ಇರಾನ್ ವಿರುದ್ಧ ಅಮೆರಿಕ ಸೇನಾ ಕಾರ್ಯಾಚರಣೆ ಚರ್ಚೆ, ಅಮೆರಿಕ ಬಗ್ಗೆ ಇರಾನ್ ಹೇಳಿದ್ದು ಹೀಗೆ | Donald Trump
ಇರಾನ್ ತಲೆಬಾಗಿ ನಡೆಯಲು ಸಿದ್ಧವಾಗಿಲ್ಲ, ಅಮೆರಿಕ ಕೂಡ ಈ ವಿಚಾರದಲ್ಲಿ ಹಠ ಬಿಡುತ್ತಿಲ್ಲ. ಈ ನಡುವೆ ಅಮೆರಿಕ & ಇರಾನ್ ನಡುವೆ ಕೋಳಿ ಜಗಳ ನಡೆಯುತ್ತಿದೆ ಬಿಡು ಅಂತಾ ಇಷ್ಟುದಿನ ಇಡೀ ಜಗತ್ತು ಭಾವಿಸಿತ್ತು. ಆದರೆ ಅಮೆರಿಕ & ಇರಾನ್ ನಡುವೆ ನಡೆಯುತ್ತಿರುವುದು ಕೋಳಿ ಜಗಳ ಅಲ್ಲ, ಜಗತ್ತನ್ನೇ ವಿನಾಶ ಮಾಡಬಲ್ಲ ತಿಕ್ಕಾಟ ಅನ್ನೋದು ಈಗ ಮನವರಿಕೆ ಆಗಿದೆ. ಇರಾನ್ ಇದೀಗ ಅಮೆರಿಕ ಬಗ್ಗೆ ಮಾತನಾಡುತ್ತಾ, ಹೊಸ ಸಂದೇಶ ರವಾನಿಸಿದೆ. ಇದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಅಮೆರಿಕದ ಸ್ನೇಹಿತ ದೇಶಗಳನ್ನು ಕೆಣಕುವಂತೆ ಇದೆ.
ಮಧ್ಯಪ್ರಾಚ್ಯ ಮಾತ್ರವಲ್ಲ ಇಡೀ ಜಗತ್ತಿನಾದ್ಯಂತ ಈಗ ಒಂದೇ ಒಂದು ವಿಚಾರ ದೊಡ್ಡ ಚರ್ಚೆಗೆ ನಾಂದಿ ಹಾಡಿದ್ದು, ಇರಾನ್ & ಅಮೆರಿಕ ನಡುವೆ ನಡೆಯುತ್ತಿರುವ ತಿಕ್ಕಾಟ ಯುದ್ಧವಾದರೆ ಹೇಗೆ? ಎಂಬ ಭೀತಿ ಕಾಡುತ್ತಾ ಇದೆ. ಇರಾನ್ & ಅಮೆರಿಕ ನಡುವೆ ಇದೇ ವಾರಂತ್ಯದಲ್ಲಿ ಯುದ್ಧ ಶುರುವಾಗುತ್ತೆ ಎನ್ನುವ ಆತಂಕ ಆವರಿಸಿತ್ತು. ಇದೇ ಸಮಯದಲ್ಲಿ ವಾರಾಂತ್ಯದಲ್ಲಿ ಇರಾನ್ ಮೇಲೆ ಅಮೆರಿಕವು ಕಾರ್ಯಾಚರಣೆ ಶುರು ಮಾಡಿದ್ರೆ ಅದರಿಂದ ಆಗುವ ಅಪಾಯಗಳ ಬಗ್ಗೆ ಕೂಡ ಆತಂಕದ ವಾತಾವರಣ ನಿರ್ಮಾಣ ಆಗಿತ್ತು ಮಧ್ಯಪ್ರಾಚ್ಯದಲ್ಲಿ. ಮತ್ತೊಂದು ಕಡೆ ಸಂಭಾವ್ಯ ದಾಳಿ ಎದುರಿಸಲು ಇರಾನ್ ಸರ್ಕಾರ ಹೊಸ ಐಡಿಯಾ ಮಾಡಿ ಯುದ್ಧಕ್ಕೆ ಸಿದ್ಧ ಎಂದಿತ್ತು, ಇದೀಗ ನೇರವಾಗಿ ಪಾಶ್ಚಿಮಾತ್ಯ ದೇಶಗಳಿಗೆ ಎಚ್ಚರಿಕೆ ಸಂದೇಶ ರವಾನಿಸಿದೆ.

ಸಂಧಾನಕ್ಕೆ ಸಿದ್ಧವಿಲ್ಲ ಇರಾನ್ ಸರ್ಕಾರ?
ಇರಾನ್ ಯಾವುದಕ್ಕೂ ಬಗ್ಗುವುದಿಲ್ಲ ಎಂದು ಮತ್ತೊಮ್ಮೆ ತನ್ನ ವಿರೋಧಿಗಳ ವಿರುದ್ಧ ಹೇಳಿಕೆಯನ್ನ ನೀಡಿದ್ದು, ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್ ಈ ವಿಚಾರವಾಗಿ ಅಮೆರಿಕ ಸೇರಿ ಪಾಶ್ಚಿಮಾತ್ಯ ದೇಶಗಳ ವಿರುದ್ಧ ಹೇಳಿಕೆ ನೀಡಿರುವುದು ಉರಿಯುವ ಬೆಂಕಿಗೆ ತುಪ್ಪ ಸುರಿದಿದೆ. ಮಧ್ಯಪ್ರಾಚ್ಯದಲ್ಲಿ, ಈಗಿನ ಪರಿಸ್ಥಿತಿಯಲ್ಲಿ ಅಮೆರಿಕ ಸೇನೆಯ ಸುಮಾರು 40,000 ಸೈನಿಕರು ನೆಲೆಸಿದ್ದು, ಸೌದಿ ಅರೇಬಿಯಾ, ಯುಎಇ, ಬಹ್ರೇನ್, ಕುವೈತ್, ಓಮನ್ & ಖತಾರ್ ಸೇರಿ ಹಲವು ದೇಶಗಳಲ್ಲಿ ಅಮೆರಿಕ ತನ್ನ ಸೇನಾ ನೆಲೆ ಹೊಂದಿದೆ. ಇದರ ಜೊತೆಗೆ, ಸುಮಾರು 800 ಯುದ್ಧ ವಿಮಾನ ಹಾರಿಸುವ ಶಕ್ತಿಯನ್ನೂ ಇದೇ ಅಮೆರಿಕ ಈಗ ಹೊಂದಿದೆ. ಇಷ್ಟೆಲ್ಲಾ ಇದ್ದರೂ ಇರಾನ್ ಮಾತ್ರ ತಾನು ಯಾರಿಗೂ ತಲೆಬಾಗಲ್ಲ ಎಂದು ಹೇಳಿದೆ.
ಶಾಂತಿ ಮಾತುಕತೆ ಪ್ರಯೋಜನಕ್ಕೆ ಬಂದಿಲ್ಲ
ಅದರಲ್ಲೂ ಇರಾನ್ ದೇಶದ ಹಾಲಿ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್ ಈ ಬಗ್ಗೆ ಮಾತನಾಡಿ, ನಮ್ಮ ತಲೆ ತಗ್ಗಿಸುವಂತೆ ಒತ್ತಾಯಿಸಲು ಇದೀಗ ಜಗತ್ತಿನ ಶಕ್ತಿಗಳು ಸಾಲುಗಟ್ಟಿ ನಿಂತಿವೆ. ಆದರೆ ಅವರು ನಮಗಾಗಿ ಸೃಷ್ಟಿಸುತ್ತಿರುವ ಎಲ್ಲಾ ಸಮಸ್ಯೆ ಹೊರತಾಗಿ ಕೂಡ ನಾವು ತಲೆ ಬಗ್ಗಿಸುವುದಿಲ್ಲ ಎಂದು ಹೇಳಿದ್ದಾರೆ. ಈ ಮೂಲಕ ಅಮೆರಿಕ ಜೊತೆಗೆ ಇರಾನ್ ಸಂಧಾನ ಅಸಾಧ್ಯ ಎಂಬ ಸಂದೇಶ ಹೋದಂತಾಗಿದೆ. ಕೆಲವು ದಿನಗಳ ಹಿಂದೆ ಇರಾನ್ ನೆಲದಲ್ಲಿ ನಡೆದಿದ್ದ ಹಿಂಸಾಚಾರ ಹಾಗೂ ಪ್ರತಿಭಟನೆ ನಂತರ ಇರಾನ್ & ಅಮೆರಿಕ ನಡುವೆ ಯುದ್ಧದ ವಾತಾವರಣ ತೀವ್ರಗೊಂಡಿದೆ. ಇಬ್ಬರ ನಡುವೆ ಶಾಂತಿ ಮಾತುಕತೆಗಾಗಿ ಏನೆಲ್ಲಾ ಪ್ರಯತ್ನ ಮಾಡಿದರೂ ಅದು ಪ್ರಯೋಜನಕ್ಕೆ ಬರುತ್ತಿಲ್ಲ.












Click it and Unblock the Notifications