ಕಲಬುರಗಿ ಪ್ರವೇಶಿಸದಂತೆ ಚಕ್ರವರ್ತಿ ಸೂಲಿಬೆಲೆಗೆ ನಿರ್ಬಂಧ!
ಕಲಬುರಗಿ, ಫೆಬ್ರವರಿ 29; ಲೇಖಕ, ಭಾಷಣಕಾರ, ನಮೋ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆಗೆ ಕಲಬುರಗಿ ಪ್ರವೇಶಿಸದಂತೆ ನಿರ್ಬಂಧಿಸಲಾಗಿದೆ. ಜಿಲ್ಲೆಯ ಯಾವುದೇ ತಾಲೂಕಿಗೆ ಭೇಟಿ ನೀಡುವುದನ್ನು ನಿರ್ಬಂಧಿಸಿ ಉಪ ವಿಭಾಗಾಧಿಕಾರಿ ಹಾಗೂ ಉಪ ವಿಭಾಗದ ದಂಡಾಧಿಕಾರಿ, ಕಲಬುರಗಿ ಉಪ ವಿಭಾಗ ಕಲಬುರಗಿ ಇವರು ಆದೇಶಿಸಿದ್ದಾರೆ.
ಉಪ ವಿಭಾಗಾಧಿಕಾರಿ ಹಾಗೂ ಉಪ ವಿಭಾಗದ ದಂಡಾಧಿಕಾರಿಗಳು ಕಲಬುರಗಿ ಉಪ-ವಿಭಾಗ ಕಲಬುರಗಿ ದಿನಾಂಕ 29/02/2024ರಂದು ಚಿತ್ತಾಪುರ ಪಟ್ಟಣದಲ್ಲಿ ಕೈಗೊಳ್ಳಲಿರುವ ನಮೋ ಬ್ರಿಗೇಡ್ ಕಾರ್ಯಕ್ರಮಕ್ಕೆ ಅನುಮತಿ ನೀಡದಂತೆ ಹಾಗೂ ಚಕ್ರವರ್ತಿ ಸೂಲಿಬೆಲೆಯವರಿಗೆ ಕಲಬುರಗಿ ಜಿಲ್ಲೆಯಲ್ಲಿ ಪ್ರವೇಶ ಮಾಡದಂತೆ ನಿಷೇಧಿಸುವಂತೆ ಆದೇಶ ಹೊರಡಿಸುವ ಕುರಿತು ಎಂಬ ವಿಷಯವನ್ನು ಆದೇಶ ಒಳಗೊಂಡಿದೆ.

ಪೊಲೀಸ್ ಅಧೀಕ್ಷಕರು ಕಲಬುರಗಿ ಅವರ ಪತ್ರ ಸಂಖ್ಯೆ2/ ನ.ಮೋ.ಬ್ರಿ./ಎಸ್.ಬಿ/ ಕೆಎಲ್ ಬಿ/2024 ದಿನಾಂಕ 28/02/2024 ಉಲ್ಲೇಖಿಸಿ ಈ ಆದೇಶ ಹೊರಡಿಸಲಾಗಿದೆ. ಗುರುವಾರ ಚಿತ್ತಾಪುರ ಪಟ್ಟಣದಲ್ಲಿ ನಮೋ ಬ್ರಿಗೇಡ್ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.
ಆದೇಶದ ವಿವರಗಳು: ಪೊಲೀಸ್ ಅಧೀಕ್ಷಕರು ಕಲಬುರಗಿ ಅವರು ಚಿತ್ತಾಪುರ ತಾಲೂಕಾ ಬಿಜೆಪಿ ಪಕ್ಷದ ಅಧ್ಯಕ್ಷ ಶ್ರೀ ನೀಲಕಂಠರಾವ ಪಾಟೀಲ್ ಅವರ ನೇತೃತ್ವದಲ್ಲಿ ದಿನಾಂಕ 29/02/2024ರಂದು ಚಿತ್ತಾಪುರ ಪಟ್ಟಣದ ಬಾಪುರಾವ ಕಲ್ಯಾಣ ಮಂಟಪದಲ್ಲಿ ನಮೋ ಬ್ರಿಗೇಡ್ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮದಲ್ಲಿ ನಮೋ ಬ್ರಿಗೇಡ್‌ನ ಮುಖಂಡ ಶ್ರೀ ಚಕ್ರವರ್ತಿ ಸೂಲಿಬೆಲೆ ಅವರು ಭಾಗವಹಿಸಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಲಿರುವ ಬಗ್ಗೆ ಸ್ಥಳೀಯ ಮೂಲಗಳಿಂದ ಮಾಹಿತಿ ತಿಳಿದು ಬಂದಿರುತ್ತದೆಂದು ಎಂದು ತಿಳಿಸಿದ್ದಾರೆ.
ಸದರಿ ಕಾರ್ಯಕ್ರಮದ ಅತಿಥಿಗಳಾದ ಚಕ್ರವರ್ತಿ ಸೂಲಿಬೆಲೆ ಅವರು ನಮೋ ಬ್ರಿಗೇಡ್ ವತಿಯಿಂದ ಹಮ್ಮಿಕೊಂಡ ಕಾರ್ಯಕ್ರಮಗಳಲ್ಲಿ ವಿವಿಧ ಕಡೆಗಳಲ್ಲಿ ಕಾಂಗ್ರೆಸ್ ಪಕ್ಷದ ನಾಯಕರಿಗೆ ಆಕ್ಷೇಪಾರ್ಹ ಮತ್ತು ಅ ಸಂಸದೀಯ ಪದಗಳನ್ನು ಬಳಸಿರುವುದು ಹಾಗೂ ಅವಾಚ್ಯ ಶಬ್ದಗಳನ್ನು ಬಳಸಿ ಭಾಷಣ ಮಾಡುವುದು ಜನರಿಗೆ ಸುಳ್ಳು ಮಾಹಿತಿಗಳನ್ನು ನೀಡಿ ಅವರಿಗೆ ದಾರಿ ತಪ್ಪಿಸುವ ಕೆಲಸ ಮಾಡುವುದು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯರ ಬಗ್ಗೆ, ಅವಹೇಳನಕಾರಿಯಾಗಿ ಮಾತನಾಡಿರುವುದಕ್ಕೆ ಇವರ ವಿರುದ್ಧ ಈಗಾಗಲೇ ಹಲವು ಪ್ರಕರಣಗಳು ದಾಖಲಾಗಿರುತ್ತವೆ. ಇವರು ನಿರ್ದಿಷ್ಟವಾದ ಒಂದು ಕೋಮಿನ ಬಗ್ಗೆ ಪ್ರಚೋದನಕಾರಿ ಭಾಷಣ ಮಾಡುವ ಮನೋಭಾವನೆವುಳ್ಳವರಾಗಿರುತ್ತಾರೆ ಎಂದು ತಿಳಿದು ಬಂದಿರುತ್ತದೆ ಎಂದು ಹೇಳಿದ್ದಾರೆ.
ಸಾರ್ವಜನಿಕ ಹಿತದೃಷ್ಠಿಯಿಂದ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ದಿಶೆಯಲ್ಲಿ ದಿನಾಂಕ 29/02/2024ರಂದು ಚಿತ್ತಾಪೂರ ಪಟ್ಟಣದ ಬಾವುರಾವ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಪಕ್ಷದವರು ಹಮ್ಮಿಕೊಂಡ ನಮೋ ಬ್ರಿಗೇಡ್ ಕಾರ್ಯಕ್ರಮಕ್ಕೆ ಅನುಮತಿ ನೀಡದಂತೆ ಹಾಗೂ ಶ್ರೀ ಚಕ್ರವರ್ತಿ ಸೂಲಿಬೆಲೆಯವರಿಗೆ ಕಲಬುರಗಿ ಜಿಲ್ಲೆ ಪ್ರವೇಶ ಮಾಡದಂತೆ ನಿಷೇಧಿಸುವಂತೆ ಆದೇಶ ಹೊರಡಿಸಲು ಕೋರಿರುತ್ತಾರೆ.
ಕಲಬುರಗಿ ಜಿಲ್ಲೆಯ ಕಲಬುರಗಿ ಉಪ ವಿಭಾಗದ ವ್ಯಾಪ್ತಿಯಲ್ಲಿ ಬರುವ ಕಲಬುರಗಿ, ಕಮಲಾಪೂರ, ಜೇವರ್ಗಿ, ಯಡ್ರಾಮಿ, ಅಫಜಲಪುರ, ಆಳಂದ ಹಾಗೂ ಕಾಳಗಿ ತಾಲ್ಲೂಕುಗಳಲ್ಲಿ ಶಾಂತಿ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಿಕೊಂಡು ಬರಲು ದಿನಾಂಕ 28/02/2024ರ ರಾತ್ರಿ 11 ಗಂಟೆಯಿಂದ ದಿನಾಂಕ 04/03/2024ರ ಮಧ್ಯರಾತ್ರಿ 12ರ ವರೆಗೆ ಶ್ರೀ ಚಕ್ರವರ್ತಿ ಸೂಲಿಬೆಲೆ ಅವರಿಗೆ ಕಲಬುರಗಿ ಜಿಲ್ಲೆಯ ಕಲಬುರಗಿ ಉಪ ವಿಭಾಗದ ವ್ಯಾಪ್ತಿಯಲ್ಲಿ ಬರುವ ತಾಲ್ಲೂಕುಗಳಿಗೆ ಪ್ರವೇಶ ಮಾಡದಂತೆ ಸಿ.ಆರ್.ಪಿ.ಸಿ. ಕಲಂ 133,143,144,144(ಎ) ನಿರ್ಭಂದನ ಆದೇಶ ಜಾರಿಗೊಳಿಸಲಾಗಿದೆ.
ಕಲಬುರಗಿ ಜಿಲ್ಲೆಯ ಕಲಬುರಗಿ ಉಪ ವಿಭಾಗದ, ಉಪ ವಿಭಾಧಿಕಾರಿ ಹಾಗೂ ಉಪ ವಿಭಾಗದ ದಂಡಾಧಿಕಾರಿಗಳು ದಿನಾಂಕ 28/02/2024 ರಾತ್ರಿ 11 ಗಂಟೆಯಿಂದ ದಿನಾಂಕ 04/03/2024ರ ಮಧ್ಯರಾತ್ರಿ 12 ಗಂಟೆಯವರೆಗೆ ಶ್ರೀ ಚಕ್ರವರ್ತಿ ಸೂಲಿಬೆಲೆ ಇವರಿಗೆ ಕಲಬುರಗಿ ಜಿಲ್ಲೆಯ ಕಲಬುರಗಿ, ಉಪ ವಿಭಾಗದ, ವ್ಯಾಪ್ತಿಯಲ್ಲಿ ಬರುವ ತಾಲ್ಲೂಕುಗಳಿಗೆ ಪ್ರವೇಶ ಮಾಡದಂತೆ ಸಿ.ಆರ್.ಪಿ.ಸಿ ಕಾಯ್ದೆ 1973 ಸೆಕ್ಷನ್ 133, 143, 144, 144(ಎ) ರನ್ವಯ ನಿರ್ಬಂಧನಾ ಜಾರಿಗೊಳಿಸಿ ಆದೇಶಿಸಿಲಾಗಿದೆ ಎಂದು ಆದೇಶ ತಿಳಿಸಿದೆ.
ಈ ಆದೇಶಕ್ಕೆ ಹಲವು ಬಿಜೆಪಿ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಚಿತ್ತಾಪುರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐ.ಟಿ-ಬಿ.ಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ತವರು ಕ್ಷೇತ್ರವಾಗಿದೆ.











Click it and Unblock the Notifications