ಅಷ್ಟೊಂದು ಗಂಭೀರ ಪೋಸ್ ಯಾಕೆ? ರಾಹುಲ್‌ಗೆ ಅಮಿತ್ ಶಾ ಲೇವಡಿ
ಡೆಹರಾಡೂನ್, ಫೆಬ್ರವರಿ 2: ಸಂಸತ್‌ನಲ್ಲಿ ಶುಕ್ರವಾರ ಬಜೆಟ್ ಮಂಡನೆ ವೇಳೆ ಗಂಭೀರ ವನದರಾಗಿ ಕುಳಿತಿದ್ದ ರಾಹುಲ್ ಗಾಂಧಿ ಅವರನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಲೇವಡಿ ಮಾಡಿದ್ದಾರೆ.
ಯಾವಾಗಲೂ ಘರ್ಜಿಸುವ ವಿರೋಧಪಕ್ಷಗಳ ನಾಯಕರು ಪಿಯೂಷ್ ಗೋಯಲ್ ಬಜೆಟ್ ಮಂಡನೆ ಮಾಡುವ ವೇಳೆ ಗಂಭೀರವಾಗಿ ಕಾಣಿಸುತ್ತಿದ್ದರು ಎಂದು ಅವರು ಅಣಕಿಸಿದ್ದಾರೆ.
ಬಜೆಟ್ ಮಂಡನೆ ವೇಳೆ ರಾಹುಲ್ ಗಾಂಧಿ ಮತ್ತು ವಿರೋಧ ಪಕ್ಷದ ಇತರೆ ನಾಯಕರು ಗಂಭೀರರಾಗಿ ಕುಳಿತಿದ್ದ ಚಿತ್ರ ಎಲ್ಲೆಡೆ ವೈರಲ್ ಆಗಿದೆ.

ಡೆಹರಾಡೂನ್‌ನಲ್ಲಿ ಶನಿವಾರ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, 'ನೀವು (ರಾಹುಲ್) ಏಕೆ ಅಷ್ಟೊಂದು ಗಂಭೀರರಾಗಿದ್ದಿರಿ ಎನ್ನುವುದು ನನಗೆ ಅರ್ಥವಾಗುತ್ತಿಲ್ಲ. ನೀಮಗೇಕೆ ನಗಲು ಸಾಧ್ಯವಾಗಲಿಲ್ಲ? ರೈತರಿಗಾಗಿ ಮಾಡಿದ ಘೋಷಣೆಗಳನ್ನು ಏಕೆ ನೀವು ಶ್ಲಾಘಿಸಲಿಲ್ಲ?' ಎಂದು ಪ್ರಶ್ನಿಸಿದ್ದಾರೆ.
ರಾಮಮಂದಿರದ ಕುರಿತು ಸಹ ರಾಹುಲ್ ಗಾಂಧಿ ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಅಮಿತ್ ಶಾ ಹೇಳಿದ್ದಾರೆ.
ರಾಮ ಜನ್ಮಭೂಮಿ ನ್ಯಾಸ್ ಸೇರಿದಂತೆ ವಿವಿಧ ಮಾಲೀಕರಿಗೆ 42 ಎಕರೆ ಭೂಮಿಯನ್ನು ಮರಳಿ ನೀಡುವ ಸರ್ಕಾರದ ನಿರ್ಧಾರಕ್ಕೆ ಕಾಂಗ್ರೆಸ್ ವಿನಾಕಾರಣ ಗದ್ದಲ ಸೃಷ್ಟಿಸಿದೆ ಎಂದು ಆರೋಪಿಸಿದ ಅವರು, 'ರಾಹುಲ್ ಬಾಬಾ, ನಿಮ್ಮ ನಿಲುವನ್ನು ಸ್ಪಷ್ಟಪಡಿಸಿ. ನಿಮಗೆ ರಾಮ ಮಂದಿರ ಬೇಕೋ ಅಥವಾ ಬೇಡವೋ?' ಎಂದು ಕೇಳಿದ್ದಾರೆ.












Click it and Unblock the Notifications