India vs Pakistan: ಭಾರತವನ್ನು ಸೋಲಿಸುತ್ತೇವೆ! ಭಾಷಣ ಮಾಡಿ ಇಕ್ಕಟ್ಟಿಗೆ ಸಿಲುಕಿದ ಪಾಕ್ ಪ್ರಧಾನಿ
'ಕೈಯಲ್ಲಿ ಆಗದೇ ಇದ್ದರೂ ಮೈಯೆಲ್ಲಾ ಪರಚಿಕೊಳ್ಳೋದು' ಪಾಕಿಸ್ತಾನಕ್ಕೆ ಅಭ್ಯಾಸವಾಗಿದೆ. ದೇಶದಲ್ಲಿ ನೂರೆಂಟು ಸಮಸ್ಯೆ ಇದ್ದರೂ ಭಾರತದ ವಿರುದ್ಧ ಟೀಕೆ ಮಾಡುತ್ತಾ ಕಾಲ ಕಳೆಯುವುದು ಅಲ್ಲಿನ ನಾಯಕರಿಗೆ ಚಟವಾಗಿದೆ. ಇದೀಗ ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಇಂತಹದ್ದೇ ಅವಿವೇಕದ ಹೇಳಿಕೆ ನೀಡಿ ಸಂಕಷ್ಟಕ್ಕೆ ಸಿಲುಕಿದ್ದಾರೆ.
ರ್‍ಯಾಲಿಗಳಲ್ಲಿ ವೀರಾವೇಶದ ಭಾಷಣ ಮಾಡಲು ಹೆಸರುವಾಸಿಯಾಗಿರುವ ಅವರು ಇದೀಗ ಸಾರ್ವಜನಿಕ ಭಾಷಣದಲ್ಲಿ ಭಾರತದ ಬಗ್ಗೆ ಮಾತನಾಡಿದ್ದಾರೆ. ಆರ್ಥಿಕತೆ ಮತ್ತು ಅಭಿವೃದ್ಧಿ ವಿಚಾರದಲ್ಲಿ ಪಾಕಿಸ್ತಾನ ಭಾರತವನ್ನು ಸೋಲಿಸದೇ ಇದ್ದರೆ ನನ್ನ ಹೆಸರು ಬದಲಾಯಿಸಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

ಇತ್ತೀಚೆಗೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಡೇರಾ ಘಾಜಿ ಖಾನ್‌ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಶಹಬಾಜ್ ಷರೀಫ್ ಇಂತಹ ಭಾಷಣ ಮಾಡಿದ್ದಾರೆ. ರ್‍ಯಾಲಿಯಲ್ಲಿ ವೀರಾವೇಶವಾಗಿ ಮಾತನಾಡುತ್ತಿದ್ದು ತಮ್ಮ ಮುಷ್ಟಿಯನ್ನು ಗಾಳಿಯಲ್ಲಿ ಬೀಸುವುದನ್ನು ನೋಡಬಹುದು. ವೇದಿಕೆಯ ಮೇಲೆ ಎಗರುತ್ತಿದ್ದ ಅವರು ಕೈಗಳಿಂದ ಎದೆಗೆ ಬಡಿದುಕೊಳ್ಳುವ ಜೊತೆಗೆ ವೇದಿಕೆಯ ಮೇಲಿನ ಮೇಜನ್ನು ಗುದ್ದುತ್ತಿದ್ದರು.
ತಮ್ಮ ಸರ್ಕಾರ ಸಾಮಾನ್ಯ ಜನರ ಅಗತ್ಯಗಳನ್ನು ಪೂರೈಸಲು ಶ್ರಮಿಸುತ್ತಿದೆ. ಪಾಕಿಸ್ತಾನದ ಪರಿಸ್ಥಿತಿಯನ್ನು ಸುಧಾರಿಸಲು ನಮ್ಮ ಸರ್ಕಾರ ಹಗಲಿರುಳು ಕೆಲಸ ಮಾಡುತ್ತಿದೆ. ದೇವರ ಆಶೀರ್ವಾದ ಪಾಕಿಸ್ತಾನದ ಮೇಲಿದೆ. ನಮ್ಮ ಪ್ರಯತ್ನದಿಂದ ಪಾಕಿಸ್ತಾನ ಅಭಿವೃದ್ಧಿಯಲ್ಲಿ ಭಾರತವನ್ನು ಹಿಂದಿಕ್ಕದೇ ಇದ್ದರೆ ನನ್ನ ಹೆಸರು ಶೆಹಬಾಜ್ ಷರೀಫ್ ಆಗಿರುವುದಿಲ್ಲ ಎಂದು ಹೇಳಿದ್ದಾರೆ.
ತನ್ನ ಹಿರಿಯ ಸಹೋದರ ಮತ್ತು ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಮೇಲೆ ಪ್ರಮಾಣ ಮಾಡುತ್ತಾ, ನಾನು ನವಾಜ್ ಷರೀಫ್ ಅವರ ಅಭಿಮಾನಿ, ಅವರ ಅನುಯಾಯಿ. ಇಂದು, ನಾನು ಅವರ ಆಶೀರ್ವಾದ ಜೀವನದ ಮೇಲೆ ಪ್ರಮಾಣ ಮಾಡುತ್ತೇನೆ, ನನಗೆ ಶಕ್ತಿ ಮತ್ತು ಇಚ್ಛೆ ಇರುವವರೆಗೂ, ಪಾಕಿಸ್ತಾನವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಮತ್ತು ಭಾರತವನ್ನು ಸೋಲಿಸಲು ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ.
ಅಪಹಾಸ್ಯಕ್ಕೀಡಾದ ಪಾಕ್ ಪ್ರಧಾನಿ ಭಾಷಣ
ಶೆಹಬಾಜ್ ಷರೀಫ್ ಅವರ ಭಾಷಣದ ವಿಡಿಯೋವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದ್ದು ವ್ಯಾಪಟ ಟೀಕೆ ವ್ಯಕ್ತವಾಗಿದೆ. ಅಭಿವೃದ್ಧಿಗೆ ಯಾವುದೇ ಪ್ರಯತ್ನಗಳನ್ನು ಮಾಡದೇ ಇದ್ದರೂ ಸುಮ್ಮನೆ ದೊಡ್ಡ ಭರವಸೆಗಳನ್ನು ನೀಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಲಾಗಿದೆ. ಭಾರತವನ್ನು ಸೋಲಿಸುವ ಕನಸು ಪಕ್ಕಕ್ಕಿಡಿ ಮೊದಲು ದೇಶದ ಸಮಸ್ಯೆಗಳನ್ನು ಸರಿಪಡಿಸಿ ಎಂದು ಆಗ್ರಹಿಸಲಾಗಿದೆ.
ಭಾರತವನ್ನು ಸೋಲಿಸುವ ಭಾಷಣ ಮಾಡುವ ಕೆಲವು ದಿನಗಳ ಹಿಂದಷ್ಟೇ ಷರೀಫ್ ಭಾರತದ ಜೊತೆ ಮಾತುಕತೆಯನ್ನು ಮತ್ತೆ ಆರಂಭಿಸುವ ಬಗ್ಗೆ ಮಾತನಾಡಿದ್ದರು. ಮತ್ತೆ ಮಾತುಕತೆ ನಡೆಸಬೇಕು ಎಂದರೆ ಪಾಕಿಸ್ತಾನ ಭಯೋತ್ಪಾದನೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕು ಎಂದು ಭಾರತ ಹೇಳಿದೆ. ಭಯೋತ್ಪಾದನೆ ಮತ್ತು ಮಾತುಕತೆ ಒಟ್ಟಿಗೆ ಹೋಗಲು ಸಾಧ್ಯವಿಲ್ಲ ಎಂದು ಹೇಳಿದೆ.












Click it and Unblock the Notifications