ಜೂನ್4ರ ಮೇಲೆ ಕಾಂಗ್ರೆಸ್ ನಾಯಕರ ಕಣ್ಣು, ಲೆಕ್ಕಾಚಾರವೇನು?
ಬೆಂಗಳೂರು, ಮೇ 25: ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಿಗೆ ಎರಡು ಹಂತದಲ್ಲಿ ಮತದಾನ ಮುಗಿದಿದೆ. ಜೂನ್ 4ರಂದು ಫಲಿತಾಂಶ ಪ್ರಕಟವಾಗಲಿದೆ. ಮತ್ತೊಂದು ಕಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಒಂದು ವರ್ಷ ಪೂರ್ಣಗೊಳಿಸಿದೆ. ಆದ್ದರಿಂದ ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾಗುವ ಜೂನ್ 4ರ ಮೇಲೆ ಕಾಂಗ್ರೆಸ್ ನಾಯಕರ ಕಣ್ಣಿದೆ.
ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಎಷ್ಟು ಸೀಟು ಗೆಲ್ಲಲಿದೆ? ಎಂಬ ಲೆಕ್ಕಾಚಾರ ಮುಂದುವರೆದಿದೆ. ಎಷ್ಟು ಸೀಟುಗಳನ್ನೇ ಗೆಲ್ಲಲಿ ಸರ್ಕಾರ, ಕೆಪಿಸಿಸಿಯಲ್ಲಿ ಬದಲಾವಣೆಯಾಗುವುದು ಖಚಿತ ಎಂಬ ಮಾಹಿತಿ ಕಾಂಗ್ರೆಸ್ ನಾಯಕರಿಂದಲೇ ಸಿಕ್ಕಿದೆ.

ಸಚಿವ ಸಂಪುಟ ಪುನಾರಚನೆ, ಪದಾಧಿಕಾರಿಗಳ ಬದಲಾವಣೆ ಸೇರಿದಂತೆ ಪ್ರಮುಖ ಬದಲಾವಣೆಗಳನ್ನು ನಿರೀಕ್ಷೆ ಮಾಡಲಾಗಿದೆ. ಆದ್ದರಿಂದ ರಾಜ್ಯ ಕಾಂಗ್ರೆಸ್ ನಾಯಕರ ಕಣ್ಣು ಜೂನ್ 4ರ ಮೇಲಿದ್ದು, ಲೆಕ್ಕಾಚಾರಗಳು ಆರಂಭವಾಗಿವೆ.
ಸಚಿವ ಸ್ಥಾನ ಕೈತಪ್ಪಲಿದೆ: 2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 135 ಸ್ಥಾನಗಳಲ್ಲಿ ಜಯಗಳಿಸಿ ಅಧಿಕಾರಕ್ಕೆ ಬಂದಾಗ ಸಚಿವ ಸ್ಥಾನಕ್ಕಾಗಿ ಭಾರೀ ಪೈಪೋಟಿ ಇತ್ತು. ಅಂತಿಮವಾಗಿ ಅಳೆದು ತೂಗಿ ಹೈಕಮಾಂಡ್ ಸೂಚನೆಯಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವ ಸಂಪುಟವನ್ನು ರಚನೆ ಮಾಡಿದರು.
ಆದರೆ ಈಗ ಸರ್ಕಾರ ಒಂದು ವರ್ಷ ಪೂರೈಸಿದೆ. ಹಲವು ಸಚಿವರ ಕಾರ್ಯ ವೈಖರಿ ತೃಪ್ತಿದಾಯಕವಾಗಿಲ್ಲ ಎಂಬ ದೂರುಗಳು ಬರುತ್ತಿವೆ. ಆದ್ದರಿಂದ ಅಂತಹ ಸಚಿವರನ್ನು ಕೈಬಿಟ್ಟು ಹೊಸಬರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗುತ್ತದೆ ಎಂಬ ಸುದ್ದಿ ಹಬ್ಬಿದೆ.
ಅಲ್ಲದೇ ಲೋಕಸಭೆ ಚುನಾವಣೆ ಘೋಷಣೆಗೂ ಮೊದಲೇ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ದೆಹಲಿಯಲ್ಲಿ ಎಲ್ಲಾ ಸಚಿವರ ಸಭೆ ನಡೆಸಿ ಟಾರ್ಗೆಟ್ ನೀಡಿದ್ದರು. ಸಚಿವರ ಮನವಿಯಂತೆ ಅವರ ಕುಟುಂಬ ಸದಸ್ಯರಿಗೆ ಸಹ ಟಿಕೆಟ್ ನೀಡಲಾಗಿದೆ.
ಈಗ ಲೋಕಸಭೆ ಚುನಾವಣೆಯಲ್ಲಿ ನಿರೀಕ್ಷಿತ ಫಲಿತಾಂಶ ಬಂದಿಲ್ಲ ಎಂದರೆ ಅಥವ ಸಚಿವರ ಕಾರ್ಯ ವೈಖರಿ ತೃಪ್ತಿದಾಯಕವಾಗಿಲ್ಲ ಎಂದರೆ ಸಚಿವರ ತಲೆದಂಡ ಖಚಿತ ಎಂಬ ಮಾತುಗಳು ಕೇಳಿ ಬರುತ್ತಿವೆ. ಲೋಕಸಭೆ ಚುನಾವಣೆ ಫಲಿತಾಂಶ ಏನೇ ಆದರೂ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಮುನ್ನಡೆಸಬೇಕಿದೆ. ಆದ್ದರಿಂದ ಬದಲಾವಣೆ ಮಾಡುವುದು ಅನಿವಾರ್ಯ ಎಂಬುದು ಚಿಂತನೆ.
ದೇಶದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ಅಲ್ಲದೇ ರಾಜ್ಯ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತವರು. ಇಲ್ಲಿನ ರಾಜಕೀಯವನ್ನು ಅವರು ಚೆನ್ನಾಗಿ ಬಲ್ಲರು. ಆದ್ದರಿಂದ ಯಾವುದೇ ಬದಲಾವಣೆ ತರುವುದು ಹೈಕಮಾಂಡ್ ಮಟ್ಟಿಗೆ ಸುಲಭವಾಗಲಿದೆ.
ಇತ್ತೀಚೆಗೆ ನಡೆದ ಪಕ್ಷದ ಕೆಲವು ಸಭೆಗಳಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಜವಾಬ್ದಾರಿಯಿಂದ ಹೊರಬರುವ ಸುಳಿವನ್ನು ಡಿ. ಕೆ. ಶಿವಕುಮಾರ್ ನೀಡಿದ್ದಾರೆ. ಲೋಕಸಭೆ ಚುನಾವಣೆ ಮುಗಿಯುವ ತನಕ ಕೆಪಿಸಿಸಿ ಅಧ್ಯಕ್ಷ ಹುದ್ದೆಯನ್ನು ಉಪ ಮುಖ್ಯಮಂತ್ರಿ ಹುದ್ದೆ ಜೊತೆಗೆ ನಿಭಾಯಿಸಬೇಕು ಎಂದು ಪಕ್ಷ ಸೂಚನೆ ನೀಡಿತ್ತು ಎಂಬ ಮಾಹಿತಿ ಇದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಜಿಲ್ಲಾ & ತಾಲೂಕು ಪಂಚಾಯಿತಿ ಚುನಾವಣೆ ಎದುರಾಗುತ್ತಿದೆ. ಆದ್ದರಿಂದ ಕೆಪಿಸಿಸಿಗೆ ಹೊಸಬರು ಅಧ್ಯಕ್ಷರಾಗಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಉತ್ತರ ಕರ್ನಾಟಕ ಭಾಗದ ನಾಯಕರಿಗೆ ಅಧ್ಯಕ್ಷಗಿರಿ ನೀಡಬೇಕು ಎಂಬ ಕೂಗು ಸಹ ಕಾಂಗ್ರೆಸ್‌ನಲ್ಲಿ ಕೇಳಿ ಬರುತ್ತಿದೆ.
ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ಕೆಪಿಸಿಸಿಗೆ ಹೊಸ ಅಧ್ಯಕ್ಷರ ನೇಮಕ, ಸಚಿವ ಸಂಪುಟ ಪುನಾರಚನೆ ಬಗ್ಗೆ ಧ್ವನಿ ಎತ್ತಲು ಕೆಲವು ನಾಯಕರು ತಯಾರಿ ನಡೆಸಿದ್ದಾರೆ. ಉತ್ತರ ಕರ್ನಾಟಕ ಭಾಗಕ್ಕೆ ಹೆಚ್ಚು ಸಚಿವ ಸ್ಥಾನ ಸಿಕ್ಕಿಲ್ಲ, ಪಕ್ಷದಲ್ಲಿ ಉನ್ನತ ಹುದ್ದೆಗಳಿಲ್ಲ ಎಂಬ ಅಸಮಾಧಾನವಿದ್ದು, ಇದು ಯಾವ ರೂಪ ಪಡೆಯಲಿದೆ? ಎಂದು ಕಾದು ನೋಡಬೇಕು.
ಮತ್ತೊಂದು ಕಡೆ ಕರ್ನಾಟಕದ ಪ್ರತಿಪಕ್ಷ, "ಸೋಲು ಖಚಿತ, ತಲೆದಂಡ ನಿಶ್ಚಿತ. ಲೋಕಸಭೆ ಚುನಾವಣೆ ಫಲಿತಾಂಶದ ಮುನ್ಸೂಚನೆ ಅರಿತು, ಕಾಂಗ್ರೆಸ್ ಹೈಕಮಾಂಡ್ ನಾಯಕರು ಕಾಂಗ್ರೆಸ್ ಸರ್ಕಾರದ ಕೆಲ ಸಚಿವರ ತಲೆದಂಡಕ್ಕೆ ಮುಹೂರ್ತ ಫಿಕ್ಸ್ ಮಾಡಿದ್ದಾರೆ. ಚುನಾವಣೆಗೆ ಮುನ್ನ ಸ್ಪರ್ಧೆಗೆ ಅಭ್ಯರ್ಥಿಗಳಿಲ್ಲದೆ ಮಂಡಿಯೂರಿದ್ದ ಕಾಂಗ್ರೆಸ್, ಸಚಿವರ ಮಕ್ಕಳಿಗೆ ಟಿಕೆಟ್ ನೀಡಿ, ಮುಖಭಂಗದಿಂದ ಪಾರಾಗಿತ್ತು' ಎಂದು ಟೀಕಿಸಿದೆ.
"ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಅಲೆಗೆ ಕಂಗೆಟ್ಟಿರುವ ಕಾಂಗ್ರೆಸ್ ಹೈಕಮಾಂಡ್‌ಗೆ ಸಚಿವರ ಮಕ್ಕಳು ಗೆಲ್ಲುವುದಿಲ್ಲ ಎಂಬುದು ಮನವರಿಕೆಯಾಗಿದೆ. ಹೀಗಾಗಿ, ಮಕ್ಕಳ ಸೋಲಿನ ನೆಪದಲ್ಲಿ ಸಚಿವರ ಬಲಿ ಪಡೆಯಲು ಪೀಠಿಕೆ ಸಿದ್ದಪಡಿಸಿದೆ. ಹುದ್ದೆ ಉಳಿಬೇಕು, ಮಕ್ಕಳು ಬೆಳಿಬೇಕು ಎಂಬ ವ್ಯಾಮೋಹದಿಂದ ತಮ್ಮ ಮಕ್ಕಳನ್ನು ರಾಜಕೀಯಕ್ಕೆ ಎಳೆದು ತಂದ ಸಚಿವರು, ಈಗ ತಮ್ಮ ಕಾಲ ಮೇಲೂ ಕಲ್ಲು ಹಾಕಿಕೊಂಡು ಪರಿತಪಿಸುತ್ತಿದ್ದಾರೆ' ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದೆ.












Click it and Unblock the Notifications