ಕಲಬುರಗಿ, ಬೀದರ್‌ನಿಂದ ಬೆಂಗಳೂರಿಗೆ ಹೊಸ ರೈಲಿಗಾಗಿ ಪತ್ರ
ಕಲಬುರಗಿ, ಮೇ 26; ಕಲಬುರಗಿ-ಬೆಂಗಳೂರು ನಡುವಿನ ರೈಲಿನಲ್ಲಿ ಪ್ರಯಾಣಿಕರ ದಟ್ಟಣೆ ಉಂಟಾಗಿದ್ದ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಕಲಬುರಗಿ-ಬೆಂಗಳೂರು ನಡುವೆ ಹೆಚ್ಚುವರಿ ರೈಲು ಓಡಿಸಬೇಕು ಎಂದು ಅಭಿಯಾನವೂ ಟ್ವಿಟರ್‌ನಲ್ಲಿ ಆರಂಭವಾಗಿತ್ತು. ಈ ಬೇಡಿಕೆಗೆ ಈಗ ರಾಜಕಾರಣಿಗಳು ಧ್ವನಿ ಗೂಡಿಸಿದ್ದಾರೆ.
ಎಐಸಿಸಿ ಅಧ್ಯಕ್ಷ ಮತ್ತು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ಗೆ ಈ ಕುರಿತು ಪತ್ರವನ್ನು ಬರೆದಿದ್ದಾರೆ. ಕಲಬುರಗಿ ಮೂಲಕ ಖರ್ಗೆ ಅವರು ಕಲಬುರಗಿ-ಬೆಂಗಳೂರು ನಡುವೆ 2 ಮತ್ತು ಬೀದರ್-ಬೆಂಗಳೂರು ನಡುವೆ 1 ಹೊಸ ರೈಲನ್ನು ಆರಂಭಿಸಬೇಕು ಎಂದು ಮನವಿ ಮಾಡಿದ್ದಾರೆ. ಹೊಸ ರೈಲು ಏಕೆ ಬೇಕು? ಎಂದು ಕಾರಣಗಳನ್ನು ಸ ಅವರು ನೀಡಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ತಮ್ಮ ಪತ್ರದಲ್ಲಿ ಕಲಬುರಗಿ ಮತ್ತು ಬೀದರ್‌ನಿಂದ ಬೆಂಗಳೂರು ನಗರಕ್ಕೆ ಸಂಚಾರ ನಡೆಸುವ ಜನರ ಸಂಖ್ಯೆಯ ಕುರಿತು ಸಚಿವರ ಗಮನ ಸೆಳೆದಿದ್ದಾರೆ. ಕಲಬುರಗಿಯಿಂದ ಬೆಂಗಳೂರಿಗೆ ಪ್ರತಿದಿನ ಸುಮಾರು 6 ಸಾವಿರ ಜನರು ಪ್ರಯಾಣಿಸುತ್ತಾರೆ. ಇವರಲ್ಲಿ ಬಹುತೇಕರು ವಲಸೆ ಕೂಲಿ ಕಾರ್ಮಿಕರು ಎಂದು ಹೇಳಿದ್ದಾರೆ.
ಮೀಸಲು ಬೋಗಿಯಲ್ಲಿ ಸೀಟು ಕಾಯ್ದಿರಿಸಿ ಸಂಚಾರ ನಡೆಸಲು ಅವರು ಆರ್ಥಿಕವಾಗಿ ಶಕ್ತಿ ಹೊಂದಿಲ್ಲ. ಆದ್ದರಿಂದ ಸಾಮಾನ್ಯ ದರ್ಜೆಯ ಬೋಗಿಯಲ್ಲಿ ಪ್ರಯಾಣ ಮಾಡುತ್ತಾರೆ. ಪ್ರಯಾಣಿಕರ ದಟ್ಟಣೆ ಉಂಟಾಗಲು ಇದು ಸಹ ಪ್ರಮುಖ ಕಾರಣವಾಗಿದೆ. ಜನರು ಸಾಮಾನ್ಯ ಬೋಗಿಯಲ್ಲಿ ಮಲಗಿಕೊಂಡು ಸಂಚಾರ ನಡೆಸುತ್ತಾರೆ, ಈ ಕುರಿತ ಚಿತ್ರಗಳು ವೈರಲ್ ಆಗಿವೆ ಎಂದು ಸಚಿವರ ಗಮನ ಸೆಳೆದಿದ್ದಾರೆ.

ಎಷ್ಟು ರೈಲುಗಳ ಸಂಚಾರ?; ಕಲಬುರಗಿ ಮತ್ತು ಬೆಂಗಳೂರು ನಡುವೆ 2 ಹೊಸ ರೈಲು ಆರಂಭಿಸಬೇಕು. ಕೋವಿಡ್ ಸಂದರ್ಭದಲ್ಲಿ ಕಡಿತಗೊಳಿಸಿದ ರೈಲುಗಳನ್ನು ಮತ್ತೆ ಆರಂಭಿಸಬೇಕು. ಕೆಲವು ರೈಲುಗಳಿಗೆ ಹೆಚ್ಚುವರಿ ಬೋಗಿ ಅಳವಡಿಕೆ ಮಾಡಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ರೈಲ್ವೆ ಸಚಿವರಿಗೆ ಪತ್ರದಲ್ಲಿ ವಿವರಣೆ ನೀಡಿದ್ದಾರೆ.
ಸದ್ಯ ಕಲಬುರಗಿ ಬೆಂಗಳೂರು ನಡುವೆ ಪ್ರತಿದಿನ ಉದ್ಯಾನ ಎಕ್ಸ್‌ಪ್ರೆಸ್, ಕರ್ನಾಟಕ ಎಕ್ಸ್‌ಪ್ರೆಸ್, ಬಸವ ಎಕ್ಸ್‌ಪ್ರೆಸ್, ಸೋಲಾಪುರ-ಹಾಸನ ಎಕ್ಸ್‌ಪ್ರೆಸ್ ಮತ್ತು ಕೊಯಮತ್ತೂರು ಎಕ್ಸ್‌ಪ್ರೆಸ್ ಎಂಬ 5 ರೈಲುಗಳು ಸಂಚಾರ ನಡೆಸುತ್ತಿವೆ ಎಂದು ಖರ್ಗೆ ವಿವರಣೆ ಕೊಟ್ಟಿದ್ದಾರೆ.
ವಾರಕ್ಕೊಮ್ಮೆ ನಾಗರಕೋಯಿಲ್ ಎಕ್ಸ್‌ಪ್ರೆಸ್, ತೂತುಕುಡಿ ವಿವೇಕ ಎಕ್ಸ್‌ಪ್ರೆಸ್, ತಿರುವನಂತಪುರ ಸೆಂಟ್ರಲ್ ಎಕ್ಸ್‌ಪ್ರೆಸ್, ಎಂಜಿಆರ್ ಚೆನ್ನೈ ಎಕ್ಸ್‌ಪ್ರೆಸ್, ತಿರುವನಂತಪುರ ಸೆಂಟ್ರಲ್ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್, ಯಶವಂತಪುರ ಸುವಿಧಾ ಎಕ್ಸ್‌ಪ್ರೆಸ್ ರೈಲು ಓಡುತ್ತಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಕೋವಿಡ್ ಪರಿಸ್ಥಿತಿ; ಕೋವಿಡ್ ಪರಿಸ್ಥಿತಿಯಲ್ಲಿ ಎಲ್ಲಾ ರೈಲುಗಳ ಸಂಚಾರ ರದ್ದುಗೊಳಿಸಲಾಗಿತ್ತು. ಈಗ ಪರಿಸ್ಥಿತಿ ಸುಧಾರಿಸಿದೆ. ಎಲ್ಲಾ ರೈಲು ಪುನಃ ಆರಂಭಿಸಬಹುದು. ಸಂಚಾರ ನಡೆಸುವ ರೈಲಿಗೆ ಹೆಚ್ಚುವರಿ ಬೋಗಿ ಅಳವಡಿಕೆ ಮಾಡಬಹುದು ಎಂದು ಖರ್ಗೆ ಸಚಿವರಿಗೆ ಸಲಹೆ ನೀಡಿದ್ದಾರೆ. ನೂತನ ರೈಲುಗಳ ಸಂಚಾರಕ್ಕೆ ತಕ್ಷಣವೇ ಗಮನ ಹರಿಸಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.
ಕಲಬುರಗಿ ಮಾತ್ರವಲ್ಲ ಬೀದರ್-ಬೆಂಗಳೂರು ನಡುವೆ ಸಹ ಹೆಚ್ಚಿನ ಜನರು ಸಂಚಾರ ನಡೆಸುತ್ತಾರೆ. ಉಭಯ ನಗರಗಳ ನಡುವೆ ಸಂಚಾರ ನಡೆಸುವ ರೈಲುಗಳಲ್ಲಿ ಮೀಸಲಿರುವ ಸೀಟುಗಳ ಸಂಖ್ಯೆ, ಸಂಚಾರ ನಡೆಸುವ ಜನರ ಸಂಖ್ಯೆ ನಡುವೆ ಭಾರೀ ಅಂತರವಿದೆ. ಬೀದರ್-ಬೆಂಗಳೂರು ನಡುವೆ 1 ಮತ್ತು ಕಲಬುರಗಿ-ಬೆಂಗಳೂರು ನಡುವೆ 2 ಹೊಸ ರೈಲು ತಕ್ಷಣ ಆರಂಭಿಸುವ ಅವಶ್ಯಕತೆ ಇದೆ ಎಂದು ಖರ್ಗೆ ಪತ್ರದಲ್ಲಿ ವಿವರಣೆ ನೀಡಿದ್ದಾರೆ.












Click it and Unblock the Notifications