ಎತ್ತು ಏರಿಗೆ.. ಕೋಣ ನೀರಿಗೆ.. ಇದು ರಷ್ಯಾ & ಉಕ್ರೇನ್ ವ್ಯಥೆ!
ಯುದ್ಧ ಎಂದರೆ ವಿನಾಶ, ಈ ವಿನಾಶ ಎಂಬ ಪದಕ್ಕೆ ಮತ್ತೊಂದು ಹೆಸರೇ ಯುದ್ಧವೆಂದು ಹಿರಿಯರು ಹೇಳಿದ್ದಾರೆ. ಆದರೂ ಮನುಷ್ಯ ಬುದ್ಧಿ ಕಲಿಯೋದು ಬೇಡವೇ? ಈ ಮಾತನ್ನ ಪಾಲಿಸದೆ ರಷ್ಯಾ & ಉಕ್ರೇನ್ ಹೊಡೆದಾಡುತ್ತಿವೆ. ಅತ್ತ ಪುಟಿನ್ ತಮ್ಮ ಶತ್ರುಗಳನ್ನ ನಾಶ ಮಾಡಲು ತೊಡೆ ತಟ್ಟಿದ್ದರೆ, ಇತ್ತ ಉಕ್ರೇನ್ ಹಠ ಬಿಡದೆ ರಷ್ಯಾ ಸೇನೆಯನ್ನು ಕೆರಳಿಸಿದೆ. ಹೀಗೆ ಇಬ್ಬರ ಬಡಿದಾಟದಲ್ಲಿ ಅಮಾಯಕರು ಹೆಣವಾಗುತ್ತಿದ್ದಾರೆ.
ಹೌದು, ರಷ್ಯಾ ಮತ್ತು ಉಕ್ರೇನ್ ಪರಸ್ಪರ ಡ್ರೋನ್ ದಾಳಿ ನಡೆಸಿವೆ. ರಷ್ಯಾ ಮೇಲೆ ಉಕ್ರೇನ್‌ನ ಸೇನೆ ದಾಳಿ ಆರಂಭಿಸಿದ ಬೆನ್ನಲ್ಲೇ ರಷ್ಯಾ ಪಡೆಗಳೂ ಉಕ್ರೇನ್‌ನ ಧಾನ್ಯ ಸಂಗ್ರಹಾಗಾರಗಳ ಮೇಲೆ ಬಾಂಬ್ ದಾಳಿ ನಡೆಸಿ ಪೀಸ್ ಪೀಸ್ ಮಾಡಿದೆ. ಈ ಮೂಲಕ ಉಕ್ರೇನ್‌ನಲ್ಲಿ ಜನರಿಗೆ ಅನ್ನ ಕೂಡ ಸಿಗದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಸಾಕು ನಿಲ್ಲಿಸಿ ಯುದ್ಧ ಎಂದರೂ ರಷ್ಯಾ & ಉಕ್ರೇನ್ ಮಾತು ಕೇಳುತ್ತಿಲ್ಲ. ಹಠದಿಂದ ಬಡಜನರ ಬದುಕು ಬೀದಿಗೆ ಬೀಳುತ್ತಿದೆ. ಹಾಗೇ ರಷ್ಯಾ ತನ್ನಲ್ಲಿ ಇದ್ದ ಅತ್ಯಂತ ಭಯಾನಕ ಅಸ್ತ್ರಗಳನ್ನು ಹೊರಗೆ ತೆಗೆಯುತ್ತಿದೆ.

ತಿನ್ನುವ ಅನ್ನವೂ ಮಣ್ಣು ಪಾಲು
ಇದೀಗ ರಷ್ಯಾ ಅಟ್ಯಾಕ್ ಮಾಡಿದ್ದು ತನ್ನ ಎಸ್-400 ಕ್ಷಿಪಣಿ ರಕ್ಷಣಾ ವ್ಯವಸ್ಥೆಯ ಮೂಲಕ ಎಂಬ ಆರೋಪ ಮಾಡಲಾಗಿದೆ. ಆದರೆ ರಷ್ಯಾದ ದಾಳಿಯನ್ನು ಎದುರಿಸಿದ್ದೇವೆ ಅಂತಿದೆ ಉಕ್ರೇನ್. ಈ ಕುರಿತು ರಷ್ಯಾ ಅಧಿಕಾರಿಗಳು ಇಲ್ಲಿವರೆಗೂ ಪ್ರತಿಕ್ರಿಯೆ ನೀಡಿಲ್ಲ. ಹೀಗಾಗಿ ಸ್ಥಿತಿ ಬೂದಿ ಮುಚ್ಚಿದ ಕೆಂಡವಾಗಿದೆ. ಹಾಗೇ ಉಕ್ರೇನ್‌ನ ಬಂದರು ನಗರಿ ಒಡೆಸಾ ಪ್ರದೇಶದಲ್ಲಿ ರಷ್ಯಾ ನಡೆಸಿದ ದಾಳಿಯ ಪರಿಣಾಮ ಧಾನ್ಯ ಸಂಗ್ರಹಿಸಿದ್ದ ಪ್ರದೇಶಗಳು ಛಿದ್ರ ಛಿದ್ರವಾಗಿ ಹೋಗಿವೆ. ಆದರೆ ಇದೇ ಹೊತ್ತಲ್ಲಿ ಉಕ್ರೇನ್‌ನ ವಾಯು ರಕ್ಷಣಾ ವ್ಯವಸ್ಥೆ ಒಂಬತ್ತು ಡ್ರೋನ್ ಹೊಡೆದುರುಳಿಸಿದೆ ಎಂದು ಉಕ್ರೇನ್‌ನ ಒಡೆಸಾ ಪ್ರಾದೇಶಿಕ ಸೇನಾ ಆಡಳಿತದ ಮುಖ್ಯಸ್ಥ ಒಲೇಹ್ ಕೀಪರ್ ಮಾಹಿತಿ ನೀಡಿದ್ದಾರೆ.
ಉಕ್ರೇನ್ ಜನರಿಗೆ ತಿನ್ನಲು ಅನ್ನ ಇಲ್ಲ
ಇನ್ನು ಉಕ್ರೇನ್ ತನ್ನ ಮೇಲೆ ದಾಳಿ ಮಾಡುತ್ತಿರುವ ಕಾರಣಕ್ಕೆ ರಷ್ಯಾ ಪ್ರತ್ಯುತ್ತರ ನೀಡಿದೆ ಎನ್ನಲಾಗಿದೆ. ಆದರೆ ರಷ್ಯಾ ನಡೆಸಿದ ದಾಳಿಯಲ್ಲಿ ಹಾಳಾಗಿದ್ದು ಒಂದೆರಡು ಕೆಜಿ ಆಹಾರ ಪದಾರ್ಥ ಅಲ್ಲ. ರಷ್ಯಾ ದಾಳಿಯಿಂದ 13,000 ಮೆಟ್ರಿಕ್ ಟನ್ ಧಾನ್ಯ ನಾಶವಾಗಿದೆ. ಒಂದು ತಿಂಗಳಲ್ಲಿ ಸುಮಾರು 2,70,00 ಮೆಟ್ರಿಕ್ ಟನ್ ಧಾನ್ಯ ನಾಶವಾಗಿ ಹೋಗಿದೆ ಎಂದು ಉಕ್ರೇನ್ ಸಚಿವ ಒಲೆಕ್ಸಾಂಡರ್ ಕುಬ್ರಕೊವ್ ತಿಳಿಸಿದ್ದಾರೆ. ಇದು ಉಕ್ರೇನ್ ಕಥೆಯಾಗಿದ್ದರೆ, ರಷ್ಯಾದ ಕಡೆಯೂ ಉಕ್ರೇನ್ ಡ್ರೋನ್‌ಗಳು ಹಾರಾಡಿವೆ ಎಂದು ಆರೋಪಿಸಲಾಗಿದೆ. ಮಾಸ್ಕೋದಲ್ಲಿ ಉಕ್ರೇನ್ ಡ್ರೋನ್‌ಗಳ ಕಥೆ ಮುಗಿಸಿದ್ದೇವೆ ಎಂದಿದೆ ರಷ್ಯಾ ಸೇನೆ.

ಕಪ್ಪು ಸಮುದ್ರದಲ್ಲೂ ನಿಲ್ಲುತ್ತಿಲ್ಲ ಕಿರಿಕ್
ಯುರೋಪ್ ರಾಷ್ಟ್ರಗಳಿಗೆ ಕಪ್ಪು ಸಮುದ್ರ ಜೀವ. ಅದರಲ್ಲೂ ಉಕ್ರೇನ್‌ಗೆ ಇದೇ ಜಲಮಾರ್ಗದ ಮೂಲಕ ವ್ಯವಹಾರ ನಡೆಯುತ್ತಿತ್ತು. ಆದರೆ ಕೆಲ ದಿನಗಳ ಹಿಂದಷ್ಟೇ ರಷ್ಯಾ ಸೇನೆ ಇಲ್ಲಿ ಉಕ್ರೇನ್ ನೌಕೆಯನ್ನ ಉಡಾಯಿಸಿತ್ತು. 2014ರ ಬಳಿಕ ಉಕ್ರೇನ್‌ಗೆ ಕಪ್ಪು ಸಮುದ್ರದ ಮೇಲಿನ ಹಿಡತ ಭಾಗಶಃ ತಪ್ಪಿದೆ. 2022ರಲ್ಲಿ ರಷ್ಯ ಯುದ್ಧ ಘೋಷಣೆ ಮಾಡಿದ ಬಳಿಕ ಇಂದಿನ ತನಕ ದಿನದಿನಕ್ಕೂ ಉಕ್ರೇನ್ ನರಳುತ್ತಿದೆ. ಅಗತ್ಯ ಇರುವ ದಿನಬಳಕೆಯ ವಸ್ತು ತರಿಸಿಕೊಳ್ಳುವುದಕ್ಕು ಪರದಾಡುತ್ತಿದೆ ಉಕ್ರೇನ್. ಇದೇ ಸಂದರ್ಭದಲ್ಲಿ ಆಹಾರ ಧಾನ್ಯಗಳು ರಷ್ಯಾ ದಾಳಿಯಿಂದ ಮಣ್ಣುಪಾಲಾಗಿದೆ.

ಅದೆಲ್ಲಾ ಏನೇ ಇರಲಿ ಈಗಲಾದರೂ ಜಗತ್ತು ಕಠಿಣ ನಿಲುವು ಕೈಗೊಂಡು, ಯುದ್ಧವನ್ನು ನಿಲ್ಲಿಸಬೇಕು. ಇಲ್ಲವಾದಲ್ಲಿ ಪರಿಸ್ಥಿತಿ ಮತ್ತಷ್ಟು ಕೈಮೀರಿ ಹೋಗಲಿದೆ. ಇದರಿಂದ ಮುಗ್ಧ ಜನರ ಜೀವನ ಬೀದಿಗೆ ಬೀಳಲಿದೆ. ಇದನ್ನೆಲ್ಲಾ ತಪ್ಪಿಸಲು ಪ್ರಪಂಚದ ಪ್ರತಿಯೊಂದು ದೇಶ ಕ್ರಮಕ್ಕೆ ಮುಂದಾಗಬೇಕು. ಆಗ ಮಾತ್ರ ಉಕ್ರೇನ್ ಅಮಾಯಕರಿಗೆ ನೆಮ್ಮದಿ ಸಿಗಲು ಸಾಧ್ಯ. ಇಲ್ಲವಾದರೆ ಇದೇ ರೀತಿ ಬೀದಿ ಬೀದಿಯಲ್ಲಿ ಜನರ ಹೆಣ ಬೀಳುವುದು ಪಕ್ಕಾ.












Click it and Unblock the Notifications