ನೂತನ ಸಂಸತ್ ಉದ್ಘಾಟನಾ ದಿನ ಪ್ರತಿಭಟನೆಗೆ ಕುಸ್ತಿಪಟುಗಳು ಸಜ್ಜು: ಆತಂಕದಲ್ಲಿ ಹರಿಯಾಣ ಬಿಜೆಪಿ!
ನವದೆಹಲಿ, ಮೇ. 26: ವಿವಾದಿತ ಕೃಷಿ ಕಾನೂನುಗಳ ವಿರುದ್ಧ ರೈತರು ಒಂದು ವರ್ಷ ದೆಹಲಿಯ ಗಡಿಗಳಲ್ಲಿ ಪ್ರತಿಭಟನೆ ನಡೆಸಿದ್ದು ನಮಗಿನ್ನು ಕಣ್ಣಮುಂದೆಯಿದೆ. ಇದೇ ರೀತಿಯಲ್ಲಿಯೇ ಕುಸ್ತಿಪಟುಗಳ ಪ್ರತಿಭಟನೆಯು ನಡೆಯುವ ಸಾಧ್ಯತೆ ಕಂಡುಬರುತ್ತಿದೆ. ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕ್ರೀಡಾಳುಗಳಿಗೆ ರೈತರು ಬೆಂಬಲ ಸೂಚಿಸಿದ್ದು, ಹರಿಯಾಣದಲ್ಲಿ ಮಹಾಪಂಚಾಯತ್‌ಗೆ ಭಾರೀ ಸಿದ್ಧತೆ ನಡೆಯುತ್ತಿದೆ.
ನವದೆಹಲಿಯಲ್ಲಿ ಭಾನುವಾರ ಹೊಸ ಸಂಸತ್ ಭವನದ ಉದ್ಘಾಟನೆಗೆ ಕೇಂದ್ರ ಸರ್ಕಾರ ಸಿದ್ಧವಾಗುತ್ತಿದ್ದರೆ, ಹರಿಯಾಣದ ರೈತ ಸಂಘಘಟನೆಗಳು, ವಿವಿಧ ಗುಂಪುಗಳು ಅದೇ ದಿನ ಕಟ್ಟಡದ ಹೊರಗೆ ಮಹಾಪಂಚಾಯತ್ ನಡೆಸಲು ಸಿದ್ಧತೆ ನಡೆಸುತ್ತಿದೆ. ಬಿಜೆಪಿ ಸಂಸದ ಮತ್ತು ಭಾರತೀಯ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್‌ಐ) ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಬಂಧಿಸುವಂತೆ ಒತ್ತಾಯಿಸಿ ಏಪ್ರಿಲ್ 23 ರಿಂದ ರಾಜಧಾನಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಹರಿಯಾಣದ ಕುಸ್ತಿಪಟುಗಳು ಭಾಗವಹಿಸಲಿದ್ದಾರೆ.

ಗುರುವಾರ, ಹರಿಯಾಣದ ಜಿಂದ್-ನರ್ವಾನಾ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಖಟ್ಕರ್ ಟೋಲ್ ಪ್ಲಾಜಾದಲ್ಲಿ ಕಿಸಾನ್ ಪಂಚಾಯತ್ ಅನ್ನು ಕರೆಯಲಾಗಿತ್ತು. ಈ ಸಂದರ್ಭದಲ್ಲಿ, ಜಮ್ಮು ಮತ್ತು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ರೈತ ಸಂಘಟನೆಗಳ ಮುಖಂಡರು ಮತ್ತು ಬಜರಂಗ್ ಪುನಿಯಾ ಮತ್ತು ವಿನೇಶ್ ಫೋಗಟ್ ಸೇರಿದಂತೆ ಹಲವಾರು ಪ್ರತಿಭಟನಾ ನಿರತ ಕುಸ್ತಿಪಟುಗಳೊಂದಿಗೆ ವೇದಿಕೆಯನ್ನು ಹಂಚಿಕೊಂಡಿದ್ದರು.
ಭಾನುವಾರದ ಮಹಾಪಂಚಾಯತ್‌ಗೆ ಬೆಂಬಲ ಪಡೆಯಲು ಒಲಿಂಪಿಕ್ ಪದಕ ವಿಜೇತ ಪುನಿಯಾ ಮತ್ತು ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ವಿನೇಶ್ ಫೋಗಟ್ ಇಬ್ಬರೂ ಹರಿಯಾಣ ಮತ್ತು ನೆರೆಯ ರಾಜ್ಯಗಳಲ್ಲಿ ಸಂಚರಿಸುತ್ತಿದ್ದಾರೆ.

ಕಾರ್ಯಕ್ರಮದಲ್ಲಿ , ಬ್ರಿಜ್ ಭೂಷಣ್ ವಿರುದ್ಧ ಕ್ರಮ ತೆಗೆದುಕೊಳ್ಳದ ಬಗ್ಗೆ ಟೀಕಿಸಿದ ವಿನೇಶ್ ಫೋಗಟ್, "ನಾವು ನಮ್ಮ ದೇಶಕ್ಕಾಗಿ ಪದಕಗಳನ್ನು ಗೆದ್ದಾಗ, ಈ ದೇಶದಲ್ಲಿ ಹೆಣ್ಣುಮಕ್ಕಳಿಗೆ ಅಪಾರ ಗೌರವವಿದೆ ಎಂದು ನಾವು ಭಾವಿಸಿದ್ದೇವು. ಆದರೆ ಇಂದು ಆ ಹೆಣ್ಣು ಮಕ್ಕಳೇ ನ್ಯಾಯ ಕೋರಿ ರಸ್ತೆಯಲ್ಲೇ ಕುಳಿತುಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದ್ದು, ಇದರಿಂದ ಯಾರಿಗೂ ತೊಂದರೆಯಾಗುತ್ತಿಲ್ಲ. ಇದು ನಮ್ಮ ತ್ರಿವರ್ಣ ಧ್ವಜದ ಗೌರವಕ್ಕಾಗಿ ನಡೆಯುವ ಹೋರಾಟ. ಮೇ 28 ರಂದು ಸಂಸತ್ ಭವನದ ಹೊರಗೆ ಮಹಾಪಂಚಾಯತ್ ನಡೆಯಲಿದೆ" ಎಂದು ಹೇಳಿದ್ದಾರೆ.
"ಈ ದೇಶದ ಎಲ್ಲಾ ಯುವಕರು ಮತ್ತು ಮಹಿಳೆಯರಿಗೆ ನವದೆಹಲಿ ಬಂದು ಈ ಮಹಾಪಂಚಾಯತ್‌ನಲ್ಲಿ ಭಾಗವಹಿಸುವಂತೆ ನಾವು ಮನವಿ ಮಾಡುತ್ತೇವೆ. ಕುಸ್ತಿಯಲ್ಲಿ ಮಾತ್ರವಲ್ಲದೆ ಹಲವಾರು ಇತರ ಕ್ರೀಡಾ ಒಕ್ಕೂಟಗಳಲ್ಲಿ ಪ್ರಮುಖ ಸ್ಥಾನಗಳನ್ನು ಹೊಂದಿರುವ ಬ್ರಿಜ್ ಭೂಷಣ್ ಅವರಂತಹ ಎಲ್ಲ ಜನರನ್ನು ನಾವು ಹೊರಹಾಕುತ್ತೇವೆ" ಎಮದು ಆಕ್ರೋಶ ಹೊರಹಾಕಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾದ ಹೊಸ ಸಂಸತ್ತಿನ ಕಟ್ಟಡವನ್ನು ಅನಾವರಣಗೊಳಿಸಲು ಸಜ್ಜಾದ ದಿನದಂದು ಮಹಾಪಂಚಾಯತ್ ನಡೆಯಲಿದ್ದು, ಇದು ಹರಿಯಾಣದಲ್ಲಿ ಬಿಜೆಪಿಗೆ ಭಾರೀ ಹಿನ್ನಡೆಯಾಗಿದೆ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ, ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಏಪ್ರಿಲ್‌ನಿಂದ ರಾಜ್ಯಾದ್ಯಂತ "ಜನ ಸಂವಾದ (ಸಾರ್ವಜನಿಕ ಸಂಪರ್ಕ)" ಕಾರ್ಯಕ್ರಮಗಳನ್ನು ನಡೆಸಲು ಪ್ರಾರಂಭಿಸಿದ್ದಾರೆ.
ಪ್ರತಿ ಜಿಲ್ಲೆಯಲ್ಲಿ ಮೂರು ದಿನ ಕಾಲ ಕಳೆದು ವಿಶೇಷವಾಗಿ ಗ್ರಾಮೀಣ ಮತದಾರರೊಂದಿಗೆ ಸಂವಾದ ನಡೆಸುತ್ತಿದ್ದಾರೆ. ಇಲ್ಲಿಯವರೆಗೆ, ಸಿಎಂ ಮನೋಹರ್ ಲಾಲ್ ಖಟ್ಟರ್ ನಾಲ್ಕು ಜಿಲ್ಲೆಗಳಾದ ಭಿವಾನಿ, ಪಲ್ವಾಲ್, ಕುರುಕ್ಷೇತ್ರ ಮತ್ತು ಸಿರ್ಸಾವನ್ನು ಸುತ್ತಿದ್ದಾರೆ. ಮಹೇಂದ್ರಗಢ ಜಿಲ್ಲೆಯಲ್ಲಿ ಅವರ ಜನಸಂವಾದ ಕಾರ್ಯಕ್ರಮವು ಶುಕ್ರವಾರದಂದು ಮುಕ್ತಾಯಗೊಳ್ಳಲಿದ್ದು, ಇಲ್ಲಿಯವರೆಗೆ 55 ಕ್ಕೂ ಹೆಚ್ಚು ಗ್ರಾಮಗಳನ್ನು ಸಿಎಂ ಭೇಟಿ ಮಾಡಿದ್ದಾರೆ. ಈ ವೇಳೆ ಸಿರ್ಸಾದಲ್ಲಿ, ಮಹಿಳಾ ಸರಪಂಚ್ ಸಿಎಂ ಅವರನ್ನು ಎದುರಿಸಿದ ಮತ್ತು ಅವರ ದುಪಟ್ಟಾವನ್ನು ಅವರ ಪಾದಗಳಿಗೆ ಎಸೆದ ಘಟನೆ ಸೇರಿದಂತೆ ಹಲವು ಅಡೆತಡೆಗಳು ನಡೆದಿವೆ.
ಸಿಎಂ ಮನೋಹರ್ ಲಾಲ್ ಖಟ್ಟರ್‌ಗೆ ಸಮಸ್ಯೆಯನ್ನು ಉಲ್ಬಣಗೊಳಿಸಿರುವುದು ಕುಸ್ತಿಪಟುಗಳ ಪ್ರತಿಭಟನೆಯು ಪ್ರತಿಪಕ್ಷಗಳು ಬೆಂಬಲ ನೀಡಿರುವುದು. ಇದರ ಜೊತೆಗೆ ಖಾಪ್‌ಗಳು ಮತ್ತು ರೈತ ಸಂಘಟನೆಗಳ ಬೆಂಬಲ ಕುಸ್ತಿಪಟುಗಳಿಗಿದೆ. ಇದರ ಜೊತೆಗೆ ಮಿತ್ರ ಪಕ್ಷವಾದ ಜನನಾಯಕ್ ಜನತಾ ಪಾರ್ಟಿ (ಜೆಜೆಪಿ) ಯ ಕೆಲವರು ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. .
ಬಿಜೆಪಿ ನಾಯಕರಲ್ಲಿ ಮಾಜಿ ಕೇಂದ್ರ ಸಚಿವ ಬಿರೇಂದರ್ ಸಿಂಗ್, ಅವರ ಪುತ್ರ ಮತ್ತು ಹಿಸಾರ್ ಸಂಸದ ಬ್ರಿಜೇಂದ್ರ ಸಿಂಗ್ ಮತ್ತು ಹರಿಯಾಣದ ವಿದ್ಯುತ್ ಸಚಿವ ರಂಜಿತ್ ಸಿಂಗ್, ರಾನಿಯಾದ ಸ್ವತಂತ್ರ ಶಾಸಕರು ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. ಉಪಮುಖ್ಯಮಂತ್ರಿ ಮತ್ತು ಜೆಜೆಪಿ ನಾಯಕ ದುಶ್ಯಂತ್ ಚೌತಾಲಾ ಅವರು ಬ್ರಿಜ್ ಭೂಷಣ್ ವಿರುದ್ಧದ ಎಫ್‌ಐಆರ್‌ಗಳ ಆಧಾರದ ಮೇಲೆ ಸಾಧ್ಯವಾದ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ. ಹೀಗಾಗಿ ಕುಸ್ತಿಪಟುಗಳ ಪ್ರತಿಭಟನೆ ಹರಿಯಾಣದಲ್ಲಿ ಬಿಜೆಪಿಗೆ ಬಿಸಿತುಪ್ಪವಾಗಿದೆ.












Click it and Unblock the Notifications