7th Pay Commission: ಓಪಿಎಸ್ ಮತ್ತು ಎನ್‌ಪಿಎಸ್ ಆಯೋಗ ಹೇಳುವುದೇನು?
ಬೆಂಗಳೂರು, ಸೆಪ್ಟೆಂಬರ್ 17: ಕರ್ನಾಟಕದ ಸರ್ಕಾರಿ ನೌಕರರು ಹೊಸ ಪಿಂಚಣಿ ಯೋಜನೆ (ಎನ್‌ಪಿಎಸ್) ರದ್ದುಗೊಳಿಸಿ, ಹಳೆಯ ಪಿಂಚಣಿ ವ್ಯವಸ್ಥೆ (ಒಪಿಎಸ್) ಜಾರಿಗೊಳಿಸಲು ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ಕೆ. ಸುಧಾಕರ್ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗಕ್ಕೆ ಮನವಿ ಮಾಡಿದ್ದರು. ಆಯೋಗ ತನ್ನ 558 ಪುಟಗಳ ಸಂಪುಟ-1ರ ವರದಿಯಲ್ಲಿ ಈ ಕುರಿತು ಪರಿಶೀಲಿಸಿದ ಅಂಶಗಳು ಏನು? ಎಂಬ ವಿವರ ಇಲ್ಲಿದೆ.
ಆಯೋಗ ತನ್ನ ವರದಿಯಲ್ಲಿ ಇಲ್ಲಿಯವರೆಗೆ ನಿವೃತ್ತಿ ವೇತನ ಸೌಲಭ್ಯಗಳ ಕುರಿತಾದ ಈ ಅಧ್ಯಾಯದಲ್ಲಿ ನಾವು ನಮ್ಮ ಚರ್ಚೆಯನ್ನು ಓಪಿಎಸ್ ಅಥವಾ ಹಳೆಯ ನಿವೃತ್ತಿ ವೇತನ ಯೋಜನೆಗೆ ಸೀಮಿತಗೊಳಿಸಿದ್ದೇವೆ. ಈ ಹಿಂದೆ ವಿವರಿಸಿದಂತೆ, ಡಿಸೆಂಬರ್ 2003ರಲ್ಲಿ ಸರ್ಕಾರಿ ನೌಕರರಿಗಾಗಿ ಓಪಿಎಸ್ ಬದಲಾಗಿ ಎನ್‌ಪಿಎಸ್ ಎಂದು ಉಲ್ಲೇಖಿಸಲಾದ ಹೊಸ ಪಿಂಚಣಿ ಯೋಜನೆಯನ್ನು ಜಾರಿಗೆ ತರಲಾಯಿತು. ಕರ್ನಾಟಕ ಸರ್ಕಾರವು ಎನ್‌ಪಿಎಸ್ ಅನ್ನು ದಿನಾಂಕ 01.04.2006 ರಂದು ಜಾರಿಗೊಳಿಸಿತು ಮತ್ತು ಅಂದಿನಿಂದ ರಾಜ್ಯ ಸರ್ಕಾರದಲ್ಲಿ ಹೊಸದಾಗಿ ನೇಮಕಾತಿ ಹೊಂದಿದ ಎಲ್ಲಾ ನೌಕರರು ಕಡ್ಡಾಯವಾಗಿ ಎನ್‌ಪಿಎಸ್ ವ್ಯಾಪ್ತಿಗೆ ಒಳಪಡುತ್ತಾರೆ ಎಂದು ಹೇಳಿದೆ.

1998ರಲ್ಲಿ ವ್ಯಾಪಕ ಚರ್ಚಾ ವಿಧಾನ ಮತ್ತು ನೀತಿ ಪರ್ಯಾಲೋಚನೆಯ ನಂತರ ಪಿಂಚಣಿ ಸುಧಾರಣೆಯ ಪಥದ ಮೊದಲ ಹೆಜ್ಜೆಯಾಗಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಲಯದ ವೃದ್ದಾಪ್ಯ ಸಾಮಾಜಿಕ ಮತ್ತು ಆದಾಯ ಭದ್ರತೆ ಯೋಜನೆಯನ್ನು ಪ್ರಾರಂಭಿಸಿತು. ಭಾರತ ಸರ್ಕಾರ, 2002ರ ಹೊಸ ಪಿಂಚಣಿ ವ್ಯವಸ್ಥೆಗೆ ಸಂಬಂಧಿಸಿದ ಉನ್ನತ ಮಟ್ಟದ ತಜ್ಞರ ಗುಂಪಿನ ವರದಿಯಲ್ಲಿ, ಪ್ರತಿ ನಿವೃತ್ತ ಸಿಬ್ಬಂದಿಗೆ ಅಗತ್ಯ ನಿವೃತ್ತಿ ಆದಾಯವನ್ನು ಒದಗಿಸುವ ಸಮಸ್ಯೆಗೆ ಸುಸ್ಥಿರ ಪರಿಹಾರವನ್ನು ಹುಡುಕುವ ಪ್ರಯತ್ನವಾಗಿದೆ ಎಂದು ಉಲ್ಲೇಖಿಸಲಾಗಿದೆ.
ನಿಶ್ಚಿತ ಸೌಲಭ್ಯ ಯೋಜನೆಯಿಂದ ನಿಶ್ಚಿತ ವಂತಿಗೆ ಯೋಜನೆಗೆ ಪರಿವರ್ತನೆಯು ಜಾಗತಿಕವಾಗಿ ಸರ್ಕಾರ ಮತ್ತು ಸಂಘಟಿತ ಸಂಸ್ಥೆಗಳ ವಲಯಗಳೆರಡರಲ್ಲೂ ಸಂಭವಿಸುತ್ತಿದೆ. ವಿವಿಧ ಆರ್ಥಿಕತೆಗಳಲ್ಲಿನ ಉದ್ಯೋಗದಾತರು ಈ ಬದಲಾವಣೆಯನ್ನು ಸೂಕ್ತ ಕಾರ್ಯಸಾಧ್ಯವಾದ ಸಮಯದಲ್ಲಿ ಜಾರಿಗೆ ತಂದಿದ್ದಾರೆ. ವಾಸ್ತವವಾಗಿ, ಇತ್ತೀಚಿಗೆ ಅಂದರೆ 2019ರಲ್ಲಿ, ಉದ್ಯೋಗದಾತರು ನಿಶ್ಚಿತ ಸೌಲಭ್ಯ ಯೋಜನೆಯಿಂದ ನಿಶ್ಚಿತ ವಂತಿಗೆ ಯೋಜನೆಗಳಿಗೆ ಹೆಚ್ಚಾಗಿ ಪರಿವರ್ತನೆ ಹೊಂದುತ್ತಿರುವುದನ್ನು ಐಎಮ್‌ಎಫ್ ಗಮನಿಸಿರುತ್ತದೆ, ಆದರೆ, ವಿವಿಧ ಆರ್ಥಿಕತೆಗಳಲ್ಲಿ ಅದರ ವೇಗ ಮತ್ತು ವ್ಯಾಪ್ತಿ ಭಿನ್ನವಾಗಿರುತ್ತದೆ. ಸರ್ಕಾರ ಮತ್ತು ಅದರ ಉದ್ಯೋಗಿಗಳ ಕಾಳಜಿಯನ್ನು ಹೊರತುಪಡಿಸಿ, ಭಾರತವು ತನ್ನ ಹೆಚ್ಚಿನ ಪ್ರಮಾಣದ ವೃದ್ಧರಿಗೆ ವೃದ್ಧಾಪ್ಯ ಆದಾಯದ ಭದ್ರತೆಯನ್ನು ಅರ್ಥಪೂರ್ಣವಾಗಿ ವಿಸ್ತರಿಸಲು ನಿಶ್ಚಿತ ವಂತಿಗೆ ಯೋಜನೆಯನ್ನು ಹೊಂದುವುದು ನಿರ್ಣಾಯಕವಾಗಿದ್ದು, ಉದ್ಯೋಗದಾತ ಮತ್ತು ಉದ್ಯೋಗಿಯು ಜಂಟಿಯಾಗಿ ನಿವೃತ್ತಿ ಕೂಡು ನಿಧಿಯನ್ನು ನಿರ್ಮಿಸಿದಲ್ಲಿ ಅದು ದೀರ್ಘಕಾಲಾವಧಿಯವರೆಗೆ ಬಂಡವಾಳ ಮಾರುಕಟ್ಟೆಯೊಂದಿಗೆ ಬೆಳೆಯುತ್ತದೆ.
ಎನ್‌ಪಿಎಸ್ ವಿವರಗಳು: ಎನ್‌ಪಿಎಸ್ ಸ್ವಯಂ ಪ್ರೇರಿತ ನಿಶ್ಚಿತ ವಂತಿಗೆ ಯೋಜನೆಯಾಗಿದ್ದು, ಚಂದಾದಾರರು ತಮ್ಮ ಕಾರ್ಯಾವಧಿಯ ಜೀವನದಲ್ಲಿ ವ್ಯವಸ್ಥಿತ ಉಳಿತಾಯದ ಮೂಲಕ ತಮ್ಮ ಭವಿಷ್ಯದ ಬಗ್ಗೆ ಅತ್ಯುತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು ಅನುವು ಮಾಡಿಕೊಡುತ್ತದೆ. ಈ ಯೋಜನೆಯಡಿ, ಸರ್ಕಾರಿ ನೌಕರರಿಗೆ ಸಂಬಂಧಿಸಿದಂತೆ ದಿನಾಂಕ 01.04.2006ರ ನಂತರ ಸರ್ಕಾರಿ ಸೇವೆಗೆ ಸೇರಿದ ವ್ಯಕ್ತಿಗಳು ತಮ್ಮ ಮೂಲ ವೇತನ ಮತ್ತು ತುಟ್ಟಿ ಭತ್ಯೆಯ ಶೇ.10 ರಷ್ಟು ವಂತಿಗೆಯನ್ನು ನೀಡಬೇಕು, ಸರ್ಕಾರವು (ಕೇಂದ್ರ ಮತ್ತು ರಾಜ್ಯ) ಶೇ.10 ರಷ್ಟು ವಂತಿಗೆಯನ್ನು ಹೊಂದಿಸುತ್ತದೆ. ಸರ್ಕಾರದ ವಂತಿಗೆಯನ್ನು 2019ರಲ್ಲಿ ಶೇ.14 ಕ್ಕೆ ಹೆಚ್ಚಿಸಲಾಗಿದೆ. ಒಬ್ಬ ಸಿಬ್ಬಂದಿಯು, ಆಕೆ ಅಥವಾ ಆತನ ನಿವೃತ್ತಿಯ ನಂತರದಲ್ಲಿ, ಸರ್ಕಾರ ಮತ್ತು ಆತ ಅಥವಾ ಆಕೆಯು ನೀಡಿದ ಒಟ್ಟು ವಂತಿಗೆಯ ಶೇ.60 ರಷ್ಟು ಮೊತ್ತವನ್ನು ಪಡೆಯುತ್ತಾರೆ.
ಶೇ.40 ರಷ್ಟು ಉಳಿದ ಮೊತ್ತವನ್ನು ಗೊತ್ತುಪಡಿಸಿದ ಕಂಪನಿಗಳಿಂದ ವರ್ಷಾಸನ ಖರೀದಿಗಾಗಿ ಬಳಸಿಕೊಳ್ಳಲಾಗುವುದು ಮತ್ತು ಅದರಿಂದ ಸೃಜನೆಯಾದ ಆದಾಯವನ್ನು ನಿವೃತ್ತಿದಾರನಿಗೆ ಪಾವತಿಸಲಾಗುವುದು. ಸಿಬ್ಬಂದಿಯು ಸೇವಾವಧಿಯಲ್ಲಿ ಮರಣ ಹೊಂದಿದಲ್ಲಿ, ಸಂಚಿತ ಪಿಂಚಣಿಯಲ್ಲಿ ಸಂಗ್ರಹವಾದ ಒಟ್ಟು ಮೊತ್ತವನ್ನು ಸಿಬ್ಬಂದಿಯ ನಾಮನಿರ್ದೇಶಿತ ವ್ಯಕ್ತಿಯು ಪಡೆಯುತ್ತಾನೆ. ಆದರೆ ಅದರೊಂದಿಗೆ ವರ್ಷಾಸನ ಖರೀದಿ ಮತ್ತು ಮಾಸಿಕ ಪಿಂಚಣಿಗಳು ಇರುವುದಿಲ್ಲ. ನಿವೃತ್ತಿಯಾದ ನೌಕರ ಮರಣ ಹೊಂದಿದಾಗ, ಆತ ಅಥವಾ ಆಕೆಯು ಉಳಿದ ಶೇ.40 ರಷ್ಟು ಸಂಚಿತ ಮೊತ್ತವನ್ನು ಹಿಂತೆಗೆದುಕೊಳ್ಳುವ ಅಥವಾ ವರ್ಷಾಸನದೊಂದಿಗೆ ಮುಂದುವರೆಯುವ ಆಯ್ಕೆಯನ್ನು ಹೊಂದಿರುತ್ತಾರೆ ಎಂದು ಹೇಳಿದೆ.
ಕರ್ನಾಟಕ ಸರ್ಕಾರವು 2021ರಲ್ಲಿ ಈ ಯೋಜನೆಯನ್ನು ಸ್ವಲ್ಪ ಮಟ್ಟಿಗೆ ಮಾರ್ಪಡಿಸಿದ್ದು, ಎನ್‌ಪಿಎಸ್ ವ್ಯಾಪ್ತಿಗೊಳಪಡುವ ಕಾರ್ಯ ನಿರತ ಸಿಬ್ಬಂದಿಯು ನಿಧನರಾದಲ್ಲಿ, ಆತ ಅಥವಾ ಆಕೆಯ ನಾಮನಿರ್ದೇಶಿತರು ಪಿಂಚಣಿಯ ಸಂಚಿತ ಮೊತ್ತವನ್ನು ಹಿಂತೆಗೆದುಕೊಳ್ಳುವ ಅಥವಾ ಓಪಿಎಸ್ ಅಡಿಯಲ್ಲಿನ ರಾಜ್ಯ ಸರ್ಕಾರದ ಕುಟುಂಬ ನಿವೃತ್ತಿ ವೇತನ ನಿಯಮಗಳನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವಿರುತ್ತದೆ.
ಕರ್ನಾಟಕ ಸರ್ಕಾರವು ಪಿಎಫ್‌ಆರ್‌ಡಿಎ (ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ) ಎಂದು ಕರೆಯಲ್ಪಡುವ ಎನ್‌ಪಿಎಸ್ ಟ್ರಸ್ಟ್‌ನೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದ್ದು (ಇತರ ರಾಜ್ಯಗಳಂತೆ) ಇದು ಇಡೀ ರಾಷ್ಟ್ರಾದ್ಯಂತ ಜಾರಿಯಲ್ಲಿರುವ ಎನ್‌ಪಿಎಸ್‌ನ ಮೇಲುಸ್ತುವಾರಿಯನ್ನು ನಿರ್ವಹಿಸುತ್ತದೆ. ನಿಯಮಕ್ಕೆ ವಿನಾಯಿತಿಗಳನ್ನು ಹೊರತುಪಡಿಸಿ, ಎನ್‌ಪಿಎಸ್ ವ್ಯಾಪ್ತಿಗೊಳಪಡುವ ಸಿಬ್ಬಂದಿಯು ಸೇವಾವಧಿಯಲ್ಲಿ ಮರಣ ಹೊಂದಿದಾಗ ಅಥವಾ ವಿಶೇಷ ಸಂದರ್ಭಗಳಲ್ಲಿ ನೇಮಕಗೊಂಡ ಸಿಬ್ಬಂದಿಯ ನಿವೃತ್ತಿಯಂತಹ ಪ್ರಕರಣಗಳಲ್ಲಿ, ನಿವೃತ್ತಿ ವೇತನ ಸೌಲಭ್ಯಗಳ ಮೊದಲ ಬಿಡುಗಡೆಯು 2036/37 ವರ್ಷಗಳಲ್ಲಿ, ಅಂದರೆ ದಿನಾಂಕ 01.04.2006 ರ ನಂತರ ಸರ್ಕಾರಿ ಸೇವೆಗೆ ನೇಮಕಾತಿ ಹೊಂದಿದ ನೌಕರರ ನಿವೃತ್ತಿಯ ವರ್ಷದಲ್ಲಿ ಪ್ರಾರಂಭವಾಗುತ್ತದೆ.
ಯೋಜನೆಗೆ ಯಾವುದಾದರೂ ಬದಲಾವಣೆಗಳನ್ನು ಮಾಡುವ ಅಗತ್ಯವಿದೆಯೇ ಎಂಬ ಎನ್‌ಪಿಎಸ್ ಕುರಿತ ಪ್ರಶ್ನಾವಳಿಯಲ್ಲಿನ ಪ್ರಶ್ನೆಗೆ ಪ್ರತಿಕ್ರಿಯೆಯಾಗಿ 2280 ನೌಕರರು ಮತ್ತು ಹಲವು ನೌಕರರ ಸಂಘಗಳು ತಮ್ಮ ಅಭಿಪ್ರಾಯ/ ಸಲಹೆಗಳನ್ನು ಆಯೋಗಕ್ಕೆ ಸಲ್ಲಿಸಿದ್ದಾರೆ. ಬಹುತೇಕ ಪ್ರತಿಯೊಬ್ಬ ಅರ್ಜಿದಾರ/ ಸಂಘವು ಎನ್‌ಪಿಎಸ್ ರದ್ದುಗೊಳಿಸುವುದು/ ಕೈ ಬಿಡುವ ಕುರಿತು ಮನವಿ ಮಾಡಿದ್ದು ಮತ್ತು ದಿನಾಂಕ 1/4/2006ರಂದು ಮತ್ತು ಅದರ ನಂತರ ಸರ್ಕಾರದ ಸೇವೆಗೆ ಸೇರಿ ಎಲ್ಲಾ ನೌಕರರಿಗೆ ಓಪಿಎಸ್ ಅನ್ನು ಮರು ಜಾರಿಗೊಳಿಸಲು ಕೋರಿರುತ್ತಾರೆ ಎಂದು ಆಯೋಗ ಹೇಳಿದೆ.












Click it and Unblock the Notifications