7th Pay Commission; 7ನೇ ವೇತನ ಆಯೋಗದ ಅವಧಿ ವಿಸ್ತರಣೆ?
ಬೆಂಗಳೂರು, ಅಕ್ಟೋಬರ್ 04; ಕರ್ನಾಟಕ ಸರ್ಕಾರ ರಚನೆ ಮಾಡಿರುವ ರಾಜ್ಯ 7ನೇ ವೇತನ ಆಯೋಗ ಸರ್ಕಾರಕ್ಕೆ ಯಾವಾಗ ವರದಿ ನೀಡಲಿದೆ? ಎಂದು ಸರ್ಕಾರಿ ನೌಕರರು ಕಾಯುತ್ತಿದ್ದಾರೆ. ರಾಜ್ಯದಲ್ಲಿ ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ರಾಜ್ಯ ಸರ್ಕಾರಿ ನೌಕರರ ವೇತನ ಶ್ರೇಣಿಗಳನ್ನು ಪರಿಷ್ಕರಿಸಲು ಮತ್ತು ನೂತನ ವೇತನ ರಚನೆ ಇತ್ಯಾದಿಗಳನ್ನು ರೂಪಿಸಲು ಸುಧಾಕರ್ ರಾವ್ ಅಧ್ಯಕ್ಷತೆಯ 7ನೇ ರಾಜ್ಯ ವೇತನ ಆಯೋಗ ರಚನೆ ಮಾಡಲಾಗಿದೆ.
ಕಳೆದ ವಾರ ಸುಧಾಕರ್ ರಾವ್ 7ನೇ ರಾಜ್ಯ ವೇತನ ಆಯೋಗದ ಸದಸ್ಯರ ಜೊತೆ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ಮಾಡಿದ್ದರು. ಹಲವಾರು ವಿಚಾರಗಳ ಕುರಿತು ಚರ್ಚೆ ನಡೆಸಿದ್ದರು. ನವೆಂಬರ್‌ನಲ್ಲಿ ಆಯೋಗ ವರದಿ ಸಲ್ಲಿಕೆ ಮಾಡಬಹುದು ಎಂಬ ಸುದ್ದಿಗಳ ಹಿನ್ನಲೆಯಲ್ಲಿ ಈ ಭೇಟಿ ಕುತೂಹಲಕ್ಕೆ ಕಾರಣವಾಗಿತ್ತು.

ಬಿಜೆಪಿ ಸರ್ಕಾರ ಮೊದಲು ಆಯೋಗ ರಚನೆ ಮಾಡಿದಾಗಲೇ ಆರು ತಿಂಗಳಿನಲ್ಲಿ ವರದಿ ಸಲ್ಲಿಕೆ ಮಾಡಬೇಕು ಎಂದು ಸೂಚನೆ ನೀಡಿತ್ತು. ಆದರೆ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಎದುರಾದ ಕಾರಣ ನೀತಿ ಸಂಹಿತೆ ಜಾರಿಗೆ ಬಂದ ಕಾರಣ ಆಯೋಗದ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಲಿಲ್ಲ.
ಮೊದಲು ಬಿಜೆಪಿ ಸರ್ಕಾರ ದಿನಾಂಕ 19/11/2022ರಂದು 7ನೇ ರಾಜ್ಯ ವೇತನ ಆಯೋಗವನ್ನು ಸುಧಾಕರ್ ರಾವ್ ಅಧ್ಯಕ್ಷತೆಯಲ್ಲಿ ರಚನೆ ಮಾಡಿತ್ತು. ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಮುಗಿದು, ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಆಯೋಗ ವರದಿ ನೀಡಲು ನಿಗದಿಪಡಿಸಿರುವ ಕಾಲಾವಧಿಯನ್ನು ದಿನಾಂಕ 19/5/2023ರಿಂದ 6 ತಿಂಗಳು ವಿಸ್ತರಣೆ ಮಾಡಿ ಆದೇಶ ಹೊರಡಿಸಲಾಗಿತ್ತು.
ಆಯೋಗದ ಅವಧಿ ಮತ್ತೆ ವಿಸ್ತರಣೆ?; 7ನೇ ರಾಜ್ಯ ವೇತನ ಆಯೋಗ ತನ್ನ ಪರಿಶೀಲನಾ ಅಂಶಗಳನ್ನು ಈಗಾಗಲೇ ಪೂರ್ಣಗೊಳಿಸಿದೆ ಎಂಬ ಮಾಹಿತಿ ಇದೆ. ನವೆಂಬರ್‌ನಲ್ಲಿ ಸರ್ಕಾರಕ್ಕೆ ಆಯೋಗ ವರದಿ ಸಲ್ಲಿಕೆ ಮಾಡುವ ನಿರೀಕ್ಷೆ ಇದೆ. ಇದರ ನಡುವೆಯೇ ಆಯೋಗದ ಅವಧಿಯನ್ನು ಇನ್ನೂ ಆರು ತಿಂಗಳು ವಿಸ್ತರಣೆ ಮಾಡಲಾಗುತ್ತದೆ ಎಂಬ ಸುದ್ದಿಯೂ ಹಬ್ಬಿದೆ.
ಕಾಂಗ್ರೆಸ್ ಸರ್ಕಾರ 5 ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಪ್ರಯತ್ನ ನಡೆಸಿದೆ. ಇಂತಹ ಸಂದರ್ಭದಲ್ಲಿ 7ನೇ ರಾಜ್ಯ ವೇತನ ಆಯೋಗವು ವರದಿ ನೀಡಿದರೆ ಅದನ್ನು ಅನುಷ್ಠಾನಗೊಳಿಸಲು ಸರ್ಕಾರ ಮುಂದಾಗಬೇಕು. ಆದ್ದರಿಂದ ಅಯೋಗದ ವರದಿಯನ್ನು ವಿಸ್ತರಣೆ ಮಾಡಿ, 2024ರಲ್ಲಿ ವರದಿ ಸ್ವೀಕರಿಸುವಂತೆ ಮಾಡಲಾಗುತ್ತದೆ ಎಂಬುದು ಲೆಕ್ಕಾಚಾರವಾಗಿದೆ.
ಆಯೋಗ ಸರ್ಕಾರಕ್ಕೆ ತನ್ನ ಶಿಫಾರಸು ನೀಡುವ ಮೊದಲು ಮುಖ್ಯಮಂತ್ರಿಗಳು ಮತ್ತು ಆರ್ಥಿಕ ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸಿದೆ. ಆಯೋಗದ ಶಿಫಾರಸಿನಂತೆ ವೇತನ ಪರಿಷ್ಕರಣೆ ಮಾಡಬೇಕಾದರೆ ಅಗತ್ಯವಿರುವ ಅನುದಾನ ಎಷ್ಟು? ಎಂದು ಚರ್ಚೆ ನಡೆದಿದೆ. ಆದ್ದರಿಂದ ಆಯೋಗದ ಅವಧಿಯನ್ನು ಇನ್ನೂ 6 ತಿಂಗಳು ವಿಸ್ತರಣೆ ಮಾಡಲಾಗುತ್ತದೆ ಎಂಬುದು ಸದ್ಯ ಹರಿದಾಡುತ್ತಿರುವ ಸುದ್ದಿ.
7ನೇ ರಾಜ್ಯ ವೇತನ ಆಯೋಗ ರಾಜ್ಯ ಸರ್ಕಾರಿ ನೌಕರರ (ಯುಜಿಸಿ/ ಎಐಸಿಟಿಇ/ ಐಸಿಎಆರ್/ ಎನ್‌ಜೆಪಿಸಿ ವೇತನ ಶ್ರೇಣಿ ಹೊಂದಿರುವವರನ್ನು ಹೊರತುಪಡಿಸಿ), ಅನುದಾನಿತ ಶಿಕ್ಷಣ ಸಂಸ್ಥೆಗಳು, ಸ್ಥಳೀಯ ಸಂಸ್ಥೆಗಳು, ವಿಶ್ವವಿದ್ಯಾನಿಲಯಗಳು ಮತ್ತು ಕಾಲೇಜುಗಳ ಬೋಧಕೇತರ ಸಿಬ್ಬಂದಿಗಳಿಗೆ ಮರಣ ಹಾಗೂ ನಿವೃತ್ತಿ ಉಪದಾನ ಸೌಲಭ್ಯಗಳನ್ನೊಳಗೊಂಡಂತೆ ಲಭ್ಯವಿರುವ ಎಲ್ಲಾ ಕ್ರೋಢೀಕೃತ ಸೌಲಭ್ಯಗಳನ್ನು ಗಣನೆಗೆ ತೆಗೆದುಕೊಂಡು, ಈ ಸಿಬ್ಬಂದಿಗಳ ಪ್ರಸ್ತುತ ವೇತನ ರಚನೆಯನ್ನು ಪರಿಶೀಲಿಸುವುದು ಹಾಗೂ ಅಪೇಕ್ಷಣೀಯವಾದ ಹಾಗೂ ಕಾರ್ಯಸಾಧ್ಯವಿರುವ ನೂತನ ವೇತನ ರಚನೆಯನ್ನು ರೂಪಿಸಿ ಸರ್ಕಾರಕ್ಕೆ ಶಿಫಾರಸು ಮಾಡಲಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ವೃಂದದ ಹುದ್ದೆಗಳನ್ನು ಸಮೀಕರಿಸಿ ಕೇಂದ್ರ ಸರ್ಕಾರದ ವೇತನ ರಚನೆಯನ್ನು ಅಳವಡಿಸಿಕೊಳ್ಳುವ ಕಾರ್ಯಸಾಧ್ಯತೆಗಳನ್ನು ಪರಿಶೀಲಿಸಿ ವರದಿ ನೀಡಲಿದೆ. ರಾಜ್ಯ ಸರ್ಕಾರವು ಅಳವಡಿಸಿಕೊಳ್ಳಬಹುದಾದ ತುಟ್ಟಿಭತ್ಯೆಯ ಸೂತ್ರ, ಮನೆ ಬಾಡಿಗೆ ಭತ್ಯೆ ಮತ್ತು ನಗರ ಪರಿಹಾರ ಭತ್ಯೆ, ವಿಶೇಷ ಭತ್ಯೆಗಳು ಇತ್ಯಾದಿ ಮತ್ತು ರಜೆ ಪ್ರಯಾಣ ರಿಯಾಯಿತಿ ಮತ್ತು ವೈದ್ಯಕೀಯ ಮರುಪಾವತಿ ಸೌಲಭ್ಯಗಳನ್ನೊಳಗೊಂಡಂತ ವಿವಿಧ ಭತ್ಯೆಗಳ ಪರಿಶೀಲಿಸಲಿದೆ. ಅಪೇಕ್ಷಣೀಯವಾದ ಹಾಗೂ ಕಾರ್ಯಸಾಧ್ಯವಿರುವ ಬದಲಾವಣೆಗಳನ್ನು ಆಯೋಗ ಶಿಫಾರಸು ಮಾಡಲಿದೆ.
ನಿವೃತ್ತಿ ವೇತನ ಮತ್ತು ನಿವೃತ್ತಿ ಸೌಲಭ್ಯಗಳನ್ನು ಪರಿಶೀಲಿಸಲಿದೆ. ಆಯೋಗವು ತನ್ನ ಶಿಫಾರಸ್ಸುಗಳನ್ನು ಮಾಡುವಲ್ಲಿ, ರಾಜ್ಯ ಸಂಪನ್ಮೂಲಗಳು ಹಾಗೂ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳು ಮತ್ತು ಯೋಜನೆಗಳ ಕುರಿತಾಗಿ ರಾಜ್ಯ ಸರ್ಕಾರದ ಹೊಣೆಗಳು, ಶಾಸನಬದ್ಧ ಹಾಗೂ ಕ್ರಮಬದ್ಧ ಕಾರ್ಯಗಳು, ಋಣಸೇವಾ ನಿರ್ವಹಣೆಗಳು ಮತ್ತು ಇತರೆ ಅಭಿವೃದ್ಧಿಯೇತರ ಅಗತ್ಯಗಳನ್ನು ಹಾಗೂ ವಿತ್ತೀಯ ಹೊಣೆಗಾರಿಕೆ ನಿರ್ವಹಣೆ ಅಧಿನಿಯಮ, 2002ರ ಅಧ್ಯಾದೇಶದ ಅವಕಾಶಗಳ ಪರಿಮಿತಿಯನ್ನು ಗಮನದಲ್ಲಿರಿಸಿಕೊಳ್ಳಬೇಕು ಎಂದು ವೇತನ ಆಯೋಗ ರಚನೆ ಆದೇಶದಲ್ಲಿಯೇ ಸ್ಪಷ್ಟಪಡಿಸಲಾಗಿದೆ.












Click it and Unblock the Notifications