Chandrayaan-3: ಮತ್ತೊಂದು ಹಂತಕ್ಕೆ ಏರಿದ ‘ಚಂದ್ರಯಾನ-3’ ನೌಕೆ!
ಇಸ್ರೋ ಉಡಾಯಿಸಿರುವ ಮಹತ್ವದ ಯೋಜನೆಗೆ ಮತ್ತೊಂದು ಗೆಲುವು ಸಿಕ್ಕಿದೆ. ಭಾರತದ ಮಹತ್ವಕಾಂಕ್ಷಿ ಯೋಜನೆ 'ಚಂದ್ರಯಾನ-3' ಈಗ ಮತ್ತೊಂದು ಹಂತಕ್ಕೆ ಏರಿದೆ. ನೌಕೆ ಇದೀಗ 3ನೇ ಕಕ್ಷೆಗೆ ಎಂಟ್ರಿ ಕೊಟ್ಟಿದ್ದು, ಆಗಸ್ಟ್ 23ರ ಸಾಧನೆಗೆ ಮತ್ತಷ್ಟು ಹತ್ತಿರವಾಗಿದೆ. ಇಡೀ ಜಗತ್ತನ್ನೇ ತನ್ನತ್ತ ಸೆಳೆದಿರುವ ಚಂದ್ರಯಾನ-3 ಯೋಜನೆ ಚಂದ್ರನ ಮೇಲೆ ನೀರು ಹಾಗೂ ಜೀವಿಗಳ ವಾಸಯೋಗ್ಯ ವಾತಾವರಣ ಹುಡುಕಲಿದೆ.
ಯೋಜನೆ ಪ್ರಕಾರ 'ಚಂದ್ರಯಾನ-3' ಬಾಹ್ಯಾಕಾಶ ನೌಕೆಯು 51400 ಕಿಮೀ x 228 ಕಿಮೀ ಕಕ್ಷೆ ತಲುಪಿದೆ. ಮೂರನೇ ಕಕ್ಷೆಗೆ ಏರಿಸುವ ಪ್ರಯತ್ನವನ್ನು ಬೆಂಗಳೂರಿನಿಂದ ಯಶಸ್ವಿಯಾಗಿ ನಿರ್ವಹಿಸಲಾಗಿದೆ. ನಾಳೆ ನೌಕೆಯನ್ನು ಮತ್ತೊಂದು ಹಂತಕ್ಕೆ ಏರಿಸಲು ಸಿದ್ಧತೆ ನಡೆದಿದೆ. ಈ ಮೂಲಕ ಕ್ಷಣಕ್ಷಣಕ್ಕೂ ಚಂದ್ರಯಾನ-3 ಯೋಜನೆ ಕುರಿತಾದ ಕುತೂಹಲ ಹೆಚ್ಚುತ್ತಿದೆ. ಜುಲೈ 14ರ ಮಧ್ಯಾಹ್ನ 2:35ಕ್ಕೆ ಶ್ರೀಹರಿಕೋಟದ ಸತೀಶ್ ಧವನ್ ಉಡ್ಡಯನ ಕೇಂದ್ರದಿಂದ ಭಾರತದ 'ಚಂದ್ರಯಾನ-3' ರಾಕೆಟ್ ಲಾಂಚ್ ಆಗಿತ್ತು. 3900 ಕೆಜೆ ತೂಕದ ಬಾಹ್ಯಾಕಾಶ ನೌಕೆ ಮತ್ತು ರೋವರ್ ಹೊತ್ತ ರಾಕೆಟ್ ಬಾಹ್ಯಾಕಾಶ ತಲುಪಿ ಈಗಾಗಲೇ ತನ್ನ ಗುರಿಯ ಕಡೆಗೆ ಪ್ರಯಾಣ ಬೆಳೆಸಿದೆ.

ಆಸ್ಟ್ರೇಲಿಯಾ ಕಡಲ ತೀರದಲ್ಲಿ ಸಿಕ್ಕಿದ್ದೇನು?
ಇನ್ನು ಕೆಲ ದಿನಗಳ ಹಿಂದೆ ಬೃಹತ್ ಗಾತ್ರದ ಲೋಹದ ಸಿಲಿಂಡರ್ ಪಶ್ಚಿಮ ಆಸ್ಟ್ರೇಲಿಯಾದ ಕಡಲ ತೀರದಲ್ಲಿ ಪತ್ತೆ ಆಗಿತ್ತು. ಆದರೆ ಸಿಲಿಂಡರ್ ಆಕಾರದ ವಸ್ತು ಏನು ಎಂಬುದು ಯಾರಿಗೂ ತಿಳಿದಿರಲಿಲ್ಲ. ಹೀಗಾಗಿ ವಿಚಿತ್ರ ವಿಚಿತ್ರ ಚರ್ಚೆ ನಡೆಯುತ್ತಿದ್ದು, ಇದು 'ಚಂದ್ರಯಾನ-3'ರ ರಾಕೆಟ್‌ನ ತುಣುಕು ಇರಬಹುದಾ? ಎಂಬ ಚರ್ಚೆ ಶುರುವಾಗಿತ್ತು. ಆದರೆ ಚಂದ್ರಯಾನ-3ರ ರಾಕೆಟ್ ಅವಶೇಷ ಅಲ್ಲ ಎಂಬ ಮಾತು ಕೇಳಿಬರುತ್ತಿದೆ. ಇದರ ಜೊತೆಗೆ ಈ ವಿಚಿತ್ರವಾದ ವಸ್ತು ಏನಿರಬಹುದು? ಎಂಬ ಕುತೂಹಲ ಕೂಡ ದಟ್ಟವಾಗುತ್ತಿದೆ. ಎಲ್ಲಾ ಕುತೂಹಲಗಳ ನಡುವೆ ಭಾರತದ 'ಚಂದ್ರಯಾನ-3' ತನ್ನ ಗುರಿಯತ್ತ ಸಾಗಿದೆ.
ಕಾಣೆಯಾದ ವಿಮಾನದ ಅವಶೇಷ ಇರಬಹುದಾ?
ಭಾರತದ ಚಂದ್ರಯಾನ-3ರ ಖದರ್ ಹೇಗಿದೆ ಅಂದರೆ ಎಲ್ಲೆಲ್ಲೂ ಅದರದ್ದೇ ಚರ್ಚೆಯಾಗ್ತಿದೆ. ಕೆಲವರು ಆಸ್ಟ್ರೇಲಿಯಾದ ಕಡಲ ತೀರದಲ್ಲಿ ಪತ್ತೆಯಾಗಿದ್ದ ವಿಚಿತ್ರ ವಸ್ತು ಚಂದ್ರಯಾನ-3ರ ಗಗನ ನೌಕೆ ಉಡಾಯಿಸಿರುವ ರಾಕೆಟ್ ಬಿಡಿಭಾಗ? ಎಂದು ಅನುಮಾನಿಸಿದ್ದರು. ಜೊತೆಯಲ್ಲೇ ಇನ್ನೂ ಒಂದು ಅನುಮಾನ ಶುರುವಾಗಿತ್ತು, 2014ರ ಮಾರ್ಚ್ 8ರಂದು ಕಣ್ಮರೆಯಾಗಿದ್ದ ಮಲೇಷ್ಯಾ ಏರ್‌ಲೈನ್ಸ್‌ನ ಎಂಎಚ್ 370ನದ್ದಾ? ಎಂಬ ಮಾತು ಕೇಳಿಬರುತ್ತಿತ್ತು. ಈ ವಸ್ತು ಸುಮಾರು 2.5 ಮೀಟರ್ ಅಗಲ ಹಾಗೂ 3 ಮೀಟರ್ ಉದ್ದ ಇದೆ. ಈ ಬಗ್ಗೆ ಅಧ್ಯಯನ ಮುಂದುವರಿದಿದ್ದು, ಎಲ್ಲಾ ಪ್ರಶ್ನೆಗೂ ಉತ್ತರ ಸಿಗುವ ಸಾಧ್ಯತೆ ಇದೆ.
ಕಿರಿಕ್ ಶುರುಮಾಡಿದ ಪಾಕಿಸ್ತಾನ!
ಪಾಕಿಸ್ತಾನಿ ಮಾಜಿ ಐಟಿ ಸಚಿವ ಫಾವದ್ ಚೌಧರಿ ಖಾಸಗಿ ಚಾನೆಲ್ ಡಿಬೆಟ್‌ನಲ್ಲಿ, ಇಸ್ರೋ ಯೋಜನೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಬಾಹ್ಯಾಕಾಶದಲ್ಲಿ ಚಂದ್ರನ ಸ್ಥಾನ ನಮಗೆಲ್ಲರಿಗೆ ಗೊತ್ತಿದೆ ಚಂದ್ರನು ಯಾವಾಗ ಹುಟ್ಟುತ್ತಾನೆ, ಮುಳುಗುತ್ತಾನೆ ಎಂಬುದೂ ತಿಳಿದಿದೆ. ಚಂದ್ರ ನಮಗೆ ಹತ್ತಿರದಲ್ಲೇ ಇದೆ. ಹೀಗಾಗಿ ಚಂದ್ರನ ವೀಕ್ಷಣೆಗೆ ಇಷ್ಟು ಕಸರತ್ತು ಅಗತ್ಯವಿಲ್ಲ ಎಂದಿದ್ದಾರೆ. ಫಾವದ್ ಚೌಧರಿ ಹೇಳಿಕೆ ಜಗತ್ತಿನಾದ್ಯಂತ ವೈರಲ್ ಆಗುತ್ತಿದ್ದು, ಅಲ್ಲದೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ. 'ಚಂದ್ರಯಾನ-3'ರ ಬಗ್ಗೆ ಪಾಕಿಸ್ತಾನ ಪರೋಕ್ಷವಾಗಿ ತನ್ನ ಹೊಟ್ಟೆಕಿಚ್ಚು ಹೊರಹಾಕಿದೆ ಅಂತಿದ್ದಾರೆ ಜನ.
ಒಟ್ನಲ್ಲಿ ಹಲವು ಸಾಧನೆ ಮಾಡಲು ಇಸ್ರೋ ಸಜ್ಜಾಗಿದೆ. ಆದರೆ ಭಾರತದ ವಿರೊಧಿಗಳು ಮಾತ್ರ ಈ ಸಮಯದಲ್ಲಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಇದೆಲ್ಲಾ ಯಾವುದೇ ರೀತಿ ಪರಿಣಾಮ ಬೀರುತ್ತಿಲ್ಲ. ಈ ಯೋಜನೆಯ ಬಗ್ಗೆ ನಾಸಾ ಸೇರಿದಂತೆ ಜಗತ್ತಿನ ದೊಡ್ಡ ದೊಡ್ಡ ಸಂಸ್ಥೆಗಳು ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದು, ಎಲ್ಲಾ ಅಂದುಕೊಂಡಂತೆ ನಡೆದರೆ ಆಗಸ್ಟ್ 23ರ ಸಂಜೆ ಚಂದ್ರನ ಮೇಲೆ ಇಸ್ರೋ ರೋವರ್ ಲ್ಯಾಂಡ್ ಮಾಡಲಿದೆ.











Click it and Unblock the Notifications