ಜೀವ ಉಳಿಸಿಕೊಳ್ಳಲು ಗಾಜಾ ಜನರ ಪರದಾಟ: ರಫಾ ಗಡಿಯಲ್ಲಿ ಏನಾಗುತ್ತಿದೆ?
ಒಮ್ಮೊಮ್ಮೆ ತಾವು ಏನೂ ತಪ್ಪು ಮಾಡದೇ ಇದ್ದರೂ, ಶಿಕ್ಷೆ ಅನುಭವಿಸಬೇಕಾದ ಪರಿಸ್ಥಿತಿ ಬಂದುಬಿಡುತ್ತದೆ. ಗಾಜಾಪಟ್ಟಿ ಜನರ ಪರಿಸ್ಥಿತಿ ಕೂಡ ಈಗ ಅದೇ ರೀತಿ ಆಗಿದೆ. ಕಿರಾತಕ ಹಮಾಸ್ ಉಗ್ರರು ಹಾಗೂ ಇಸ್ರೇಲ್ ಸೇನೆ ನಡುವೆ ಯುದ್ಧ ಶುರುವಾದ ಬಳಿಕ, ಗಾಜಾದ ಜನರು ಸುಖಾಸುಮ್ಮನೆ ಜೀವ ಬಿಡುತ್ತಿದ್ದಾರೆ. ಹೀಗಿದ್ದಾಗ ಗಾಜಾಪಟ್ಟಿ ಬಿಟ್ಟು ಓಡಿ ಹೋಗಿ ಜೀವ ಉಳಿಸಿಕೊಳ್ಳೋಣ ಅಂದ್ರೆ ಅದಕ್ಕೂ ಒಂದು ಸಮಸ್ಯೆ ಎದುರಾಗಿದೆ.
ಅಷ್ಟಕ್ಕೂ ಗಾಜಾಪಟ್ಟಿ ನಗರ ಹೇಗಿದೆ ಅಂದ್ರೆ ಪೂರ್ವ ಭಾಗ ಮತ್ತು ಉತ್ತರ ಭಾಗದಲ್ಲಿ ಇಸ್ರೇಲ್ ಗಡಿಯಿಂದ ಈ ಜಾಗ ಆವೃತವಾಗಿದೆ. ಪಶ್ಚಿಮದಲ್ಲಿ ಮೆಡಿಟರೇನಿಯನ್ ಸಮುದ್ರವಿದೆ. ಇನ್ನು ದಕ್ಷಿಣದಲ್ಲಿ ಕೆಲ ಭಾಗ ಈಜಿಪ್ಟ್ ಗಡಿಗೆ ಹೊಂದಿಕೊಂಡಿದೆ. ಈ ಜಾಗದಿಂದ ಮಾತ್ರ ಗಾಜಾಪಟ್ಟಿ ಜನ ಹೊರಗೆ ಹೋಗಲು ಸಾಧ್ಯವಿದೆ. ಗಾಜಾಪಟ್ಟಿ ದಕ್ಷಿಣದಲ್ಲಿ ಈಜಿಪ್ಟ್ ದೇಶದ ರಫಾ ಗಡಿಯ ಮೂಲಕ ಗಾಜಾಪಟ್ಟಿ ಜನರು ಹೊರಗೆ ಹೋಗಲು ಕಾಯ್ತಾ ಇದ್ದಾರೆ. ಆದರೆ ಇಲ್ಲೂ ಒಂದು ಸಮಸ್ಯೆ ಎದುರಾಗಿಬಿಟ್ಟಿದೆ.

ಕೊನೆಗೂ ತೆರೆಯಿತು 'ರಫಾ' ಬಾಗಿಲು!
ಹೌದು, ಇಸ್ರೇಲ್ & ಹಮಾಸ್ ಯುದ್ಧ ಶುರುವಾದ ನಂತರ ಗಾಜಾಪಟ್ಟಿ ಭಾಗದಲ್ಲಿ ವಿದೇಶಿ ಪ್ರಜೆಗಳು ಸಿಲುಕಿ ಒದ್ದಾಡಿದ್ದರು. ಹೀಗಾಗಿ ಜೀವ ಉಳಿಸಿಕೊಳ್ಳಲು ಪರದಾಡುತ್ತಿದ್ದರು. ಈ ಸಮಯದಲ್ಲೇ ಇಸ್ರೇಲ್ ಸೇನೆ ಕೂಡ ತನ್ನ ದಾಳಿ ತೀವ್ರಗೊಳಿಸಿತ್ತು. ಪರಿಸ್ಥಿತಿ ಕೈಮೀರಿದ್ದು ಇನ್ನೇನು ನಾವು ಇಲ್ಲೇ ಜೀವ ಕಳೆದುಕೊಳ್ಳಬೇಕು ಅಂತಾ ವಿದೇಶಿ ಪ್ರಜೆಗಳು ನರಳುತ್ತಿರುವ ಸಮಯದಲ್ಲೇ ಸಿಹಿಸುದ್ದಿ ಸಿಕ್ಕಿದೆ. ಗಾಜಾಪಟ್ಟಿ ತೊರೆಯಲು ವಿದೇಶಿ ಪ್ರಜೆಗಳಿಗೆ ಮೊದಲ ಬಾರಿಗೆ ಅವಕಾಶ ಕಲ್ಪಿಸಲಾಗಿದೆ. ಇಂದು ನೂರಾರು ವಿದೇಶಿ ಪ್ರಜೆಗಳು ರಫಾ ಗಡಿ ಮೂಲಕ ಗಾಜಾ ತೊರೆದು ಈಜಿಪ್ಟ್ ಪ್ರವೇಶಿಸಿದ್ದಾರೆ.
ಕೇವಲ 400 ಜನರಿಗೆ ಅವಕಾಶ!
ಪರಿಸ್ಥಿತಿ ಹೇಗಿದೆ ಅಂದ್ರೆ, 'ರಫಾ' ಗಡಿಯ ಬಾಗಿಲು ತೆರೆದರೆ ದೊಡ್ಡ ಪ್ರವಾಹ ಉಂಟಾದ ಅನುಭವ ಎದುರಾಗುವ ಸಾಧ್ಯತೆ ಇದೆ. ಯಾಕಂದ್ರೆ ಉತ್ತರ ಗಾಜಾದಲ್ಲಿ ಇಸ್ರೇಲ್ ಸೇನೆಯ ದಾಳಿ ತೀವ್ರವಾದ ನಂತರ ಲಕ್ಷಾಂತರ ಗಾಜಾ ನಿವಾಸಿಗಳು ದಕ್ಷಿಣ ಗಾಜಾಗೆ ಓಡಿ ಬಂದು, ಜೀವ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ. ಪರಿಸ್ಥಿತಿ ಹೀಗಿದ್ದಾಗ ಗಾಜಾಪಟ್ಟಿ ಜನಕ್ಕೆ ರಫಾ ಗಡಿ ಒಂದೇ ಈಗ ಉಳಿದಿರುವ ಮಾರ್ಗ. ಹೀಗಾಗಿ ಬಚಾವ್ ಆಗಲು ಪರದಾಡುತ್ತಿದ್ದಾರೆ. ಇಷ್ಟೆಲ್ಲಾ ಸಂಕಷ್ಟ ಇದ್ರೂ ಕೇವಲ ವಿದೇಶಿ ಪ್ರಜೆಗಳಿಗೆ 'ರಫಾ' ಗಡಿ ದಾಟಲು ಅನುಮತಿ ನೀಡಲಾಗಿದೆ. ವಿದೇಶಿ ಪಾಸ್‌ಪೋರ್ಟ್ ಹೊಂದಿರುವ 400ಕ್ಕೂ ಹೆಚ್ಚು ಜನರಿಗೆ ಗಾಜಾ ಪಟ್ಟಿ ತೊರೆಯಲು ಅವಕಾಶ ಮಾಡಿಕೊಡಲಾಗಿದೆ ಎಂದು ಪ್ಯಾಲೆಸ್ತೀನ್ ಅಧಿಕಾರಿಗಳು ತಿಳಿಸಿದ್ದಾರೆ.
ಏನು ಮಾಡುವುದು ತಿಳಿಯುತ್ತಿಲ್ಲ...
ಜಗತ್ತಿನಲ್ಲಿ ಎಷ್ಟೊಂದು ರೀತಿ ಜೈಲು ನೋಡಿದ್ದೀರಿ. ಆದರೆ ತೆರೆದ ಜೈಲನ್ನು ನೋಡಿದ್ದೀರಾ? ಇಲ್ಲ ಅಲ್ವಾ ಹಾಗಾದ್ರೆ ಅದನ್ನ ಗಾಜಾಪಟ್ಟಿ ನಗರದಲ್ಲಿ ನೋಡಿ ಆಸೆ ಪೂರೈಸಿಕೊಳ್ಳಬಹುದು. ಹಾಗಂತಾ ಈಗ ಅಲ್ಲಿಗೆ ಹೋದ್ರೆ ಅಲ್ಲಿಂದ ವಾಪಸ್ ಬರುವ ಆಸೆ ಬಿಟ್ಟುಬಿಡಿ. ಇಷ್ಟೆಲ್ಲಾ ಪೀಠಿಕೆ ಯಾಕಪ್ಪಾ ಅಂದ್ರೆ, ಗಾಜಾಪಟ್ಟಿ ಜನರು ಇಲ್ಲಿ ಪ್ರತಿದಿನ ಅನುಭವಿಸ್ತಿರುವ ಹಿಂಸೆ ಅಷ್ಟಿಷ್ಟಲ್ಲ. ಅತ್ತ ಗಾಜಾಪಟ್ಟಿ ಬಿಟ್ಟು ಹೊರ ಹೋಗಲು ಆಗದೆ ಇತ್ತ ಗಾಜಾ ಒಳಗೆ ಬದುಕಲು ಆಗದೆ ಅವರು ನರಳುತ್ತಿದ್ದಾರೆ. ಪರಿಸ್ಥಿತಿ ಕಠಿಣವಾಗಿದ್ದ ಸಮಯದಲ್ಲೇ, ಹಮಾಸ್ ಉಗ್ರರು ಇಸ್ರೇಲ್ ಮೇಲೆ ನಡೆಸಿರುವ ಕೃತ್ಯ ಹತ್ತಾರು ಲಕ್ಷ ಜನರ ಜೀವಕ್ಕೆ ಕಂಟಕ ತಂದಿದೆ.

ಒಟ್ನಲ್ಲಿ ಆದಷ್ಟು ಬೇಗ ಯುದ್ಧ ನಿಲ್ಲಿಸಬೇಕು, ಗಾಜಾಪಟ್ಟಿ ಜನರನ್ನ ರಕ್ಷಣೆ ಮಾಡಬೇಕು ಎಂಬ ಆಗ್ರಹ ಒಂದು ಕಡೆ ಕೇಳಿಬರುತ್ತಿದೆ. ಆದರೆ ಇದೇ ಪರಿಸ್ಥಿತಿಯಲ್ಲಿ ಇಸ್ರೇಲ್ ಸೇನೆ ತನ್ನ ಶತ್ರುಗಳಾದ ಹಮಾಸ್ ಉಗ್ರರನ್ನು ಸರ್ವನಾಶ ಮಾಡಲು ತೊಡೆತಟ್ಟಿದೆ. ಈ ಹಿನ್ನೆಲೆ ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವಿನ ಯುದ್ಧ ಮತ್ತಷ್ಟು ಭೀಕರವಾಗುತ್ತಿದೆ. ಇದು ಮುಂದೆ ಮತ್ತೊಂದು ಮಹಾಯುದ್ಧವಾಗಿ ಬದಲಾಗುತ್ತಾ?












Click it and Unblock the Notifications