ಮೊಸಳೆ ಕಣ್ಣಿಗೆ ಚುಚ್ಚಿ ಪ್ರಾಣ ಉಳಿಸಿಕೊಂಡ ಮೀನುಗಾರ!
ಕ್ವೀನ್ಸ್ ಲ್ಯಾಂಡ್, ಆಸ್ಟ್ರೇಲಿಯಾ: ನಿಮ್ಮ ಎದುರಿಗೆ ಮೊಸಳೆ ಬಂದರೆ ಏನ್ ಮಾಡ್ತೀರಿ? ಮೊದಲು ಕಾಲಿಗೆ ಬುದ್ದಿ ಹೇಳೋದು ಒಳ್ಳೆಯದು ಅಂತೀರಾ ಅಲ್ವಾ? ಆದರೆ ಮೊಸಳೆ ಬಾಯಲ್ಲಿ ಲಾಕ್ ಆದರೆ ಏನ್ ಮಾಡೋದು, ಜೀವ ಹೋಗೇ ಬಿಟ್ಟಿತು ಅಂತಾ ಡಿಸೈಡ್ ಆಗಬೇಕಷ್ಟೇ. ಆದರೆ ಇಂತಹ ಸಂಕಷ್ಟದ ಸಂದರ್ಭದಲ್ಲೂ ಮೊಸಳೆ ಕಣ್ಣಿಗೆ ಚುಚ್ಚಿ ಜೀವ ಉಳಿಸಿಕೊಂಡಿದ್ದಾನೆ ಮೀನುಗಾರ.
ಹೌದು, ಸಮುದ್ರ ತೀರದಲ್ಲಿ ಮೀನು ಹಿಡಿಯುತ್ತಿದ್ದ 44 ವರ್ಷ ವರ್ಷದ ವ್ಯಕ್ತಿಯೊಬ್ಬನ ಮೇಲೆ ದಿಢೀರ್ ರಾಕ್ಷಸ ಗಾತ್ರದ ಮೊಸಳೆ ದಾಳಿ ನಡೆಸಿದೆ. ಸುಮಾರು 4.5 ಮೀಟರ್ ಉದ್ದ ಇದ್ದ ಮೊಸಳೆ ಮೀನುಗಾರನನ್ನು ನೀರಿನ ಒಳಗೆ ಎಳೆದೊಯ್ಯಲು ಪ್ರಯತ್ನಿಸಿದೆ. ಇನ್ನೇನು ಜೀವ ಹೊಯ್ತು ಅಂತಾ ಆತ ನಿರ್ಧರಿಸುವ ವೇಳೆಗೆ ಥಟ್ ಅಂತಾ ತಲೆಗೆ ಕೆಲಸ ಕೊಟ್ಟು ಜೀವ ಉಳಿಸಿಕೊಂಡಿದ್ದಾನೆ. ಮೊಸಳೆ ಕಣ್ಣಿಗೆ ಬಲವಾಗಿ ಚುಚ್ಚಿ ಎಸ್ಕೇಪ್ ಆಗಿದ್ದಾನೆ ಭೂಪ. ಅಷ್ಟಕ್ಕೂ ಈ ಘಟನೆ ನಡೆದಿದ್ದು ಆಸ್ಟ್ರೇಲಿಯಾದಲ್ಲಿ.

ಆಸ್ಟ್ರೇಲಿಯಾದಲ್ಲಿ ಮೊಸಳೆ ಕಾಟ
ಕಾಂಗರೂ ನಾಡು ಎಂದೇ ಪ್ರಸಿದ್ಧಿ ಪಡೆದಿರುವ ಆಸ್ಟ್ರೇಲಿಯಾದಲ್ಲಿ ವನ್ಯಜೀವಿಗಳ ಕಾಟ ವಿಪರೀತ. ಅದರಲ್ಲೂ ತನ್ನ ಸುತ್ತಲ್ಲೂ ಭಾರಿ ಕರಾವಳಿ ಪ್ರದೇಶ ಹೊಂದಿರುವ ಈ ರಾಷ್ಟ್ರದಲ್ಲಿ ಮೊಸಳೆ ಕಾಟ ವಿಪರೀತ. ಸಿಹಿನೀರಿನ ಮೊಸಳೆಗಳಿಗಿಂತ ಸಮುದ್ರದ ಉಪ್ಪು ನೀರಿನ ಮೊಸಳೆಗಳ ದಾಳಿ ಭೀಕರ. ಹೀಗಾಗಿಯೇ ಆಸ್ಟ್ರೇಲಿಯಾದಲ್ಲಿ ಪ್ರತಿವರ್ಷ ಸಾವಿರಾರು ಮಂದಿ ಮೊಸಳೆ ದಾಳಿಯಿಂದ ಜೀವ ಬಿಡುತ್ತಾರೆ ಹಾಗೂ ಲೆಕ್ಕವಿಲ್ಲದಷ್ಟು ಜನ ಗಾಯಗೊಳ್ಳುತ್ತಾರೆ. ಇದೀಗ ಕ್ವೀನ್ಸ್ ಲ್ಯಾಂಡ್ ಮೀನುಗಾರನ ಕಥೆಯೂ ಅದೇ ಆಗಿದೆ.
ಮೀನು ಹಿಡಿಯುವಾಗ ದಿಢೀರ್ ದಾಳಿ
ಕಾಕ್ ಟೌನ್‌ನ ಆರ್ಚರ್ ಪಾಯಿಂಟ್ ಸಮುದ್ರ ತೀರದಲ್ಲಿ ಈ ಮೊಸಳೆ ದಾಳಿ ನಡೆದಿದೆ. ಗಾಯಗೊಂಡಿರುವ ಮೀನುಗಾರ ತನ್ನ ಸೊಂಟದ ತನಕ ಎತ್ತರವಿದ್ದ ನೀರಿನಲ್ಲಿ ನಿಂತು ಮೀನು ಹಿಡಿಯುತ್ತಿದ್ದ. ಈ ವೇಳೆ ಆತನ ಬಳಿ ಬಂದ ಮೊಸಳೆ ದಾಳಿಗೆ ಮುಂದಾಗಿದೆ. ಮೊದಲಿಗೆ ಮೂರು ಬಾರಿ ಕಚ್ಚಿದ ಮೊಸಳೆ ನೀರಿನ ಒಳಗೆ ಎಳೆದೊಯ್ಯಲು ಯತ್ನಿಸಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಆದರೆ ತನ್ನ ಕೈಲಿದ್ದ ಕೋಲಿನಿಂದ ದಾಳಿಗೆ ಮುಂದಾಗಿದ್ದ ಮೀನುಗಾರ, ಇದು ಕೆಲಸ ಮಾಡದೇ ಇದ್ದಾಗ ಬೇರೆಯದ್ದೇ ತಂತ್ರ ರೂಪಿಸಿದ್ದ.

ಕೈಯಲ್ಲೇ ಮೊಸಳೆ ಕಣ್ಣಿಗೆ ಪಂಚ್!
ಯಾವಾಗ ತನ್ನ ಕೈಯಲ್ಲಿದ್ದ ಕೋಲು ಮೊಸಳೆ ಓಡಿಸಲು ಕೆಲಸಕ್ಕೆ ಬರಲಿಲ್ಲವೋ, ಆಗ ತಕ್ಷಣ ಮತ್ತೊಂದು ಪ್ಲ್ಯಾನ್ ಮಾಡಿ ಜೀವ ಉಳಿಸಿಕೊಂಡಿದ್ದ ಮೀನುಗಾರ. ಬರಿಗೈಯಿಂದಲೇ ಪ್ರತಿದಾಳಿಗೆ ಮುಂದಾದ ಮೀನುಗಾರ ಮೊಸಳೆ ಕಣ್ಣಿಗೆ ಬೆರಳಿನಿಂದ ಬಲವಾಗಿ ಚುಚ್ಚಿ ಚುಚ್ಚಿ ಗಾಯಗೊಳಿಸಿದ್ದಾನೆ. ಆಗ ಈತನ ದಾಳಿಯಿಂದ ಬೆಚ್ಚಿದ ಮೊಸಳೆ ಹಿಡಿತ ಸಡಿಲ ಮಾಡಿದೆ. ಕೂಡಲೇ ಮೀನುಗಾರ ಜೀವ ಉಳಿಸಿಕೊಂಡು, ದಡಕ್ಕೆ ಈಜಿಕೊಂಡು ಬಂದಿದ್ದಾನೆ. ನಂತರ ಸ್ಥಳೀಯರು ಇದನ್ನು ನೋಡಿ ಅತನ ಬಳಿಗೆ ಓಡಿ ಬಂದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಮೀನುಗಾರನ ಮೈತುಂಬಾ ಗಾಯ
ಮೊಸಳೆ ಹಿಡಿತದಿಂದ ಪಾರಾದರೂ ಮೀನುಗಾರನಿಗೆ ಗಂಭೀರ ಗಾಯಗಳಾಗಿದ್ದವು. ಹೀಗಾಗಿ ಕೂಡಲೇ ಆಂಬುಲೆನ್ಸ್‌ಗೆ ಕರೆ ಮಾಡಿದ ಸ್ಥಳೀಯರು ಆತನನ್ನು ಆಸ್ಪತ್ರೆಗೆ ಸಾಗಿದ್ದಾರೆ. ಸದ್ಯ ಸಾವಿನ ದವಡೆಯಿಂದ 44 ವರ್ಷ ವರ್ಷದ ಮೀನುಗಾರ ಪಾರಾಗಿದ್ದರೂ, ಮೊಸಳೆಯ ದಾಳಿಯಿಂದ ಆಗಿರುವ ಗಾಯಗಳಿಂದ ಗುಣವಾಗಲು ಹಲವು ತಿಂಗಳೇ ಬೇಕು ಎಂದು ವೈದ್ಯರು ತಿಳಿಸಿದ್ದಾರೆ. ಚಿಕಿತ್ಸೆ ಮುಂದುವರಿದಿದ್ದು, ತೀವ್ರ ರಕ್ತಸ್ರಾವ ಮತ್ತು ಗಾಯದಿಂದ ಮೀನುಗಾರ ಬಳಲಿದ್ದಾನೆ.
ಘಟನೆ ನಡೆದ ಆರ್ಚರ್ ಪಾಯಿಂಟ್ ಮೊಸಳೆ ದಾಳಿಗೆ ಫೇಮಸ್. ಇಲ್ಲಿ ಈ ಹಿಂದೆ ಕೂಡ ಸಾಕಷ್ಟು ಬಾರಿ ಮೊಸಳೆ ದಾಳಿ ನಡೆದ ಉದಾಹರಣೆ ಇದೆ. ಈಗಲೂ ಅಂತಹದ್ದೇ ಘಟನೆ ನಡೆದಿರುವುದು ಸ್ಥಳೀಯ ಆಡಳಿತಕ್ಕೆ ಆಘಾತ ತಂದಿದೆ. ಸ್ಥಳೀಯರು ಹಾಗೂ ಪ್ರವಾಸಿಗರ ಹಿತದೃಷ್ಟಿಯಿಂದ, ಸುತ್ತಮುತ್ತಲೂ ಅಡಗಿರುವ ಮೊಸಳೆಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ. ಮತ್ತೊಂದು ಕಡೆ ಪ್ರವಾಸಿಗರು ಎಚ್ಚರಿಕೆಯಿಂದ ಇರುವಂತೆ ಸೂಚನೆ ಕೂಡ ಹೊರಡಿಸಲಾಗಿದೆ.












Click it and Unblock the Notifications