KS Eshwarappa: ಮಾಜಿ ಡಿಸಿಎಂ ಕೆ. ಎಸ್ ಈಶ್ವರಪ್ಪಗೆ ಹೈಕಮಾಂಡ್ ಬುಲಾವ್! ಕಾರಣವೇನು?
ಬೆಂಗಳೂರು, ನವೆಂಬರ್ 02: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಐದು ತಿಂಗಳಾದರೂ ಸಹ ಪ್ರತಿಪಕ್ಷ ನಾಯಕನ ನೇಮಕವಾಗಿಲ್ಲ. ಈ ನಡುವೆ ರಾಜ್ಯ ಬಿಜೆಪಿ ನಾಯಕರನ್ನ ಬಿಜೆಪಿ ಹೈಕಮಾಂಡ್ ನಾಯಕರು ಗಣನೆಗೆ ತೆಗೆದುಕೊಳ್ಳುತ್ತಿಲ್ಲ ಎಂಬ ಆರೋಪದ ಮಧ್ಯ ಕುರುಬ ಸಮುದಾಯದ ನಾಯಕ ಹಾಗೂ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಅವರಿಗೆ ಹೈಕಮಾಂಡ್ ಬುಲಾವ್ ಕೊಟ್ಟಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ.
ಹೌದು, 2024 ರ ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಕಾಂಗ್ರೆಸ್ ಗೆ ಸೋಲಿನ ರುಚಿ ತೋರಿಸಲು ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ಕಮಲ-ದಳ ನಾಯಕರಲ್ಲೇ ಮೈತ್ರಿ ಗೆ ವಿರೋಧ ವ್ಯಕ್ತವಾಗುತ್ತಿದೆ. ಈ ನಡುವೆ ರಾಜ್ಯಾಧ್ಯಕ್ಷ ಆಯ್ಕೆ ಹಾಗೂ ವಿಪಕ್ಷ ನಾಯಕನ ಆಯ್ಕೆ ತೀವ್ರ ವಿಳಂಬವಾಗುತ್ತಿದೆ. ಕಳೆದ ವಾರ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದರಾದ ಸದಾನಂದಗೌಡ ಅವರನ್ನ ಕರೆಸಿಕೊಂಡಿದ್ದ ಹೈಕಮಾಂಡ್, ಇದೀಗ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ, ಕೋಟಾ ಶ್ರೀನಿವಾಸ್ ಪೂಜಾರಿ, ಹಾಗೂ ಸಂಸದ ಪಿ ಸಿ ಮೋಹನ್ ಅವರಿಗೆ ಬುಲಾವ್ ನೀಡಿದ್ದು, ಗುರುವಾರ ದೆಹಲಿಯತ್ತ ಮೂವರು ನಾಯಕರು ತೆರಳಿದ್ದಾರೆ.

ಗುರುವಾರ ಮಧ್ಯಾಹ್ನ 3.30ಕ್ಕೆ ದೆಹಲಿಯಲ್ಲಿನ ಬಿಜೆಪಿ ಕಚೇರಿಯಲ್ಲಿ ಭೇಟಿಯಾಗಲು ಮೂವರೂ ನಾಯಕರಿಗೆ ಸೂಚನೆ ನೀಡಲಾಗಿದೆ. ಅಲ್ಲದೇ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಅವರಿಗೆ ಟಿಕೆಟ್ ಕೈ ತಪ್ಪಿದ್ದು, ಇನ್ನೂ ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಈಶ್ವರಪ್ಪ ಅವರ ಪುತ್ರ ಕಾಂತೇಶ್ ಅವರಿಗೆ ಟಿಕೆಟ್ ನೀಡಲಾಗುತ್ತದೆ ಎಂದು ಹೇಳಲಾಗಿತ್ತು. ಆದರೆ, ಕೊನೆ ಕ್ಷಣದಲ್ಲಿ ಪುತ್ರಿನಿಗೂ ಟಿಕೆಟ್ ಮಿಸ್ ಆಗಿತ್ತು. ಅಲ್ಲದೇ 2024 ಲೋಕಸಭಾ ಚುನಾವಣೆಗೆ ಪುತ್ರ ಕಾಂತೇಶ್ ಗೆ ಹಾವೇರಿ ಕ್ಷೇತ್ರದಿಂದ ಕಣಕ್ಕಿಳಿಸುವ ಕುರಿತು ಕೆ ಎಸ್ ಈಶ್ವರಪ್ಪ ಸಜ್ಜಾಗಿದ್ದು, ಈ ಎಲ್ಲಾ ಬೆಳವಣಿಗೆಗಳ ನಡುವೆ ಹೈಕಮಾಂಡ್ ಬುಲಾವ್ ನೀಡಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ.
ಹೈಕಮಾಂಡ್ ಬುಲಾವ್ ವಿಚಾರವಾಗಿ ಕೆ ಎಸ್ ಈಶ್ವರಪ್ಪ ಹೇಳಿದ್ದೇನು?
ದೆಹಲಿಗೆ ಹೋಗುತ್ತಿದ್ದೇನೆ. ನನ್ನ ಜೊತೆಗೆ ಕೋಟ ಶ್ರೀನಿವಾಸ್ ಪೂಜಾರಿ ಮತ್ತು ಪಿ.ಸಿ. ಮೋಹನ್ ಅವರಿಗೂ ಬರಲು ಹೇಳಿದ್ದಾರೆ. ಯಾಕೆ ಕರೆದಿದ್ದಾರೆ ಗೊತ್ತಿಲ್ಲ. ಅಲ್ಲಿಗೆ ಹೋದ ಮೇಲೆ ಗೊತ್ತಾಗುತ್ತದೆ. ರಾಜ್ಯಾಧ್ಯಕ್ಷ ಮತ್ತು ವಿಪಕ್ಷ ನಾಯಕ ಆಯ್ಕೆ ಮಾಡದ ವಿಚಾರವಾಗಿ ಹೈಕಮಾಂಡ್ಗೆ ಸಲಹೆ ಕೊಡುವಷ್ಟು ನಾನು ದೊಡ್ಡವನಲ್ಲ. ಅಲ್ಲಿ ನಮಗಿಂತ ತಿಳಿದವರು, ಪಕ್ಷಕ್ಕಾಗಿ ದುಡಿದವರು ಇದ್ದಾರೆ. ಅವರು ತೀರ್ಮಾನ ಮಾಡುತ್ತಾರೆ. ಯಾಕೆ ತಡ ಮಾಡಿದ್ದಾರೆ ಎಂಬುದಕ್ಕೆ ಒಂದು ಕಾರಣ ಇರಬಹುದು. ಆ ಕಾರಣ ಏನು ಎಂದು ತಿಳಿಯುವ ಅಗತ್ಯ ನನಗಿಲ್ಲ ಎಂದು ಈಶ್ವರಪ್ಪ ಹೇಳಿದ್ದಾರೆ.

ಇನ್ನೂ ರಾಜ್ಯಾಧ್ಯಕ್ಷ ಆಯ್ಕೆ ಬಗ್ಗೆ ಸದಾನಂದ ಗೌಡ ಬಹಿರಂಗ ಅಸಮಾಧಾನ ವ್ಯಕ್ತಪಡಿಸಿರುವ ವಿಚಾರವಾಗಿ ಮಾತನಾಡಿ, ಗೌಡರು ಹೇಳಿದ್ದು ಅಲ್ಲಿಗೆ ಮುಗಿದಿದೆ. ಸಮಸ್ಯೆ ಅಲ್ಲಿಗೆ ಪರಿಹಾರ ಆಗಿದೆ. ಅವರು ಅದನ್ನು ಮುಂದುವರಿಸಿಲ್ಲ. ಮುಂದುವರಿಸಿರುತ್ತಿದ್ದರೆ ಏನು ಮಾಡಬೇಕು ಅಂತಾ ಹೇಳುತ್ತಿದ್ದೆ ಎಂದು ಹೇಳಿದರು.
ಇನ್ನೂ ಕಾಂಗ್ರೆಸ್ ಬಗ್ಗೆ ವಾಗ್ದಾಳಿ ನಡೆಸಿದ ಈಶ್ವರಪ್ಪ, ಕಾಂಗ್ರೆಸ್‌ನ ಯಾವ ಆಂತರಿಕ ಸಂಘರ್ಷವೂ ಬಗೆಹರಿದಿಲ್ಲ. ತಿಂಗಳ ಕಲೆಕ್ಷನ್ ಕೊಟ್ಟಿಲ್ಲವೆಂದು ಕರ್ನಾಟಕಕ್ಕೆ ಬಂದಿದ್ದಾರೆ. ಸಮಸ್ಯೆ ಬಗೆಹರಿಸಲು ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಬಂದಿಲ್ಲ. ಪಂಚರಾಜ್ಯಗಳ ಚುನಾವಣೆ ಇದೆ, ಹಣ ಕೊಡುತ್ತೇವೆ ಅಂತಾ ಕೊಟ್ಟಿಲ್ಲ. ಹೀಗಾಗಿ ರಾಜ್ಯಕ್ಕೆ ಬಂದಿದ್ದಾರೆ ಎಂದು ವ್ಯಂಗ್ಯವಾಡಿದರು.












Click it and Unblock the Notifications