ಆದಿಪುರುಷ ವಿವಾದ: ಈ ನಗರದಲ್ಲಿ ಇನ್ನು ಭಾರತೀಯ ಚಲನಚಿತ್ರಗಳೇ ಬ್ಯಾನ್ !
ಬಹುನಿರೀಕ್ಷಿತ ಆದಿಪುರುಷ ಸಿನಿಮಾ ಟೀಸರ್ ಬಿಡುಗಡೆಯಾದಾಗಿನಿಂದಲೂ ಹಲವು ವಿಚಾರಗಳಿಗೆ ಟೀಕೆಗೆ ಒಳಗಾಗಿದೆ. ಸದ್ಯ ವಿಶ್ವಾದ್ಯಂತ ತೆರೆ ಕಂಡಿದ್ದು ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿತ್ರದ ಒಂದು ಸಂಭಾಷಣೆ ಈಗ ಇಡೀ ಭಾರತೀಯ ಚಿತ್ರರಂಗಕ್ಕೆ ಸಮಸ್ಯೆ ತಂದೊಡ್ಡಿದೆ. ಹೌದು, ಭಾರತದ ಯಾವುದೇ ಚಲನಚಿತ್ರಗಳು ನೇಪಾಳದ ಕಠ್ಮಂಡುವಿನಲ್ಲಿ ಪ್ರದರ್ಶನವಾಗುವುದಿಲ್ಲ.
'ಸೀತೆ ಭಾರತದ ಮಗಳು' ಎನ್ನುವ ಸಂಭಾಷಣೆ ನೇಪಾಳದ ಕೋಪಕ್ಕೆ ಗುರಿಯಾಗಿತ್ತು, ಈಗ ಬ್ಯಾನ್ ಬಿಸಿ ತಟ್ಟಿದೆ. ಕಠ್ಮಂಡು ಮೇಯರ್ ಬಾಲೆನ್ ಶಾ ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಕಠ್ಮಂಡು ಮೆಟ್ರೋಪಾಲಿಟನ್ ಪ್ರದೇಶದಲ್ಲಿ ಯಾವುದೇ ಭಾರತೀಯ ಚಲನಚಿತ್ರವನ್ನು ಪ್ರದರ್ಶಿಸುವುದಿಲ್ಲ ಎಂದು ಹೇಳಿದ್ದಾರೆ. ಈ ಬಗ್ಗೆ ಚಿತ್ರಮಂದಿರಗಳಿಗೆ ಕೂಡ ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ.

ಸಿನಿಮಾ ಬಿಡುಗಡೆಗೆ ಒಂದು ದಿನ ಮೊದಲು "ಸೀತೆ ಭಾರತದ ಮಗಳು" ಎನ್ನುವ ಸಂಭಾಷಣೆ ತೆಗೆಯಲು ಬಾಲೆನ್ ಶಾ ಮೂರು ದಿನ ಅವಕಾಶ ನೀಡಿದ್ದರು. ಮೂರು ದಿನಗಳಲ್ಲಿ ಸಂಭಾಷಣೆ ತೆಗೆಯದೇ ಇದ್ದರೆ ಭಾರತದ ಎಲ್ಲಾ ಚಲನಚಿತ್ರಗಳನ್ನು ನಿಷೇಧಿಸುವುದಾಗಿ ಹೇಳಿದ್ದರು. ಶುಕ್ರವಾರ ಕಠ್ಮಂಡು ನಗರದಲ್ಲಿ ಆದಿಪುರುಷ ಬಿಡುಗಡೆಯಾಗಲಿಲ್ಲ, ಸಂಭಾಷಣೆ ತೆಗೆದ ಬಳಿಕ ಬಿಡುಗಡೆ ಮಾಡಲಾಗಿತ್ತು, ನೇಪಾಳದಲ್ಲಿ ಮಾತ್ರವಲ್ಲ ಭಾರತದಲ್ಲಿ ಪ್ರದರ್ಶನವಾಗುವ ಅವತರಣಿಕೆಯಲ್ಲಿ ಕೂಡ ಸಂಭಾಷಣೆ ತೆಗೆಯಬೇಕು ಎಂದು ಒತ್ತಾಯಿಸಿದ್ದರು.
ಸಂಭಾಷಣೆ ಬದಲಾಯಿಸಿದರೆ ಅನುಮತಿ
ವಿವಾದಾತ್ಮಕ ಭಾಗವನ್ನು ತೆಗೆದುಹಾಕುವವರೆಗೆ ಎಲ್ಲಾ ಭಾರತೀಯ ಚಲನಚಿತ್ರಗಳ ಪ್ರದರ್ಶನಕ್ಕೆ ನಿಷೇಧ ಹೇರಲಾಗುವುದು ಎಂದು ಬಾಲೆನ್ ಶಾ ಹೇಳಿದ್ದಾರೆ. ನೇಪಾಳದ ಚಲನಚಿತ್ರ ಪ್ರಮಾಣೀಕರಣ ಮಂಡಳಿಯು "ಸೀತೆಯನ್ನು ಭಾರತದ ಮಗಳು" ಎಂದು ವಿವರಿಸುವ ಸಂಭಾಷಣೆಯನ್ನು ಬದಲಾಯಿಸಿದ ನಂತರವೇ ಚಿತ್ರಮಂದಿರಗಳಲ್ಲಿ ಚಲನಚಿತ್ರವನ್ನು ಪ್ರದರ್ಶಿಸಲು ಅನುಮತಿ ನೀಡಲಾಗುವುದು ಎಂದು ಹೇಳಿದೆ.

"ಭಾರತೀಯ ಚಲನಚಿತ್ರ 'ಆದಿಪುರುಷ' ಜಾನಕಿ ಭಾರತದ ಮಗಳು ಎಂದು ಹೇಳುವ ಸಂಭಾಷಣೆಯನ್ನು ಹೊಂದಿದೆ. ಇದು ಆಕ್ಷೇಪಾರ್ಹವಾಗಿದೆ ಮತ್ತು ಅದನ್ನು ಸರಿಪಡಿಸಲು ನಾವು ಮೂರು ದಿನಗಳ ಗಡುವು ನೀಡಿದ್ದೇವೆ. ಇದು ಸರ್ಕಾರದ ಆದ್ಯ ಕರ್ತವ್ಯ ಎಂಬುದರಲ್ಲಿ ಸಂದೇಹವಿಲ್ಲ. ನೇಪಾಳಿ ನಾಗರಿಕರು ನೇಪಾಳ ಮತ್ತು ಅದರ ಸ್ವಾತಂತ್ರ್ಯ, ಸ್ವಾತಂತ್ರ್ಯ ಮತ್ತು ಸ್ವಾಭಿಮಾನವನ್ನು ಅಖಂಡವಾಗಿ ಇರಿಸುವ ಮೂಲಕ ರಾಷ್ಟ್ರೀಯ ಹಿತಾಸಕ್ತಿಗಳನ್ನು ರಕ್ಷಿಸಲು ಸರ್ಕಾರ ಬದ್ದವಾಗಿದೆ" ಎಂದು ಬಾಲೆನ್ ಶಾ ಬರೆದಿದ್ದಾರೆ.
"ಈಗ ಇರುವಂತೆ ಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡಿದರೆ, ನೇಪಾಳದ ರಾಷ್ಟ್ರೀಯತೆ, ಸಾಂಸ್ಕೃತಿಕ ಏಕತೆ ಮತ್ತು ರಾಷ್ಟ್ರೀಯ ಅಸ್ಮಿತೆಗೆ ಧಕ್ಕೆಯುಂಟಾಗುತ್ತದೆ. ಚಲನಚಿತ್ರದಿಂದ ನೇಪಾಳ ಸಂಸ್ಕೃತಿಯ ಮೇಲೆ ಅತಿಕ್ರಮಣ ಮಾಡಿದಂತಾಗುತ್ತದೆ" ಎಂದು ಹೇಳಿದರು.
ಭಾರತದಲ್ಲೂ ಚಿತ್ರದ ಬಗ್ಗೆ ಆಕ್ಷೇಪ
ಇನ್ನು ಸಿನಿಮಾದಲ್ಲಿ ಹಿಂದೂ ದೇವತೆಗಳ ಬಾಯಲ್ಲಿ ಕೀಳು ಅಭಿರುಚಿಯ ಡೈಲಾಗ್‌ಗಳನ್ನು ಹೇಳಿಸುವ ಮೂಲಕ ಹಿಂದೂ ಭಾವನೆಗಳನ್ನು ಘಾಸಿಗೊಳಿಸಲಾಗಿದೆ ಎಂದು ಆದಿಪುರುಷ ಚಿತ್ರದ ಬಗ್ಗೆ ಭಾರತದಲ್ಲೂ ಟೀಕೆಗಳು ಕೇಳಿಬಂದಿವೆ. ಜನಾಕ್ರೋಶ ವ್ಯಕ್ತವಾಗುತ್ತಿದ್ದಂತೆ ಸಂಭಾಷಣೆಗಳನ್ನು ಬದಲಾವಣೆ ಮಾಡುವುದಾಗಿ ಬರಹಗಾರ ಮನೋಜ್ ಮುಂತಶಿರ್ ಹೇಳಿದ್ದಾರೆ.












Click it and Unblock the Notifications