ಉಕ್ರೇನ್ ಬಂದರಿನ ಮೇಲೆ ಬಾಂಬ್ ದಾಳಿ: ಕೀವ್ ಬಳಿ ಸಾಮೂಹಿಕ ಸಮಾಧಿ
ಕೀವ್, ಏಪ್ರಿಲ್ 03: ಉಕ್ರೇನ್ ಮೇಲೆ ರಷ್ಯಾದ ದಾಳಿಯು ಹಲವಾರು ಪ್ರಾಣವನ್ನು ಬಲಿ ತೆಗೆದುಕೊಳ್ಳುತ್ತಿದೆ. ದಕ್ಷಿಣದಲ್ಲಿ ರಷ್ಯಾ ತನ್ನ ಪಡೆಗಳನ್ನು ಇರಿಸಲು ಪ್ರಯತ್ನ ಮಾಡುತ್ತಿದೆ ಎಂದು ಕೀವ್ ಎಚ್ಚರ ನೀಡಿದೆ. ಇದಾದ ಬಳಿಕವೇ ಇಂದು ಬೆಳಗ್ಗೆ ಉಕ್ರೇನ್‌ನ ಆಯಕಟ್ಟಿನ ಕಪ್ಪು ಸಮುದ್ರ ಬಂದರು ಒಡೆಸ್ಸಾ ಮೇಲೆ ವಾಯುದಾಳಿಗಳನ್ನು ರಷ್ಯಾ ನಡೆಸಿದೆ. ಸದ್ಯ ಕೀವ್ ಬಳಿ ಸಾಮೂಹಿಕ ಸಮಾಧಿ ಕಂಡು ಬಂದಿದೆ ಎಂದು ವರದಿಯು ಉಲ್ಲೇಖ ಮಾಡಿದೆ.
"ರಷ್ಯಾವು ಉಕ್ರೇನ್‌ನ ಆಯಕಟ್ಟಿನ ಕಪ್ಪು ಸಮುದ್ರ ಬಂದರು ಒಡೆಸ್ಸಾ ಮೇಲೆ ವಾಯುದಾಳಿಗಳನ್ನು ನಡೆಸಿದೆ," ಎಂದು ಉಕ್ರೇನ್ ಸಚಿವ ಆಂಟನ್ ಹೆರಾಶ್ಚೆಂಕೊ ಹೇಳಿದ್ದಾರೆ. ಒಡೆಸ್ಸಾ, ಸುಮಾರು ಒಂದು ಮಿಲಿಯನ್ ಜನಸಂಖ್ಯೆಯ ಐತಿಹಾಸಿಕ ನಗರವಾಗಿದೆ. ಉಕ್ರೇನ್‌ನ ಅತಿದೊಡ್ಡ ಕಪ್ಪು ಸಮುದ್ರ ಬಂದರು ಇದಾಗಿದೆ.
ಕೈಗಾರಿಕಾ ಪ್ರದೇಶದಲ್ಲಿ ಸ್ಪೋಟವಾಗಿ ಸುತ್ತಲೂ ಕಪ್ಪು ಹೊಗೆ ಆವರಿಸಿದೆ ಎಂದು ವರದಿಯು ಹೇಳಿದೆ. ರಷ್ಯಾವು ದೇಶದ ಉತ್ತರದಿಂದ ಸೇನೆಯನ್ನು ಹಿಂತೆಗೆದುಕೊಳ್ಳುತ್ತಿರುವಂತೆ ತೋರುತ್ತಿರುವಾಗ ಈ ದಾಳಿ ನಡೆದಿದೆ. ಶುಕ್ರವಾರ, ಉಕ್ರೇನ್‌ನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ರಷ್ಯಾವು ದಕ್ಷಿಣದಲ್ಲಿ ಶಕ್ತಿಯುತ ದಾಳಿಗಳನ್ನು ನಡೆಸಲು ಸಿದ್ಧಪಡಿಸುತ್ತಿದೆ ಎಂದು ಎಚ್ಚರಿಸಿದರು.

300 ಜನರ ಸಾಮೂಹಿಕ ಸಮಾಧಿ
ರಷ್ಯಾದ ಪಡೆಗಳು ರಾಜಧಾನಿ ಕೀವ್ ಹೊರಗಿನ ಬುಚಾ ನಗರದಲ್ಲಿ ವಿನಾಶಕ್ಕೆ ನಾಂದಿ ಹಾಡಿದೆ. ಅಲ್ಲಿ ಸುಮಾರು 300 ಜನರನ್ನು ಸಾಮೂಹಿಕ ಸಮಾಧಿ ಮಾಡಲಾಗಿದೆ ಎಂದು ಮೇಯರ್ ಅನಾಟೊಲಿ ಫೆಡೋರುಕ್ ಎಎಫ್‌ಪಿಗೆ ತಿಳಿಸಿದರು. "ಈ ಎಲ್ಲ ಜನರನ್ನು ತಲೆಯ ಹಿಂಭಾಗದಲ್ಲಿ ಗುಂಡು ಹಾರಿಸಲಾಯಿತು, ಕೊಲ್ಲಲಾಯಿತು," ಎಂದು ಮೇಯರ್ ಅನಾಟೊಲಿ ಫೆಡೋರುಕ್ ಮಾಹಿತಿ ನೀಡಿದ್ದಾರೆ.
ಉಕ್ರೇನ್ ಕೈಯಲ್ಲಿ ಕೀವ್ ಪ್ರದೇಶದ ನಿಯಂತ್ರಣ
ರಷ್ಯಾದ ಪಡೆಗಳು ಆಕ್ರಮಣ ಮಾಡಿದ ನಂತರ ಉಕ್ರೇನ್ ಇಡೀ ಕೀವ್ ಪ್ರದೇಶದ ನಿಯಂತ್ರಣವನ್ನು ಮರಳಿ ಪಡೆದುಕೊಂಡಿದೆ. ಉಕ್ರೇನ್ ರಾಜಧಾನಿಯ ಸಮೀಪವಿರುವ ಕೆಲವು ಪ್ರಮುಖ ಪಟ್ಟಣಗಳಿಂದ ರಷ್ಯಾ ಪಡೆಯನ್ನು ಉಕ್ರೇನ್ ಪಡೆ ಹಿಮ್ಮೆಟ್ಟಿಸಿದೆ ಎಂದು ಉಪ ರಕ್ಷಣಾ ಸಚಿವ ಗನ್ನಾ ಮಲಿಯಾರ್ ಹೇಳಿದ್ದಾರೆ.

ಇನ್ನು ಮಾರಿಯುಪೋಲ್‌ನಿಂದ ಜನರನ್ನು ಸ್ಥಳಾಂತರ ಮಾಡಲೆಂದು ಉಕ್ರೇನ್ ಪಡೆಗಳು ಅಲ್ಲಿಗೆ ತೆರಳಿದೆ. ಉಕ್ರೇನ್ ಪಡೆಯು ಮಾರಿಯುಪೋಲ್‌ಗೆ ಹೋಗುವ ಮಾರ್ಗದಲ್ಲಿ ರಾತ್ರಿಯನ್ನು ಕಳೆಯುತ್ತಿದೆ ಮತ್ತು ಇನ್ನೂ ನಗರವನ್ನು ತಲುಪಿಲ್ಲ ಎಂದು ವಕ್ತಾರರು ತಿಳಿಸಿದ್ದಾರೆ. ಈ ನಡುವೆ ಬಾಲ್ಟಿಕ್ ರಾಜ್ಯಗಳು ಇನ್ನು ಮುಂದೆ ರಷ್ಯಾದ ನೈಸರ್ಗಿಕ ಅನಿಲವನ್ನು ಆಮದು ಮಾಡಿಕೊಳ್ಳುತ್ತಿಲ್ಲ ಎಂದು ಲಾಟ್ವಿಯಾದ ನೈಸರ್ಗಿಕ ಅನಿಲ ಶೇಖರಣಾ ಆಪರೇಟರ್ ಮುಖ್ಯಸ್ಥರು ಹೇಳಿದ್ದಾರೆ.
ಪ್ರತಿಭಟನಾಕಾರರ ಮೇಲೆ ರಷ್ಯಾ ಗುಂಡಿನ ದಾಳಿ
"ಮಾಸ್ಕೋದ ಪಡೆಗಳು ಆಕ್ರಮಿಸಿಕೊಂಡಿರುವ ದಕ್ಷಿಣ ನಗರವಾದ ಎನರ್‌ಹೋಡರ್‌ನಲ್ಲಿ ಶಾಂತಿಯುತ ಪ್ರತಿಭಟನಾಕಾರರ ಮೇಲೆ ಗುಂಡಿನ ದಾಳಿ ನಡೆಸಿದೆ. ನಾಲ್ವರಿಗೆ ತೀವ್ರವಾಗಿ ಗಾಯವಾಗಿದೆ," ಎಂದು ಉಕ್ರೇನ್‌ನ ಮಾನವ ಹಕ್ಕುಗಳ ಹೋರಾಟಗಾರ ಲ್ಯುಡ್ಮಿಲಾ ಡೆನಿಸೋವಾ ಆರೋಪ ಮಾಡಿದ್ದಾರೆ.
ಇನ್ನು ಉಕ್ರೇನ್ ಅನ್ನು ಉತ್ತರ ಅಟ್ಲಾಂಟಿಕ್ ಟ್ರೀಟಿ ಆರ್ಗನೈಸೇಶನ್ (ನ್ಯಾಟೋ)ಗೆ ಸೇರಲು ಬಿಡದಿರುವುದು ತಪ್ಪು ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿರುವ ಬಗ್ಗೆ ಫಾಕ್ಸ್ ನ್ಯೂಸ್ ವರದಿ ಮಾಡಿದೆ. "ನ್ಯಾಟೋ ಬಗ್ಗೆ ಮಾತನಾಡಲು ನಮಗೆ ಕಷ್ಟ, ಏಕೆಂದರೆ ನ್ಯಾಟೋ ನಮ್ಮನ್ನು ಒಪ್ಪಿಕೊಳ್ಳಲು ಬಯಸುವುದಿಲ್ಲ. ಇದು ತಪ್ಪು ಎಂದು ನಾನು ಭಾವಿಸುತ್ತೇನೆ, ಏಕೆಂದರೆ ನಾವು ನ್ಯಾಟೋಗೆ ಸೇರಿದರೆ, ನಾವು ನ್ಯಾಟೋವನ್ನು ಹೆಚ್ಚು ಬಲಪಡಿಸುತ್ತೇವೆ," ಎಂದು ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದರು. (ಒನ್‌ಇಂಡಿಯಾ ಸುದ್ದಿ)












Click it and Unblock the Notifications