ಆರೋಗ್ಯ ಸೇವೆಗೆ 262 ಹೊಸ ಅಂಬ್ಯುಲೆನ್ಸ್ ಗಳ ಸೇರ್ಪಡೆ: ಅರೋಗ್ಯ ಸಚಿವರು ಕೊಟ್ಟ ಮಹತ್ವದ ಮಾಹಿತಿ ಇಲ್ಲಿದೆ
ಬೆಂಗಳೂರು, ನವೆಂಬರ್ 30: 108 ಅಂಬ್ಯುಲೆನ್ಸ್ ಆರೋಗ್ಯ ಸೇವೆಗೆ 262 ಹೊಸ ಅಂಬ್ಯುಲೆನ್ಸ್ ಗಳ ಸೇರ್ಪಡೆಯಾಗಲಿದ್ದು, 82,02,88,120 ಕೋಟಿ ರೂ. ವೆಚ್ಚದ ಯೋಜನೆಯ ನೂತನ ಅಂಬ್ಯುಲೆನ್ಸ್ ಗಳಿಗೆ ನವೆಂಬರ್ 30 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಲಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಈ ಕುರಿತು ಬುಧವಾರ ಸುದ್ದಿಗೋಷ್ಟಿಯಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, 108 ಅಂಬ್ಯುಲೆನ್ಸ್ ಸೇವೆ ಬಲಪಡಿಸಲು ನಮ್ಮ ಮೊದಲ ಹೆಜ್ಜೆಯಾಗಿದೆ. ಹೀಗಾಗಿ 157 BLS - ಬೇಸಿಕ್ ಲೈಫ್ ಸಪೋರ್ಟ್ ಆಂಬ್ಯುಲೆನ್ಸ್‌ಗಳು, 105 ALS - ಸುಧಾರಿತ ಲೈಫ್ ಸಪೋರ್ಟ್ ಆಂಬ್ಯುಲೆನ್ಸ್ ಗಳು, ALS ಅಂಬ್ಯುಲೆನ್ಸ ಗಳು, ಟ್ರಾನ್ಸ್‌ಪೋರ್ಟ್ ವೆಂಟಿಲೇಟರ್ ಮತ್ತು ಡಿಫಿಬ್ರಿಲೇಟರ್ ಹೊಂದಿದ್ದು, ಹೃದಯ ಮತ್ತು ಉಸಿರಾಟದ ತುರ್ತು ಪರಿಸ್ಥಿತಿಗಳಲ್ಲಿ ಇವು ಸಹಕಾರಿಯಾಗಲಿದೆ ಎಂದು ಹೇಳಿದರು.

ಪ್ರತಿ ಆಂಬ್ಯುಲೆನ್ಸ್‌ನಲ್ಲಿ ತುರ್ತು ಸೇವೆಗಳನ್ನು ನಿರ್ವಹಿಸಲು ತರಬೇತಿ ಪಡೆದ ಒಬ್ಬ ತುರ್ತು ವೈದ್ಯಕೀಯ ತಂತ್ರಜ್ಞ (EMT - ಶುಶ್ರೂಷಾ ಸಿಬ್ಬಂದಿ) ಮತ್ತು ಒಬ್ಬ ಪೈಲಟ್ (ಚಾಲಕ) ದಿನಕ್ಕೆ ಎರಡು ಪಾಳಿಗಳಲ್ಲಿ ಕಾರ್ಯನಿರ್ವಹಿಸುತ್ತಾರೆ. 262 ಅಂಬ್ಯುಲೆನ್ಸ್ ಗಳ ಸೇರ್ಪಡೆಯೊಂದಿಗೆ ಒಟ್ಟು 715 ಆಂಬ್ಯುಲೆನ್ಸ್‌ಗಳು 108 ಆರೋಗ್ಯ ಕವಚ ಸೇವೆಯಲ್ಲಿ ಕಾರ್ಯನಿರ್ವಹಿಸಲಿವೆ. ಮುಂಬರುವ ದಿನಗಳಲ್ಲಿ ಅವಶ್ಯಕತೆಗೆ ಅನುಗುಣವಾಗಿ ಆಂಬ್ಯುಲೆನ್ಸ್‌ಗಳನ್ನು ಹೆಚ್ಚಿಸಲಾಗುವುದು ಎಂದರು.
108 ಆಂಬ್ಯುಲೆನ್ಸ್ ಸೇವೆಗಳಿಗೆ ಹೊಸ ಸೇವಾದಾರರನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ ತಾಂತ್ರಿಕ ಸಮಿತಿಯನ್ನು ರಚಿಸಲಾಗಿದೆ. ಗುಜರಾತ್, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಪಂಜಾಬ್ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಅನುಷ್ಠಾನಗೊಳಿಸಿರುವ ವಿವಿಧ ಮಾದರಿಗಳ ಅಧ್ಯಯನಕ್ಕೆ ಹಿರಿಯ ಆರೋಗ್ಯ ಅಧಿಕಾರಿಗಳ ತಂಡವನ್ನು ನಿಯೋಜಿಸಲಾಗಿದೆ. ತಾಂತ್ರಿಕ ಸಮಿತಿಯ ಸಲಹೆ ಮತ್ತು ಹಿರಿಯ ಅಧಿಕಾರಿಗಳ ನೇತೃತ್ವದ ತಂಡಗಳು ಸಲ್ಲಿಸಿದ ವರದಿಯನ್ನು ಆಧರಿಸಿ, ಸಾರ್ವಜನಿಕರಿಗೆ ಅಂತರಾಷ್ಟ್ರೀಯ ಮಟ್ಟದ ಅತ್ಯಾಧುನಿಕ ತುರ್ತು ಆರೋಗ್ಯ ಆಂಬ್ಯುಲೆನ್ಸ್ ಸೇವೆಯನ್ನು ಒದಗಿಸಲು ಕ್ರಮವಹಿಸಲಾಗುತ್ತಿದೆ.
ಸಿ.ಟಿ ಸ್ಕ್ಯಾನ್ ಮತ್ತು ಎಂ.ಆರ್.ಐ ಸೇವೆಗಳು
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಿ.ಟಿ ಸ್ಯ್ಕಾನ್ ಮತ್ತು ಎಂ.ಆರ್.ಐ ಸ್ಕ್ಯಾನಿಂಗ್ ಆರೋಗ್ಯ ಸೇವೆ ವಿಸ್ತರಣೆ ಮಾಡಲಾಗಿದೆ. ಹೊಸದಾಗಿ 5 ಸಿ.ಟಿ ಮತ್ತು 15 ಎಂ.ಆರ್.ಐ ಸ್ಕ್ಯಾನಿಂಗ್ ಯಂತ್ರಗಳನ್ನ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ಈ ಯೋಜನೆಗೆ ಸಚಿವ ಸಂಪುಟದಲ್ಲಿ ಅನುಮೋದನೆಯಾಗಿದ್ದು, ಟೆಂಡರ್ ಪ್ರಕ್ರಿಯೇಯಲ್ಲಿದೆ. 6 ತಿಂಗಳಲ್ಲಿ ಒಟ್ಟು 158969 ಸಿ.ಟಿ ಸ್ಕ್ಯಾನ್ ಹಾಗೂ 53659 ಎಂ ಆರ್ ಐ ಸ್ಕ್ಯಾನ್ ಸೇವೆಗಳನ್ನು 6 ತಿಂಗಳ ಅವಧಿಯಲ್ಲಿ ಒದಗಿಸಲಾಗಿದೆ.

ಪುನೀತ್ ರಾಜಕುಮಾರ್ ಹೃದಯ ಜ್ಯೋತಿ ಯೋಜನೆ
ಹಠಾತ್ ಹೃದಯಾಘಾತಗಳನ್ನ ತಡೆಯಲು STEMI - ST Elevated Myocardial Infraction ಕಾರ್ಯಕ್ರಮವಾಗಿದ್ದು, 31 ಜಿಲ್ಲೆಗಳಲ್ಲಿ ತಾಲೂಕು ಮತ್ತು ಜಿಲ್ಲಾಸ್ಪತ್ರೆಗಳಲ್ಲಿ HUB and Spoke ಮಾದರಿಯ ತುರ್ತು ಚಿಕಿತ್ಸಾ ವ್ಯವಸ್ಥೆ ಕಲ್ಪಿಸಲಾಗುವುದು. ಎದೆನೋವು ಕಾಣಿಸಿಕೊಂಡವರಿಗೆ ತಾಲೂಕು ಮಟ್ಟದ ಆಸ್ಪತ್ರೆಯಲ್ಲೇ AI ತಂತ್ರಜ್ಞಾನದ ಮೂಲಕ ತಪಾಸಣೆ ಮಾಡಲಾಗುವುದು. ಹಠಾತ್ ಹೃದಘಾತದ ಮೂನ್ಸೂಚನೆ ಇರುವವರಿಗೆ ತಾಲೂಕು ಆಸ್ಪತ್ರೆಗಳ Spoke ಕೇಂದ್ರಗಳಲ್ಲೇ ಉಚಿತ Tenecteplase ಇಂಜೆಕ್ಷನ್.
35 ರಿಂದ 45 ಸಾವಿರ ಬೆಲೆ ಬಾಳುವ Tenecteplase ಇಂಜೆಕ್ಷನ್ ಉಚಿತವಾಗಿ ನೀಡಲಾಗುವುದು. ಜಯದೇವ ಹೃದ್ರೋಗ ಸಂಸ್ಥೆ ಹಾಗೂ ವೈದ್ಯಕೀಯ ಕಾಲೇಜುಗಳಲ್ಲಿ 10 ಹುಬ್ ಸೆಂಟರ್ ಗಳಲ್ಲಿ ಉನ್ನತ ಮಟ್ಟದ ಚಿಕಿತ್ಸಾ ವ್ಯವಸ್ಥೆ ಕಲ್ಪಿಸಿಕೊಡಲಾಗಿದೆ. ಜಯದೇವ ಸಹಯೋಗದೊಂದಿಗೆ ಈಗಾಗಲೇ 45 Spoke ಸೆಂಟರ್ ರೂಪಿಸಲಾಗಿದ್ದು, 7 ಹುಬ್ ಹಾಗೂ 40 spoke ಸೆಂಟರ್ ನಿರ್ಮಾಣ ಪ್ರಗತಿಯಲ್ಲಿದೆ ಎಂದು ಹೇಳಿದರು.
ಬ್ರೇನ್ ಹೆಲ್ತ್ ಇನಿಶೇಟಿವ್
ಕರ್ನಾಟಕ ಮೆದುಳು ಆರೋಗ್ಯ ಕಾರ್ಯಕ್ರಮ ನಿಮ್ಹಾನ್ಸ್ನ ಸಹಯೋಗದೊಂದಿಗೆ ಜಯನಗರ ಜನರಲ್ ಆಸ್ಪತ್ರೆ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಗಳಲ್ಲಿ ಪ್ರಾಯೋಗಿಕ ಯೋಜನೆ ಯಶಸ್ವಿಯಾಗಿದೆ. ಉತ್ತಮ ಫಲಿತಾಂಶವನ್ನು ಗಮನಿಸಿ ರಾಜ್ಯದ 31 ಜಿಲ್ಲೆಗಳು ಮತ್ತು 01 ಬಿಬಿಎಮ್‌ಪಿಯಲ್ಲಿ Brain Health ಕ್ಲಿನಿಕ್‌ಗಳನ್ನು ಸ್ಥಾಪಿಸಲು ಸಚಿವ ಸಂಪುಟದ ಆಡಳಿತಾತ್ಮಕ ಅನುಮೋದನೆ ದೊರೆತಿದೆ.












Click it and Unblock the Notifications