UK PM Rishi Sunak: 'ಜೈ ಶ್ರೀರಾಮ್' ಘೋಷಣೆಯೊಂದಿಗೆ ಭಾಷಣ ಆರಂಭಿಸಿದ ಬ್ರಿಟನ್ ಪ್ರಧಾನಿ ರಿಷಿ ಸುನಕ್- ವಿಡಿಯೊ ವೈರಲ್
ಲಂಡನ್, ಆಗಸ್ಟ್ 17: ಆಧ್ಯಾತ್ಮಿಕ ಗುರು ಮೊರಾರಿ ಬಾಪು ಅವರು ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ನಡೆಸುತ್ತಿರುವ 'ರಾಮಕಥಾ' ಕಾರ್ಯಕ್ರಮದಲ್ಲಿ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಪಾಲ್ಗೊಂಡರು. ಈ ಸಂದರ್ಭದಲ್ಲಿ 'ಜೈ ಶ್ರೀರಾಮ್' ಘೋಷಣೆಯೊಂದಿಗೆ ತಮ್ಮ ಭಾಷಣವನ್ನು ಆರಂಭಿಸಿದರು. ಇದಕ್ಕೆ ಸಂಬಂಧಿಸಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ರಿಷಿ ಸುನಕ್ ಅವರು ಮಂಗಳವಾರ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ಆಧ್ಯಾತ್ಮಿಕ ಗುರು ಮೊರಾರಿ ಬಾಪು ಅವರ ರಾಮಾಯಣ ಪಠಣದಲ್ಲಿ ಪಾಲ್ಗೊಂಡರು.

ಈ ವೇಳೆ ಭಾಷಣ ಮಾಡಿದ ಅವರು, 'ನಾನು ಒಬ್ಬ ಹಿಂದೂ ಆಗಿ ಇಲ್ಲಿಗೆ ಬಂದಿದ್ದೇನೆ. ಪ್ರಧಾನಿಯಾಗಿ ಅಲ್ಲ' ಎಂದು ಹೇಳಿದರು.
ಭಾರತದ ಸ್ವಾತಂತ್ರ್ಯ ದಿನದಂದು ಮೊರಾರಿ ಬಾಪು ಅವರು ನಡೆಸುತ್ತಿರುವ ರಾಮ ಕಥಾ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವುದು ನನಗೆ ಗೌರವ ತಂದಿದೆ ಎಂದು ಸುನಕ್ ತಿಳಿಸಿದರು.
ಲಂಡನ್‌ನ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ರಾಮಕಥಾ ಕಾರ್ಯಕ್ರಮ ನಡೆಯಿತು.
ಪ್ರಧಾನಿಯಾಗಿ ಅಧಿಕಾರ ಹಿಡಿದಿರುವುದರ ಕುರಿತು ಮಾತನಾಡಿದ ಅವರು, 'ಇದು ದೊಡ್ಡ ಗೌರವವಾಗಿದೆ. ಆದರೆ, ಸುಲಭದ ಕೆಲಸವಲ್ಲ' ಎಂದು ಹೇಳಿದರು.

'ಈ ಹುದ್ದೆಯಲ್ಲಿರುವಾಗ ನಾವು ಕೆಲ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ನಮ್ಮ ಮುಂದೆ ಕಠಿಣ ಆಯ್ಕೆಗಳಿರುತ್ತವೆ. ನಮ್ಮ ನಂಬಿಕೆಯು ನನಗೆ ಧೈರ್ಯ ಹಾಗೂ ಶಕ್ತಿಯನ್ನು ತುಂಬುತ್ತದೆ. ನಮ್ಮ ದೇಶಕ್ಕಾಗಿ ನಾನು ಸಾಧ್ಯವಾದಷ್ಟು ಉತ್ತಮ ಕೆಲಸಗಳನ್ನು ಮಾಡಲು ಬಯಸುತ್ತೇನೆ. ಭಗವಾನ್ ರಾಮ ಯಾವಾಗಲೂ ಸ್ಪೂರ್ತಿದಾಯಕ ವ್ಯಕ್ತಿಯಾಗಿದ್ದಾನೆ ಎಂದು ರಿಷಿ ಸುನಕ್ ತಿಳಿಸಿದರು.
'Here as a Hindu, not as a PM' : UK Prime Minister Rishi Sunak#RishiSunak #India #Hindu pic.twitter.com/Tr8QaMJSbJ
— Ram Satpute (@RamVSatpute) August 16, 2023
ಜೀವನದ ಸವಾಲುಗಳನ್ನು ಧೈರ್ಯದಿಂದ ಎದುರಿಬೇಕು. ವಿನಯದಿಂದ ಆಡಳಿತ ನಡೆಸಲು ಮತ್ತು ನಿಸ್ವಾರ್ಥವಾಗಿ ಕೆಲಸ ಮಾಡಲು ನನಗೆ ಶ್ರೀರಾಮ ಯಾವಾಗಲೂ ಸ್ಪೂರ್ತಿದಾಯಕ ವ್ಯಕ್ತಿಯಾಗಿದ್ದಾನೆ ಎಂದು ಅವರು ಹೇಳಿದರು.
ರಾಮಾಯಣ, ಭಗವದ್ಗೀತೆ ಮತ್ತು ಹನುಮಾನ್ ಚಾಲೀಸಾವನ್ನು ಅನುಸರಿಸುತ್ತಿರುವುದಾಗಿ ರಿಷಿ ಸುನಕ್ ತಿಳಿಸಿದ್ದಾರೆ.
ರಿಷಿ ಸುನಕ್ ಕನ್ಸರ್ವೇಟಿವ್ ಪಕ್ಷದ ನಾಯಕ. ಬ್ರಿಟನ್ ದೇಶದಲ್ಲಿ ಮೊದಲ ಏಷ್ಯಾದ ಪ್ರಧಾನಿ ಎಂದು ಖ್ಯಾತರಾಗಿದ್ದಾರೆ.
ರಿಷಿ ಸುನಕ್ ಅವರು ಇನ್ಫೋಸಿಸ್ ಸಂಸ್ಥಾಪಕರಾದ ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ ಅವರ ಪುತ್ರಿ ಅಕ್ಷತಾ ಮೂರ್ತಿ ಅವರನ್ನು ವಿವಾಹವಾಗಿದ್ದಾರೆ.
ರಿಷಿ ಸುನಕ್ ಅವರು 2022 ರಿಂದ ಬ್ರಿಟನ್ ಪ್ರಧಾನಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಈ ಹಿಂದೆ ಬೋರಿಸ್ ಜಾನ್ಸನ್ ಅವರ ಅಡಿಯಲ್ಲಿ ಎರಡು ಕ್ಯಾಬಿನೆಟ್ ಸ್ಥಾನಗಳನ್ನು ಹೊಂದಿದ್ದರು.












Click it and Unblock the Notifications