ಭಾರತಕ್ಕೆ ಬರುತ್ತಿದ್ದ $21 ಮಿಲಿಯನ್ ಅನುದಾನ ರದ್ದು ಮಾಡಿದ ಯುಎಸ್; ಬಿಜೆಪಿ ಹೇಳಿದ್ದೇನು?
ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಎರಡನೇ ಬಾರಿಗೆ ಅಧ್ಯಕ್ಷರಾದ ಬಳಿಕ ಭಾರತಕ್ಕೆ ಒಂದರ ಹಿಂದೆ ಒಂದು ಆಘಾತ ನೀಡುತ್ತಲೇ ಇದ್ದಾರೆ. ಅಕ್ರಮ ವಲಸಿಗರ ವಿರುದ್ಧ ಸಮರವನ್ನೇ ಸಾರಿರುವ ಟ್ರಂಪ್ ಸರ್ಕಾರ ಈಗಾಗಲೇ ಯುಎಸ್‌ನಲ್ಲಿದ್ದ ಭಾರತದ ಅಕ್ರಮ ವಲಸಿಗರನ್ನು ಎರಡು ವಿಮಾನಗಳಲ್ಲಿ ವಾಪಸ್ ಕಳಿಸಿದೆ. ಭಾರತದ ಸರಕುಗಳ ಮೇಲೆ ಹೆಚ್ಚಿನ ಸುಂಕ ವಿಧಿಸುವುದಾಗಿ ಕೂಡ ಟ್ರಂಪ್ ಎಚ್ಚರಿಕೆ ಕೊಟ್ಟಿದ್ದಾರೆ.
ಡೊನಾಲ್ಡ್ ಟ್ರಂಪ್ ಆಪ್ತ ಎಲಾನ್ ಮಸ್ಕ್ ನೇತೃತ್ವದ ಯುನೈಟೆಡ್ ಸ್ಟೇಟ್ಸ್ ಡಿಪಾರ್ಟ್ಮೆಂಟ್ ಆಫ್ ಗವರ್ನಮೆಂಟ್ ಎಫಿಷಿಯನ್ಸಿ (ಡಾಗ್), ಮಾಜಿ ಅಧ್ಯಕ್ಷ ಜೋ ಬಿಡೆನ್ ಸರ್ಕಾರದ ಅವಧಿಯಲ್ಲಿ ಯುಎಸ್ ಭಾರತಕ್ಕೆ ನೀಡುತ್ತಿದ್ದ ಅನುದಾನವನ್ನು ರದ್ದುಗೊಳಿಸಿದೆ. ಭಾರತದಲ್ಲಿ ಮತದಾನ ಹೆಚ್ಚಿಸಲು ನೀಡುತ್ತಿದ್ದ ₹21 ಮಿಲಿಯನ್ ಯುಎಸ್ ತೆರಿಗೆದಾರರಿಂದ ನಿಧಿಯ ಅನುದಾನವನ್ನು ರದ್ದುಗೊಳಿಸಿ ಆದೇಶಿಸಿದೆ.

ಚುನಾವಣೆಗಳು ಮತ್ತು ರಾಜಕೀಯ ಪ್ರಕ್ರಿಯೆ ಬಲವರ್ಧನೆಗಾಗಿ ಒಕ್ಕೂಟಕ್ಕೆ ನಿಗದಿಪಡಿಸಲಾದ ದೊಡ್ಡ $486 ಮಿಲಿಯನ್ ಬಜೆಟ್‌ನ ಭಾಗವಾಗಿದೆ ಎಂದು ಹೇಳಿದೆ. ಬಾಂಗ್ಲಾದೇಶ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರನ್ನು ಪದಚ್ಯುತಗೊಳಿಸಿ ದೇಶಬಿಡುವಂತೆ ಮಾಡುವಲ್ಲಿ ಅಮೆರಿಕದ ಕೈವಾಡವಿದೆ ಎನ್ನುವ ಆರೋಪಗಳ ನಡುವೆ ಬಾಂಗ್ಲಾದೇಶದ ಪರಿಸ್ಥಿತಿಯನ್ನು ಸುಧಾರಣೆ ಮಾಡಲು ₹29 ಮಿಲಿಯನ್ ಅನುದಾನ ನೀಡಲಾಗಿದೆ.
ಮಸ್ಕ್ ನೇತೃತ್ವದ ಡಾಗ್ ಇಲಾಖೆಯು ಹಲವು ಯೋಜನೆಗಳಿಗೆ ಕೊಡುತ್ತಿದ್ದ ಅನುದಾನವನ್ನು ಕಡಿತಗೊಳಿಸಿದೆ.
ಏಷ್ಯಾದಲ್ಲಿ ಶಿಕ್ಷಣ ಫಲಿತಾಂಶ ಸುಧಾರಣೆ ಮಾಡಲು ನೀಡುತ್ತಿದ್ದ $47 ಮಿಲಿಯನ್, ಲಿಂಗ ಸಮಾನತೆ ಮತ್ತು ಮಹಿಳಾ ಸಬಲೀಕರಣ ಕೇಂದ್ರಕ್ಕಾಗಿ ನೀಡುತ್ತಿದ್ದ $40 ಮಿಲಿಯನ್, ಪ್ರೇಗ್ ನಾಗರಿಕ ಸಮಾಜ ಕೇಂದ್ರಕ್ಕೆ ನೀಡುತ್ತಿದ್ದ $32 ಮಿಲಿಯನ್, ನೇಪಾಳ ಹಣಕಾಸು ಒಕ್ಕೂಟಕ್ಕೆ $20 ಮಿಲಿಯನ್, ಮಾಲಿಯಲ್ಲಿ ಸಾಮಾಜಿಕ ಒಗ್ಗಟ್ಟು ಬಲಪಡಿಸಲು $14 ಮಿಲಿಯನ್ ಸೇರಿದಂತೆ ನೂರಾರು ಮಿಲಿಯನ್ ಡಾಲರ್ ಅನುದಾನವನ್ನು ನಿಲ್ಲಿಸಲಾಗಿದೆ.
ತೆರಿಗೆದಾರರ ಹಣವನ್ನು ವಿದೇಶಿ ರಾಜಕೀಯ ಚಟುವಟಿಕೆಗಳಿಗೆ ಖರ್ಚು ಮಾಡದೆ ಸರ್ಕಾರದ ದಕ್ಷತೆ ಮತ್ತು ಆಡಳಿತವನ್ನು ಸುಧಾರಣೆ ಮಾಡಲು ಬಳಸಿಕೊಳ್ಳಲು ಈ ಮೊದಲು ನೀಡುತ್ತಿದ್ದ ಅನುದಾನಗಳನ್ನು ರದ್ದು ಮಾಡಲಾಗಿದೆ ಎಂದು ಹೇಳಿದರು.
ಬಿಜೆಪಿ ಪ್ರತಿಕ್ರಿಯೆ ಏನು?
ಎಲಾನ್ ಮಸ್ಕ್ ನೇತೃತ್ವದ ಡಾಗ್ ಭಾರತಕ್ಕೆ ಬರುತ್ತಿದ್ದ ಅನುದಾನವನ್ನು ರದ್ದುಗೊಳಿಸಿದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ, ರದ್ದುಗೊಂಡಿರುವ ಅನುದಾನವನ್ನು ಭಾರತದ ಚುನಾವಣೆಯಲ್ಲಿ ಬಾಹ್ಯ ಹಸ್ತಕ್ಷೇಪ ಎಂದು ಕರೆದಿದೆ.
"ಮತದಾರರ ಮತದಾನಕ್ಕೆ $21 ಮಿಲಿಯನ್? ಇದು ಖಂಡಿತವಾಗಿಯೂ ಭಾರತದ ಚುನಾವಣಾ ಪ್ರಕ್ರಿಯೆಯಲ್ಲಿ ಬಾಹ್ಯ ಹಸ್ತಕ್ಷೇಪ. ಇದರಿಂದ ಯಾರಿಗೆ ಲಾಭ? ಖಂಡಿತವಾಗಿಯೂ ಆಡಳಿತ ಪಕ್ಷಕ್ಕಲ್ಲ"! ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಅಮಿತ್ ಮಾಳವಿಯಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ವಿದೇಶಿ ಶಕ್ತಿಗಳು ಭಾರತೀಯ ಸಂಸ್ಥೆಗಳಿಗೆ ವ್ಯವಸ್ಥಿತವಾಗಿ ಒಳನುಸುಳುತ್ತಿವೆ ಎಂದು ಮಾಳವಿಯಾ ಆರೋಪಿಸಿದ್ದಾರೆ. ಬಿಲಿಯನೇರ್ ಹೂಡಿಕೆದಾರ ಮತ್ತು ಲೋಕೋಪಕಾರಿ ಜಾರ್ಜ್ ಸೊರೊಸ್ ಮತ್ತು ಅವರ ಓಪನ್ ಸೊಸೈಟಿ ಫೌಂಡೇಶನ್ ವಿರುದ್ದ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಪಕ್ಷ ಮತ್ತು ಗಾಂಧಿ ಕುಟುಂಬದ ಪ್ರಸಿದ್ಧ ಸಹಚರ ಜಾರ್ಜ್ ಸೊರೊಸ್ ಅವರ ನೆರಳು ನಮ್ಮ ಚುನಾವಣಾ ಪ್ರಕ್ರಿಯೆಯ ಮೇಲೆ ಬೀಳುತ್ತಿದೆ ಮಾಳವಿಯಾ ಆರೋಪಿಸಿದ್ದಾರೆ.












Click it and Unblock the Notifications