Breaking: ಮ್ಯಾನ್ಮಾರ್‌ನಲ್ಲಿ ಪ್ರಬಲ ಭೂಕಂಪ: 7.2 ತೀವ್ರತೆಯಲ್ಲಿ ಕಂಪಿಸಿದ ಭೂಮಿ: ಬ್ಯಾಂಕಾಕ್‌ನಲ್ಲಿ ತುರ್ತು ಪರಿಸ್ಥಿತಿ ಘೋಷಣೆ
ಹೆಚ್ಚಾಗಿ ಭೂಕಂಪನ ಸಂಭವಿಸುವ ಮ್ಯಾನ್ಮಾರ್‌ನಲ್ಲಿ ಇಂದು (ಮಾರ್ಚ್ 28) 7.2 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಈ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದೆ. ಇಂದು ಬೆಳಗ್ಗೆ 11:50ರ ಸುಮಾರಿಗೆ 10 ಕಿಮೀ ಆಳದಲ್ಲಿ ಭೂಮಿ ಕಂಪಿಸಿದೆ. ಭೂಕಂಪನದ ಕೇಂದ್ರ ಬಿಂದು ಮ್ಯಾನ್ಮಾರ್ ಆಗಿದೆ.
ಇಂತಹ ಹಿಂಸಾತ್ಮಕ ಭೂಕಂಪಗಳು ಅಪರೂಪವಾಗಿ ಮಾತ್ರ ಸಂಭವಿಸುತ್ತವೆ. ಇದು ಇತ್ತೀಚೆಗೆ ಈ ಪ್ರದೇಶದಲ್ಲಿ ಸಂಭವಿಸಿದ ಅತ್ಯಂತ ಪ್ರಬಲ ಭೂಕಂಪವಾಗಿದೆ. ಮ್ಯಾನ್ಮಾರ್‌ನಲ್ಲಿ ಆಗಾಗ ಭೂಮಿ ಕಂಪಿಸುತ್ತಲೇ ಇರುತ್ತದೆ. ಇಂದು ಸಂಭವಿಸಿದ ಭೂಕಂಪನದಿಂದಾಗಿ ಯಾವುದೇ ಸಾವು ನೋವಿನ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಪ್ರಕಾರ, ಈ ಭೂಕಂಪದ ಕಂಪನಗಳು ಎಷ್ಟು ಪ್ರಬಲವಾಗಿದ್ದವೆಂದರೆ ದೆಹಲಿ ಎನ್‌ಸಿಆರ್‌ನವರೆಗೂ ಅದರ ಕಂಪನಗಳು ಅನುಭವಕ್ಕೆ ಬಂದಿವೆ. ಈ ಭೂಕಂಪದಿಂದ ಉಂಟಾದ ಜೀವ ಹಾನಿ ಅಥವಾ ಆಸ್ತಿಪಾಸ್ತಿ ನಷ್ಟ ಅಥವಾ ಹಾನಿಯ ಪ್ರಮಾಣದ ಬಗ್ಗೆ ಇದುವರೆಗೆ ಯಾವುದೇ ಮಾಹಿತಿ ಬಂದಿಲ್ಲ. ಭೂವಿಜ್ಞಾನಿಗಳ ಪ್ರಕಾರ, ಭೂಕಂಪದ ಕೇಂದ್ರಬಿಂದು ಮ್ಯಾನ್ಮಾರ್‌ನ ದಕ್ಷಿಣ ಕರಾವಳಿಯ ಬಳಿ ಇದೆ.
ಇಲ್ಲಿಯವರೆಗೆ ಬಂದಿರುವ ಮಾಹಿತಿಯ ಪ್ರಕಾರ, ಮ್ಯಾನ್ಮಾರ್ ಮತ್ತು ಥೈಲ್ಯಾಂಡ್ ರಾಜಧಾನಿ ಬ್ಯಾಂಕಾಕ್‌ನಲ್ಲಿ ಬಲವಾದ ಭೂಕಂಪನದ ಅನುಭವವಾಗಿದೆ. ಹವಾಮಾನ ಇಲಾಖೆಯ ಪ್ರಕಾರ, ಎರಡು ಬಾರಿ ಕಂಪನಗಳು ಸಂಭವಿಸಿದ್ದು, ಮೊದಲ ಬಾರಿಗೆ ರಿಕ್ಟರ್ ಮಾಪಕದಲ್ಲಿ 7.2 ಮತ್ತು ಎರಡನೇ ಬಾರಿಗೆ 7 ರಷ್ಟು ತೀವ್ರತೆ ದಾಖಲಾಗಿದೆ. ಈ ಭೂಕಂಪದ ತೀವ್ರತೆ ಎಷ್ಟು ಪ್ರಬಲವಾಗಿದೆಯೆಂದರೆ, ನಿರ್ಮಾಣ ಹಂತದಲ್ಲಿದ್ದ ಕಟ್ಟಡವೊಂದು ಕುಸಿದಿರುವ ವರದಿಗಳು ಹೊರಬರುತ್ತಿವೆ. ಭೂಕಂಪದಿಂದ ಉಂಟಾದ ಹಾನಿಯ ಪ್ರಮಾಣ ಎಷ್ಟು ಎಂಬುದರ ಕುರಿತು ಇನ್ನೂ ಮಾಹಿತಿ ಲಭ್ಯವಾಗಿಲ್ಲ.

ಬ್ಯಾಂಕಾಕ್‌ನಲ್ಲಿ ಬಲವಾದ ಭೂ ಕಂಪನ
17 ದಶಲಕ್ಷಕ್ಕೂ ಹೆಚ್ಚು ಜನರಿಗೆ ನೆಲೆಯಾಗಿರುವ ಗ್ರೇಟರ್ ಬ್ಯಾಂಕಾಕ್ ಪ್ರದೇಶದಲ್ಲಿ ಬಲವಾದ ಭೂ ಕಂಪನ ಸಂಭವಿಸಿದೆ. ಇಲ್ಲಿನ ಹಲವಾರು ಎತ್ತರದ ಅಪಾರ್ಟ್‌ಮೆಂಟ್‌ಗಳು ಅಲುಗಾಡಿವೆ. ಜೊತೆಗೆ ನಲಕ್ಕೆ ಉರಳಿ ಬಿದ್ದ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಮಧ್ಯಾಹ್ನ ಪ್ರಬಲ ಭೂಕಂಪ ಸಂಭವಿಸಿದ್ದರಿಂದ ಜನ ಭಯಭೀತರಾಗಿ ಮನೆಗಳಿಂದ ಕಚೇರಿಗಳಿಂದ ಹೊರ ಓಡಿ ಬಂದಿದ್ದಾರೆ. ಈ ಭೂಕಂಪನ ಸಾಕಷ್ಟು ಪ್ರಬಲವಾಗಿದ್ದು, ಹಲವಾರು ಜನರನ್ನು ಸ್ಥಳಾಂತರಿಸಲಾಗುತ್ತಿದೆ. ಸಾವು ನೋವು ಸಂಭವಿಸುವ ಸಾಧ್ಯತೆ ಕೂಡ ಇದೆ.
ಉತ್ತರ ಮತ್ತು ಮಧ್ಯ ಥೈಲ್ಯಾಂಡ್‌ನಲ್ಲಿ ಕಂಪನದ ಅನುಭವವಾದ ನಂತರ ಚಿಯಾಂಗ್ ಮಾಯ್ ನಲ್ಲಿ ಭೂಮಿ ಕಂಪಿಸಿದೆ. ಈ ಬಗ್ಗೆ ಸ್ಥಳೀಯ ಖಾಸಗಿ ವಾಹಿನಿಗೆ ಮಾತನಾಡಿದ ಸ್ಥಳೀಯ ವ್ಯಕ್ತಿಯೊಬ್ಬರು "ನಾನು ಮನೆಯಲ್ಲಿ ಮಲಗಿದ್ದೆ. ನನಗೆ ಏನೋ ದೊಡ್ಡದಾಗಿ ಶಬ್ದ ಕೇಳಿಸಿತು. ತಕ್ಷಣ ನಾನು ಕಟ್ಟಡದಿಂದ ಸಾಧ್ಯವಾದಷ್ಟು ದೂರ ಓಡಿದೆ" ಎಂದು ಸ್ಥಳೀಯ ವ್ಯಕ್ತಿಯೊಬ್ಬರು ಹೇಳಿಕೊಂಡಿದ್ದಾರೆ.
ಬ್ಯಾಂಕಾಕ್‌ನಲ್ಲಿ ತುರ್ತು ಪರಿಸ್ಥಿತಿ ಘೋಷಣೆ
ಭೂಕಂಪದ ನಂತರ ಬ್ಯಾಂಕಾಕ್‌ನಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಬ್ಯಾಂಕಾಕ್‌ನ ಬಹುಮಹಡಿ ಕಟ್ಟಡ ಕುಸಿತದಲ್ಲಿ ಕನಿಷ್ಠ 43 ಕಾರ್ಮಿಕರು ಸಿಲುಕಿಕೊಂಡಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎಫ್‌ಪಿ ವರದಿ ಮಾಡಿದೆ. ಭೂಕಂಪದಿಂದಾಗಿ ಬ್ಯಾಂಕಾಕ್‌ನಲ್ಲಿ ಕಟ್ಟಡಗಳಿಗೆ ಹಾನಿಯಾಗಿದ್ದು, ನಗರದಲ್ಲಿ ಕೆಲವು ಮೆಟ್ರೋ ಮತ್ತು ಲಘು ರೈಲು ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.
ಇದೇ ವರ್ಷ ಮಾರ್ಚ್ 3ರಂದು ಇಲ್ಲಿ ಭೂಕಂಪನವಾಗಿತ್ತು. ಅಲ್ಲದೆ ಮಾರ್ಚ್ 18, 2025 ರ ಮಧ್ಯಾಹ್ನ ಮಾವ್ಲೈಕ್ (ಸಗೈನ್) ನಿಂದ ಈಶಾನ್ಯಕ್ಕೆ 92 ಕಿ.ಮೀ ದೂರದಲ್ಲಿ ಸ್ಥಳೀಯ ಸಮಯ 14:19 ಕ್ಕೆ 5.1 ತೀವ್ರತೆಯ ವಿನಾಶಕಾರಿ ಭೂಕಂಪ ಸಂಭವಿಸಿತ್ತು.












Click it and Unblock the Notifications