ಸಾಲ ವಸೂಲಾತಿಗೆ ಗೃಹಲಕ್ಷ್ಮಿ ಹಣ; ಖಡಕ್ ಎಚ್ಚರಿಕೆ ಕೊಟ್ಟ ಸಚಿವರು
ಕಲಬುರಗಿ, ಡಿಸೆಂಬರ್ 21; ಕರ್ನಾಟಕ ಕಾಂಗ್ರೆಸ್ ಸರ್ಕಾರದ ಮಹತ್ವದ ಯೋಜನೆ 'ಗೃಹಲಕ್ಷ್ಮಿ'. ರಾಜ್ಯದ ಜನರಿಗೆ ಕಾಂಗ್ರೆಸ್ ನೀಡಿದ್ದ 5 ಗ್ಯಾರಂಟಿಗಳಲ್ಲಿ ಇದು ಸಹ ಒಂದು. ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ನೆರವಾಗುವ ಯೋಜನೆ ಹಣ ಬಳಕೆ ಬಗ್ಗೆ ಸಚಿವರು ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.
ಬುಧವಾರ ಕಲಬುರಗಿಯ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕೆಡಿಪಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್, ಐ.ಟಿ-ಬಿ.ಟಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಯೋಜನೆ ಹಣ ಸಾಲ ವಸೂಲಾತಿಗೆ ಬಳಕೆ ಆಗುವ ವಿಚಾರ ಪ್ರಸ್ತಾಪಿಸಿದರು.

ಸಚಿವರು ಮಾತನಾಡಿ, "ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗೃಹ ಲಕ್ಷ್ಮಿ ಯೋಜನೆಯಡಿ ಮಾಸಿಕ ನೀಡಲಾಗುವ 2,000 ರೂ. ಹಣ ಫಲಾನುಭವಿಗಳಿಗೆ ತಲುಪುತ್ತಿಲ್ಲ. ಕಾರಣ ಬ್ಯಾಂಕ್ ಅಧಿಕಾರಿಗಳು ಈ ಹಣವನ್ನು ಫಲಾನುಭವಿ ಸಾಲದ ವಸೂಲಾತಿಗೆ ಬಳಕೆ ಮಾಡುತ್ತಿರುವ ಕ್ರಮ ಸರಿಯಲ್ಲ" ಎಂದು ಅಸಮಾಧಾನ ವ್ಯಕ್ತಪಡಿಸಿದರು.
"ಚಿತ್ತಾಪೂರ ತಾಲೂಕಿನ ತರಕಸಪೇಟೆ ಗ್ರಾಮಕ್ಕೆ ಭೇಟಿ ನೀಡಿದಾಗ, ಮಹಿಳೆಯೊಬ್ಬಳು ಯೋಜನೆಯಡಿ ಬಂದ 2,000 ರೂ. ಹಣವನ್ನು ನಾಲವಾರದ ಕೃಷ್ಣಾ ಗ್ರಾಮೀಣ ಬ್ಯಾಂಕ್ ಮ್ಯಾನೇಜರ್ ಗಿರೀಶ್ ಅವರು ಸಾಲ ವಸೂಲಾತಿಗೆ ಬಳಕೆ ಮಾಡಿಕೊಂಡಿದ್ದಾರೆ" ಎಂದು ಅಳಲು ತೋಡಿಕೊಂಡಿದ್ದಾರೆ ಎಂದರು.
ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ಗ್ಯಾರಂಟಿ ಯೋಜನೆಯಡಿ ಇದೂವರೆಗೆ ಪಾವತಿ ಮಾಡಿಕೊಂಡ ಹಣ ವಾಪಸ್ ಫಲಾನುಭವಿಗಳ ಖಾತೆಗೆ ವರ್ಗಾಯಿಸಲು ಕ್ರಮವಹಿಸಿ ಎಂದು ಲೀಡ್ ಬ್ಯಾಂಕ್ ಮ್ಯಾನೇಜರ್ ಸದಾಶಿವ ರಾತ್ರಿಕರ್ ಅವರಿಗೆ ಖಡಕ್ ಸೂಚನೆ ನೀಡಿದರು.
ಸಭೆಯಲ್ಲಿ ಮಾತನಾಡಿದ ಎಂಎಲ್‌ಸಿ ತಿಪ್ಪಣಪ್ಪ ಕಮಕನೂರ, "ಬರೀ ಗ್ಯಾರಂಟಿ ಹಣ ಅಷ್ಟೆ ಅಲ್ಲ. ಸರ್ಕಾರದದಿಂದ ನೀಡಲಾಗುವ ವಿವಿಧ ಪರಿಹಾರ, ರೈತರ ಆತ್ಮಹತ್ಯೆ ಪರಿಹಾರದಂತಹ ಪ್ರಕರಣದಲ್ಲಿಯೂ ಬ್ಯಾಂಕ್ ಅಧಿಕಾರಿಗಳು ಇದೇ ರೀತಿ ಸಾಲ ವಸೂಲಾತಿ ಮಾಡುತ್ತಿರುವುದು ದುರಾದೃಷ್ಠಕರ" ಎಂದರು.
"ಇದಕ್ಕೆ ಕಡಿವಾಣ ಹಾಕಬೇಕು. ಕೇವಲ ತರಕಸಪೇಟೆ ಮಾತ್ರವಲ್ಲ ಹೆಬ್ಬಾಳ ಹಾಗೂ ಕಾಳಗಿಯಲ್ಲಿಯೂ ಕೂಡಾ ಈ ಮಾದರಿ ಪ್ರಕರಣ ನಡೆದಿವೆ. ಬ್ಯಾಂಕಿನವರು ಬಡವರು, ದಲಿತರು ಬ್ಯಾಂಕ್‌ಗೆ ಬಂದರೆ ಅಮಾನವೀಯವಾಗಿ ವರ್ತಿಸುತ್ತಾರೆ. ಈ ಪರಿಸ್ಥಿತಿ ಬದಲಾಗಬೇಕು" ಎಂದು ಆಗ್ರಹಿಸಿದರು.
ಶಾಸಕ ಬಿ. ಆರ್. ಪಾಟೀಲ ಮಾತನಾಡಿ, "ಸರ್ಕಾರದ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಲೀಡ್ ಬ್ಯಾಂಕ್ ಮ್ಯಾನೇಜರ್ ಅವರ ಸಭೆ ಕರೆದು ಸರ್ಕಾರ ಆದೇಶ ಮಾಡಿ ಈ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಬೇಕು" ಎಂದು ಸಲಹೆ ನೀಡಿದರು.
ಜೈಲಿನಲ್ಲಿ ರಾಜಾತಿಥ್ಯ; ಇದೇ ಸಭೆಯಲ್ಲಿ ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ವಿವಿಧ ಪ್ರಕರಣದಲ್ಲಿ ಬಂಧನಕ್ಕೊಳಗಾದವರಿಗೆ ರಾಜಾತಿಥ್ಯ ನೀಡಲಾಗುತ್ತಿದೆ ಎಂಬ ಅರೋಪ ಕೇಳಿಬರುತ್ತಿದ್ದು, ಈ ಕುರಿತು ಗುರುವಾರದೊಳಗೆ ಸಮಗ್ರ ವರದಿ ಸಲ್ಲಿಸವಂತೆ ಕಲಬುರಗಿ ನಗರ ಪೊಲೀಸ್ ಆಯುಕ್ತ ಆರ್. ಚೇತನ ಕುಮಾರ ಮತ್ತು ಎಸ್‌ಪಿ ಅಡ್ಡೂರು ಶ್ರೀನುವಾಸಲುಗೆ ಸಚಿವ ಪ್ರಿಯಾಂಕ್ ಖರ್ಗೆ ಸೂಚನೆ ಕೊಟ್ಟರು.
ಪ್ರಗತಿ ಪರಿಶೀಲನಾ ಸಭೆ ಅರಂಭವಾಗುತ್ತಿದ್ದಂತೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಕಲಬುರಗಿ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಪಿ. ರಂಗನಾಥ ಅವರನ್ನು ಜೈಲಿನಲ್ಲಿ ಏನು ನಡೆಯುತ್ತಿದೆ?. ಅಕ್ರಮವಾಗಿ ಗುಟ್ಕಾ ಪೂರೈಸಲಾಗುತ್ತಿದೆಯಂತೆ ಎಂದು ಪ್ರಶ್ನಿಸಿದರು. ಇದೆಲ್ಲದಕ್ಕೂ ಕಡಿವಾಣ ಹಾಕಬೇಕು. ಯಾವುದೇ ಅಕ್ರಮ ಚಟುಚಟಿಕೆಗೆ ಜೈಲು ಅಡ್ಡವಾಗಬಾರದು. ಅಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ತರಿಸಿ ಎಂದು ಸೂಚಿಸಿದರು.












Click it and Unblock the Notifications