಸ್ಯೆಗಳನ್ನ ಎಷ್ಟರ ಮಟ್ಟಿಗೆ ಕೇಂದ್ರ ಬಿಜೆಪಿ ಸರ್ಕಾರ ಪರಿಹರಿಸಿದೆ ಎಂದು ಚರ್ಚಿಸಲಿ. ಮೋದಿ ಅವರ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು 9 ವರ್ಷಗಳಾಯ್ತು. ಇಂಡಿಯಾವನ್ನ ಭಾರತ ಅಂತಾ ಮರುನಾಮಕರಣ ಮಾಡಬೇಕು ಎಂಬುದರ ಬಗ್ಗೆ 9 ವರ್ಷಗಳಲ್ಲಿ ಒಂದು ಚಕಾರ್ ಎತ್ತಲಿಲ್ಲ. ಈಗ ಲೋಕಸಭೆ ಚುನಾವಣೆ ಹತ್ತಿರವಾಗುತ್ತಿರುವಾಗ ಈ ವಿಚಾರವನ್ನ ಬಿಜೆಪಿ ಚರ್ಚಿಸುತ್ತಿದೆ.
ಉರ್ದುವಿನಲ್ಲಿ ಹಿಂದುಸ್ತಾನ ಎಂದು ಕರೆಯುತ್ತಾರೆ. ಕಾಂಗ್ರೆಸ್ ಮಿತ್ರ ಪಕ್ಷಗಳು INDIA ಎಂಬ ಹೆಸರಿನಲ್ಲಿ ಮೈತ್ರಿ ಮಾಡಿಕೊಂಡಿರುವುದು ಬಿಜೆಪಿಗೆ ಭಯ ಶುರುವಾಗಿದೆ. ಇಂಡಿಯಾ ಹೆಸರಲ್ಲಿ ಕಾಂಗ್ರೆಸ್ ಮಿತ್ರ ಪಕ್ಷಗಳು ಒಂದಾಗಿರೋದನ್ನ ಸಂದರ್ಭದಲ್ಲೇ ಬಿಜೆಪಿ ಭಾರತ ಎಂದು ಮರುನಾಮಕರಣ ಮಾಡಲು ಹೊರಟಿರುವುದರ ಹಿಂದಿನ ಅಜೇಂಡಾ ಜನರಿಗೆ ಅರ್ಥವಾಗಲಿದೆ. ಇಂಡಿಯಾ ಮೈತ್ರಿಕೂಟದ ವಿರುದ್ಧ ಬಿಜೆಪಿ ದ್ವೇಷ ರಾಜಕಾರಣ ಮಾಡಲು ಹೊರಟಿರೋದು ಈ ಸಂದರ್ಭದಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ದೇಶದಲ್ಲಿ ತಾವು ಮಾಡಿರುವ ಕೆಲಸಗಳನ್ನ ಜನರ ಮುಂದಿಟ್ಟು ಬಿಜೆಪಿ ಚುನಾವಣೆ ಎದುರಿಸಲಿ. ದೇಶದ ಹೆಸರು ಮರುನಾಮಕರಣ ಮಾಡುವಂತ ಭಾವನಾತ್ಮಕ ವಿಚಾರಗಳನ್ನ ಮುಂದಿಟ್ಟುಕೊಂಡು ರಾಜಕಾರಣ ಮಾಡುವುದು ಬಿಜೆಪಿಗೆ ಶೋಭೆ ತರುವಂತದ್ದಲ್ಲ. ದೇಶದ ಅಭಿವೃದ್ಧಿ ಬಗ್ಗೆ ಬಿಜೆಪಿಗೆ ಹೇಳಲು ಏನೂ ಇಲ್ಲ. 9 ವರ್ಷದಲ್ಲಿ ದೇಶದ ಜನರು ನೆನಪಿಟ್ಟುಕೊಳ್ಳುವ ಯಾವ ಕಾರ್ಯವನ್ನ ಪ್ರಧಾನಿ ಮೋದಿ ಅವರು ಮಾಡಿದ್ದಾರೆ.? ಪ್ರಧಾನಿಯಾಗಿ ಅವರ ಹೆಜ್ಜೆ ಗುರುತುಗಳೇನು ಎಂದು ಸಚಿವ ದಿನೇಶ್ ಗುಂಡೂರಾವ್ ಪ್ರಶ್ನಿಸಿದರು.
ಉದಯನಿಧಿ ಸ್ಟಾಲಿನ್ ಹೇಳಿಕೆ ಕುರಿತು ಮಾತನಾಡಿ, ಉದಯನಿಧಿ ಸ್ಟಾಲಿನ್ ಅವರು ತಮ್ಮ ವಯಕ್ತಿಕ ಅಭಿಪ್ರಾಯ ಹೇಳಿದ್ದಾರೆ. ಅವರೊಬ್ಬರೇ ಅಲ್ಲ. ಸನಾಥನ ಪರಂಪರೆಯಲ್ಲಿ ಕೆಲವು ಆಚರಣೆಗಳನ್ನ ವಿರೋಧಿಸಿ ಹಲವು ಪ್ರಗತಿಪರರು ಹೋರಾಟ ಮಾಡಿದವರು ಇದ್ದಾರೆ. ಅಸ್ಪೃಶ್ಯತೆ ವಿರುದ್ಧ ಹೋರಾಟ ಮಾಡಿದವರೆಲ್ಲ ಸನಾಥನದ ವಿರೋಧಿಗಳೇ ಆಗಿದ್ದರು.. ಈಗ ಉದಯನಿಧಿ ಅವರ ಹೇಳಿಕೆಯನ್ನೇ ವೈಭವೀಕರಿಸುವ ಅಗತ್ಯವಿಲ್ಲ ಎಂದು ಹೇಳಿದರು.
ಬಸವೇಶ್ವರರು 12 ನೇ ಶತಮಾನದಲ್ಲೇ ಹಿಂದೂ ಧರ್ಮದ ಕೆಲ ತಪ್ಪು ಆಚರಣೆಗಳನ್ನ ಸರಿಪಡಿಸುವ ಕೆಲಸ ಮಾಡಿದರು. ವೀರಶೈವ ಧರ್ಮ ಇಂದು ಹಿಂದೂ ಧರ್ಮದ ಅಂಗವಾಗಿದೆ. ಬಸವಣ್ಣನವರು ಅಂದು ಹಿಂದೂ ಧರ್ಮವನ್ನ ಸರಳೀಕರಣ ಮಾಡುವ ಕೆಲಸ ಮಾಡಿದ್ರು. ಈ ರೀತಿಯಲ್ಲಿ ಅನೇಕರು ಅನೇಕ ರೀತಿಯಲ್ಲಿ ಈ ದೇಶದಲ್ಲಿ ತಮ್ಮ ತಮ್ಮ ಅಭಿಪ್ರಾಯಗಳನ್ನ ಜನರ ಮುಂದೆ ವ್ಯಕ್ತಪಡಿಸಿದ್ದಾರೆ. ಅಭಿಪ್ರಾಯ ಭೇದಗಳನ್ನೇ ಮುಂದಿಟ್ಟುಕೊಂಡು ಹಿಂಸೆಗೆ ಪ್ರಚೋದನೆ ನೀಡುವುದು ಸರಿಯಲ್ಲ. ಅದು ನಮ್ಮ ದೇಶದ ಸಂಸ್ಕೃತಿಯೂ ಅಲ್ಲ. ಯಾವ ವಿಚಾರಗಳನ್ನ ಸ್ವೀಕರಿಸಬೇಕು, ಯಾವುದನ್ನ ಸ್ವೀಕರಿಸಬಾರದು ಎಂಬುದು ದೇಶದ ಪ್ರಜ್ಞಾವಂತ ಜನರಿಗೆ ಗೊತ್ತಿದೆ ಎಂದು ಹೇಳಿದರು.












Click it and Unblock the Notifications