Russia & Ukraine War: 3ನೇ ಮಹಾಯುದ್ಧಕ್ಕೆ ಬ್ರೇಕ್ ಬೀಳುತ್ತಾ?
ನವದೆಹಲಿ: ಅಂತೂ ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಭೀಕರ ಯುದ್ಧಕ್ಕೆ ಅಂತ್ಯ ಹಾಡುವ ಸಮಯ ಬಂದೇ ಬಿಟ್ಟಿದೆ. ಇದೇ ಸಂದರ್ಭದಲ್ಲಿ ಭಾರತದ ಪಾತ್ರ ಕೂಡ ಬಹುಮುಖ್ಯವಾಗಿದೆ. ಆಗಸ್ಟ್ 5 ಮತ್ತು 6ರಂದು ಸೌದಿ ಅರೇಬಿಯಾ ಆಯೋಜಿಸಿರುವ ಉಕ್ರೇನ್ ಶಾಂತಿ ಮಾತುಕತೆ ಸಭೆಯಲ್ಲಿ ಭಾರತವು ಪಾಲ್ಗೊಳ್ಳಲಿದೆ. ಈ ಮೂಲಕ ಕಳೆದ ಒಂದೂವರೆ ವರ್ಷಗಳಿಂದ ಗೊಂದಲದ ಗೂಡಾಗಿದ್ದ ಸಮಸ್ಯೆಗೆ ಪರಿಹಾರ ಸಿಗುವ ಲಕ್ಷಣ ಗೋಚರಿಸಿದೆ.
ರಷ್ಯಾ ಮತ್ತು ಉಕ್ರೇನ್ ಯುದ್ಧವನ್ನ 3ನೇ ಮಹಾಯುದ್ಧ ಎಂಬಂತೆ ಬಿಂಬಿಸಲಾಗುತ್ತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲು ಜಗತ್ತು ಒಂದಾಗುತ್ತಿದೆ. ಅಲ್ಲದೆ ಶಾಂತಿ ಸಭೆಯಲ್ಲಿ ಭಾರತಕ್ಕೆ ಪ್ರಾಮುಖ್ಯತೆ ನೀಡಲಾಗುತ್ತಿದೆ. ಸೌದಿ ಅರೇಬಿಯಾದ ಜೆಡ್ಹಾದಲ್ಲಿ ನಡೆಯಲಿರುವ ಸಭೆಗೆ ಭಾರತಕ್ಕೆ ಆಮಂತ್ರಣ ನೀಡಲಾಗಿದೆ ಎಂದು ಭಾರತೀಯ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಗಾಚಿ ಮಾಹಿತಿ ನೀಡಿದ್ದಾರೆ. ಅಲ್ಲದೆ ಈ ಸಭೆಯಲ್ಲಿ ಭಾರತ ಭಾಗವಹಿಸಲಿದೆ. ಇದು ಮಾತುಕತೆ & ರಾಜತಾಂತ್ರಿಕತೆಯ ಮುಂದಿನ ದಾರಿ ಎಂಬ ನಮ್ಮ ದೀರ್ಘಕಾಲದ ನಿಲುವಿಗೆ ಅನುಗುಣವಾಗಿದೆ ಎಂದಿದ್ದಾರೆ ವಕ್ತಾರರು.

ಸಂಧಾನ ಸಭೆ ಸಕ್ಸಸ್ ಆಗುತ್ತಾ?
ಅಷ್ಟಕ್ಕೂ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರ ಪ್ರಸ್ತಾಪದ ಹಿನ್ನೆಲೆ ವರ್ಷದ ಆರಂಭದಲ್ಲಿ ಸೌದಿ ಆರೇಬಿಯಾ ಸಂಧಾನಕ್ಕೆ ಚರ್ಚೆ ಆರಂಭಿಸಿತ್ತು. ಉಕ್ರೇನ್ ಸೇರಿದಂತೆ ಪ್ರಮುಖ ಅಭಿವೃದ್ಧಿಶೀಲ ಪಾಶ್ಚಿಮಾತ್ಯ ರಾಷ್ಟ್ರಗಳನ್ನ ಆಹ್ವಾನಿಸಿತ್ತು. ಈ ಮೂಲಕ ಯುದ್ಧ ನಿಲ್ಲಿಸಲು ಸಾಕಷ್ಟು ಪ್ರಯತ್ನ ನಡೆಸಲಾಗುತ್ತಿದೆ. ಆದ್ರೆ ಸಭೆ ಕರೆದ ಮಾತ್ರಕ್ಕೆ ಈಗ ಯುದ್ಧ ನಿಲ್ಲಲಿದೆ ಎಂಬ ನಂಬಿಕೆ ಇಲ್ಲ. ಏಕೆಂದರೆ ಈಗಾಗಲೇ ರಷ್ಯಾ ಕೂಡ ಹಲವಾರು ಬೇಡಿಕೆ ಮುಂದಿಟ್ಟಿದ್ದು, ಉಕ್ರೇನ್ & ರಷ್ಯಾ ನಡುವೆ ಸಂಧಾನ ನಡೆಸುವುದು ದೊಡ್ಡ ಸವಾಲಿನ ಕೆಲಸವಾಗಲಿದೆ.
ಯುದ್ಧ ನಿಲ್ಲಿಸುತ್ತಾರಾ ವ್ಲಾದಿಮಿರ್ ಪುಟಿನ್?
ರಷ್ಯಾ ಕೆಂಡವಾಗಿದ್ದು, ಉಕ್ರೇನ್ ವಿರುದ್ಧ ತನ್ನ ದಾಳಿಯನ್ನು ಭೀಕರಗೊಳಿಸುತ್ತಿದೆ. ಹೀಗಾಗಿ ಉಕ್ರೇನ್ ಕೂಡ ಬೆಚ್ಚಿಬಿದ್ದಿದೆ. ಏನು ಮಾಡಬೇಕು ಎಂಬ ಪರಿಸ್ಥಿತಿಯಲ್ಲಿದೆ ಉಕ್ರೇನ್. ಇದೇ ವೇಳೆ ಪುಟಿನ್ ಶಾಂತಿ ಮಾತುಕತೆ ಬಗ್ಗೆ ಹೇಳಿಕೆ ನೀಡಿದ್ದು ಯುದ್ಧಕ್ಕೆ ಬ್ರೇಕ್ ಬೀಳುತ್ತಾ? ಎಂಬ ಪ್ರಶ್ನೆ ಹುಟ್ಟುಹಾಕಿತ್ತು. ಪುಟಿನ್ ಯುದ್ಧ ನಿಲ್ಲಿಸುವ ಬಗ್ಗೆ ಸ್ಪಷ್ಟನೆ ನೀಡಿದ್ದು, ತಾವು ಯುದ್ಧ ನಿಲ್ಲಿಸಲು ಸಿದ್ಧ ಎಂಬ ಮುನ್ಸೂಚನೆ ನೀಡಿದ್ದಾರೆ. ಆದ್ರೆ ಇದೇ ವೇಳೆ ಶರತ್ತು ಹಾಕಿರುವ ರಷ್ಯಾ ಅಧ್ಯಕ್ಷ ಪುಟಿನ್, ಬದಲಾದ ಸನ್ನಿವೇಶವನ್ನ ಉಕ್ರೇನ್‌ನ ಸೇನೆ ಒಪ್ಪಿಕೊಳ್ಳಬೇಕು ಅಂತಿದ್ದಾರೆ.

2ನೇ ವರ್ಷಕ್ಕೆ ಕಾಲಿಟ್ಟಿರುವ ಯುದ್ಧ
ಕೆಲ ದಿನದಲ್ಲಿ ಮುಗಿದು ಹೋಗುತ್ತೆ ಎಂದು ಅಂದುಕೊಂಡಿದ್ದ ರಷ್ಯಾ ಮತ್ತು ಉಕ್ರೇನ್ ಯುದ್ಧ ಸುಮಾರು ಒಂದೂವರೆ ವರ್ಷ ಮುಗಿಸಿದೆ. ಇಂದಿಗೆ 527ನೇ ದಿನಕ್ಕೆ ಕಾಲಿಟ್ಟಿರುವ ರಣಭೀಕರ ಕಾಳಗ ನಿಲ್ಲುವ ಮುನ್ಸೂಚನೆಯೇ ಕಂಡಿಲ್ಲ. ರಷ್ಯಾ ಕೂಡ ಯುದ್ಧವನ್ನು ಇನ್ನೂ ಮುಂದಕ್ಕೆ ಕೊಂಡೊಯ್ಯಲು ಸನ್ನದ್ಧವಾಗಿದೆ. ಉಕ್ರೇನ್ ಪರದಾಡುತ್ತಿರುವಾಗ ಪಾಶ್ಚಿಮಾತ್ಯ ರಾಷ್ಟ್ರಗಳು ನೆರವಿಗೆ ನಿಂತಿವೆ. ಇದು ರಷ್ಯಾ ಅಧ್ಯಕ್ಷ ಪುಟಿನ್‌ರನ್ನ ಇನ್ನಷ್ಟು ಕೆರಳಿಸುತ್ತಿದೆ. ಹೀಗಾಗಿ ರಷ್ಯಾ ಮತ್ತು ಉಕ್ರೇನ್ ಯುದ್ಧ ಕ್ಷಣಕ್ಷಣಕ್ಕೂ ಭೀಕರ ಸ್ವರೂಪ ಪಡೆಯುತ್ತಿದೆ. ನೋಡ ನೋಡುತ್ತಲೇ ಯುದ್ಧ 527 ದಿನ ಪೂರೈಸಿದ್ದು, ಇನ್ನೇನು 2ನೇ ವರ್ಷವನ್ನೂ ಯುದ್ಧ ಪೂರೈಸುವ ಸಾಧ್ಯತೆ ದಟ್ಟವಾಗಿದೆ.

ಭಾರತದ ಪಾತ್ರ ಕೂಡ ಪ್ರಮುಖ!
ಜಗತ್ತು ಈಗ ಎರಡು ಭಾಗವಾಗಿ ಹೋಗಿದೆ. ಒಂದು ಭಾಗ ರಷ್ಯಾ ಜೊತೆಗೆ ಸೇರಿದೆ, ಇದೇ ವೇಳೆ ಇನ್ನೊಂದು ಭಾಗ ಅಮೆರಿಕದ ಜೊತೆ ಸೇರಿ ಉಕ್ರೇನ್ ಪರ ನಿಂತಿದೆ. ಆದರೆ ಭಾರತ ಮಾತ್ರ ಹೀಗೆ ಮಾಡಿಲ್ಲ. ಭಾರತ ಯುದ್ಧವನ್ನ ವಿರೋಧಿಸುವ ಜೊತೆಗೆ ಮಾನವೀಯತೆ ಸಂದೇಶ ಸಾರುತ್ತಿದೆ. ಹಾಗೇ ಯುದ್ಧ ಬೇಡವೇ ಬೇಡ ಎನ್ನುತ್ತಿದೆ. ಈ ವಿಚಾರದಲ್ಲಿ ಅತ್ತ ಉಕ್ರೇನ್‌ಗೂ ಬೆಂಬಲವನ್ನ ನೀಡದೆ ಇತ್ತ ರಷ್ಯಾಗೂ ಬೆಂಬಲ ನೀಡದೆ ಭಾರತ ಶಾಂತಿ ಸಂದೇಶ ಸಾರುತ್ತಿದೆ. ಈಗ ಸಂಧಾನ ಸಭೆಗೆ ಭಾರತವನ್ನು ಕರೆಯಲಾಗಿದ್ದು ಭಾರಿ ಕುತೂಹಲ ಕೆರಳಿಸಿದೆ.












Click it and Unblock the Notifications