Mysore Sandal Soap: ಮೈಸೂರು ಸ್ಯಾಂಡಲ್ ಸೋಪ್ ಬಳಸುತ್ತೇನೆ ಎಂದ ಆನಂದ್ ಮಹಿಂದ್ರಾ; ಸಚಿವ ಎಂಬಿ ಪಾಟೀಲ್ ಹೇಳಿದ್ದೇನು?
ಮೈಸೂರು ಸ್ಯಾಂಡಲ್ ಸೋಪ್, ಕರ್ನಾಟಕದ ಹೆಮ್ಮೆ, ನಾಡಿನ ಶ್ರೀಗಂಧದ ಕಂಪನ್ನು ದೇಶ ವಿದೇಶಗಳಲ್ಲಿ ಹರಡುತ್ತಿರುವ ಸೋಪು. 1918ರಲ್ಲಿ ನಾಲ್ಕನೇ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಈ ಸೋಪು ತಯಾರಿಕಾ ಕಾರ್ಖಾನೆಯನ್ನು ಆರಂಭಿಸಲಾಯಿತು. ಕರ್ನಾಟಕ ಸೋಪ್ಸ್ ಮತ್ತು ಡಿಟರ್ಜೆಂಟ್ಸ್ ಲಿಮಿಟೆಡ್ ಸಂಸ್ಥೆಯ ಹೆಸರಿನಲ್ಲಿ ಆರಂಭಿಸಲಾದ ಕಾರ್ಖಾನೆಯಲ್ಲಿ ಶ್ರೀಗಂಧದ ಎಣ್ಣೆಯಿಂದ ಸಾಬೂನು ತಯಾರಿಸಲಾಗುತ್ತದೆ. ಶ್ರೀಗಂಧದ ಎಣ್ಣೆಯನ್ನು ಬಳಸಿ ಸಾಬೂನು ತಯಾರಿಸುವ ಏಕೈಕ ಕಾರ್ಖಾನೆ ಇದು ಎನ್ನವುದು ಹೆಮ್ಮೆಯ ಸಂಗತಿ.
ಶತಮಾನಗಳಿಗಿಂತ ಹೆಚ್ಚಿನ ಕಾಲ ಒಂದು ಸರ್ಕಾರಿ ಸಂಸ್ಥೆ ಉಳಿದು ಬಂದಿರುವುದು ಅದರ ಗುಣಮಟ್ಟಕ್ಕೆ ಹಿಡಿದ ಕೈಗನ್ನಡಿ. ಇತ್ತೀಚೆಗೆ ಹಲವು ಯೂಟ್ಯೂಬ್, ಸೋಷಿಯಲ್ ಮೀಡಿಯಾಗಳಲ್ಲಿ ಸೋಪು ತಯಾರಿಕಾ ವಿಧಾನದ ವಿಡಿಯೋಗಳನ್ನು ಹಂಚಿಕೊಳ್ಳಲಾಗುತ್ತಿದೆ. ಅಂತಹ ಒಂದು ವಿಡಿಯೋ ಉದ್ಯಮಿ ಆನಂದ್ ಮಹಿಂದ್ರಾ ಅವರ ಗಮನ ಸೆಳೆದಿದ್ದು ಮೈಸೂರು ಸ್ಯಾಂಡಲ್ ಸೋಪ್ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.

ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಆನಂದ್ ಮಹಿಂದ್ರಾ, ಈ ದೃಶ್ಯಗಳನ್ನು ನೋಡಿ ಹಳೆಯ ದಿನಗಳನು ನೆನಪಾಯಿತು. ಮೈಸೂರು ಸ್ಯಾಂಡಲ್ ಸೋಪ್ ಇನ್ನೂ ಉಳಿದುಕೊಂಡಿದ್ದು ಅಭಿವೃದ್ಧಿ ಹೊಂದಿರುವುದನ್ನು ನೋಡಿ ಸಂತೋಷವಾಗಿದೆ. ಅದನ್ನು ಮತ್ತೆ ಖರೀದಿಸಿ ಆ ಸಂಪ್ರದಾಯದ ಸುಗಂಧವನ್ನು ಆಸ್ವಾಧಿಸಬೇಕಿದೆ ಎಂದು ಹೇಳಿದ್ದಾರೆ.
ಧನ್ಯವಾದ ತಿಳಿಸಿದ ಸಚಿವ ಎಂಬಿ ಪಾಟೀಲ್
ಆನಂದ್ ಮಹಿಂದ್ರಾ ಅವರ ಎಕ್ಸ್ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿರುವ ಕೈಗಾರಿಕಾ ಸಚಿವ ಎಂಬಿ ಪಾಟೀಲ್, "ನಿಮ್ಮ ನೆನಪುಗಳನ್ನು ಹಂಚಿಕೊಂಡು ಕರ್ನಾಟಕದ ಹೆಮ್ಮೆಯ ಮೈಸೂರು ಸ್ಯಾಂಡಲ್ ಸೋಪ್ ಬಗ್ಗೆ ಹೊಗಳಿದ್ದಕ್ಕೆ ಧನ್ಯವಾದಗಳು. ಕೆಎಸ್‌ಡಿಎಲ್ ತನ್ನ ಪರಂಪರೆಯನ್ನು ಎತ್ತಿಹಿಡಿದಿರುವುದು ಹೆಮ್ಮೆಯ ಸಂಗತಿಯಾಗಿದೆ. ನಿಮ್ಮ ಬೆಂಬಲ ಪ್ರತಿಯೊಬ್ಬ ಕನ್ನಡಿಗನಿಗೆ ಹೆಮ್ಮೆಯ ಸಂಗತಿಯಾಗಿದೆ. ನೀವು ಮತ್ತೆ ನಮ್ಮ ಉತ್ಪನ್ನಗಳ ಗ್ರಾಹಕರಾಗಲು ಎದುರುನೋಡುತ್ತಿದ್ದೇನೆ" ಎಂದು ಹೇಳಿದ್ದಾರೆ.
ಆನಂದ್ ಮಹಿಂದ್ರಾ ಅವರ ಪೋಸ್ಟ್ ಕನ್ನಡಿಗರ ಮೆಚ್ಚುಗೆ ಪಡೆದುಕೊಂಡಿದೆ. ಹಲವು ಮಂದಿ ಇದಕ್ಕೆ ಪ್ರತಿಕ್ರಿಯೆ ನೀಡಿದ್ದು ಇದನ್ನು ನಾವು ಹಲವು ವರ್ಷಗಳಿಂದ ಮೈಸೂರು ಸ್ಯಾಂಡಲ್ ಸೋಪ್ ಬಳಸುತ್ತೇವೆ ಎಂದಿದ್ದಾರೆ, ಇನ್ನೂ ಹಲವು ಮಂದಿ ಭಾರತದಲ್ಲಿ ಇದು ಅತ್ಯುತ್ತಮ ಸೋಪು ಎಂದು ಶ್ಲಾಘಿಸಿದ್ದಾರೆ.












Click it and Unblock the Notifications