ಅಮೆರಿಕ ಸೇನೆಯ ದಾಳಿ ಭೀತಿಯಲ್ಲಿ, ಸೇನಾ ನೆಲೆಗಳ ಬಳಿ ಸಿಮೆಂಟ್ ಗೋಡೆ ಕಟ್ಟಿಸುತ್ತಿದೆ ಇರಾನ್ | US Military
ಇರಾನ್ & ಅಮೆರಿಕ ನಡುವೆ ಮುಂದಿನ ಶನಿವಾರದಿಂದ ಯುದ್ಧ ಶುರುವಾಗುವ ಆತಂಕ ಈಗ ಆವರಿಸಿದೆ ಹಾಗೂ ಜಗತ್ತಿನಾದ್ಯಂತ ಈ ಚರ್ಚೆ ಜೋರಾಗಿದೆ. ಇದೇ ಸಮಯದಲ್ಲಿ ವಾರಾಂತ್ಯದಲ್ಲಿ ಇರಾನ್ ಮೇಲೆ ಅಮೆರಿಕ ಕಾರ್ಯಾಚರಣೆ ಶುರು ಮಾಡಿದರೆ ಅದರಿಂದ ಆಗುವ ಅಪಾಯಗಳ ಬಗ್ಗೆ ಕೂಡ ಆತಂಕದ ವಾತಾವರಣ ನಿರ್ಮಾಣ ಆಗಿದೆ. ಮತ್ತೊಂದು ಕಡೆ ಸಂಭಾವ್ಯ ದಾಳಿ ಎದುರಿಸಲು ಇರಾನ್ ಸರ್ಕಾರ ಹೊಸ ಐಡಿಯಾ ಮಾಡಿದ್ದು, ತನ್ನ ಸೇನಾ ನೆಲೆಗಳ ಬಳಿ ಸಿಮೆಂಟ್ ಗೋಡೆ ಕಟ್ಟಿಸುತ್ತಿದೆ.
ಯಾವುದೇ ಕ್ಷಣದಲ್ಲಿ ಮಧ್ಯಪ್ರಾಚ್ಯ ಪರಿಸ್ಥಿತಿ ಕೈಮೀರಿ ಹೋಗುವ ಸಂಭವ ಜಾಸ್ತಿ ಇದ್ದು, ಈಗಾಗಲೇ ಜಗತ್ತಿನ ಹಲವು ದೇಶಗಳು ತಮ್ಮ ತಮ್ಮ ಪ್ರಜೆಗಳಿಗೆ ಇರಾನ್ ತೊರೆಯುವಂತೆ ಹೇಳಿವೆ. ಈ ಸಮಯದಲ್ಲಿ ಇರಾನ್ ನಡೆ ಕೂಡ ಯುದ್ಧದ ಮುನ್ಸೂಚನೆ ನೀಡುತ್ತಿದೆ. ಹಾಗೇ ಅಮೆರಿಕ ಸೇನೆಯ ಬೃಹತ್ ಮತ್ತು ಶಕ್ತಿಶಾಲಿ ಯುದ್ಧ ನೌಕೆಗಳು ಇರಾನ್ ಸಮುದ್ರ ಗಡಿಗೆ ಬಂದು ನಿಂತಿವೆ. ಇದರ ಜೊತೆಗೆ ಫೈಟರ್ ಜೆಟ್ & ಯುದ್ಧಕ್ಕೆ ಬೇಕಾಗಿರುವ ಕ್ಷಿಪಣಿಗಳನ್ನು ಅಮೆರಿಕ ಸಜ್ಜುಗೊಳಿಸಿದೆ. ಆದ್ರೆ ಈ ಸಮಯದಲ್ಲಿ ಇರಾನ್ ತನ್ನ ಸೇನಾ ನೆಲೆಗಳ ಬಳಿ ಕಾಂಕ್ರಿಟ್ ಗೋಡೆಗಳನ್ನು ಕಟ್ಟಿಸಿರುವುದು ಮತ್ತಷ್ಟು ಚರ್ಚೆ ಹುಟ್ಟುಹಾಕಿದೆ.

ಅಮೆರಿಕ ಸೇನಾ ನೆಲೆಗಳು ಅಲರ್ಟ್
ಇನ್ನು ತೆಹ್ರಾನ್ ವಿರುದ್ಧ ಸೇನಾ ಕಾರ್ಯಾಚರಣೆ ನಡೆಸಲು ವಾಷಿಂಗ್ಟನ್ ಚಿಂತನೆ ನಡೆಸುತ್ತಿದೆ ಎಂದು ವರದಿಯಾದ ಬೆನ್ನಲ್ಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಂತಿಮ ನಿರ್ಧಾರದ ಬಗ್ಗೆ ಚರ್ಚೆ ನಡೆಯುತ್ತಿದೆ. ಮಧ್ಯಪ್ರಾಚ್ಯದಲ್ಲಿ ಅಮೆರಿಕ ಮಿಲಿಟರಿ ತನ್ನ ವಾಯು, ನೌಕಾ ಪಡೆಯನ್ನ ಹೆಚ್ಚಿಸಿದೆ. ಈ ಬೆನ್ನಲ್ಲೇ ತನ್ನ ಸೈನಿಕರನ್ನು ಹಾಗೂ ಅಕ್ಕಪಕ್ಕದ ದೇಶಗಳಲ್ಲಿ ಇರುವ ಸೇನಾ ನೆಲೆಗಳನ್ನ ಕೂಡ ಅಮೆರಿಕ ಅಲರ್ಟ್ ಮಾಡಿದೆ. ಇದರ ಜೊತೆಗೆ ಅಮೆರಿಕದ ವಾಯುಪಡೆ ಎಚ್ಚರಿಕೆ ಹಿನ್ನೆಲೆ ಇರಾನ್ ತನ್ನ ಮಿಲಿಟರಿ ಪ್ರದೇಶದ ಬಳಿ ಸಿಮೆಂಟ್ ಗೋಡೆಗಳನ್ನ ನಿರ್ಮಾಣ ಮಾಡಿ, ರಕ್ಷಣೆಗೆ ಹೊಸ ಅಸ್ತ್ರದ ಮೊರೆ ಹೋಗಿದೆ.
ಶಾಂತಿ ಮಾತುಕತೆ ನಡುವೆ ಕಿರಿಕ್!
ಒಮನ್ ನೆಲದಲ್ಲಿ ಈಗಾಗಲೇ ಅಮೆರಿಕ-ಇರಾನ್ ಅಧಿಕಾರಿಗಳು ಹಲವು ಸುತ್ತಿನ ಮಾತುಕತೆ ನಡೆಸಿದ್ದಾರೆ ಹಾಗೂ ಜಿನೆವಾದಲ್ಲಿ ಕೂಡ ಮಹತ್ವದ ಚರ್ಚೆ ಎರಡೂ ದೇಶಗಳ ನಡುವೆ ಆರಂಭ ಆಗಿದೆ. ಇಂತಹ ಸಮಯದಲ್ಲೇ, ಇನ್ನೇನು ಅಮೆರಿಕ ಹಾಗೂ ಇರಾನ್ ಶಾಂತಿ ಒಪ್ಪಂದಕ್ಕೆ ಸಹಿ ಹಾಕಲಿವೆ ಅಂತಾನೇ ಹೇಳಲಾಗಿತ್ತು. ಅಲ್ಲದೆ ಮಾತುಕತೆ ಬಹುತೇಕ ಯಶಸ್ವಿ ಎಂಬ ಹಂತಕ್ಕೂ ಬಂದಿತ್ತು, ಕೆಲವೇ ದಿನಗಳಲ್ಲಿ ಪರಮಾಣು ಒಪ್ಪಂದ ಏರ್ಪಡುವ ಮುನ್ಸೂಚನೆ ಕೂಡ ಇತ್ತು. ಹೀಗೆ ಎಲ್ಲವೂ ಸರಿ ಆಗಿದೆ, ಅಮೆರಿಕ & ಇರಾನ್ ನಡುವೆ ಸಂಧಾನ ಆಗಲಿದೆ ಎಂಬ ನಿರೀಕ್ಷೆಯಲ್ಲಿ ಜಗತ್ತು ಕಾಯುತ್ತಿರುವ ಸಮಯದಲ್ಲೇ ದಿಢೀರ್ ಮತ್ತೊಮ್ಮೆ ಕಿಚ್ಚು ಹೊತ್ತಿಕೊಂಡಿದೆ. ಫೆಬ್ರವರಿ 21 ಶನಿವಾರವೇ ಅಮೆರಿಕ ನೇರವಾಗಿ ಇರಾನ್ ಮೇಲೆ ದಾಳಿ ಶುರು ಮಾಡಲಿದೆ ಎಂಬ ಸುದ್ದಿ ಹರಿದಾಡುತ್ತಿದೆ.












Click it and Unblock the Notifications