ಶೀಘ್ರದಲ್ಲೇ 487 ಅಕ್ರಮ ವಲಸಿಗರು ಅಮೆರಿಕದಿಂದ ಭಾರತಕ್ಕೆ ವಾಪಸ್
ಅಮೆರಿಕದಲ್ಲಿ ವಾಸಿಸುತ್ತಿರುವ ಇನ್ನೂ 487 ಅಕ್ರಮ ಭಾರತೀಯ ವಲಸಿಗರನ್ನು ಅಧಿಕಾರಿಗಳು ಗುರುತಿಸಿದ್ದು ಅವರನ್ನು ಶೀಘ್ರದಲ್ಲೇ ಅಮೆರಿಕ ಸರ್ಕಾರ ಗಡೀಪಾರು ಮಾಡಲಿದೆ ಎಂದು ಕೇಂದ್ರ ಸರ್ಕಾರ ಶುಕ್ರವಾರ ಮಾಹಿತಿ ನೀಡಿದೆ. ಈಗಾಗಲೇ ಒಂದು ತಂಡ ಅಮೆರಿಕದಿಂದ ವಾಪಸ್ ಆಗಿದ್ದು ಈಗ ಇನ್ನಷ್ಟು ಅಕ್ರಮ ವಲಸಿಗರು ವಾಪಸ್ ಬರಲಿದ್ದಾರೆ.
ಶುಕ್ರವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ, ಅಮೆರಿಕದಲ್ಲಿ ನೆಲೆಸಿರುವ 487 ಭಾರತೀಯ ಪ್ರಜೆಗಳನ್ನು ಸ್ಥಳಾಂತರ ಮಾಡಲಿದೆ ಎಂದು ಅಮೆರಿಕ ಭಾರತ ಸರ್ಕಾರಕ್ಕೆ ಮಾಹಿತಿ ನೀಡಿದೆ ಎಂದು ಅವರು ಹೇಳಿದರು.

ಈ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿ ಹೊರಬರಬೇಕಿದ್ದು ಅಕ್ರಮ ವಲಸಿಗರ ಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದು ಎಂದು ಅವರು ಹೇಳಿದರು. ವ್ಯಕ್ತಿಗಳ ಬಗ್ಗೆ ನಿರ್ದಿಷ್ಟ ಮಾಹಿತಿಯನ್ನು ಯುಎಸ್ ಅಧಿಕಾರಿಗಳು ಇನ್ನೂ ನೀಡಿಲ್ಲ ಎಂದು ಹೇಳಿದರು. ಗಡೀಪಾರು ಪಟ್ಟಿಯಲ್ಲಿರುವ ಪ್ರಸ್ತುತ 487 ವಲಸಿಗರ ಗುರುತುಗಳನ್ನು ಸರ್ಕಾರ ಪರಿಶೀಲನೆ ನಡೆಸುತ್ತಿದೆ.
ಈಗಾಗಲೇ 104 ಭಾರತೀಯ ಅಕ್ರಮ ವಲಸಿಗರನ್ನು ಅಮೆರಿಕ ವಾಪಸ್ ಕಳಿಸಿದೆ. ಯುಎಸ್ ಮಿಲಿಟರಿ ವಿಮಾನವು ಜನವರಿ 5ರಂದು ಅಕ್ರಮ ವಲಸಿಗರನ್ನು ಕರೆತಂದು ಅಮೃತಸರದಲ್ಲಿ ಇಳಿಸಿದೆ. ಅಕ್ರಮ ವಲಸಿಗರ ವಿರುದ್ಧ ಟ್ರಂಪ್ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದ್ದು ಇದು ಟ್ರಂಪ್ ಆಡಳಿತದಲ್ಲಿ ನಡೆದ ಮೊದಲ ದೊಡ್ಡ ಪ್ರಮಾಣ ಗಡೀಪಾರು ಕಾರ್ಯಾಚರಣೆಯಾಗಿದೆ.
ಅನಧಿಕೃತ ಮಾರ್ಗಗಳ ಮೂಲಕ ಅಮೆರಿಕ ಪ್ರವೇಶಿಸಲು ಯತ್ನಿಸಿದವರನ್ನು ಕೈಕಾಲುಗಳನ್ನು ಕಟ್ಟಿ ಭಾರತಕ್ಕೆ ಕರೆತರಲಾಗಿದ್ದು, ಅಮೃತಸರದಲ್ಲಿ ಇಳಿದ ಬಳಿಕವೇ ಅವರ ಸಂಕೋಲೆಗಳನ್ನು ತೆಗೆಯಲಾಗಿದೆ ಎಂದು ಹೇಳಿದ್ದಾರೆ.
ಕಳವಳ ವ್ಯಕ್ತಪಡಿಸಿದ ಮಿಶ್ರಿ
ಅಕ್ರಮ ವಲಸಿಗರ ಕೈಕಾಲು ಕಟ್ಟಿ ಗಡೀಪಾರು ಮಾಡಿದ್ದರ ಬಗ್ಗೆ ವಿಕ್ರಮ್ ಮಿಶ್ರಿ ಕಳವಳ ವ್ಯಕ್ತ ಪಡಿಸಿದ್ದಾರೆ. ಭಾರತ ಸರ್ಕಾರ ಈ ಬಗ್ಗ ಅಮೆರಿಕದ ಜೊತೆ ಚರ್ಚೆ ಮಾಡುತ್ತದೆ ಎಂದು ಹೇಳಿದರು.
2009ರಿಂದ ಈವರೆಗೆ 15,668 ಅಕ್ರಮ ಭಾರತೀಯ ವಲಸಿಗರನ್ನು ಅಮೆರಿಕದಿಂದ ಭಾರತಕ್ಕೆ ಗಡೀಪಾರು ಮಾಡಲಾಗಿದೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಮಾಹಿತಿ ನೀಡಿದ್ದಾರೆ. ಗಡೀಪಾರಾದವರ ಮೇಲೆ ನಡೆದ ದೌರ್ಜನ್ಯದ ಬಗ್ಗೆ ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ಗಡೀಪಾರು ಮಾಡುವ ಪ್ರಕ್ರಿಯೆ ಹಲವು ವರ್ಷಗಳಿಂದ ನಡೆಯುತ್ತಿದೆ ಇದು ಹೊಸ ವಿಚಾರವೇನಲ್ಲ ಎಂದು ಹೇಳಿದರು.












Click it and Unblock the Notifications