ಗಾಜಾ ಶಾಂತಿ ಮಂಡಳಿ ಸಭೆಯಲ್ಲಿ ಭಾರತದ ಪ್ರತಿನಿಧಿ, ಹೊಸ ತಂತ್ರ ಪ್ರಯೋಗಿಸಿದ ಕೇಂದ್ರ ಸರ್ಕಾರ | Donald Trump
ಭಾರತ ಜಾಗತಿಕ ಮಟ್ಟದಲ್ಲಿ ತುಂಬಾ ಎಚ್ಚರಿಕೆಯ ಹೆಜ್ಜೆ ಇಡುತ್ತಿದೆ, ಏಕೆಂದರೆ ಒಂದು ಕಡೆ ಅತ್ತ ಇರಾನ್ & ಅಮೆರಿಕ ಬಡಿದಾಡಲು ಸಜ್ಜಾಗಿವೆ. ಇನ್ನೊಂದು ಕಡೆ ರಷ್ಯಾ ಹಾಗೂ ಉಕ್ರೇನ್ ತಿಕ್ಕಾಟ ಕೂಡ ಜಾಗತಿಕ ಮಟ್ಟದಲ್ಲಿ ದೇಶ ದೇಶಗಳನ್ನು ವಿಭಜನೆ ಮಾಡುತ್ತಿದೆ. ಹೀಗಿದ್ದಾಗಲೇ ಗಾಜಾ ವಿಚಾರ ಕೂಡ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದು, ಗಾಜಾ ಪಟ್ಟಿಯಲ್ಲಿ ಶಾಂತಿ ಸ್ಥಾಪನೆ ಮಾಡೋಕೆ ಎಲ್ಲಾ ರೀತಿಯ ಪ್ರಯತ್ನಗಳು ಸಾಗಿವೆ.
ಯುದ್ಧ ನಿಲ್ಲಿಸಿ & ಗಾಜಾ ಪಟ್ಟಿಯ ಮರು ನಿರ್ಮಾಣ ಮಾಡಲು, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದಲ್ಲಿ ಗಾಜಾ ಶಾಂತಿ ಮಂಡಳಿ ಸ್ಥಾಪನೆ ಆಗಿದೆ. ಕೆಲವು ದಿನಗಳ ಹಿಂದಷ್ಟೇ ಸುಮಾರು 80,000 ಕೋಟಿ ರೂಪಾಯಿ ಬೃಹತ್ ಅನುದಾನ ಕೂಡ ಗಾಜಾ ಪಟ್ಟಿಗೆ ನೀಡಲಾಗಿತ್ತು. ಇಂತಹ ಬಹುಸೂಕ್ಷ್ಮ ಸಮಯದಲ್ಲಿ ಭಾರತ ಈ ವಿಚಾರದಲ್ಲಿ ಹೊಸ ತಂತ್ರ ಪ್ರಯೋಗ ಮಾಡಿದ್ದು, ಜಾಗತಿಕ ಮಟ್ಟದಲ್ಲಿ ವಿರೋಧಿ ದೇಶಗಳಿಗೆ ಶಾಕ್ ಕೊಟ್ಟಿದೆ.

ಶಾಂತಿ ಮಂಡಳಿ ಸ್ಥಾಪನೆ ಏಕೆ?
ಗಾಜಾ ಪಟ್ಟಿಯಲ್ಲಿ ಶಾಂತಿ ಕಾಪಾಡಲು ಮತ್ತು ಆ ಮೂಲಕ ಮಧ್ಯಪ್ರಾಚ್ಯ ಭಾಗವನ್ನು ನಮ್ಮದಿಯಾಗಿ ಇಡಲು, ಶಾಂತಿ ಮಂಡಳಿ ಸ್ಥಾಪನೆ ಮಾಡುತ್ತಿರುವುದಾಗಿ ಟ್ರಂಪ್ ಅವರು ಘೋಷಣೆ ಮಾಡಿದ್ದರು. ಈ ಶಾಂತಿ ಮಂಡಳಿ ಮೂಲಕ ಗಾಜಾ ಪುನರ್ ನಿರ್ಮಾಣ ಮಾಡುವ ಗುರಿ ಕೂಡ ಹಾಕಿಕೊಂಡಿದೆ ಇದೇ ಅಮೆರಿಕ. ಡೊನಾಲ್ಡ್ ಟ್ರಂಪ್ ಅವರು ಸ್ಥಾಪನೆ ಮಾಡಿರುವ ಶಾಂತಿ ಮಂಡಳಿಗೆ ಜಗತ್ತಿನ ಶಕ್ತಿಶಾಲಿ, ದೊಡ್ಡ ದೊಡ್ಡ ಶ್ರೀಮಂತ ದೇಶಗಳೇ ಸೇರಿವೆ. ಆದರೆ ಭಾರತ ಮಾತ್ರ ಈ ವಿಚಾರದಲ್ಲಿ ಹಿಂದೇಟು ಹಾಕಿ, ಶಾಂತಿ ಮಂಡಳಿಗೆ ನೇರವಾಗಿ ಸೇರಿರಲಿಲ್ಲ. ಹೀಗಿದ್ದಾಗ ದಿಢೀರ್ ಅಂತಾ ಪರೋಕ್ಷವಾಗಿ ಹೊಸ ತಂತ್ರವನ್ನ ಪ್ರಯೋಗ ಮಾಡಿದೆ ಭಾರತ.
ಒತ್ತಡದ ನಡುವೆ ಮಹತ್ವದ ನಿರ್ಧಾರ
ಹೌದು, ಪಾಶ್ಚಿಮಾತ್ಯ ದೇಶಗಳು ತಮ್ಮ ಲಾಭಕ್ಕಾಗಿ ಬೇಕಾದ ನಿರ್ಧಾರಗಳನ್ನು ಕೈಗೊಳ್ಳುತ್ತಿವೆ. ಈ ಸಮಯದಲ್ಲಿ ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಒತ್ತಡ ಕೂಡ ಹೇರುತ್ತಿವೆ. ಅದೇ ರೀತಿ, ಗಾಜಾ ಶಾಂತಿ ಮಂಡಳಿ ವಿಚಾರವಾಗಿ ಕೂಡ ಭಾರತದ ಮೇಲೆ ಹಲವು ದೇಶಗಳು ಒತ್ತಡ ಹೇರುವ ಪ್ರಯತ್ನ ಮಾಡಿದ್ದವು. ಆದರೆ ಭಾರತ ಮಾತ್ರ ಗಾಜಾ ಶಾಂತಿ ಮಂಡಳಿಗೆ ನೇರವಾಗಿ ಸೇರ್ಪಡೆ ಆಗದೆ, ಮತ್ತೊಂದು ಕಡೆ ದೂರ ಕೂಡ ಉಳಿಯದೆ ಹೊಸ ತಂತ್ರ ಪ್ರಯೋಗ ಮಾಡಿದೆ. ಇದೀಗ ಗಾಜಾ ಶಾಂತಿ ಮಂಡಳಿ ನಡೆಸಿದ ಮಹತ್ವದ ಸಭೆಯಲ್ಲಿ ಭಾರತ ವೀಕ್ಷಕ ರಾಷ್ಟ್ರವಾಗಿ ಭಾಗವಹಿಸಿದೆ. ವಾಷಿಂಗ್ಟನ್ ಡಿಸಿ ಗಾಜಾ ಶಾಂತಿ ಮಂಡಳಿ ಸಭೆಗೆ ಸಾಕ್ಷಿಯಾಗಿತ್ತು.
ಪರಿಶೀಲನೆ ನಡೆಸುತ್ತಿರುವ ಭಾರತ
ಅಂದಹಾಗೆ ಕಳೆದ ವಾರ ಗಾಜಾ ಶಾಂತಿ ಮಂಡಳಿ ವಿಚಾರವಾಗಿ, ವಿದೇಶಾಂಗ ಸಚಿವಾಲಯದ ವಕ್ತಾರ ಆಗಿರುವ ರಣಧೀರ್ ಜೈಸ್ವಾಲ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದರು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಗಾಜಾ ಶಾಂತಿ ಮಂಡಳಿಗೆ ಸೇರಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಆಹ್ವಾನ ನೀಡಿದ್ದಾರೆ ಎಂಬುದನ್ನು ತಿಳಿಸಿದ್ದರು. ಅಲ್ಲದೇ ನಾವು ಈ ಮನವಿ ಪರಿಶೀಲಿಸುತ್ತಿದ್ದು, ಗಾಜಾಪಟ್ಟಿ ಭಾಗದಲ್ಲಿ ಶಾಶ್ವತವಾಗಿ ಶಾಂತಿ ನೆಲೆಸಬೇಕು ಎಂಬ ನಮ್ಮ ನಿಲುವಿನ ಆಧಾರದಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದೇವೆ ಎಂದು ಸ್ಪಷ್ಟಪಡಿಸಿದ್ದರು ವಿದೇಶಾಂಗ ಸಚಿವಾಲಯದ ವಕ್ತಾರರಾದ ರಣಧೀರ್ ಜೈಸ್ವಾಲ್ ಅವರು. ಇದೀಗ ಭಾರತ ವೀಕ್ಷಕ ರಾಷ್ಟ್ರವಾಗಿ ಗಾಜಾ ಶಾಂತಿ ಮಂಡಳಿ ಸಭೆಯಲ್ಲಿ ಭಾಗಿ ಆಗಿದ್ದು ಜಗತ್ತಿನ ಗಮನ ಸೆಳೆದಿದೆ.












Click it and Unblock the Notifications