ರಷ್ಯಾ ಅಧ್ಯಕ್ಷರ ಶತ್ರು ಅಲೆಕ್ಸಿ ನವಲ್ನಿ ವಿಚಾರದಲ್ಲಿ ಯುರೋಪ್ ದೇಶಗಳ ಸ್ಫೋಟಕ ಆರೋಪ | Alexei Navalny
ಅಲೆಕ್ಸಿ ನವಲ್ನಿ ವಿಚಾರ ವರ್ಷಗಳ ನಂತರ ದೊಡ್ಡ ಸದ್ದು ಮಾಡುತ್ತಿದೆ. ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ವಿರುದ್ಧ ಹೋರಾಟ ಮಾಡಿದ್ದ ನವಲ್ನಿ, ಕೆಲ ವರ್ಷದ ಹಿಂದೆ ಮೃತಪಟ್ಟಿದ್ದು ಸುದ್ದಿಯಾಗಿತ್ತು. ಆದರೆ ಇದೀಗ ದಿಢೀರ್ ಅಲೆಕ್ಸಿ ನವಲ್ನಿ ವಿಚಾರ ಮತ್ತೊಮ್ಮೆ ಮುನ್ನೆಲೆಗೆ ಬಂದಿದ್ದು, ಬ್ರಿಟನ್ ಸೇರಿ ಫ್ರಾನ್ಸ್ ಹಾಗೂ ಜರ್ಮನಿ ಜೊತೆಗೆ ಹಲವು ಯುರೋಪ್ ದೇಶಗಳು ನವಲ್ನಿಗೆ ವಿಷ ಹಾಕಿ ಹತ್ಯೆಯನ್ನು ಮಾಡಲಾಗಿದೆ ಎಂದು ಒಪ್ಪಿಕೊಂಡಿವೆ. ಆ ಮೂಲಕ ಮತ್ತೊಮ್ಮೆ ನವಲ್ನಿ ಸಾವಿನ ಘಟನೆ ರಷ್ಯಾದಲ್ಲಿ ಸಂಚಲನ ಸೃಷ್ಟಿ ಮಾಡುವ ಜೊತೆಗೆ ಪುಟಿನ್ ಅವರ ವಿರೋಧಿಗಳಿಗೆ ಹೊಸ ಅಸ್ತ್ರ ಕೊಟ್ಟಂತೆ ಆಗಿದೆ.
ಉಕ್ರೇನ್ ವಿರುದ್ಧ ಹೋರಾಡುತ್ತಿರುವ ರಷ್ಯಾಗೆ ಶತ್ರುಗಳ ಕಾಟ ಹೆಚ್ಚಾಗುತ್ತಿದ್ದು, ಯುರೋಪ್ ಒಕ್ಕೂಟದ ದೇಶಗಳಿಗೆ ರಷ್ಯಾ ಹಾಗೂ ಪುಟಿನ್ ಕಂಡರೆ ಆಗುತ್ತಿಲ್ಲ. ಹೀಗಿದ್ದಾಗ ರಷ್ಯಾ ಅಧ್ಯಕ್ಷ ಪುಟಿನ್ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿ ಹೋರಾಟ ನಡೆಸಿದ್ದ ಅಲೆಕ್ಸಿ ನವಲ್ನಿ ಸಾವಿನ ಸುದ್ದಿ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ. 2020ರಲ್ಲಿ ನವಲ್ನಿಗೆ ವಿಷ ಹಾಕಿ, ಕೊಲೆಗೂ ಪ್ರಯತ್ನ ಮಾಡಲಾಗಿತ್ತು ಎನ್ನುವ ಆರೋಪ ಕೇಳಿಬಂದಿತ್ತು.

ಆ ನಂತರ ನವಲ್ನಿ ಜರ್ಮನಿಗೆ ತೆರಳಿ ಚಿಕಿತ್ಸೆ ಪಡೆದಿದ್ದರು, ಆದರೆ ಮರಳಿ ರಷ್ಯಾಗೆ ಬಂದ ಬಳಿಕ ಅಲೆಕ್ಸಿ ನವಲ್ನಿ ಬಂಧನವಾಗಿ ಸಂಚಲನ ಸೃಷ್ಟಿಯಾಗಿತ್ತು. ಕೊನೆಗೆ ಜೈಲಿನಲ್ಲೇ ಅಲೆಕ್ಸಿ ನವಲ್ನಿ ಜೀವ ಬಿಟ್ಟಿದ್ದು ಇದೀಗ ಹಳೆಯ ವಿಚಾರ, ಆದರೆ ಅಲೆಕ್ಸಿ ನವಲ್ನಿ ಸಾಯಿಸಲು ಭಯಾನಕ ವಿಷವನ್ನೇ ಬಳಸಲಾಗಿತ್ತು ಎಂಬ ಆರೋಪ ದಿಢೀರ್ ಬಿರುಗಾಳಿ ಎಬ್ಬಿಸಿದೆ. ಯುರೋಪ್ ದೇಶಗಳು ಮಾಡಿರುವ ಆರೋಪವನ್ನ ಇದೀಗ ರಷ್ಯಾ ವಿರುದ್ಧ ಹೊರಿಸಲಾಗಿದ್ದು, ಯುದ್ಧದ ನಡುವೆ ಈ ವಿಚಾರ ಕಿಚ್ಚು ಹೊತ್ತಿಸಿದೆ.
ಕಪ್ಪೆ ವಿಷದಿಂದ ಕೊಲೆ ಆರೋಪ
ನವಲ್ನಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ವೈರಿ, ಈ ಕಾರಣಕ್ಕೆ ನವಲ್ನಿ ವಿರುದ್ಧ ಗಂಭೀರ ಆರೋಪ ಹೊರಿಸಿ ಜೈಲಿಗೆ ಹಾಕಿದ್ದ ಆರೋಪ ಕೇಳಿಬಂತು. ಉಗ್ರವಾದ ಆರೋಪ ಹಿನ್ನೆಲೆಯಲ್ಲಿ 19 ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು. ಆದರೆ ಜೈಲಿನಲ್ಲಿ ಇದ್ದಾಗಲೇ ನವಲ್ನಿ ಮೃತಪಟ್ಟಿದ್ದು ತೀವ್ರ ಚರ್ಚೆಗೆ ವೇದಿಕೆ ಒದಗಿಸಿತ್ತು, ಕೊನೆಗೆ ಇದೀಗ ಹೊರಬಿದ್ದಿರುವ ಸಂಗತಿ ಏನು ಅಂದ್ರೆ ಬಾಣದ ಕಪ್ಪೆ ಅಥವಾ ಡಾರ್ಟ್ ಫ್ರಾಗ್ ವಿಷ ಬಳಸಿ ಅಲೆಕ್ಸಿ ನವಲ್ನಿ ಕೊಲೆ ಮಾಡಲಾಗಿದೆಯಂತೆ. ಈ ವಿಚಾರವನ್ನು ಯುರೋಪ್‌ನ ಪ್ರಮುಖ ದೇಶಗಳು ಒಪ್ಪಿಕೊಂಡಿದ್ದು, ರಷ್ಯಾ ವಿರುದ್ಧ ಗಂಭೀರ ಆರೋಪ ಮಾಡಿವೆ. ಮತ್ತೊಂದು ಕಡೆ ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಮಾಡುತ್ತಿರುವಾಗಳೇ ಈ ಆರೋಪ ಸಂಚಲನ ಸೃಷ್ಟಿಸಿದೆ.












Click it and Unblock the Notifications