ದುಬೈನಲ್ಲಿ ಮೋದಿ ಭಾಷಣ ಕೇಳಲು ಹೋದ ನನಗಾದ ಅನುಭವ
ಆಗಸ್ಟ್ 15ರ ಸ್ವಾತಂತ್ರ್ಯ ದಿನದ ಆವೇಶವೆಲ್ಲ ಇಳಿಯುವ ಮುನ್ನವೇ ಪ್ರಧಾನಿ ನರೇಂದ್ರ ಮೋದಿ ದುಬೈಗೆ ಬರುತ್ತಾರಂತೆ ಎನ್ನುವ ಸುದ್ಧಿ ಕೇಳುತ್ತಿದ್ದಂತೇ ನಾನು ಹೇಗಾದರೂ ಸರಿ, ಹೋಗಲೇಬೇಕು, ಅವರನ್ನು ನೋಡಬೇಕು, ಅವರ ಮಾತುಗಳನ್ನು ಕೇಳಬೇಕು ಎನ್ನುವ ಆಸೆ ಮನದಲ್ಲಿ ಮೂಡಿ ದಿನದಿಂದ ದಿನಕ್ಕೆ ಗಟ್ಟಿಯಾಗುತ್ತಾ ಹೋಯಿತು.
ಅದಕ್ಕೆ ತಕ್ಕಂತೆ ಆರಂಭವಾದ ಅಂತರ್ಜಾಲ ತಾಣದಲ್ಲಿ ನನ್ನ ಹೆಸರನ್ನು ದಾಖಲಿಸಿ ನನ್ನ ಪಾಸನ್ನು ಜೋಪಾನವಾಗಿ ತೆಗೆದಿರಿಸಿಕೊಂಡು, ಆಗಸ್ಟ್ 17 ಬರುವುದನ್ನೇ ಕಾಯುತ್ತಿದ್ದೆ. ಕಚೇರಿಯಲ್ಲಿ ಆಪ್ತರಾಗಿದ್ದ ಕೆಲವರನ್ನು, ಮತ್ತೆ ಹಲವು ಸ್ನೇಹಿತರನ್ನು ಬರುವಂತೆ ಕರೆದರೆ ಅವರವರ ಕೆಲಸದಲ್ಲಿ ಪುರುಸೊತ್ತಿಲ್ಲದ ಅವರಿಂದ ಸಿಕ್ಕಿದ್ದು ನಿರಾಶೆಯ ಪ್ರತಿಕ್ರಿಯೆ!
ಹೋಗಲು ಜೊತೆಗೆ ಯಾರೂ ಇಲ್ಲ, ಒಬ್ಬನೇ ಹೋಗಬೇಕಲ್ಲಾ ಎನ್ನುವ ಕೊರಗಿನ ನಡುವೆಯೂ ನಾನು ಆ ದಿನಕ್ಕಾಗಿ ಕಾಯುತ್ತಿದ್ದೆ! ಕೊನೆಗೂ ಆ ದಿನ ಬಂದೇ ಬಿಟ್ಟಿತು, ಆದರೆ ಅದೇ ದಿನ ಬೆಳಿಗ್ಗೆಯ ಮಾತುಕತೆಯಲ್ಲಿ ಬಾಸ್ ನನ್ನ ಮೇಲೆ ಕೋಪಗೊಂಡಿದ್ದರು!
ಕಾರ್ಯಕ್ರಮಕ್ಕೆ ಹೋಗಲು ಅನುಮತಿ ನೀಡುತ್ತಾರೋ ಇಲ್ಲವೋ ಎನ್ನುವ ಅನುಮಾನದಲ್ಲಿ ಹೊಟ್ಟೆಗೆ ಅನ್ನ ಸೇರದಂತಾಗಿತ್ತು! ರೆಸ್ಟೋರೆಂಟಿನಲ್ಲಿ ನಾನು ಊಟ ಮುಗಿಸಿ ಹೊರಡುವ ವೇಳೆಗೆ ಊಟಕ್ಕಾಗಿ ಬಾಸ್ ಒಬ್ಬರೇ ಬಂದರು. ( ಮರ್ಹಬಾ ನಮೋ ಎಂದ ಮಧ್ಯಪ್ರಾಚ್ಯದ ಜನತೆ)
ಬಾಸ್ ಬಳಿ ನಿಧಾನಕ್ಕೆ ಹೋಗಿ ಕಾರ್ಯಕ್ರಮದ ಬಗ್ಗೆ ವಿವರಿಸಿ ಎರಡು ಘಂಟೆ ಮುಂಚಿತವಾಗಿ ಹೋಗಲು ಅನುಮತಿ ಕೇಳಿದೆ. ನನ್ನ ಊಹೆ ಸುಳ್ಳಾಗಿತ್ತು, ಬಾಸ್ ಖುಷಿಯಾಗಿ ವಾವ್, ನಮೋ ಇನ್ ದುಬೈ, ಗ್ರೇಟ್, ಗೋ ಅಹೆಡ್ ಅಂದ್ ಬಿಟ್ರು.
ಮೂರೂ ಮುಕ್ಕಾಲಿಗೆ ಪಂಚೌಟ್ ಮಾಡಿ ಹೊರಟವನು ಕಾರಿನ ವೇಗ 120ರಿಂದ ಕೆಳಕ್ಕಿಳಿಯದಂತೆ ಓಡಿಸಿ, ಎಮಿರೇಟ್ಸ್ ರಸ್ತೆಯಲ್ಲಿ ಬಲತಿರುವು ತೆಗೆದು ಮೋಟಾರ್ ಸಿಟಿಯೊಳಗಿನಿಂದ ದುಬೈ ಸ್ಪೋರ್ಟ್ಸ್ ಸಿಟಿ ತಲುಪಿದರೆ ಕ್ರಿಕೆಟ್ ಸ್ಟೇಡಿಯಂನಿಂದ ಸುಮಾರು ನಾಲ್ಕು ಕಿಲೋಮೀಟರ್ ದೂರದಲ್ಲಿಯೇ ಪಾರ್ಕಿಂಗ್ ವ್ಯವಸ್ಥೆ ಮಾಡಿದ್ದರು.
ಧೂಳು ತುಂಬಿದ ಆ ಮೈದಾನದಲ್ಲಿ ಕಾರು ನಿಲ್ಲಿಸಿ ಅಲ್ಲಿಯೇ ಸಾಲಾಗಿ ನಿಂತಿದ್ದ ದುಬೈ ನಗರ ಸಾರಿಗೆಯ ಬಸ್ಸು ಹತ್ತಿ ಕ್ರಿಕೆಟ್ ಸ್ಟೇಡಿಯಂ ಹತ್ತಿರ ಬರುವಲ್ಲಿಗೆ ಸಮಯ ಸಂಜೆಯ ನಾಲ್ಕೂ ಮುಕ್ಕಾಲಾಗಿತ್ತು! ಮುಂದೆ ಓದಿ..

ಸಿಗರೇಟು ಮತ್ತು ಲೈಟರ್ ಕಿತ್ತುಕೊಂಡ ಸೆಕ್ಯೂರಿಟಿ
ಮೈಲುದ್ಧದ ಸಾಲಿನಲ್ಲಿ ನಿಂತು ನನ್ನ ಸರದಿ ಬಂದಾಗ ಪಾಸ್ ಮತ್ತು ಗುರುತಿನ ಪತ್ರ ತೋರಿಸಿ ಒಳ ಸೇರುವಾಗ ಭದ್ರತಾ ರಕ್ಷಕನೊಬ್ಬ ನನ್ನನ್ನು ತಪಾಸಿಸಿ ಜೇಬಿನಲ್ಲಿದ್ದ ಸಿಗರೇಟು ಮತ್ತು ಲೈಟರ್ ಕಿತ್ತುಕೊಂಡು ಒಳಬಿಟ್ಟಿದ್ದ! ಅಲ್ಲಿ ನನ್ನಂತೆಯೇ ಬಂದಿದ್ದ ಸಹಸ್ರಾರು ಜನರಲ್ಲಿ ಒಂದೇ ಆತುರ, ಆದಷ್ಟು ಬೇಗ ಒಳಗೆ ಹೋಗಬೇಕು, ನಮ್ಮ ಪ್ರಧಾನಿ ಮೋದಿಯವರನ್ನು ನೋಡಬೇಕು, ಅವರ ಮಾತುಗಳನ್ನು ಕೇಳಬೇಕು! ಅದೊಂದು ರೀತಿಯ ಉನ್ಮಾದಕರ ವಾತಾವರಣವಾಗಿತ್ತು.

ಮೋದಿ, ಮೋದಿ, ಮೋದಿ ಮೋದಿ
ಭವ್ಯವಾಗಿರುವ ದುಬೈ ಕ್ರಿಕೆಟ್ ಸ್ಟೇಡಿಯಂನೊಳಗೆ ಕಾಲಿಡುತ್ತಿದ್ದಂತೆ ನಮಗೆ ಕೇಳಿಸಿದ್ದು ಮೋದಿ, ಮೋದಿ, ಮೋದಿ ಮೋದಿ ಎನ್ನುವ ಮುಗಿಲು ಮುಟ್ಟುವ ಘೋಷಣೆಯೊಂದೇ! ದುಬೈ ಕ್ರಿಕೆಟ್ ಸ್ಟೇಡಿಯಂ ಭಾರತೀಯರ ದೇಶಭಕ್ತಿಯ ಅಮಲಿನಲ್ಲಿ ಮಿಂದೇಳುತ್ತಿತ್ತು.

ಭಾರತೀಯ ಜನಸಾಗರ
ಎಂದೂ ಕಾಣದ ಭಾರತೀಯ ಜನಸಾಗರವನ್ನು ಕಂಡ ಭದ್ರತಾ ಸಿಬ್ಬಂದಿ ಹಾಗೂ ದುಬೈ ಪೊಲೀಸರು ಮಂತ್ರಮುಗ್ಧರಾಗಿದ್ದರು! ಕೇವಲ ದುಬೈ ಮಾತ್ರವಲ್ಲದೆ, ದೂರದ ಬಹ್ರೇನ್, ಸೌದಿ ಅರೇಬಿಯಾ, ಕುವೈತ್, ಒಮನ್ ದೇಶಗಳಿಂದಲೂ ಬೆವರಿಳಿಸುತ್ತಿದ್ದ ಬಿಸಿಲಿನ ಬೇಗೆಯಲ್ಲಿ, ನರೇಂದ್ರ ಮೋದಿಯವರನ್ನು ನೋಡಲು ಬಂದಿದ್ದರು.

ಬಂದವರ ದಾಹ ತಣಿಸಲು ನೀರು, ಗ್ಲುಕೋಸ್, ಹಣ್ಣಿನರಸ
ಬಂದವರ ದಾಹ ತಣಿಸಲು ನೀರಿನ ಲೋಟಗಳು, ಗ್ಲುಕೋಸ್, ಹಣ್ಣಿನರಸಗಳನ್ನು ಹಂಚುತ್ತಿದ್ದ ಸ್ವಯಂಸೇವಕರು ತಮ್ಮ ಮನೆಯ ಹಬ್ಬವೇನೋ ಎಂಬಂತೆ ಸಂಭ್ರಮಿಸುತ್ತಾ ಮನೆಗೆ ಬಂದ ನೆಂಟರಿಷ್ಟರನ್ನು ಸತ್ಕರಿಸುವ ರೀತಿಯಲ್ಲಿ ತಮ್ಮನ್ನು ತಾವೇ ತೊಡಗಿಸಿಕೊಂಡಿದ್ದರು! ಒಟ್ಟಾರೆ ಅಲ್ಲೊಂದು ಮಾಯಾಲೋಕವೇ ನಿರ್ಮಾಣವಾಗಿತ್ತು, ಎಂಟು ವರ್ಷಗಳ ನನ್ನ ಗಲ್ಫ್ ಜೀವನದಲ್ಲಿ ನಾನೆಂದೂ ಇಂತಹ ಸಂಭ್ರಮವನ್ನು ದುಬೈನಲ್ಲಿ ಕಂಡಿರಲಿಲ್ಲ, ಮುಂದೆ ಕಾಣುತ್ತೇನೋ ಇಲ್ಲವೋ ಗೊತ್ತಿಲ್ಲ!

ತುಂಬಿ ತುಳುಕುತ್ತಿದ್ದ ಕ್ರೀಡಾಂಗಣ
ಲಭ್ಯವಿದ್ದ ಸೀಟುಗಳೆಲ್ಲಾ ಸಾಕಷ್ಟು ಮುಂಚಿತವಾಗಿ ಬಂದವರಿಂದ ಅದಾಗಲೇ ಆಕ್ರಮಿಸಲ್ಪಟ್ಟಿದ್ದರಿಂದಾಗಿ ಕಾರ್ಯಕ್ರಮ ಪೂರಾ ನಾವು ನಿಂತೇ ಇರಬೇಕಾಗಿತ್ತು! ಸುಮಾರು ಐದು ಘಂಟೆಗಳ ಕಾಲ ಸುರಿಯುವ ಬೆವರಿನಲ್ಲಿ, ನೋಯುತ್ತಾ ಅಸಹಕಾರ ಚಳುವಳಿ ಹೂಡುತ್ತಿದ್ದ ಕಾಲುಗಳನ್ನು ಸಮಾಧಾನಿಸುತ್ತಾ ಅದು ಹೇಗೆ ನಿಂತಿದ್ದೆನೋ ನನಗೇ ಗೊತ್ತಿಲ್ಲ! ಮೋದಿಯವರನ್ನು ನೋಡಲು ಕಾತರಿಸುತ್ತಿದ್ದ ಭಾರತೀಯರನ್ನು ತಣಿಸಲು ಕೆಲವು ದೇಶಭಕ್ತಿ ಗೀತೆಗಳೊಂದಿಗೆ ಸಂಜೆ ಆರು ಘಂಟೆಗೆ ಸರಿಯಾಗಿ ಕಾರ್ಯಕ್ರಮ ಆರಂಭವಾಯಿತು.

ವಂದೇ ಮಾತರಂ
ಮೊದಲಿಗೆ ಲತಾ ಮಂಗೇಶ್ಕರ್ ಅವರ ಮಧುರ ಕಂಠದ ಅಮರಗೀತೆ "ವಂದೇ ಮಾತರಂ" ಹಾಡು ಧ್ವನಿವರ್ಧಕದಲ್ಲಿ ಹೊರಬರುತ್ತಿದ್ದಂತೆ ಅಷ್ಟು ದೊಡ್ಡ ಕ್ರಿಕೆಟ್ ಸ್ಟೇಡಿಯಂನಲ್ಲಿದ್ದ ಸುಮಾರು ಐವತ್ತು ಸಾವಿರ ಜನರಲ್ಲಿ ಒಮ್ಮೆಗೇ ವಿದ್ಯುತ್ ಸಂಚಾರವಾದಂತಾಗಿ ಒಕ್ಕೊರಲಿನಲ್ಲಿ ಆ ಹಾಡಿಗೆ ತಾವೂ ಧ್ವನಿ ಸೇರಿಸಿ ಹಾಡುತ್ತಿದ್ದರೆ ದುಬೈನ ಆಗಸ ಮೂಕವಾಗಿತ್ತು.

ಎ ಮೇರಿ ವತನ್ ಕೆ ಲೋಗ್
ಮುಂದಿನ ಹಾಡು "ಎ ಮೇರಿ ವತನ್ ಕೆ ಲೋಗ್", ಹೀಗೆಯೇ ಹಲವಾರು ಹಾಡುಗಳಿಗೆ ಸೇರಿದ್ದವರೆಲ್ಲ ಭಾವಪರವಶರಾಗಿ ಧ್ವನಿ ಸೇರಿಸುತ್ತಿದ್ದರು. ಮೋದಿ, ಮೋದಿ, ಎನ್ನುವ ಕೂಗು ತಾರಕಕ್ಕೇರುತ್ತಾ ಹೋದಂತೆ ಕೊನೆಗೂ ಸುಮಾರು ಸಂಜೆ ಏಳೂಮುಕ್ಕಾಲಿಗೆ ಪ್ರಧಾನಿ ನರೇಂದ್ರಮೋದಿಯವರು ವೇದಿಕೆಗೆ ಆಗಮಿಸಿದಾಗ ಐವತ್ತು ಸಾವಿರಕ್ಕೂ ಹೆಚ್ಚಿದ್ದ ಜನತೆ ಹುಚ್ಚೆದ್ದು ಕುಣಿದಿದ್ದರು.

ಎಂದಿನ ಶೈಲಿಯಲ್ಲಿ ಮೋದಿ ಭಾಷಣ
ತಮ್ಮ ಎಂದಿನ ಶೈಲಿಯಲ್ಲಿ ನಮಸ್ಕರಿಸಿ ಮಾತನಾಡಲಾರಂಭಿಸಿದ ಮೋದಿಯವರು ಮೊದಲು ಎಲ್ಲಾ ಅನಿವಾಸಿ ಭಾರತೀಯರಿಗೂ ಧನ್ಯವಾದಗಳನ್ನು ಅರ್ಪಿಸಿ, ಸಂಯುಕ್ತ ಅರಬ್ ಗಣರಾಜ್ಯದ ದೊರೆಗಳಿಗೆ ವಂದಿಸಿದರು. ಸಕುಟುಂಬ ಸಮೇತ ವಿಮಾನ ನಿಲ್ದಾಣಕ್ಕೆ ಬಂದು ತಮ್ಮನ್ನು ಸ್ವಾಗತಿಸಿದ ಸಂಯುಕ್ತ ಅರಬ್ ಗಣರಾಜ್ಯದ ದೊರೆಯಾ ಮಗ ಶೇಕ್ ಮೊಹಮದ್ ಖಲೀಫಾ ಬಿನ್ ಅಲ ನಹ್ಯಾನ್ ಅವರು ತೋರಿಸಿದ ಗೌರವ ಈ ಮೋದಿಗಲ್ಲ, ಅದು ಭಾರತದ ನೂರಿಪ್ಪತ್ತೈದು ಕೋಟಿ ಜನತೆಗೆ ಎಂದಾಗ ನೆರೆದಿದ್ದ ಜನರ ಕರತಾಡನ ಮುಗಿಲು ಮುಟ್ಟಿತ್ತು. ಮೋದಿ ಮಾಡಿದ ಭಾಷಣದ ಬಗ್ಗೆ ಈಗಾಗಲೇ ನೀವೆಲ್ಲಾ ಓದಿರುತ್ತೀರಾ.

ಹಿಂದೂ ದೇವಾಲಯ
ಸುಮಾರು ವರ್ಷಗಳಿಂದ ಭಾರತೀಯರ ಕನಸಾಗಿದ್ದ ಹಿಂದೂ ದೇವಾಲಯವನ್ನು ಕಟ್ಟಲು ಅಬುದಾಭಿಯಲ್ಲಿ ಜಾಗ ನೀಡುವುದಾಗಿ ಸಂಯುಕ್ತ ಅರಬ್ ಗಣರಾಜ್ಯದ ಯುವರಾಜ ಒಪ್ಪಿಗೆ ನೀಡಿದ್ದಾರೆ, ಜೊತೆಗೆ ಅರಬ್ಬರು ಭಾರತದಲ್ಲಿ ಸುಮಾರು ನಾಲ್ಕೂವರೆ ಲಕ್ಷ ಕೋಟಿ ರೂಪಾಯಿಗಳ ಬಂಡವಾಳ ಹೂಡಿಕೆ ಮಾಡುತ್ತಿರುವುದಾಗಿ ಪ್ರಧಾನಿ ಘೋಷಿಸಿದಾಗಲಂತೂ ನೆರೆದಿದ್ದ ಜನರ ಹರ್ಷ ಮುಗಿಲು ಮುಟ್ಟಿತ್ತು.

ಭಾರತ ಮಾತಾಕಿ ಜೈ ಎಂದು ಎಲ್ಲರಿಂದ ಜೈಕಾರ ಹಾಕಿಸಿದ ಮೋದಿ
ತಮ್ಮ ಭಾಷಣದ ಕೊನೆಯಲ್ಲಿ ಭಾರತ ಮಾತಾಕಿ ಜೈ ಎಂದು ಎಲ್ಲರಿಂದ ಜೈಕಾರ ಹಾಕಿಸಿದ ಮೋದಿಯವರು ಮಾಡಿದ್ದು ಮಾತ್ರ ಮಹಾನ್ ಜಾದೂ ಅನ್ನುವಂತೆ ಭಾಸವಾಗುತ್ತಿತ್ತು. ಒಟ್ಟಾರೆ ದುಬೈ ಕ್ರಿಕೆಟ್ ಸ್ಟೇಡಿಯಂನಲ್ಲಿ "ನರೇಂದ್ರ ಮೋದಿ" ಎನ್ನುವ ಜಾದೂಗಾರ ದೇಶಭಕ್ತಿ ಎನ್ನುವ ಅಮಲನ್ನು ನೆರೆದಿದ್ದ ಎಲ್ಲ ಅನಿವಾಸಿ ಭಾರತೀಯರಲ್ಲಿ ಏರಿಸಿಬಿಟ್ಟಿದ್ದರು. ಆ ನಶೆಯಲ್ಲಿ ತೇಲಾಡಿದ ಅನಿವಾಸಿ ಭಾರತೀಯರಲ್ಲಿ ಇತಿಹಾಸ ಸೃಷ್ಟಿಸಿದ ಮೋದಿಯ ಜಾದೂಗಾರಿಕೆಯಲ್ಲಿ ತಾವೂ ಪಾಲುದಾರರಾದ ಸಂತೋಷ ಎದ್ದು ಕಾಣುತ್ತಿತ್ತು. ಇಂದಿನ ಕಲುಷಿತ ರಾಜಕೀಯ ಪರಿಸ್ಥಿತಿಯಲ್ಲಿ ನರೇಂದ್ರ ಮೋದಿಯಂತಹ ಕೆಚ್ಚೆದೆಯ ನಾಯಕರ ಅವಶ್ಯಕತೆ ಭಾರತಕ್ಕೆ ಅತ್ಯವಶ್ಯಕ ಎನ್ನುವುದು ಎಲ್ಲರ ಮನದ ಮಾತಾಗಿತ್ತು.
-
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ -
April 13 Horoscope: 12 ರಾಶಿಗಳಿಗೆ ಇಂದು ಪ್ರೇಮ, ಹಣಕಾಸು, ಉದ್ಯೋಗದಲ್ಲಿ ಏನು ಹೇಳುತ್ತದೆ ನಿಮ್ಮ ರಾಶಿ? -
Bengaluru power cut: ಬೆಂಗಳೂರಿನ ಹಲವೆಡೆ ಹೆಚ್ಚಾಯ್ತು ದಿಢೀರ್ ಪವರ್ ಕಟ್, ಹೈರಾಣಾದ ಜನ: ಬೆಸ್ಕಾಂ ಕೊಟ್ಟ ಉತ್ತರ ಇಲ್ಲಿದೆ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
PUC ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್: ಇದೇ ವರ್ಷದಿಂದಲೇ ಸಿಗಲಿವೆ ಉಚಿತ ಪಠ್ಯ ಪುಸ್ತಕ -
Hardik vs Krunal: ತಮ್ಮ ಹಾರ್ದಿಕ್ ವಿಕೆಟ್ ಕಿತ್ತ ಬೌಲರ್ಗಿಂತ ಹೆಚ್ಚಾಗಿ ಸಂಭ್ರಮಿಸಿದ ಕೃನಾಲ್ ಪಾಂಡ್ಯ, ಭಾರಿ ವೈರಲ್ -
Namma Metro: ಪ್ರಯಾಣಿಕರಿಗೆ ಸಿಹಿ ಸುದ್ದಿ, ಹಳದಿ ಮಾರ್ಗಕ್ಕಾಗಿ ಬಂತು ಹೊಸ ಡ್ರೈವರ್ ಲೆಸ್ ರೈಲು












Click it and Unblock the Notifications