ಲೋಕಸಭೆ, ತೆಲಂಗಾಣ ಸೇರಿ ಇತರ ಚುನಾವಣೆಗಳಲ್ಲಿ ಬಿಜೆಪಿಯನ್ನು ಕಾಂಗ್ರೆಸ್ ನಾಶಗೊಳಿಸಲಿದೆ: ರಾಹುಲ್ ಗಾಂಧಿ
ನ್ಯೂಯಾರ್ಕ್, ಜೂನ್. 04: ಕರ್ನಾಟಕ ಚುನಾವಣಾ ಗೆಲುವಿನ ನಂತರ ತೆಲಂಗಾಣ ಮತ್ತು ಇತರ ರಾಜ್ಯಗಳ ಚುನಾವಣೆಯಲ್ಲಿ ತಮ್ಮ ಪಕ್ಷವು ಬಿಜೆಪಿಯನ್ನು ಸಂಪೂರ್ಣವಾಗಿ ನಾಶ ಮಾಡಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದು ಕೇವಲ ಕಾಂಗ್ರೆಸ್ ಪಕ್ಷವಲ್ಲ, ಆದರೆ ಭಾರತದ ಜನರು ಬಿಜೆಪಿಯ ದ್ವೇಷ ತುಂಬಿದ ಸಿದ್ಧಾಂತವನ್ನು ಸೋಲಿಸಲಿದ್ದಾರೆ ಎಂದು ಒತ್ತಿ ಹೇಳಿದ್ದಾರೆ.
"ನಾವು ಕರ್ನಾಟಕದಲ್ಲಿ ಬಿಜೆಪಿಯನ್ನು ಬುಡಮೇಲು ಮಾಡಬಲ್ಲೆವು ಎಂದು ತೋರಿಸಿದ್ದೇವೆ. ನಾವು ಅವರನ್ನು ಸೋಲಿಸಲಿಲ್ಲ, ಅವರನ್ನು ನಾಶ ಮಾಡಿದ್ದೇವೆ. ನಾವು ಅವರನ್ನು ಹೊಸಕಿ ಹಾಕಿದ್ದೇವೆ" ಎಂದು ಭಾರತೀಯ ಸಾಗರೋತ್ತರ ಕಾಂಗ್ರೆಸ್-ಯುಎಸ್‌ಎ ಸಂಘಟನೆ ಆಯೋಜಿಸಿದ್ದ ಔತಣಕೂಟವೊಂದರಲ್ಲಿ ರಾಹುಲ್ ಗಾಂಧಿ ಹೇಳಿದ್ದಾರೆ. ಕಾಂಗ್ರೆಸ್ ಬೆಂಬಲಿಗರು, ಅಧಿಕಾರಿಗಳು, ಪಕ್ಷದ ಸದಸ್ಯರು ಮತ್ತು ಭಾರತೀಯ ಸಮುದಾಯದ ಸದಸ್ಯರು ಸಮುದಾಯದ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದದ್ದರು. ಇದರಲ್ಲಿ ನ್ಯೂಯಾರ್ಕ್ ಸಿಟಿ ಮೇಯರ್ ಎರಿಕ್ ಆಡಮ್ಸ್ ಸಹ ಭಾಗವಹಿಸಿದ್ದರು.

ವಾಷಿಂಗ್ಟನ್ ಮತ್ತು ಸ್ಯಾನ್ ಫ್ರಾನ್ಸಿಸ್ಕೋಗೆ ಭೇಟಿ ನೀಡಿದ ನಂತರ ರಾಹುಲ್ ಗಾಂಧಿ ನ್ಯೂಯಾರ್ಕ್‌ಗೆ ಆಗಮಿಸಿದ್ದಾರೆ. ಭಾನುವಾರ ಮ್ಯಾನ್‌ಹ್ಯಾಟನ್‌ನ ಜಾವಿಟ್ಸ್ ಸೆಂಟರ್‌ನಲ್ಲಿ ಸಮುದಾಯ ರ‍್ಯಾಲಿಯನ್ನು ಉದ್ದೇಶಿಸಿ ಕಾಂಗ್ರೆಸ್ ನಾಯಕ ಮಾತನಾಡಲಿದ್ದಾರೆ.
"ಕರ್ನಾಟಕ ಚುನಾವಣೆಯಲ್ಲಿ ಬಿಜೆಪಿ ಸಂಪೂರ್ಣ ಮಾಧ್ಯಮವನ್ನು ಹೊಂದಿದ್ದರು. ಅವರ ಬಳಿ ನಮ್ಮಲ್ಲಿದ್ದ ಹಣಕ್ಕಿಂತ 10 ಪಟ್ಟು ಹೆಚ್ಚು ಹಣವಿತ್ತು, ಅವರ ಬಳಿ ಸರ್ಕಾರವಿತ್ತು, ಅವರಿಗೆ ತನಿಖಾ ಏಜೆನ್ಸಿಗಳ ಸಹಾಯವಿತ್ತು. ಅವರು ಎಲ್ಲವನ್ನೂ ಹೊಂದಿದ್ದರ. ಆದರೆ, ನಾವು ಅವರನ್ನು ನಾಶಪಡಿಸಿದ್ದೇವೆ" ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
"ನಾವು ಮುಂದೆ ತೆಲಂಗಾಣದಲ್ಲಿ ಅವರನ್ನು ನಾಶಪಡಿಸಲಿದ್ದೇವೆ . ಈ ಚುನಾವಣೆಯ ನಂತರ ತೆಲಂಗಾಣದಲ್ಲಿ ಬಿಜೆಪಿಯನ್ನು ಹುಡುಕುವುದು ಕಷ್ಟ" ಎಂದು ರಾಹುಲ್ ಗಾಂಧಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ದಕ್ಷಿಣ ಭಾರತದ ತೆಲಂಗಾಣ ರಾಜ್ಯದಲ್ಲಿ ಈ ವರ್ಷದ ಕೊನೆಯಲ್ಲಿ ಚುನಾವಣೆ ನಡೆಯಲಿದೆ.

ತೆಲಂಗಾಣ ಚುನಾವಣೆಯ ಹೊರತಾಗಿ, "ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದ ಚುನಾವಣೆಗಳು ನಡೆಯಲಿವೆ. ಅಲ್ಲಿಯೂ ನಾವು ಕರ್ನಾಟಕದಲ್ಲಿ ಅವರನ್ನು ಸೋಲಿಸಿದಂತೆಯೇ ಸೋಲಿಸುತ್ತೇವೆ. ಬಿಜೆಪಿಯನ್ನು ಸೋಲಿಸುವುದು ಕೇವಲ ಕಾಂಗ್ರೆಸ್ ಪಕ್ಷವಲ್ಲ. ಭಾರತದ ಜನರು, ಮಧ್ಯಪ್ರದೇಶದ ಜನರು, ತೆಲಂಗಾಣದ ಜನರು, ರಾಜಸ್ಥಾನ, ಛತ್ತೀಸ್‌ಗಢದ ಜನರು ಬಿಜೆಪಿಯನ್ನು ಸೋಲಿಸಲಿದ್ದಾರೆ" ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಸಮಾಜದಲ್ಲಿ ಬಿಜೆಪಿ ಹರಡುತ್ತಿರುವ ದ್ವೇಷದ ಮಾದರಿಯಲ್ಲಿ ಮುಂದುವರಿಯಲು ಸಾಧ್ಯವಿಲ್ಲ ಎಂದು ಭಾರತ ಅರ್ಥಮಾಡಿಕೊಂಡಿರುವುದು ಇದಕ್ಕೆ ಕಾರಣ. ಮುಂದಿನ ಕೆಲವು ರಾಜ್ಯಗಳಲ್ಲಿ ಇದೇ ಫಲಿತಾಂಶ ಬರಲಿದೆ. ತದನಂತರ 2024 ರ ಲೋಕಸಭಾ ಚುನಾವಣೆಯಲ್ಲಿಯೂ ಇದೆ ರೀತಿ ನಡೆಯಲಿದೆ. ಪ್ರತಿಪಕ್ಷಗಳು ಒಗ್ಗಟ್ಟಾಗಿವೆ, ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ಇದೊಂದು ಸೈದ್ಧಾಂತಿಕ ಹೋರಾಟ. ಒಂದೆಡೆ ಬಿಜೆಪಿಯ ವಿಭಜಕ ಸಿದ್ಧಾಂತ, ಬಿಜೆಪಿಯ ದ್ವೇಷ ತುಂಬಿದ ಸಿದ್ಧಾಂತ. ಇನ್ನೊಂದು ಕಡೆ ಕಾಂಗ್ರೆಸ್ ಪಕ್ಷದ ವಾತ್ಸಲ್ಯ, ಪ್ರೀತಿಯ ಸಿದ್ಧಾಂತವಿದೆ" ಎಂದು ರಾಹುಲ್ ತಿಳಿಸಿದ್ದಾರೆ.
ಇತ್ತ, ತೆಲುಗು ದೇಶಂ ಪಕ್ಷದ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರು ಭಾನುವಾರ ನವ ದೆಹಲಿಯಲ್ಲಿ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಲಿದ್ದಾರೆ. ಮುಂಬರುವ ತೆಲಂಗಾಣ ವಿಧಾನಸಭಾ ಚುನಾವಣೆ ಮತ್ತು ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಕುರಿತಂತೆ ಮಾತುಕತೆ ನಡೆಯುವ ಸಾಧ್ಯತೆಯಿದೆ.












Click it and Unblock the Notifications