45 ಕಾಂಗ್ರೆಸ್ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದ ಬಿಎಲ್ ಸಂತೋಷ್:ಬಿಜೆಪಿಯನ್ನು ಉಳಿಸಿಕೊಳ್ಳುವಂತೆ ಸಲಹೆ ನೀಡಿದ ಶೆಟ್ಟರ್
ಬೆಂಗಳೂರು, ಸೆಪ್ಟೆಂಬರ್ 1: ಕರ್ನಾಟಕದಲ್ಲಿ ಬಿಜೆಪಿ ಮುಳುಗುತ್ತಿರುವ ಹಡಗು ಎಂದು ಮಾಜಿ ಸಿಎಂ, ಕಾಂಗ್ರೆಸ್ ಎಂಎಲ್‌ಸಿ ಜಗದೀಶ್ ಶೆಟ್ಟರ್ ವಾಗ್ದಾಳಿ ನಡೆಸಿದ್ದಾರೆ. ಇದೇ ವೇಳೆ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ( ಸಂಘಟನೆ ) ಬಿಎಲ್ ಸಂತೋಷ್ ವಿರುದ್ಧ ಹರಿಹಾಯ್ದಿರುವ ಅವರು ರಾಜ್ಯದಲ್ಲಿ ಬಿಜೆಪಿಯನ್ನು ಉಳಿಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ.
ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಬಿಎಲ್ ಸಂತೋಷ್ ಅವರು ಪಕ್ಷದ ಸಭೆ ಕರೆದಿದ್ದರು. ಈ ಸಭೆಯಲ್ಲಿ ಸುಮಾರು 45 ಕಾಂಗ್ರೆಸ್ ನಾಯಕರು ತಮ್ಮ ಸಂಪರ್ಕದಲ್ಲಿದ್ದಾರೆ ಎಂಬುದಾಗಿ ಸಂತೋಷ್ ಹೇಳಿದ್ದಾರೆ ಎಂದು ಬಿಜೆಪಿ ವಕ್ತಾರರು ಮಾಹಿತಿ ನೀಡಿದ್ದರು.

ಈ ಸಭೆಯ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಬಿಜೆಪಿ ವಕ್ತಾರ ಎಂ ಜಿ ಮಹೇಶ್, ಯಾರೂ ಪಕ್ಷ ಬಿಡುವುದಿಲ್ಲ. ಬದಲಿಗೆ 40 ರಿಂದ 45 ಕಾಂಗ್ರೆಸ್ ನಾಯಕರು ತಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ ಎಂಬುದಾಗಿ ಬಿ ಎಲ್ ಸಂತೋಷ್ ಹೇಳಿದ್ದಾರೆ ಎಂದು ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಜಗದೀಶ್ ಶೆಟ್ಟರ್ ಸಂತೋಷ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಮುಳುಗುತ್ತಿರುವ ಹಡಗು ಆಗಿರುವುದರಿಂದ ಈಗಿರುವ ಶಾಸಕರನ್ನು ಉಳಿಸಿಕೊಳ್ಳುವಂತೆ ಸಂತೋಷ್‌ಗೆ ಸಲಹೆ ನೀಡಿದ್ದಾರೆ.
ಬಿಎಲ್ ಸಂತೋಷ್ ಅವರಿಗೆ ಸಾಧ್ಯವಾದರೆ ಜಿಗಿಯುತ್ತಿರುವ ಶಾಸಕರನ್ನು ಹಡಗಿಗೆ ವಾಪಸ್ ಕರೆತರಲಿ ಎಂದು ಸವಾಲು ಹಾಕಿದ್ದಾರೆ.

'ಮೊದಲು ಶಾಸಕರು ಮತ್ತು ಮಾಜಿ ಶಾಸಕರನ್ನು ಪಕ್ಷದಲ್ಲಿ ಉಳಿಸಿಕೊಳ್ಳಲು ನಾನು ಅವರಿಗೆ ಸಲಹೆ ನೀಡಲು ಬಯಸುತ್ತೇನೆ. ರಾಜ್ಯದಲ್ಲಿ ಬಿಜೆಪಿ ಅಸ್ತಿತ್ವಕ್ಕಾಗಿ ಹೋರಾಟ ನಡೆಸುತ್ತಿದೆ. ಸರ್ಕಾರಕ್ಕೆ ಈ ಮಟ್ಟದಲ್ಲಿ ಬಹುಮತ ಬಂದ ಮೇಲೆ ಕಾಂಗ್ರೆಸ್ ಬಿಡುವವರು ಯಾರು? ಅವರು ಬೇಕಿದ್ದರೆ ಆಪರೇಷನ್ ಮಾಡಲಿ, ನಾಳೆಯೇ ಶಾಸಕರನ್ನು ಕರೆದುಕೊಂಡು ಹೋಗಲಿ, ನೋಡೋಣ' ಎಂದು ಶೆಟ್ಟರ್ ಹೇಳಿದ್ದಾರೆ.
'ಕರ್ನಾಟಕ ಬಿಜೆಪಿ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದೆ ಎಂದು ನನಗೆ ಹಲವಾರು ಬಾರಿ ಅನ್ನಿಸುತ್ತಿದೆ. ಇದಕ್ಕೆ ಪ್ರಮುಖ ಕಾರಣ ಪಕ್ಷವು ಕೆಲವೇ ಜನರ ಹಿಡಿತದಲ್ಲಿದೆ. ಪಕ್ಷದಿಂದ ಮುಕ್ತಿ ಸಿಗುವವರೆಗೆ ಪಕ್ಷ ದಿನದಿಂದ ದಿನಕ್ಕೆ ಕುಸಿಯುತ್ತಲೇ ಇರುತ್ತದೆ' ಎಂದು ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.
ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಜಗದೀಶ್ ಶೆಟ್ಟರ್ ಅವರಿಗೆ ಬಿಜೆಪಿಯಿಂದ ಟಿಕೆಟ್ ನಿರಾಕರಿಸಲಾಗಿತ್ತು. ಅವರು ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಅಡಿಯಲ್ಲಿ ಸ್ಪರ್ಧಿಸಿದ್ದರು. ಬಿಜೆಪಿ ಅಭ್ಯರ್ಥಿ ಮಹೇಶ್ ಟೆಂಗಿನಕಾಯಿ ವಿರುದ್ಧ ಪರಾಭವಗೊಂಡಿದ್ದರು. ಆ ನಂತರ ಕಾಂಗ್ರೆಸ್ ಎಂಎಲ್‌ಸಿಯಾಗಿ ನೇಮಕಗೊಂಡಿದ್ದಾರೆ.
ತಮಗೆ ಟಿಕೆಟ್ ಸಿಗದಿರಲು ಬಿಎಲ್ ಸಂತೋಷ್ ಹಾಗೂ ಪ್ರಹ್ಲಾದ್ ಜೋಶಿ ಅವರೇ ಕಾರಣವೆಂದು ಶೆಟ್ಟರ್ ಆರೋಪಿಸಿದ್ದಾರೆ. ಶೆಟ್ಟರ್ ಅವರ ಶಿಷ್ಯ, ಮಾಜಿ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಅವರು ಕಾಂಗ್ರೆಸ್ ಸೇರಲಿದ್ದಾರೆ ಎಂಬ ವದಂತಿಗಳು ಹರಡಿಕೊಂಡಿವೆ. ಈ ವಿಚಾರವಾಗಿ ಮಾತನಾಡಿರುವ ಜಗದೀಶ್ ಶೆಟ್ಟರ್ ಯಾವುದೇ ಬಿಜೆಪಿ ನಾಯಕರು ತಮ್ಮನ್ನು ಸಂಪರ್ಕಿಸಿಲ್ಲವೆಂದು ತಿಳಿಸಿದ್ದಾರೆ.












Click it and Unblock the Notifications