Israel War: ಗಾಜಾದಿಂದ 10 ಲಕ್ಷ ಜನರ ಸ್ಥಳಾಂತರ: ಮಾರಕ ದಾಳಿ ಮಾಡಲು ಒಪ್ಪಿಗೆಗೆ ಕಾಯುತ್ತಿದೆ ಇಸ್ರೇಲ್ ಸೇನೆ
ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವಿನ ಯುದ್ಧ ಸೋಮವಾರ 10 ನೇ ದಿನಕ್ಕೆ ಕಾಲಿಟ್ಟಿದ್ದು, ಮತ್ತಷ್ಟು ಉಲ್ಬಣಗೊಳ್ಳುವ ನಿರೀಕ್ಷೆಯಿದೆ. ಪ್ಯಾಲೆಸ್ಟೈನ್‌ನ ಹಮಾಸ್ ಉಗ್ರರಿಂದ ದಾಳಿಯಾದ ಬಳಿಕ ತಿರುಗಿಬಿದ್ದ ಇಸ್ರೇಲ್ ಪ್ರತಿ ದಾಳಿ ಮಾಡುತ್ತಿದ್ದು, ಗಾಜಾ ಪಟ್ಟಿಯಲ್ಲಿ 10 ಲಕ್ಷಕ್ಕೂ ಹೆಚ್ಚು ನಾಗರಿಕರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದ್ದು, ಮತ್ತೊಂದು ಮಾರಕ ದಾಳಿಗೆ ಇಸ್ರೇಲ್ ಪಡೆಗಳು ಸಜ್ಜಾಗಿವೆ.
ಇಸ್ರೇಲಿ ಗಡಿ ಪಟ್ಟಣಗಳ ಮೂಲಕ ಜಗತ್ತನ್ನು ಬೆಚ್ಚಿಬೀಳಿಸಿದ ಹಮಾಸ್ ಉಗ್ರಗಾಮಿಗಳ ಬೆನ್ನಟ್ಟಲು ಸೈನಿಕರು ಗಾಜಾ ಪಟ್ಟಿಗೆ ತೆರಳಲು ಸಿದ್ಧವಾಗುತ್ತಿದ್ದಂತೆ ಇಸ್ರೇಲಿ ಸೇನೆಯು "ಹಮಾಸ್ ಅನ್ನು ನಾಶಮಾಡಲು" ಪ್ರತಿಜ್ಞೆ ಮಾಡಿದೆ.

ಗಾಜಾ ಮೇಲೆ ಆಕ್ರಮಣ ಮುಂದುವರೆಸಲು ಸೈನ್ಯ ಎಲ್ಲಾ ತಯಾರಿ ಮಾಡಿಕೊಂಡಿದ್ದು, ಸರ್ಕಾರದ ಆದೇಶಕ್ಕಾಗಿ ಕಾಯುತ್ತಿದೆ. ಹಮಾಸ್ ನಿಯಂತ್ರಿತ ಗಾಜಾದ ಮೇಲೆ ವಾಯು ದಾಳಿ ಮಾಡಿದ್ದ ಇಸ್ರೇಲ್, ಪ್ರಮುಖ ಕಟ್ಟಡಗಳನ್ನೇ ನಿರ್ನಾಮ ಮಾಡಿದೆ. ಅಲ್ಲದೆ ಪ್ರದೇಶಕ್ಕೆ ಆಹಾರ ಮತ್ತು ವಿದ್ಯುತ್ ಪೂರೈಕೆಯನ್ನು ನಿಲ್ಲಿಸಿದೆ.
ಇಸ್ರೇಲ್-ಹಮಾಸ್ ಯುದ್ಧದ ಮಧ್ಯೆ, ಪ್ಯಾಲೆಸ್ತೀನ್ ಅಧ್ಯಕ್ಷ ಮಹಮೂದ್ ಅಬ್ಬಾಸ್ ಅವರು ಹಮಾಸ್ ಗುಂಪಿನ ಕಾರ್ಯಗಳು "ಪ್ಯಾಲೆಸ್ತೀನ್ ಜನರನ್ನು ಪ್ರತಿನಿಧಿಸುವುದಿಲ್ಲ" ಎಂದು ಹೇಳಿರುವುದಾಗಿ ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.
ಹಮಾಸ್ ಸರ್ವನಾಶವಾಗಬೇಕು ಎಂದ ಬಿಡೆನ್
ಇಸ್ರೇಲ್ ಮತ್ತು ಹಮಾಸ್ ನಡುವಿನ ಕದನ ವಿರಾಮಕ್ಕೆ ಇದು ಸಮಯವೇ ಎಂದು ಕೇಳಿದ ಪ್ರಶ್ನೆಗೆ ಉತ್ತರ ನೀಡಿರುವ ಅಮೆರಿಕ ಅಧ್ಯಕ್ಷ ಜೋ ಬಿಡೆನ್, ಹಮಾಸ್ ದಾಳಿಯಲ್ಲಿ ಕೊಲ್ಲಲ್ಪಟ್ಟ ಇಸ್ರೇಲಿಗಳು ಮತ್ತು ಇಸ್ರೇಲಿ ಪ್ರತಿದಾಳಿಯಲ್ಲಿ ಕೊಲ್ಲಲ್ಪಟ್ಟ ಪ್ಯಾಲೆಸ್ಟೀನಿಯಾದ ನಡುವೆ ಮೂಲಭೂತ ವ್ಯತ್ಯಾಸ ಇದೆ ಎಂದು ಹೇಳಿದರು.
ಹತ್ಯಾಕಾಂಡವನ್ನು ನಡೆಸಿದ ಜನರ ಗುಂಪನ್ನು ನಾಶ ಮಾಡಲು ಇಸ್ರೇಲ್ ಕೆಲಸ ಮಾಡುತ್ತಿದೆ. ಅವರ ಮೇಲೆ ದಾಳಿಯಾದಾಗ ಇಸ್ರೇಲ್ ಹೀಗೆ ಪ್ರತಿಕ್ರಿಯಿಸಬೇಕು, ಹಮಾಸ್ ಅವರನ್ನು ಬಿಡಬಾರದು, ಹಮಾಸ್‌ಗಳದ್ದು ಹೇಡಿಗಳ ಗುಂಪು, ಅವರು ನಾಗರಿಕೆ ಹಿಂದೆ ಅಡಗಿಕೊಳ್ಳುತ್ತಿದ್ದಾರೆ, ಅವರ ಪ್ರಧಾನ ಕಚೇರಿ, ಕಟ್ಟಡಗಳಲ್ಲಿ ನಾಗರಿಕರನ್ನು ಬಂಧಿಸಿ ದಾಳಿಯಿಂದ ತಪ್ಪಿಸಿಕೊಳ್ಳಲು ನೋಡಿದರು, ಮುಗ್ದ ನಾಗರಿಕರ ಹತ್ಯೆಯನ್ನು ತಪ್ಪಿಸಲು ಇಸ್ರೇಲ್ ಕೆಲಸ ಮಾಡಲಿದೆ ಎಂದರು.
ಗಾಜಾದ ಮೇಲೆ ಇಸ್ರೇಲ್ ಆಕ್ರಮಣವು ದೊಡ್ಡ ತಪ್ಪು ಎಂದು ಬಿಡೆನ್ ಸಂದರ್ಶನದಲ್ಲಿ ಹೇಳಿದರು. ಇಸ್ರೇಲ್ ಗಾಜಾ ಮೇಲೆ ಆಕ್ರಮಣ ಮಾಡುವುದನ್ನು ನೀವು ಬೆಂಬಲಿಸುತ್ತೀರಾ ಎಂದು ಕೇಳಿದಾಗ, "ಇದು ದೊಡ್ಡ ತಪ್ಪು ಎಂದು ನಾನು ಭಾವಿಸುತ್ತೇನೆ. ಗಾಜಾದಲ್ಲಿ ಏನಾಯಿತು, ನನ್ನ ದೃಷ್ಟಿಯಲ್ಲಿ, ಹಮಾಸ್‌ನ ಉಗ್ರರು ಎಲ್ಲಾ ಪ್ಯಾಲೆಸ್ತೀನ್ ಜನರನ್ನು ಪ್ರತಿನಿಧಿಸುವುದಿಲ್ಲ. ಗಾಜಾವನ್ನು ಇಸ್ರೇಲ್ ವಶಕ್ಕೆ ಪಡೆಯುವುದು ತಪ್ಪು, ಆದರೆ ಉಗ್ರಗಾಮಿಗಳನ್ನು ಹೊರಗೆಳೆದು ನಾಶ ಮಾಡಬೇಕು" ಎಂದು ಹೇಳಿದರು.
ಏತನ್ಮಧ್ಯೆ, ಲೆಬನಾನ್‌ನೊಂದಿಗೆ ಹೆಚ್ಚುತ್ತಿರುವ ಘರ್ಷಣೆಗಳ ಮಧ್ಯೆ ಅಮೆರಿಕದ ಯುದ್ಧನೌಕೆಗಳು ಈ ಪ್ರದೇಶಕ್ಕೆ ಹೋಗುತ್ತಿದ್ದಂತೆ ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧವು ಉಲ್ಬಣಗೊಳ್ಳಬಹುದು ಎಂದು ಯುಎಸ್ ಉನ್ನತ ಅಧಿಕಾರಿಗಳು ಎಚ್ಚರಿಸಿದ್ದಾರೆ.
ಇತ್ತೀಚಿನ ಮಾಹಿತಿಯ ಪ್ರಕಾರ, ಯುದ್ಧವು ಕಳೆದ ಶನಿವಾರ ಪ್ರಾರಂಭವಾದಾಗಿನಿಂದ ಕನಿಷ್ಠ 3,200 ಜೀವಗಳನ್ನು ಬಲಿ ತೆಗೆದುಕೊಂಡಿದೆ.












Click it and Unblock the Notifications