Government employee; ಶೇ 4ರಷ್ಟು ತುಟ್ಟಿಭತ್ಯೆಗೆ ಸರ್ಕಾರಕ್ಕೆ ಪತ್ರ
ಬೆಂಗಳೂರು, ಮಾರ್ಚ್ 12: ಕರ್ನಾಟಕದ ಸರ್ಕಾರಿ ನೌಕರರು ಶೇ 4ರಷ್ಟು ತುಟ್ಟಿಭತ್ಯೆ ಹೆಚ್ಚಳ ಮಾಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಪತ್ರವನ್ನು ಬರೆದಿದ್ದಾರೆ. ಲೋಕಸಭೆ ಚುನಾವಣೆ 2024ರ ವೇಳಾಪಟ್ಟಿ ಘೋಷಣೆಗೂ ಮೊದಲೇ ಈ ಕುರಿತು ಸರ್ಕಾರ ಆದೇಶ ಹೊರಡಿಸಲಿದೆಯೇ? ಕಾದು ನೋಡಬೇಕಿದೆ.
ಮಾರ್ಚ್ 12ರ ಮಂಗಳವಾರ ಈ ಕುರಿತು ಕರ್ನಾಟಕ ಸರ್ಕಾರಿ ನೌಕರರ ಸಂಘ ಮಾನ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಆರ್ಥಿಕ ಇಲಾಖೆ, ಕರ್ನಾಟಕ ಸರ್ಕಾರ, ವಿಧಾನಸೌಧ, ಬೆಂಗಳೂರು ಇವರಿಗೆ ಪತ್ರವನ್ನು ಬರೆದಿದೆ.

ಈ ಪತ್ರ ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ದಿನಾಂಕ 01/01/2024ರಿಂದ ಅನ್ವಯವಾಗುವಂತೆ ಬಾಕಿ ಇರುವ ತುಟ್ಟಿಭತ್ಯೆಯನ್ನು ನಗದು ರೂಪದಲ್ಲಿ ಬಿಡುಗಡೆ ಮಾಡುವ ಬಗ್ಗೆ ಎಂಬ ವಿಷಯವನ್ನು ಒಳಗೊಂಡಿದೆ.
ಪತ್ರದ ವಿವರಗಳು: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಕೇಂದ್ರ ಸರ್ಕಾರದ ಆದೇಶ ದಿನಾಂಕ 12/03/2024 ಉಲ್ಲೇಖ ಮಾಡಿ ಪತ್ರವನ್ನು ಬರೆದಿದೆ.
ಅಖಿಲ ಭಾರತ ಬೆಲೆ ಸೂಚ್ಯಾಂಕವನ್ನಾಧರಿಸಿ ಕೇಂದ್ರ ಸರ್ಕಾರವು ತನ್ನ ನೌಕರರಿಗೆ ತುಟ್ಟಿಭತ್ಯೆಯನ್ನು ಮಂಜೂರು ಮಾಡಿದ ದಿನಾಂಕದಿಂದಲೇ ಪೂರ್ವಾನ್ವಯವಾಗಿ ಕರ್ನಾಟಕ ರಾಜ್ಯ ಸರ್ಕಾರವೂ ಸಹ ರಾಜ್ಯ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆಯನ್ನು ಈ ಹಿಂದಿನಿಂದಲೂ ಮಂಜೂರು ಮಾಡಿರುತ್ತದೆ ಎಂದು ಹೇಳಿದೆ.
ಉಲ್ಲೇಖದ ಆದೇಶದಂತೆ ಕೇಂದ್ರ ಸರ್ಕಾರವು ತನ್ನ ನೌಕರರಿಗೆ ದಿನಾಂಕ 01/01/2024ರಿಂದ ಪೂರ್ವಾನ್ವಯವಾಗಿ ಜಾರಿಗೆ ಬರುವಂತೆ ಶೇ.4% ರಷ್ಟು ತುಟ್ಟಿಭತ್ಯೆಯನ್ನು ಮಂಜೂರು ಮಾಡಿರುತ್ತದೆ.
ಅದರಂತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ದಿನಾಂಕ 01/01/2024ರಿಂದ ಪೂರ್ವಾನ್ವಯವಾಗಿ ಜಾರಿಗೆ ಬರುವಂತೆ ಶೇ.4%ರಷ್ಟು ತುಟ್ಟಿಭತ್ಯೆಯನ್ನು ಮಂಜೂರು ಮಾಡಿ ಆದೇಶ ಹೊರಡಿಸಲು ತಮ್ಮಲ್ಲಿ ಕೋರಿದೆ ಎಂದು ಪತ್ರದಲ್ಲಿ ಮನವಿ ಮಾಡಲಾಗಿದೆ.
2024ರ ಲೋಕಸಭೆ ಚುನಾವಣೆ ಘೋಷಣೆ ಮಾಡಲು ಕೇಂದ್ರ ಚುನಾವಣಾ ಆಯೋಗ ಸಿದ್ಧತೆಗಳನ್ನು ನಡೆಸುತ್ತಿದೆ. ಮಾರ್ಚ್ 15ರೊಳಗೆ ಚುನಾವಣಾ ದಿನಾಂಕ ಘೋಷಣೆ ನಿರೀಕ್ಷೆ ಇದೆ. ವೇಳಾಪಟ್ಟಿ ಘೋಷಣೆಯಾದರೆ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಗೆ ಬಂದು ಸರ್ಕಾರಕ್ಕೆ ಹೊಸ ಘೋಷಣೆ ಮಾಡುವುದು ಕಷ್ಟವಾಗಲಿದೆ.
ಕರ್ನಾಟಕದ ಸರ್ಕಾರಿ ನೌಕರರು ಸರ್ಕಾರದ ಮುಂದೆ 2 ಪ್ರಮುಖ ಬೇಡಿಕೆಗಳನ್ನು ಇಟ್ಟಿದ್ದಾರೆ. ಒಂದು 7ವೇ ವೇತನ ಆಯೋಗದ ವರದಿಯನ್ನು ಪಡೆದು ಅದನ್ನು ಅನುಷ್ಠಾನಗೊಳಿಸುವ ಕುರಿತು ಆದೇಶ ಹೊರಡಿಸುವುದು ಮತ್ತೊಂದು ತುಟ್ಟಿಭತ್ಯೆ ಹೆಚ್ಚಳ.
ಮಾರ್ಚ್ 15ಕ್ಕೆ ಕೆ. ಸುಧಾಕರ್ ರಾವ್ ನೇತೃತ್ವದ 7ನೇ ರಾಜ್ಯ ವೇತನ ಆಯೋಗದ ಅವಧಿ ಮುಕ್ತಾಯಗೊಳ್ಳುತ್ತದೆ. ಸರ್ಕಾರ ವರದಿ ಸ್ವೀಕಾರ ಮಾಡಲಿದೆಯೇ? ಇಲ್ಲವೇ ಎಂದು ಕಾದು ನೋಡಬೇಕಿದೆ.
ಈಗ ಸರ್ಕಾರಿ ನೌಕರರು ಇಟ್ಟ ಬೇಡಿಕೆಯಂತೆ ಡಿಎ ಹೆಚ್ಚಳದ ಕುರಿತು ಸಹ ಈಗಲೇ ಘೋಷಣೆ ಮಾಡಬೇಕು. ಚುನಾವಣಾ ದಿನಾಂಕ ಘೋಷಣೆಯಾದರೆ ಸರ್ಕಾರ ಯಾವುದೇ ಹೊಸ ಘೋಷಣೆಗಳನ್ನು ಮಾಡುವಂತಿಲ್ಲ.
ಕಳೆದ ವಾರ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಸಭೆ ನಡೆದಿತ್ತು. ಸಭೆಯಲ್ಲಿ ಕೇಂದ್ರ ಸರ್ಕಾರ ತುಟ್ಟಿಭತ್ಯೆಯನ್ನು ಶೇ 4 ಹೆಚ್ಚಳ ಮಾಡಲು ಅನುಮೋದನೆ ನೀಡಿತ್ತು. ಕೇಂದ್ರ ಸರ್ಕಾರ ಡಿಎ ಹೆಚ್ಚಳ ಮಾಡಿದ ಬಳಿಕ ರಾಜ್ಯ ಸರ್ಕಾರವು ಡಿಎ ಹೆಚ್ಚಳ ಮಾಡುತ್ತದೆ.
ಕೇಂದ್ರ ಸರ್ಕಾರ 2024ರ ಜನವರಿ 1ರಿಂದ ಅನ್ವಯವಾಗುವಂತೆ ಡಿಎ ಹೆಚ್ಚಳ ಮಾಡಲು ಅನುಮೋದನೆ ನೀಡಿತ್ತು. ಎರಡು ತಿಂಗಳ ಹಿಂಬಾಕಿಯೊಂದಿಗೆ ತುಟ್ಟಿಭತ್ಯೆ ನೀಡಲಾಗುತ್ತದೆ ಎಂದು ಸಚಿವ ಸಂಪುಟ ಸಭೆಯ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಲಾಗಿತ್ತು. ಈ ಮೂಲಕ ಲೋಕಸಭೆ ಚುನಾವಣೆ ಎದುರಾಗಿರುವಾಗ ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರ ಬಂಪರ್ ಕೊಡುಗೆ ನೀಡಿತ್ತು.











Click it and Unblock the Notifications