Government employee; ದಿನಗೂಲಿ ನೌಕರರ ವೇತನ ಹೆಚ್ಚಳ, ಸ್ಪಷ್ಟನೆ
ಬೆಂಗಳೂರು, ಅಕ್ಟೋಬರ್ 13; ಕರ್ನಾಟಕದ ಸರ್ಕಾರಿ ನೌಕರರು ಈ ವರ್ಷದ ಮಾರ್ಚ್‌ನಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅನಿರ್ಧಿಷ್ಟಾವಧಿ ಮುಷ್ಕರ ಆರಂಭಿಸಿದ್ದರು. ಆಗ ಕರ್ನಾಟಕದ ಬಿಜೆಪಿ ಸರ್ಕಾರ ಶೇ 17ರಷ್ಟು ಹೆಚ್ಚಳ ಮಾಡಿ ಆದೇಶ ಹೊರಡಿಸಿತ್ತು. ಆದರೆ ದಿನಗೂಲಿ ನೌಕರರಿಗೆ ಇದು ಅನ್ವಯವಾಗಲಿದೆಯೇ? ಎಂದು ಸ್ಪಷ್ಟನೆ ಕೋರಲಾಗಿತ್ತು.
ಚೇತನ ಎಂ., ಸರ್ಕಾರದ ಅಧೀನ ಕಾರ್ಯದರ್ಶಿ (ಸೇವೆಗಳು-ಎ), ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ. ಕರ್ನಾಟಕ ದಿನಗೂಲಿ ಕ್ಷೇಮಾಭಿವೃದ್ಧಿ ಅಧಿನಿಯಮದಡಿ ಕಾರ್ಯನಿರ್ವಹಿಸುತ್ತಿರುವ ದಿನಗೂಲಿ ನೌಕರರಿಗೆ ಮಧ್ಯಂತರ ಪರಿಹಾರವನ್ನು ನೀಡುವಂತೆ ಕೋರಿರುವ ಮನವಿಗಳ ಬಗ್ಗೆ ಎಂಬ ವಿಷಯವನ್ನು ಸ್ಪಷ್ಟನೆ ಒಳಗೊಂಡಿದೆ.

ಮಧ್ಯಂತರ ಪರಿಹಾರ; ಸ್ಪಷ್ಟನೆಯ ಆದೇಶದಲ್ಲಿ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವ್ಯಾಪ್ತಿಯಲ್ಲಿ ಕರ್ನಾಟಕ ದಿನಗೂಲಿ ಕ್ಷೇಮಾಭಿವೃದ್ಧಿ ಅಧಿನಿಯಮದಡಿ ಅಧಿಸೂಚಿತಗೊಂಡು ಕಾರ್ಯನಿರ್ವಹಿಸುತ್ತಿರುವ ದಿನಗೂಲಿ ನೌಕರರಿಗೆ 1 ನೇ ಏಪ್ರಿಲ್ 2023 ರಿಂದ ಜಾರಿಗೆ ಬರುವಂತೆ ಮೂಲ ವೇತನಕ್ಕೆ ಶೇಕಡ 17 ರಷ್ಟು ಮಧ್ಯಂತರ ಪರಿಹಾರವನ್ನು ಮಂಜೂರು ಮಾಡುವ ಬಗ್ಗೆ ಎಂದು ಉಲ್ಲೇಖಿಸಲಾಗಿದೆ.
ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಸೇವಾ ನಿಯಮಗಳು)ಯು ಮಧ್ಯಂತರ ಪರಿಹಾರವು ರಾಜ್ಯ ಸರ್ಕಾರಿ ನೌಕರರ ಮೂಲ ವೇತನದ ಭಾಗವಾಗಿರುವುದಿಲ್ಲವಾದ್ದರಿಂದ, ಕರ್ನಾಟಕ ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ಅಧಿನಿಯಮ 2012ರ ಕಲಂ 4 ರನ್ವಯ ಮಧ್ಯಂತರ ಪರಿಹಾರವನ್ನು ಮೂಲ ವೇತನವೆಂದು ಪರಿಗಣಿಸಿ, ದಿನಗೂಲಿ ನೌಕರರಿಗೆ ಶೇಕಡ 17 ರಷ್ಟು ಮಧಂತರ ಪರಿಹಾರವನ್ನು ಅವಕಾಶವಿರುವುದಿಲ್ಲವೆಂದು ಅಭಿಪ್ರಾಯವನ್ನು ನೀಡಿರುತ್ತದೆ ಎಂದು ಸ್ಪಷ್ಟನೆ ಹೇಳಿದೆ.
ಸ್ಪಷ್ಟನೆ ಏಕೆ?; ಜಗನ್ನಾಥ ಬಂಗೇರ, ಕಾರ್ಯಾಧ್ಯಕ್ಷರು, ಕರ್ನಾಟಕ ರಾಜ್ಯ ಸರ್ಕಾರಿ ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ಸಂಘ (ರಿ) ಇವರಿಗೆ ನಾಗರತ್ನ ವಿ. ಪಾಟಿಲ್, ಸರ್ಕಾರದ ಅಧೀನ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ, (ಸೇವಾ ನಿಯಮಗಳು-2). 2/9/2023ರಲ್ಲಿ ಪತ್ರವೊಂದನ್ನು ಬರೆದಿದ್ದರು.
ಅವರ ಮನವಿ ಪತ್ರವನ್ನು ಉಲ್ಲೇಖ ಮಾಡಿ, ಕರ್ನಾಟಕ ದಿನಗೂಲಿ ಕ್ಷೇಮಾಭಿವೃದ್ಧಿ ಅಧಿನಿಯಮ 2012ರಲ್ಲಿ ಅಧಿಸೂಚಿಸಲ್ಪಟ್ಟ ದಿನಗೂಲಿ ನೌಕರರಿಗೆ ಮಧ್ಯಂತರ ಪರಿಹಾರ ಸೌಲಭ್ಯವನ್ನು ವಿಸ್ತರಿಸುವ ಕುರಿತು ಎಂದು ಮಾಹಿತಿ ನೀಡಿದ್ದರು.
ಉಲ್ಲೇಖಿತ ಮನವಿಯಲ್ಲಿ ಕರ್ನಾಟಕ ದಿನಗೂಲಿ ಕ್ಷೇಮಾಭಿವೃದ್ಧಿ ಅಧಿನಿಯಮ 2012ರಲ್ಲಿ ಅಧಿಸೂಚಿಸಲ್ಪಟ್ಟ ಕ್ಷೇಮಾಭಿವೃದ್ಧಿ ದಿನಗೂಲಿ ನೌಕರರಿಗೂ ಸಹ ಸರ್ಕಾರಿ ನೌಕರರಿಗೆ ನೀಡಿರುವಂತೆ ಶೇ.17 ರಷ್ಟು ಮಧ್ಯಂತರ ಪರಿಹಾರ ಸೌಲಭ್ಯವನ್ನು ವಿಸ್ತರಿಸುವಂತೆ ಕೋರಿರುತ್ತೀರಿ.
ಸದರಿ ಪ್ರಸ್ತಾವನೆಗೆ ಆರ್ಥಿಕ ಇಲಾಖೆಯ ಅಭಿಪ್ರಾಯವನ್ನು ಪಡೆಯಲಾಗಿದ್ದು, ದಿನಗೂಲಿ ನೌಕರರಿಗೆ ಮಧ್ಯಂತರ ಪರಿಹಾರ ಸೌಲಭ್ಯವನ್ನು ವಿಸ್ತರಿಸಲು ನಿಯಮಗಳಲ್ಲಿ ಅವಕಾಶವಿಲ್ಲವೆಂದು ತಮಗೆ ತಿಳಿಸಲು ನಿರ್ದೇಶಿಸಲ್ಪಟ್ಟಿದ್ದೇನೆ ಎಂದು ಹೇಳಿದ್ದರು. ಈಗ ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆಯೂ ಈ ಕುರಿತು ಸ್ಪಷ್ಟನೆ ನೀಡಿದೆ.
ಮಾರ್ಚ್ 1ರಂದು 7ನೇ ವೇತನ ಆಯೋಗದ ಶಿಫಾರಸು ಜಾರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕದ ಸರ್ಕಾರಿ ನೌಕರರು ಅನಿರ್ಧಿಷ್ಟಾವಧಿ ಮುಷ್ಕರ ಆರಂಭಿಸಿದ್ದರು. ಆಗ ಅಂದಿನ ಮುಖ್ಯಮಂತ್ರಿ, ಹಣಕಾಸು ಸಚಿವರೂ ಆಗಿದ್ದ ಬಸವರಾಜ ಬೊಮ್ಮಾಯಿ ಸರ್ಕಾರಿ ನೌಕರರ ವೇತನವನ್ನು ಶೇ 17ರಷ್ಟು ಏರಿಕೆ ಮಾಡಿದ್ದರು.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಸರ್ಕಾರದ ಅಧೀನ ಕಾರ್ಯದರ್ಶಿ, ಆರ್ಥಿಕ ಇಲಾಖೆ (ಸೇವೆಗಳು-2) ಸರ್ಕಾರಿ ನೌಕರರ ವೇತನ ಶೇ 17ರಷ್ಟು ಹೆಚ್ಚಳದ ಬಗ್ಗೆ ಅಧಿಕೃತ ಆದೇಶ ಹೊರಡಿಸಿದ್ದರು. 2023ರ ಏಪ್ರಿಲ್ 1ರಿಂದಲೇ ಈ ಆದೇಶ ಜಾರಿಗೆ ಬರಲಿದೆ ಎಂದು ತಿಳಿಸಲಾಗಿತ್ತು.












Click it and Unblock the Notifications