ರಷ್ಯಾಗೆ ‘ಶಾಂತಿ’ಯ ಸಂದೇಶ ಕಳುಹಿಸಿದ ಸರ್ವಾಧಿಕಾರಿ!
ಮಾಸ್ಕೋ: ಉಕ್ರೇನ್ ವಿರುದ್ಧ ಯುದ್ಧ ಶುರುವಾದ ಬಳಿಕ ರಷ್ಯಾ ವಿರುದ್ಧ ಅಮೆರಿಕ, ಯುರೋಪ್ ಒಕ್ಕೂಟ ತಿರುಗಿಬಿದ್ದಿದೆ. ಜಗತ್ತೇ ತಿರುಗಿಬಿದ್ರೂ ರಷ್ಯಾ ಅಧ್ಯಕ್ಷ ಪುಟಿನ್ ತಲೆಕೆಡಿಸಿಕೊಳ್ಳುತ್ತಿಲ್ಲ. ಆದರೆ ಇದೇ ಹೊತ್ತಲ್ಲಿ ಚೀನಾ & ಉತ್ತರ ಕೊರಿಯಾ ರಷ್ಯಾಗೆ ಬಹಿರಂಗ ಬೆಂಬಲ ನೀಡಿವೆ. ಈಗ ಉತ್ತರ ಕೊರಿಯಾ ಸರ್ವಾಧಿಕಾರಿ ಏನು ಮಾಡಿದ್ದಾನೆ ಗೊತ್ತಾ? ಮುಂದೆ ತಿಳಿಯೋಣ ಬನ್ನಿ.
ನಾಜಿ ಜರ್ಮನಿ ಸಂಪೂರ್ಣ ನಾಶವಾಗಿ ರಷ್ಯಾ ಮುಂದೆ ಮಂಡಿ ಊರಿದ ಸವಿ ನೆನಪಿಗೆ ರಷ್ಯಾ ದೇಶ ಪ್ರತಿವರ್ಷ ಮೇ 9ರಂದು 'ವಿಜಯ ದಿವಸ' ಆಚರಿಸುತ್ತದೆ. ವಿಜಯ ದಿವಸದ ಸಂಭ್ರಮದಲ್ಲಿ ರಷ್ಯನ್ನರು ತೇಲುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಕೂಡ ಸ್ಪೆಷಲ್ ಮೆಸೇಜ್ ಕಳುಹಿಸಿದ್ದು ಜಗತ್ತಿನ ಗಮನ ಸೆಳೆದಿದೆ. ರಷ್ಯಾ ಅಧ್ಯಕ್ಷ ಪುಟಿನ್ ಜೊತೆ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಅಮೆರಿಕದ ಪರಮ ಶತ್ರು ಕಿಮ್ ಜಾಂಗ್ ಉನ್, ರಷ್ಯಾದ ಪ್ರಜೆಗಳಿಗೆ ಹೇಳಿದ್ದೇನು ಗೊತ್ತಾ?

ಶಾಂತಿಯ ಸಂದೇಶ ಕಳುಹಿಸಿದ ಸರ್ವಾಧಿಕಾರಿ!
ಹೌದು, ರಷ್ಯಾದ ವಿಕ್ಟರಿ ಡೇ ಸಂಭ್ರಮದ ಹೊತ್ತಲ್ಲೇ ಮನಸ್ಸು ಬಿಚ್ಚಿ ಮಾತನಾಡಿದ್ದಾನೆ ಉತ್ತರ ಕೊರಿಯಾದ ಸರ್ವಾಧಿಕಾರಿ. ಕಿಮ್ ಜಾಂಗ್ ಉನ್ ತನ್ನ ಸ್ನೇಹಿತ ರಾಷ್ಟ್ರ ರಷ್ಯಾಗೆ ಸ್ಪೆಷಲ್ ಸಂದೇಶ ಕಳುಹಿಸಿದ್ದಾನೆ. ಈ ಸಂದೇಶದಲ್ಲಿ ಶಾಂತಿಯ ಮಾತು ಇದೆ. 'ವಿಶ್ವ ಶಾಂತಿ ಕಾಪಾಡುವ ಪವಿತ್ರ ಹೋರಾಟಕ್ಕಾಗಿ ನಾವು ನಿಮಗೆ, ರಷ್ಯಾದ ಸೇನೆಗೆ ಹಾಗೂ ರಷ್ಯಾದ ಜನರಿಗೆ ಹೃತ್ಪೂರ್ವಕ ಶುಭಾಶಯ ತಿಳಿಸುತ್ತೇವೆ' ಎಂದಿದ್ದಾನೆ ಕಿಮ್ ಜಾಂಗ್ ಉನ್. ಈ ಮೂಲಕ ರಷ್ಯಾ ಸೇನೆ ಹಿಟ್ಲರ್ ವಿರುದ್ಧ ಗೆದ್ದ ಸಂಭ್ರಮವನ್ನು ತಾನೂ ಸಂಭ್ರಮಿಸಿದ್ದಾನೆ ಕಿಮ್.
ರಷ್ಯಾ & ಉತ್ತರ ಕೊರಿಯಾ ಕುಚ್ಚಿಕು!
ಅಂದಹಾಗೆ ಅಮೆರಿಕ ವಿರುದ್ಧ ಇರುವ ರಾಷ್ಟ್ರಗಳು ಬಹುತೇಕ ರಷ್ಯಾ ಅಥವಾ ಚೀನಾ ಜೊತೆಗೆ ಸೇರುತ್ತಿವೆ. ಈ ಪೈಕಿ ಉತ್ತರ ಕೊರಿಯಾ ಮೊದಲಿನದ್ದು ಎನ್ನಬಹುದು. ಅಮೆರಿಕ ಮತ್ತು ಅಮೆರಿಕದ ಸ್ನೇಹಿತರನ್ನ ತನ್ನ ಕ್ಷಿಪಣಿಗಳ ಮೂಲಕವೇ ಹೆದರಿಸುತ್ತಾನೆ ಉತ್ತರ ಕೊರಿಯಾ ಸರ್ವಾಧಿಕಾರಿ. ಇಂತಿಪ್ಪ ಕಿಮ್ ಜಾಂಗ್ ಉನ್, ರಷ್ಯಾ ವಿಚಾರದಲ್ಲಿ ಮಾತ್ರ ಮಗು ಮನಸ್ಸಿನವನು. ಈಗಲೂ ಅಷ್ಟೇ ತನ್ನ ಸ್ನೇಹಿತ ರಾಷ್ಟ್ರಕ್ಕೆ ವಿಜಯದ ಶುಭಾಶಯ ಕೋರಿ ಜಗತ್ತಿನ ಗಮನ ಸೆಳೆದಿದ್ದಾನೆ.
ಪರಮಾಣು ಬಾಂಬ್ ಹಾಕೋದು ಪಕ್ಕಾ?
ಹೌದು, ಇಂದು ರಷ್ಯಾದ ಐತಿಹಾಸಿಕ ಗೆಲುವಿನ ಬಗ್ಗೆ ಸ್ಮರಣೆ ಮಾಡುತ್ತಾ ಪುಟಿನ್ ಭಾಷಣ ಮಾಡುವಾಗ ಖಡಕ್ ಆಗಿ ಎಚ್ಚರಿಸಿದ್ದಾರೆ ಪುಟಿನ್. ಅದೇನಂದ್ರೆ 'ನಾಗರಿಕತೆ ಮತ್ತೊಮ್ಮೆ ನಿರ್ಣಾಯಕ ತಿರುವಿನಲ್ಲಿದೆ' ಎಂದಿದ್ದಾರೆ. ಇದು ಊಹಾಪೋಹಕ್ಕೆ ಪುಷ್ಟಿ ನೀಡುವ ಜೊತೆಗೆ, ಜಪಾನ್ ಮೇಲೆ ಅಮೆರಿಕ ಹಾಕಿದ್ದ ಭೀಕರ ಅಣುಬಾಂಬ್ ದಾಳಿ ಮತ್ತೊಮ್ಮೆ ನೆನಪಿಸುವಂತಿದೆ. 2ನೇ ಮಹಾಯುದ್ಧದ ಬಳಿಕ ಮತ್ತೊಮ್ಮೆ ಅಂತಹ ಭೀಕರ ನ್ಯೂಕ್ಲಿಯರ್ ದಾಳಿ ಭಯ ಶುರುವಾಗಿದೆ. ಅಮೆರಿಕಗೆ ಪುಟಿನ್ ನೀಡಿರುವ ಎಚ್ಚರಿಕೆ ಸಂಚಲನ ಸೃಷ್ಟಿಸಿದೆ.

7 ಸುತ್ತಿನ ಕೋಟೆ ರಷ್ಯಾ ರಾಜಧಾನಿ
ಹಿಟ್ಲರ್‌ನ ಜರ್ಮನಿ ಸೇನೆ ವಿರುದ್ಧ ರಷ್ಯಾ ಸೇನೆ ಐತಿಹಾಸಿಕ ಜಯ ಸಾಧಿಸಿದ್ದು 1945ರ ಮೇ 8ರಂದು. ಆದ್ರೆ ರಷ್ಯಾ ಆಚರಣೆ ನಡೆಯುವುದು ಮೇ 9ಕ್ಕೆ! ಇದಕ್ಕೆ ಕಾರಣ ರಷ್ಯಾದ ಟೈಂ. ಅಂದಹಾಗೆ ನಾಜಿ ಜರ್ಮನಿ ರಷ್ಯಾ ಎದುರು ಶರಣಾಗಿ ಮಂಡಿಯೂರಿದ ಸಮಯ ಮೇ 8, ಆದರೆ ಅದೇ ಹೊತ್ತಲ್ಲಿ ರಷ್ಯಾ ಟೈಮಿಂಗ್ಸ್ ಮೇ 9ನ್ನು ತಲುಪಿತ್ತು. ಈ ಕಾರಣಕ್ಕೆ ರಷ್ಯಾದಲ್ಲಿ ನಾಜಿ ಜರ್ಮನಿ ವಿರುದ್ಧದ ಗೆಲುವಿನ 'ವಿಜಯ ದಿವಸ' ಆಚರಣೆ ಮೇ 9ಕ್ಕೆ ನಡೆಯುತ್ತದೆ. ಈ ಬಾರಿ 'ರೆಡ್ ಸ್ಕ್ವೇರ್ ಪರೇಡ್' ನಡೆಯುವುದೇ ಅನುಮಾನವಾಗಿತ್ತು. ಭೀತಿ ಮರೆಯಾಗಿ ರಷ್ಯಾ ಸೇನೆ ಪರೇಡ್ ನಡೆಸಿದ್ದು, ಭದ್ರತೆ ಕಾರಣಕ್ಕೆ ರಷ್ಯಾ ರಾಜಧಾನಿ ಮಾಸ್ಕೋ 7 ಸುತ್ತಿನ ಕೋಟೆಯಂತಾಗಿದೆ.












Click it and Unblock the Notifications