ಮೋದಿ, ಚುನಾವಣೆ ಬಗ್ಗೆ ಬಾಬಾ ಭವಿಷ್ಯ
ಶಿಕಾಗೋ, ಸೆ.30: ಯೋಗ ಗುರು ಬಾಬಾ ರಾಮದೇವ್ ಅವರು ಅಮೆರಿಕದಲ್ಲಿ ಕುಳಿತುಕೊಂಡು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಹಾಗೂ ಮುಂಬರುವ ಲೋಕಸಭೆ ಚುನಾವಣೆ ಬಗ್ಗೆ ಭವಿಷ್ಯ ನುಡಿದಿದ್ದಾರೆ.
ಮೋದಿ ನೇತೃತ್ವದ ಬಿಜೆಪಿ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಭರ್ಜರಿಯಾಗಿ ವಿಜಯ ಸಾಧಿಸಿ ಅಧಿಕಾರ ಪಡೆಯಲಿದೆ. 'ನರೇಂದ್ರ ಮೋದಿ ಅವರ ಗೆಲುವು ನೂರಕ್ಕೆ ನೂರರಷ್ಟು ಖಚಿತ' ಎಂದು ರಾಮದೇವ್ ಹೇಳಿದ್ದಾರೆ.
ಅಮೆರಿಕದ ಇಲಿನಾಯ್ ಪ್ರಾಂತ್ಯದಲಿ ಸೆ.28ರಂದು ಸ್ವಾಮಿ ವಿವೇಕಾನಂದ ದಿನ ಎಂದು ಘೋಷಿಸಿರುವುದನ್ನು ಸ್ವಾಗತಿಸಿದ ಬಾಬಾ ರಾಮದೇವ್ ಅವರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಭಾರತದಲ್ಲಿ ಎಲ್ಲೆಡೆ ಬದಲಾವಣೆಯ ಗಾಳಿ ಬೀಸುತ್ತಿದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸುಮಾರು 100 ಸೀಟು ಗೆದ್ದರೆ ಹೆಚ್ಚು, ಬಿಜೆಪಿ ಹಾಗೂ ಮೈತ್ರಿ ಪಕ್ಷಗಳು 250-300 ಸೀಟುಗಳನ್ನು ಗೆದ್ದು ಹೊಸ ಇತಿಹಾಸ ರಚಿಸಲಿದೆ. 2014ರಲ್ಲಿ ಭಾರತದ ರಾಜಕೀಯ ಇತಿಹಾಸದಲ್ಲೇ ಅಭೂತಪೂರ್ವ ಸಾಧನೆಯನ್ನು ಕಾಣಬಹುದಾಗಿದೆ ಎಂದು ಬಾಬಾ ರಾಮದೇವ್ ಹೇಳಿದ್ದಾರೆ.

ಲಂಡನ್ ಘಟನೆ: ಇತ್ತೀಚೆಗೆ ಲಂಡನ್ನಿನ ಹೀಥ್ರೂ ವಿಮಾನ ನಿಲ್ದಾಣದಲ್ಲಿ ನಡೆಸಲಾದ ವಿಚಾರಣೆ ಬಗ್ಗೆ ಪ್ರತಿಕ್ರಿಯಿಸಿದ ರಾಮದೇವ್, 'ಇದೊಂದು ರಾಜಕೀಯ ಪಿತೂರಿ' ಎಂದಿದ್ದಾರೆ.
ನನ್ನ ಬಳಿ ಅನಧಿಕೃತ ವಸ್ತುಗಳಿಲ್ಲದಿದ್ದರೂ ಸುಮ್ಮನೆ ಬಂಧಿಸಿ ಗಂಟೆಗಟ್ಟಲೇ ವಿಚಾರಣೆ ನಡೆಸಲಾಯಿತು. ಅಮೆರಿಕ, ಇಂಗ್ಲೆಂಡ್ ಸೇರಿದಂತೆ ಅನೇಕ ಕಡೆ ಯೋಗ ಪ್ರಚಾರ ನಡೆಸುವುದನ್ನು ತಡೆಗಟ್ಟಲು ಕಾಂಗ್ರೆಸ್ ಸರ್ಕಾರ ಷಡ್ಯಂತ್ರ ನಡೆಸಿ ನನ್ನ ಹೆಸರಿಗೆ ಕಪ್ಪು ಮಸಿ ಬರುವಂತೆ ಮಾಡಲು ವಿಫಲ ಯತ್ನ ನಡೆಸಿದ್ದಾರೆ ಎಂದು ಬಾಬಾ ರಾಮದೇವ್ ಮತ್ತೊಮ್ಮೆ ಆರೋಪಿಸಿದರು.
ಸ್ವಾಮಿ ವಿವೇಕಾನಂದರ 150ನೇ ವಾರ್ಷಿಕೋತ್ಸವದ ಅಂಗವಾಗಿ ನ್ಯೂಜೆರ್ಸಿ, ಹೌಸ್ಟನ್ ನಲ್ಲಿ ಯೋಗ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ವಿಶ್ವ ಮಟ್ಟದಲ್ಲಿ ಭಾರತದ ಧರ್ಮವನ್ನು ಎತ್ತಿಹಿಡಿದು ಜಗತ್ತಿಗೆ ಹೊಸ ದಾರಿ ತೋರಿಸಿದ ಸ್ವಾಮಿ ವಿವೇಕಾನಂದ ಅವರ ಶಿಕಾಗೋ ಭಾಷಣ ಸೆ.11,1893ರ ಭಾಷಣದ 120ನೇ ವಾರ್ಷಿಕೋತ್ಸವದ ಆಚರಣೆಯಲ್ಲಿ ಬಾಬಾ ರಾಮದೇವ್ ಪಾಲ್ಗೊಂಡಿದ್ದರು.












Click it and Unblock the Notifications