ನ. 4ಕ್ಕೆ ಕರ್ನಾಟಕ-ಮಹಾರಾಷ್ಟ್ರ ರಾಜ್ಯಪಾಲರ ಸಭೆ, ಚರ್ಚೆಯ ವಿಷಯಗಳು
ಕಲಬುರಗಿ, ನವೆಂಬರ್ 03; ಮಹಾರಾಷ್ಟ್ರದ ಕೊಲ್ಹಾಪೂರದಲ್ಲಿ ಮಹಾರಾಷ್ಟ್ರ-ಕರ್ನಾಟಕದ ರಾಜ್ಯಪಾಲರು ಭೇಟಿಯಾಗಲಿದ್ದಾರೆ. ನವೆಂಬರ್ 4ರಂದು ನಡೆಯುವ ಈ ಸಭೆಯಲ್ಲಿ ವಿವಿಧ ವಿಚಾರಗಳ ಕುರಿತು ಚರ್ಚೆ ನಡೆಯಲಿದೆ.
ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಮಹಾರಾಷ್ಟ್ರ-ಕರ್ನಾಟಕದ ರಾಜ್ಯಪಾಲರು ಗಡಿ ಭಾಗದಲ್ಲಿನ ಮೂಲಭೂತ ಸೌಕರ್ಯಗಳನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ಸಭೆ ಕರೆದಿದ್ದಾರೆ. ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದದ ಹಿನ್ನಲೆಯಲ್ಲಿ ಸಭೆ ಕುತೂಹಲಕ್ಕೆ ಕಾರಣವಾಗಿದೆ.
ಈ ಸಭೆಯಲ್ಲಿ ಕಲಬುರಗಿ ಜಿಲ್ಲೆಯಿಂದ ಮಂಡಿಸಬಹುದಾದ ವಿಷಯಗಳ ಕುರಿತು ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಬುಧವಾರ ತಮ್ಮ ಕಚೇರಿಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಪೂರ್ವಭಾವಿಯಾಗಿ ಸಭೆ ನಡೆಸಿದರು, ವಿವಿಧ ವಿಷಯಗಳ ಕುರಿತು ಚರ್ಚಿಸಿದರು.

ಯಾವ ವಿಚಾರಗಳು?; ಗಡಿ ಭಾಗದಲ್ಲಿ ರಸ್ತೆ ಸಂಪರ್ಕ, ಬಸ್ ಓಡಾಟ, ಭೂಮಿ ಖಾತೆ ಸಮಸ್ಯೆ, ಗಡಿ ಭಾಗದಲ್ಲಿ ಶಾಲಾ ಮಕ್ಕಳ ಕಲಿಕೆಗೆ ಸಂಬಂಧಿಸಿದ ವಿಷಯಗಳು, ಅಕ್ರಮ ಅಕ್ಕಿ, ಮದ್ಯ ಸಾಕಾಣಿಕೆ, ಅಪರಾಧ ಪ್ರಕರಣಗಳು ಸೇರಿದಂತೆ ವಿವಿಧ ವಿಷಯಗಳು ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಕಲಬುರಗಿ ಜಿಲ್ಲೆಯಲ್ಲಿನ ಪಡಿತರ ಅಂಗಡಿಯಲ್ಲಿ ವಿತರಿಸಲಾಗುವ ಅಕ್ಕಿ ಮಹಾರಾಷ್ಟ್ರದ ಉಮರ್ಗಾ ರೈಸ್ ಮಿಲ್‍ಗಳಲ್ಲಿ ಅಕ್ರಮವಾಗಿ ಮಾರಾಟವಾಗುತ್ತಿದ್ದು, ಇದರ ನಿಯಂತ್ರಣಕ್ಕೆ ಸಭೆಯಲ್ಲಿ ವಿಷಯ ಪ್ರಸ್ತಾಪಿಸಲಾಗುತ್ತದೆ.
ಈ ಕುರಿತು ಕಲಬುರಗಿ ಜಿಲ್ಲೆಯಲ್ಲಿ ದಾಖಲಾದ ಪ್ರಕರಣಗಳು ಮತ್ತು ಅಕ್ರಮ ಸಾಗಾಣಿಕ ಪ್ರಮಾಣದ ಕುರಿತು ಮಾಹಿತಿ ನೀಡುವಂತೆ ಆಹಾರ ಇಲಾಖೆಯ ಉಪನಿರ್ದೇಶಕ ಶಾಂತಗೌಡ ಗುಣಕಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.

ಗಡಿಯಲ್ಲಿರುವ ಮರಾಠಿ ವ್ಯಾಸಂಗ ಮಾಡುವ ಮಕ್ಕಳು ಉನ್ನತ ಶಿಕ್ಷಣಕ್ಕೆ ಮಹಾರಾಷ್ಟ್ರದ ಗಡಿಯಲ್ಲಿನ ಕಾಲೇಜುಗಳಿಗೆ ಪ್ರವೇಶಾತಿ ಪಡೆದು ದಿನನಿತ್ಯ ಓಡಾಡುತ್ತಿದಲ್ಲಿ ಅವರಿಗೆ ಬಸ್ ಪಾಸ್ ಸೌಕರ್ಯ ಕಲ್ಪಿಸುವ ಕುರಿತು ಸಭೆಯಲ್ಲಿ ವಿಷಯ ಪ್ರಸ್ತಾಪಿಸಲು ತೀರ್ಮಾನಿಸಲಾಯಿತು.
ಗಡಿಯಲ್ಲಿ ಸಾರ್ವಜನಿಕರ ಪ್ರತಿದಿನದ ಓಡಾಟಕ್ಕೆ ಸಾರಿಗೆ ಸಂಪರ್ಕ ಉತ್ತಮಗೊಳಿಸಲು ರಾಜ್ಯಪಾಲರ ಸಭೆಯಲ್ಲಿ ವಿಷಯ ಮಂಡಿಸಲು ನಿರ್ಧರಿಸಲಾಯಿತು. ಅಲ್ಲದೆ ಮಹಾರಾಷ್ಟ್ರದ ಗಡಿಯಲ್ಲಿ ಕನ್ನಡ ವ್ಯಾಸಂಗ ಮಾಡುವ ಮಕ್ಕಳಿಗೆ ಮೂಲಸೌಕರ್ಯಗಳು ಒದಗಿಸಲಾಗಿದಿಯೇ ಎಂಬುದರ ಕುರಿತು ಮಾಹಿತಿ ಪಡೆಯುವಂತೆ ಜಿಲ್ಲಾಧಿಕಾರಿಗಳು ನಿರ್ದೇಶಿಸಿದರು.
ಭಕ್ತರ ಸಂಚಾರ; ಅಫಜಲಪೂರ ತಾಲೂಕಿನ ಗಾಣಗಾಪೂರಕ್ಕೆ ನೆರೆಯ ಮಹಾರಾಷ್ಟ್ರದ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಕಾರಣ ಗಡಿ ಭಾಗದಲ್ಲಿ ರಸ್ತೆ, ಹೋಟೆಲ್, ವಸತಿ ಗೃಹ, ಕುಡಿಯುವ ನೀರು, ಶೌಚಾಲಯ ಇನ್ನಿತರ ಮೂಲಸೌಕರ್ಯಗಳನ್ನು ಅಲ್ಲಿನ ಸರ್ಕಾರದಿಂದ ಮಾರ್ಗ ಮಧ್ಯದಲ್ಲಿ ಕಲ್ಪಿಸುವುದು, ಕಾರ್ಮಿಕರ ವಲಸೆಗೆ ಟ್ರಾನ್ಸಿಟ್ ಪಾಯಿಂಟ್ ಸ್ಥಾಪನೆ ಸೇರಿದಂತೆ ಪ್ರವಾಸೋದ್ಯಮ ವಿಷಯಗಳು ಕುರಿತು ಸಭೆಯಲ್ಲಿ ಚರ್ಚಿಸಲಾಗುತ್ತದೆ.
ಉಮರ್ಗಾ ಮಹಾಗಾಂವ ರಾಜ್ಯ ಹೆದ್ದಾರಿ-32 ರಲ್ಲಿ ಉಮರ್ಗಾ ತಾಲೂಕಿನಲ್ಲಿ ರಸ್ತೆ ಅಗಲೀಕರಣ, ಶ್ರೀಚಂದ ರಾಜ್ಯ ಹೆದ್ದಾರಿಯ ದುಧನಿ ಗ್ರಾಮದಲ್ಲಿ 4 ಕಿ. ಮೀ. ರಸ್ತೆ ಸಂಪರ್ಕ ಕಲ್ಪಿಸುವ ಬಗ್ಗೆ ಚರ್ಚೆ ನಡೆಯಲಿದೆ.
ಮೈಂದರ್ಗಿ-ಮಾದನಹಿಪ್ಪರಗಾ ರಸ್ತೆಗೆ ಸಂಪರ್ಕ ಕಲ್ಪಿಸುವ ಅಕ್ಕಲಕೋಟ ತಾಲೂಕಿನಲ್ಲಿ 3.5 ಕಿ. ಮೀ. ರಸ್ತೆ, ಸ್ಟೇಷನ್ ಗಾಣಗಾಪೂರ-ರೇವೂರ-ಅರ್ಜುಣಗಿ ಗ್ರಾಮಕ್ಕೆ ರಸ್ತೆ ಸಂಪರ್ಕ ಕಲ್ಪಿಸುವ ದುಧನಿ ಗ್ರಾಮದ ಗಡಿಯಲ್ಲಿ 2 ಕಿ. ಮೀ. ರಸ್ತೆ ಸುಧಾರಣೆ ಮಾಡಬೇಕಿದೆ ಎಂದು ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.
ಮಳೆಗಾಲ ಮತ್ತು ಪ್ರವಾಹ ಪರಿಸ್ಥಿತಿ ಸಂದರ್ಭದಲ್ಲಿ ಜಿಲ್ಲೆಯ ಅಫಜಲಪೂರ ತಾಲೂಕಿನ ಸೊನ್ನ ಬ್ಯಾರೇಜಿಗೆ ಅಪಾರ ಪ್ರಮಾಣದ ನೀರು ಮಹಾರಾಷ್ಟ್ರದಿಂದ ಹರಿವು ಬಿಡಲಾಗುತ್ತದೆ. ಸಂಭವನೀಯ ಮಳೆ ಲೆಕ್ಕಚಾರ ಮಾಡಿ ಇದನ್ನು 7 ದಿನಗಳ ಮುಂಚಿತವಾಗಿ ಇಲ್ಲಿನ ಅಧಿಕಾರಿಗಳಿಗೆ ಮಾಹಿತಿ ನೀಡಿದಲ್ಲಿ ತಕ್ಕಮಟ್ಟಗೆ ಇಲ್ಲಿ ಪ್ರವಾಹ ಪರಿಸ್ಥಿತಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬಹುದು ಎಂದು ನೀರಾವರಿ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.












Click it and Unblock the Notifications