ದುಡಿಯಲು ಸಮರ್ಥಳಿರುವ ಪತ್ನಿ ಜೀವನಾಂಶ ಕೇಳುವಂತಿಲ್ಲ; ಹೈಕೋರ್ಟ್
ಬೆಂಗಳೂರು, ಜುಲೈ 06; ದುಡಿಯಲು ಸಮರ್ಥಳಿರುವ ಪತ್ನಿಯು ಪತಿಯಿಂದ ಹೆಚ್ಚಿನ ಜೀವನಾಂಶ ಕೇಳುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಅಲ್ಲದೆ, ಅದೇ ಆಧಾರದಲ್ಲಿ ಕೌಟುಂಬಿಕ ವ್ಯಾಜ್ಯವೊಂದರಲ್ಲಿ ಪತ್ನಿಗೆ ಮ್ಯಾಜಿಸ್ಪ್ರೇಟ್ ನ್ಯಾಯಾಲಯ ಘೋಷಿಸಿದ್ದ ಮಾಸಿಕ 10 ಸಾವಿರ ರೂ. ಜೀವನಾಂಶ ಹಾಗೂ 3 ಲಕ್ಷ ರೂ. ಪರಿಹಾರವನ್ನು ಕ್ರಮವಾಗಿ 5 ಸಾವಿರ ರೂ. ಹಾಗೂ 2 ಲಕ್ಷ ರೂ.ಗಳಿಗೆ ಇಳಿಕೆ ಮಾಡಿದೆ..
ಬೆಂಗಳೂರಿನ 66ನೇ ಹೆಚ್ಚುವರಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ಆದೇಶ ಪ್ರಶ್ನಿಸಿ ಆನೇಕಲ್‌ನ ಮಹಿಳೆ ಮತ್ತವರ ಅಪ್ರಾಪ್ತ ಪುತ್ರ ಸಲ್ಲಿಸಿದ್ದ ಕ್ರಿಮಿನಲ್ ಮರುಪರಿಶೀಲನಾ ಅರ್ಜಿಯನ್ನು ವಜಾಗೊಳಿಸಿರುವ ನ್ಯಾಯಮೂರ್ತಿ ರಾಜೇಂದ್ರ ಬಾದಾಮಿಕರ್ ಅವರಿದ್ದ ಪೀಠ ಈ ಆದೇಶ ಮಾಡಿದೆ.

ಹೈಕೋರ್ಟ್ ಆದೇಶವೇನು?; ದಾಖಲೆಗಳಿಂದ ವಿವಾಹಕ್ಕೂ ಮುನ್ನ ಅರ್ಜಿದಾರ ಮಹಿಳೆ ಕೆಲಸ ಮಾಡುತ್ತಿದ್ದರೆಂಬುದು ತಿಳಿದುಬಂದಿದೆ. ಪತಿಯಿಂದ ದೂರವಾದ ಬಳಿಕ ತಾಯಿ ಹಾಗೂ ಮಗನೊಂದಿಗೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಪತ್ನಿ, ಪತಿಯ ತಾಯಿ ಹಾಗೂ ಸಹೋದರಿಯರ ಜತೆ ವಾಸಿಸಲು ನಿರಾಕರಿಸಿದ್ದಾರೆ.
ದಿನಸಿ ಅಂಗಡಿ ನಡೆಸುತ್ತಿರುವ ಪತಿ ತನ್ನ ತಾಯಿ ಹಾಗೂ ಅವಿವಾಹಿತ ಸಹೋದರಿಯನ್ನೂ ನೋಡಿಕೊಳ್ಳಬೇಕಿದೆ. ಮದುವೆಯ ನಂತರ ಕೆಲಸ ತೊರೆದಿರುವ ಪತ್ನಿ, ಈಗ ಕೆಲಸ ಮಾಡಲು ಏಕೆ ಸಮರ್ಥರಿಲ್ಲ? ಎಂಬುದಕ್ಕೆ ಯಾವುದೇ ವಿವರಣೆ ನೀಡಿಲ್ಲಎಂದು ಹೈಕೋರ್ಟ್ ತಿಳಿಸಿದೆ.
ದುಡಿಯುವ ಸಾಮರ್ಥ್ಯವಿರುವ ಪತ್ನಿ ಉದ್ಯೋಗವಿಲ್ಲದೆ ಸುಮ್ಮನೆ ಕುಳಿತು ಪತಿಯಿಂದಲೇ ಸಂಪೂರ್ಣ ಜೀವನಾಂಶವನ್ನು ಕೇಳುವಂತಾಗಬಾರದು. ಜೀವನ ನಿರ್ವಹಣೆಗಾಗಿ ಪ್ರಯತ್ನಿಸುವ ಹೊಣೆ ಆಕೆಯ ಮೇಲೂ ಇರಲಿದ್ದು, ಪತಿಯಿಂದ ಪೂರಕ ಜೀವನಾಂಶವನ್ನಷ್ಟೇ ಕೇಳಬಹುದು. ಈ ಹಿನ್ನೆಲೆಯಲ್ಲಿ, ಜೀವನಾಂಶ ಹಾಗೂ ಪರಿಹಾರದ ಮೊತ್ತ ಕಡಿತಗೊಳಿಸಿ ವಿಚಾರಣಾ ನ್ಯಾಯಾಲಯ ಹೊರಡಿಸಿರುವ ಆದೇಶದಲ್ಲಿ ಹೈಕೋರ್ಟ್ ಪತ್ನಿಯ ಅರ್ಜಿ ವಜಾಗೊಳಿಸಿದೆ
ಪ್ರಕರಣದ ಹಿನ್ನೆಲೆ: ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯ ರಕ್ಷಣೆ ಕಾಯ್ದೆ- 2005ರ ಅಡಿ ಬೆಂಗಳೂರಿನ ಮ್ಯಾಜಿಸ್ಪ್ರೇಟ್ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ಪತ್ನಿ, ಪತಿಯಿಂದ ಜೀವನಾಂಶ ಹಾಗೂ ಪರಿಹಾರ ಕೋರಿದ್ದರು. ಆ ಅರ್ಜಿಯ ವಿಚಾರಣೆಗೆ ಪತಿಯೂ ಹಾಜರಾಗಿದ್ದರು. ವಿಚಾರಣೆ ನಡೆಸಿದ್ದ ನ್ಯಾಯಾಲಯ, ಪತ್ನಿಗೆ ಮಾಸಿಕ 10 ಸಾವಿರ ರೂ. ಅಪ್ರಾಪ್ತ ಮಗನಿಗೆ ಮಾಸಿಕ 5 ಸಾವಿರ ರೂ. ಜೀವನಾಂಶ ಪಾವತಿಸುವಂತೆ ಪತಿಗೆ ಆದೇಶಿಸಿತ್ತು. ಜತೆಗೆ, ಅವರು ಅನುಭವಿಸಿದ್ದ ಮಾನಸಿಕ ಹಿಂಸೆಗೆ ಪ್ರತಿಯಾಗಿ 3 ಲಕ್ಷ ರೂ. ಪರಿಹಾರ ನೀಡುವಂತೆಯೂ ಆದೇಶಿಸಿತ್ತು.
ಈ ಆದೇಶವನ್ನು ಪ್ರಶ್ನಿಸಿ ಪತಿ 2014ರಲ್ಲಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಮೇಲ್ಮನವಿ ವಿಚಾರಣೆ ನಡೆಸಿದ್ದ ಕೋರ್ಟ್, ಪತ್ನಿಗೆ ಘೋಷಿಸಲಾಗಿದ್ದ 10 ಸಾವಿರ ರೂ. ಜೀವನಾಂಶವನ್ನು 5 ಸಾವಿರ ರೂ.ಗಳಿಗೆ ಕಡಿತ ಮಾಡಿತ್ತಲ್ಲದೆ, ಪರಿಹಾರದ ಮೊತ್ತವನ್ನು 3 ಲಕ್ಷ ರೂ.ಗಳಿಂದ 2 ಲಕ್ಷ ರೂ. ಗಳಿಗೆ ಇಳಿಕೆ ಮಾಡಿತ್ತು. ಈ ಆದೇಶ ರದ್ದು ಕೋರಿ ಪತ್ನಿ ಹಾಗೂ ಪುತ್ರ ಹೈಕೋರ್ಟ್‌ಗೆ ಮರು ಪರಿಶೀಲನಾ ಅರ್ಜಿ ಸಲ್ಲಿಸಿದ್ದರು.












Click it and Unblock the Notifications