ಫುಟ್‌ಬಾಲ್ ಶೂರ ಎಂಬಾಪೆಗೆ ಬರೋಬ್ಬರಿ 27,19,77,00,000 ರೂಪಾಯಿ?
ಒಂದು ಕಾಲದಲ್ಲಿ ಪೀಲೆ ಮತ್ತು ಡಿಯಾಗೋ ಮರಡೋನಾ ಅವರನ್ನು ಹೇಗೆ ಫುಟ್‌ಬಾಲ್ ಜಗತ್ತು ನೆನಪು ಮಾಡಿಕೊಳ್ಳುತ್ತಿತ್ತೋ, ಅದೇ ರೀತಿ ಇದೀಗ ಮೆಸ್ಸಿ & ರೊನಾಲ್ಡೊ ಹೆಸರು ಓಡಾಡುತ್ತಿದೆ. ಆದರೆ ಭವಿಷ್ಯದಲ್ಲಿ ಫುಟ್‌ಬಾಲ್ ಲೋಕಕ್ಕೆ ಯಾರು ಕಿಂಗ್ ಆಗಬಹುದು? ಎಂಬ ಪ್ರಶ್ನೆಗೆ ಎಂಬಾಪೆ ಉತ್ತರ ನೀಡುತ್ತಿದ್ದಾರೆ. ಯಾರೂ ಊಹಿಸದಷ್ಟು ಹಣಕ್ಕೆ ಬಿಡ್ ಆಗುವ ಮೂಲಕ ಎಂಬಾಪೆ ಮತ್ತೆ ಸುದ್ದಿಯಲ್ಲಿದ್ದಾರೆ.
ಹೌದು, ಸೌದಿ ಅರೇಬಿಯಾದ ಅಲ್ ಹಿಲಾಲ್ ಕ್ಲಬ್ ಫ್ರಾನ್ಸ್ ಆಟಗಾರ ಕಿಲಿಯನ್ ಎಂಬಾಪೆಗೆ ಸುಮಾರು 300 ಮಿಲಿಯನ್ ಯುರೋ ಬಿಡ್ ಮಾಡಿದೆಯಂತೆ. ಇದೀಗ ಪ್ಯಾರಿಸ್ ಸೇಂಟ್-ಜರ್ಮೈನ್ ಕ್ಲಬ್ ಪರ ಎಂಬಾಪೆ ಆಡುತ್ತಿದ್ದು, ಈ ಬೇಸಿಗೆಯಲ್ಲಿ ಬದಲಿ ಆಟಗಾರನನ್ನು ಫುಟ್‌ಬಾಲ್ ಕ್ಲಬ್ ಹುಡುಕುತ್ತಿದೆ ಎನ್ನಲಾಗಿದೆ. ಹೀಗಾಗಿ ಅಲ್ ಹಿಲಾಲ್ ಕ್ಲಬ್ ಕಿಲಿಯನ್ ಎಂಬಾಪೆಗೆ 300 ಮಿಲಿಯನ್ ಯುರೋ ಅಂದರೆ, 27,19,77,00,000 ರೂಪಾಯಿ ಬಿಡ್ ಮಾಡಿದೆ ಎಂಬ ಮಾತು ಸಂಚಲನ ಸೃಷ್ಟಿಸಿದೆ. ಅಕಸ್ಮಾತ್ ಇದು ನಡೆದಿದ್ದೆ ಆದರೆ ಹಿಂದೆ ದಾಖಲಾಗಿದ್ದ ರೆಕಾರ್ಡ್ಸ್ ಉಡೀಸ್ ಆಗಲಿವೆ.

ಯಾವ ಕಡೆಗೆ ಎಂಬಾಪೆ ಪಯಣ?
ಅಂದಹಾಗೆ ಮತ್ತೊಂದು ಮಾತುಕತೆ ಪ್ರಕಾರ ರಿಯಲ್ ಮ್ಯಾಡ್ರಿಡ್ ಕಡೆಗೂ ಎಂಬಾಪೆಯ ಚಿತ್ತ ನೆಟ್ಟಿದೆ ಎನ್ನಲಾಗುತ್ತಿದೆ. ಅದರಲ್ಲೂ ಎಂಬಾಪೆ ತನ್ನ ಬಿಡ್‌ಗಾಗಿ ಇಟ್ಟಿರುವ ಬೇಡಿಕೆ ಸಾಕಷ್ಟು ಕ್ಲಬ್‌ಗಳಿಗೆ ಅಡ್ಡಿ ಉಂಟು ಮಾಡುತ್ತಿದೆ. ದೊಡ್ಡ ದೊಡ್ಡ ಕ್ಲಬ್‌ಗಳನ್ನು ಬಿಟ್ಟರೆ, ಎಂಬಾಪೆ ಕಡೆಗೆ ಸಣ್ಣ ಕ್ಲಬ್‌ಗಳು ತಿರುಗಿ ಕೂಡ ನೋಡಲು ಆಗಲ್ಲ. ಏಕೆಂದರೆ ಫ್ರಾನ್ಸ್ ಮೂಲದ ಈ ಫುಟ್‌ಬಾಲ್ ಆಟಗಾರ ತನಗೆ ಅಷ್ಟು ದೊಡ್ಡ ಮೊತ್ತದ ಬೆಲೆಯನ್ನ ತಾನೇ ಕಟ್ಟಿಕೊಂಡಿದ್ದಾನೆ ಎಂಬ ಮಾತು ಇದೆ. ಹಾಗೇ ಎಂಬಾಪೆ ಅಂದರೆ ಪ್ರಾಣಬಿಡುವ ಕೋಟಿ ಕೋಟಿ ಅಭಿಮಾನಿಗಳು ಕೂಡ ಈ ಜಗತ್ತಿನಲ್ಲಿ ಇದ್ದಾರೆ. ಎಲ್ಲಾ ಚರ್ಚೆಗಳ ನಡುವೆಯೂ ಎಂಬಾಪೆ ಪಯಣ ಯಾವ ಕಡೆಗೆ? ಅನ್ನೋದು ಇನ್ನೂ ಕನ್ಫರ್ಮ್ ಆಗುತ್ತಿಲ್ಲ.
ವಿಶ್ವಕಪ್ ಮೂಲಕ ಸಂಚಲನ!
ಅಂದಹಾಗೆ 2018ರ ಫುಟ್‌ಬಾಲ್ ವಿಶ್ವಕಪ್‌ನಲ್ಲಿ ಉದಯೋನ್ಮುಖ ಆಟಗಾರನಾಗಿ ಎಂಬಾಪೆ ಹೊರಹೊಮ್ಮಿದ್ದ. ಆದರೆ 1998ರಲ್ಲಿ ಫ್ರಾನ್ ವಿಶ್ವಕಪ್ ಗೆದ್ದಾಗ ಇದೇ ಎಂಬಾಪೆ ಇನ್ನೂ ಹಸುಗೂಸು. ಇಷ್ಟು ಸಣ್ಣ ವಯಸ್ಸಿಗೆ ದೊಡ್ಡ ಮಟ್ಟದ ಸಾಧನೆ ಮಾಡಿರುವ ಮಹಾನ್ ಆಟಗಾರ, 2022ರ ವಿಶ್ವಕಪ್‌ನಲ್ಲಿ ಅರ್ಜೆಂಟೀನಾ ವಿರುದ್ಧ ಆಡಿದ ಆಟ ಎಂತಹವರನ್ನೂ ಬೆರಗುಗೊಳಿಸುತ್ತದೆ. ಫಿಫಾ ವಿಶ್ವಕಪ್ ನಂತರ ಎಂಬಾಪೆ ಹೆಸರು ಮತ್ತಷ್ಟು ಸದ್ದು ಮಾಡಿ ಸುದ್ದಿಯಾಗುತ್ತಿದ್ದು, ಇದೀಗ ದೊಡ್ಡ ಮೊತ್ತದ ಹಣಕ್ಕೆ ಎಂಬಾಪೆ ಬಿಡ್ ಆಗಲಿದ್ದಾರಾ? ಎಂಬ ವಿಷಯ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಒಟ್ನಲ್ಲಿ ಶ್ರೀಮಂತ ಆಟಗಳ ಪೈಕಿ ಒಂದಾದ ಫುಟ್‌ಬಾಲ್‌ನಲ್ಲಿ ಸಾವಿರಾರು ಕೋಟಿ ರೂ. ವಹಿವಾಟು ನಡೆಯುತ್ತದೆ. ಅದರಲ್ಲೂ ಆಟಗಾರರು ಕೋಟಿ ಕೋಟಿ ಸಂಪಾದಿಸುತ್ತಾರೆ. ಅದರಲ್ಲೂ ಎಂಬಾಪೆ ರೀತಿಯ ಯುವ ಮತ್ತು ಉದಯೋನ್ಮುಖ ಆಟಗಾರರಿಗೆ ಸಾಕಷ್ಟು ಬೇಡಿಕೆ ಇರುತ್ತದೆ. ಇದು ಮತ್ತೊಮ್ಮೆ ಸಾಬೀತಾಗುವ ಕಾಲ ತುಂಬಾ ದೂರ ಇಲ್ಲವೆಂದು ಹೇಳಬಹುದು.












Click it and Unblock the Notifications